ಭಿಕ್ಷೆ ಬೇಡುತ್ತಿದ್ದ ಮಂಜುಳಾ ದ್ವಿತೀಯ ವರ್ಗಕ್ಕೆ ದಾಖಲು

7
ಶಿಕ್ಷಕರ ಮನವೊಲಿಕೆಗೆ ಸ್ಪಂದಿಸಿದ ಪಾಲಕರು

ಭಿಕ್ಷೆ ಬೇಡುತ್ತಿದ್ದ ಮಂಜುಳಾ ದ್ವಿತೀಯ ವರ್ಗಕ್ಕೆ ದಾಖಲು

Published:
Updated:
Deccan Herald

ನರೇಗಲ್: ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದ ಸ್ಥಳೀಯ ಬೋಲ್ಡೋಜರ್ ನಗರದ ಮಂಜುಳಾ ದುರಗಮುರಗಿ ಎಂಬ ಬಾಲಕಿಯನ್ನು ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕರು ಆಕೆಯ ವಯಸ್ಸಿಗೆ ಅನುಗುಣವಾಗಿ ಶನಿವಾರ ದ್ವಿತೀಯ ವರ್ಗಕ್ಕೆ ದಾಖಲಿಸಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದಂದು ಶಾಲಾ ವಿದ್ಯಾರ್ಥಿನಿಯರ ಪ್ರಭಾತ ಫೇರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಈಕೆಯನ್ನು ಕಂಡಿದ್ದ ಶಿಕ್ಷಕರು ಶಾಲೆಗೆ ಬರುವಂತೆ ಪ್ರೀತಿಯಿಂದ ಕರೆದಿದ್ದರು.

ಆಕೆಯ ಪಾಲಕರ ಬಗ್ಗೆ ಮಾಹಿತಿ ಪಡೆದಿದ್ದ ಶಿಕ್ಷಕರು, ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಅವರ ಗುಡಿಸಲಿಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಹಾಗೂ ಭಿಕ್ಷಾಟನೆಯನ್ನು ನಿಲ್ಲಿಸುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸಿದರು. ಶಿಕ್ಷಕರ ಮಾತಿನಿಂದ ಪ್ರೇರಣೆಗೊಂಡ ಪಾಲಕರು ಮಗುವನ್ನು ಶಾಲೆಗೆ ದಾಖಲಿಸಿದ್ದಾರೆ.

ಹರ್ಷ ವ್ಯಕ್ತಪಡಿಸಿದ ಮಂಜುಳಾ: ‘ಎಲ್ಲ ಮಕ್ಕಳು ಸಮವಸ್ತ್ರದಲ್ಲಿ ಶಾಲೆಗೆ ಹೋಗುವುದನ್ನು ನೋಡಿದಾಗ ನನಗೂ ಅವರಂತೆ ಬಟ್ಟೆ ಹಾಕಿಕೊಂಡು ಶಾಲೆಗೆ ಹೋಗಬೇಕು; ವಿದ್ಯೆ ಕಲಿಯಬೇಕು ಅಂತಾ ಬಹಳ ದಿನದಿಂದ ಆಸೆ ಇತ್ತು. ಆದರೆ ಮನೆಯಲ್ಲಿ ರೊಟ್ಟಿ, ಅನ್ನ ತಗೊಂಡು ಬಾ ಅಂತ ಹೇಳಿ ಭಿಕ್ಷೆ ಬೇಡಲು ಕಳಿಹಿಸುತ್ತಿದ್ದರು. ನಮ್ಮ ಮನೆಗೆ ಗುರುಗಳು ಬಂದು ಶಾಲೆಗೆ ಕರೆದುಕೊಂಡು ಹೋಗಿದಕ್ಕೆ ಬಹಳ ಸಂತೋಷ ಆಗಿದೆ’ ಎಂದು ಮಂಜುಳಾ ದುರಗಮುರಗಿ ಕಣ್ಣೀರುಗರೆಯುತ್ತ ಸಂತೋಷದಿಂದ ಶಿಕ್ಷಕರಿಗೆ ಕೃತಜ್ಞತೆ ತಿಳಿಸಿದಳು.

ಬಸವರಾಜ ಕುರಿ, ಎನ್.ಎಲ್.ಚವಾಣ, ಕೆ.ಎ.ಪಾಟೀಲ, ಎಸ್.ಎಂ.ಕರಡಿ, ಜೆ.ಎ.ಪಾಟೀಲ್, ಎಸ್.ಎಚ್.ಹಾದಿಮನಿ, ಪಿ.ಎ.ಜೋಶಿ, ಆರ್.ಡಿ.ತೋಟಗಂಟಿ ಇದ್ದರು.

ಪ್ರಭಾತಫೇರಿ ವೇಳೆಗೆ ಈ ಬಾಲಕಿ ಭಿಕ್ಷಾಟನೆ ಮಾಡುತ್ತಿದ್ದುದನ್ನು ಪ್ರಜಾವಾಣಿ ಆ.16ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಮುಖ್ಯ ಶಿಕ್ಷಕ ಡಿ.ಎಚ್.ಪರಂಗಿ ಹಾಗೂ ಸಿಬ್ಬಂದಿ, ತಮ್ಮ ಸ್ವಂತ ಹಣದಲ್ಲಿ ಮಗುವಿಗೆ ಸಮವಸ್ತ್ರ, ಶಾಲಾ ಚೀಲ, ಶೂ ವಿತರಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !