ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿಯಿಂದಲೇ ಸಿದ್ಧತೆ ಆರಂಭಿಸಿ: ಎಸ್‌ಪಿ ಯತೀಶ್‌ ಎನ್‌.

ಸ್ಪರ್ಧಾತ್ಮಕ ಪರೀಕ್ಷೆಗಳ ಡಿಜಿಟಲ್ ಕೈಪಿಡಿ ‘ಎಕ್ಸಾಂ ಮಾಸ್ಟರ್‌ಮೈಂಡ್’ ಬಿಡುಗಡೆ
Last Updated 28 ಸೆಪ್ಟೆಂಬರ್ 2021, 3:41 IST
ಅಕ್ಷರ ಗಾತ್ರ

ಗದಗ: ‘ವಿದ್ಯಾರ್ಥಿಗಳು ಹೈಸ್ಕೂಲ್‌ ಹಂತದಲ್ಲೇ ಗುರಿ ನಿರ್ದಿಷ್ಟಪಡಿಸಿಕೊಂಡು, ಪಿಯುಸಿ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಹೇಳಿದರು.

ನಗರದ ಎಎಸ್‌ಎಸ್‌ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೊರತಂದಿರುವ ಡಿಜಿಟಲ್ ಕೈಪಿಡಿ ‘ಎಕ್ಸಾಂ ಮಾಸ್ಟರ್‌ಮೈಂಡ್’ ಆನ್‌ಲೈನ್ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪಿಯುಸಿ ಅಥವಾ ಪದವಿ ಮುಗಿಸಿದ ಅನೇಕ ವಿದ್ಯಾರ್ಥಿಗಳಿಗೆ ನಾನು ಮುಂದೆ ಏನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಇರುವುದಿಲ್ಲ. ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಜಾಗೃತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪಿಯುಸಿ ಹಂತದಲ್ಲೇ ಈ ಬಗ್ಗೆ ಜಾಗೃತಿ ಮೂಡಿಸಿದರೆ ಗುರಿ ಸ್ಪಷ್ಟಗೊಳ್ಳುತ್ತದೆ. ಯಾವ ಹುದ್ದೆ ಪಡೆಯಲು ಯಾವ ಪರೀಕ್ಷೆ ಬರೆಯಬೇಕು, ಸಿದ್ಧತೆ ಹೇಗೆ ನಡೆಸಬೇಕು ಎಂಬ ಮಾರ್ಗದರ್ಶನ ಈ ಹಂತದಲ್ಲಿ ಸಿಗಬೇಕು. ವಿದ್ಯಾರ್ಥಿಗಳ ಓದಿನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪರ್ಯಾಯ ವೇದಿಕೆ ಒದಗಿಸುವ ಮಾಸ್ಟರ್‌ ಮೈಂಡ್‌ನಂತಹ ಡಿಜಿಟಲ್‌ ಕೈಪಿಡಿಗಳ ಉಪಯೋಗವನ್ನು ಆಸಕ್ತ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಎಎಸ್‌ಎಸ್‌ ಕಾಲೇಜಿನ ಅಧ್ಯಕ್ಷ ಆನಂದ್‌ ಪೊತ್ನೀಸ್‌ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕೌಶಲ ಗಳಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಹೆಚ್ಚಿನ ಗಮನ ನೀಡಬೇಕು. ಸಿದ್ಧತೆ ಚೆನ್ನಾಗಿದ್ದಾಗ ಯಾವ ಸ್ಪರ್ಧಾತ್ಮಕ ಪರೀಕ್ಷೆಯೂ ಕಷ್ಟವಾಗುವುದಿಲ್ಲ. ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಕಠಿಣ ಪರಿಶ್ರಮ, ಛಲ ಹಾಗೂ ಬದ್ಧತೆ ಮುಖ್ಯ’ ಎಂದು ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಸಕ್ತಿ ಹೊಂದಿರುವ ಅನೇಕ ಬಡ ವಿದ್ಯಾರ್ಥಿಗಳಿಗೆ ದೆಹಲಿ, ಹೈದರಾಬಾದ್‌, ವಿಜಯವಾಡ ಅಥವಾ ಬೆಂಗಳೂರಿಗೆ ಹೋಗಿ ಕೋಚಿಂಗ್‌ ಪಡೆಯುವ ಸಾಮರ್ಥ್ಯ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ‘ಮಾಸ್ಟರ್‌ಮೈಂಡ್‌’ ಅತ್ಯುಪಯುಕ್ತ ಆಗಲಿದೆ’ ಎಂದು ಹೇಳಿದರು.

ಚಂದ್ರು ರಾಥೋಡ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಸೌಜನ್ಯ, ಪೂರ್ಣಾ ಪ್ರಾರ್ಥನೆ ಹಾಡಿದರು. ಕಾಲೇಜಿನ ಪ್ರಾಂಶುಪಾಲೆ ಎಲ್ಲೂರ್‌ ವೇದಿಕೆಯಲ್ಲಿದ್ದರು.

‘ಪರಿಣತಿ ಬೇಡ; ಕಾಮನ್‌ಸೆನ್ಸ್‌ ಮುಖ್ಯ’
‘ಬ್ಯೂರೋಕ್ರ್ಯಾಟ್ಸ್‌ ಆಗುವ ಗುರಿ ಹೊಂದಿದವರು ಒಂದು ವಿಷಯದಲ್ಲಿ ಪರಿಣತಿ ಸಾಧಿಸುವುದು ಬೇಕಿಲ್ಲ. ಆದರೆ, ಎಲ್ಲ ವಿಷಯಗಳ ಬಗ್ಗೆ ಅರಿವು ಹೊಂದುವುದು ಮುಖ್ಯ. ಅದಕ್ಕೆ ಕಾಮನ್‌ಸೆನ್ಸ್‌ ಮುಖ್ಯ’ ಎಂದು ಎಸ್‌ಪಿ ಯತೀಶ್‌ ಎನ್‌. ಹೇಳಿದರು.

‘ಸಿವಿಲ್‌ ಸರ್ವೆಂಟ್‌ ಆಗಬಯಸುವವರಿಗೆ ಕಾಮನ್‌ಸೆನ್ಸ್ ಅತಿ ಮುಖ್ಯ. ನಮ್ಮ ಸುತ್ತಮುತ್ತ ಏನೇನು ವಿದ್ಯಮಾನಗಳು ನಡೆಯುತ್ತಿವೆ, ಯಾಕೆ ನಡೆಯುತ್ತಿವೆ?, ಅದರ ಹಿನ್ನಲೆ ಏನು?, ಮುಂದಿನ ಫಲಿತಾಂಶ ಏನು? ಇದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಯಾರಿಗೆ ಇರುತ್ತದೆಯೋ ಆ ಅಭ್ಯರ್ಥಿ ನಾಗರಿಕ ಸೇವಾ ಪರೀಕ್ಷೆಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾನೆ. ಈ ಪ್ರಕ್ರಿಯೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ನಮಗೆ ಪ್ರಚಲಿತ ವಿದ್ಯಮಾನಗಳ ಅರಿವು ಇರಬೇಕು. ಅದಕ್ಕೆ ಪತ್ರಿಕೆ, ಮಾಧ್ಯಮಗಳು, ಪುಸ್ತಕಗಳು ನೆರವಾಗುತ್ತವೆ. ನಿರಂತರ ಓದಿನ ಮೂಲಕ ದಿನಂಪ್ರತಿ ಅಪ್‌ಡೇಟ್‌ ಆದರೆ ಸಿವಿಲ್‌ ಪರೀಕ್ಷೆಗಳು ಕಷ್ಟವಾಗುವುದಿಲ್ಲ’ ಎಂದು ಹೇಳಿದರು.

‘ಬೆಳಿಗ್ಗೆಯಿಂದ ರಾತ್ರೀವರೆಗೆ ಒಬ್ಬನೇ ಕೋಣೆ ಒಳಗೆ ಕುಳಿತು ಓದಿ ಐಎಎಸ್‌ ಪಾಸು ಮಾಡುತ್ತೇನೆ ಅಂದರೆ ಸಾಧ್ಯವಿಲ್ಲ. ಗುಂಪು ಅಧ್ಯಯನ ನಡೆಸಬೇಕು. ಪ್ರಪಂಚವನ್ನು ನೋಡಬೇಕು, ತಿಳಿಯಬೇಕು, ಅನುಭವಿಸಬೇಕು. ನಾಗರಿಕ ಪರೀಕ್ಷೆಗಳಲ್ಲಿ ಪಾಸು, ಫೇಲು ಎಂಬುದಿಲ್ಲ. ನಾವು ದಾಟ ಬೇಕಿರುವುದು ಗುರಿಯ ಗೆರೆಯನ್ನಷ್ಟೇ’ ಎಂದು ಹೇಳಿದರು.

₹1 ಲಕ್ಷ ಬಹುಮಾನ ಪ್ರಕಟ
‘ಎಎಸ್‌ಎಸ್‌ ಕಾಲೇಜಿನಲ್ಲಿ ಅತ್ಯುತ್ತಮ ಪುಸ್ತಕಗಳ ಸಂಗ್ರಹ, ಅಂತರ್ಜಾಲದ ಸೌಲಭ್ಯವಿದೆ. ಇದರ ಜತೆಗೆ ಮಾಸ್ಟರ್‌ಮೈಂಡ್‌ನ ಸದುಪಯೋಗ ಪಡೆದು ಯುಪಿಎಸ್‌ಸಿ ಪರೀಕ್ಷೆ ಪೂರ್ಣಗೊಳಿಸುವ ಕಾಲೇಜಿನ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಣ ಸಮಿತಿ ವತಿಯಿಂದ ₹1 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಆನಂದ್‌ ಪೊತ್ನೀಸ್‌ ತಿಳಿಸಿದರು.

‘ನಿರಂತರ ಓದು ಯಶಸ್ಸಿನ ಗುಟ್ಟು. ಗಳಿಸಿದ ಜ್ಞಾನ ಎಂದಿಗೂ ನಷ್ಟ ತರುವುದಿಲ್ಲ. ಉನ್ನತ ಪರೀಕ್ಷೆಗಳಿಗೆ ನಡೆಸಿದ ಸಿದ್ಧತೆಯಿಂದ ಅಪಾರ ಅನುಭವ ಲಭಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗುರಿಯ ಗೆರೆ ದಾಟಲಿ, ದಾಟದಿರಲಿ ಆ ಅಭ್ಯರ್ಥಿಗೆ ಮಾತ್ರ ಜಗತ್ತಿನಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತವೆ’ ಎಂದು ಹೇಳಿದರು.

*
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಕೈಪಿಡಿ ಸಾಕಷ್ಟು ಮಾಹಿತಿಯನ್ನು ಒಂದೆಡೆ ಒದಗಿಸಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು.
-ಸಿದ್ದರಾಮಯ್ಯ ಪಂಚಾಕ್ಷರಿ ಸಂಶಿಮಠ, ಉದ್ಯಮಿ

*
ಅತ್ಯುತ್ತಮ ಸಿದ್ಧತೆ ಇದ್ದರೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ರ‍್ಯಾಂಕ್‌ ಅನ್ನು ಸುಲಭವಾಗಿ ಪಡೆಯಬಹುದು. ಸಿದ್ಧತೆ ಮಾಡಿಕೊಳ್ಳದೇ ಪರೀಕ್ಷೆ ಎದುರಿಸಲು ಹೋದಾಗ ಎಲ್ಲವೂ ಕಠಿಣ.
-ಯತೀಶ್‌ ಎನ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT