ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆ ತಡೆಗೆ ಸಚಿವ ತಾಕೀತು

ಗದಗ ಜಿಲ್ಲಾ ಗಣಿಗಾರಿಕೆ ಟಾಸ್ಕ್ ಫೋರ್ಸ್‌ ಸಮಿತಿ ಸಭೆ
Last Updated 12 ಸೆಪ್ಟೆಂಬರ್ 2019, 9:28 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಕಠಿಣ ಕ್ರಮಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಗಣಿಗಾರಿಕೆ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಮಲಪ್ರಭಾ ನದಿ ಪಾತ್ರದ ನರಗುಂದ ತಾಲ್ಲೂಕುಗಳಲ್ಲಿ ಮರಳುಗಾರಿಕೆ ವ್ಯಾಪ್ತಿಯಿದ್ದು, ಇಲ್ಲಿನ ತಹಶೀಲ್ದಾರರು, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ಕಾರಣಕ್ಕೂ ಆಕ್ರಮ ಮರಳುಗಾರಿಕೆ ನಡೆಯದಂತೆ ತಡೆಯಬೇಕು ಎಂದು ಸೂಚಿಸಿದರು.

ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.

ನೆರೆಯಿಂದಾಗಿ ಮಲಪ್ರಭಾ ನದಿ ಪಾತ್ರದ ರಾಮದುರ್ಗ ಹತ್ತಿರ ರೈತರ ಹೊಲಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮರಳು ಶೇಖರವಾಗಿದ್ದು, ಇದರ ವಿಲೇವಾರಿ ಕುರಿತಂತೆ ಬೆಳಗಾವಿ ಹಾಗೂ ಗದಗ ಜಿಲ್ಲಾಧಿಕಾರಿ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮರಳುಗಾರಿಕೆ ಸೇರಿದಂತೆ ಗಣಿಗಾರಿಕೆಗೆ ಬರುವ ಅರ್ಜಿಗಳನ್ನು ವಿಳಂಬ ಮಾಡದೇ ವಿಲೇವಾರಿ ಮಾಡಬೇಕು. ಗಣಿಗಾರಿಕೆ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ₹ 4.25 ಕೋಟಿಗಳಿಗೆ ಸೀಮಿತವಾಗಿದ್ದ ಮರಳುಗಾರಿಕೆ ರಾಜಧನ, ಕಳೆದ ವರ್ಷ ₹ 14 ಕೋಟಿಗಳಿಗೆ ತಲುಪಿದೆ. 2019-20ನೇ ಸಾಲಿನ ಏಪ್ರಿಲ್‌ನಿಂದ ಆಗಸ್ಟ್‌ ವರೆಗೆ ₹ 3.79 ಕೋಟಿ ರಾಜಧನ ಬಂದಿದೆ ಎಂದು ತಿಳಿಸಿದರು.

ಮರಳು ಹಾಗೂ ಗ್ರಾನೈಟ್ ಸೇರಿದಂತೆ ಗಣಿಗಾರಿಕೆ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಕಲ್ಲುಗಣಿಗಾರಿಕೆಗೆ 66, ಮರಳುಗಾರಿಕೆಗೆ 53 ಹಾಗೂ ಗ್ರಾನೈಟ್‍ಗೆ 5 ಗುತ್ತಿಗೆಗಳನ್ನು ನೀಡಲಾಗಿದೆ ಎಂದರು.

2019-20ನೇ ಸಾಲಿಗೆ ಮರಳುಗಾರಿಕೆಗೆ ಸಂಬಂಧಿಸಿದಂತೆ 20 ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16 ಖನಿಜ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, 2018-19ರಲ್ಲಿ ₹ 69.65 ಲಕ್ಷ ದಂಡ ಹಾಗೂ 2019-20 ನೇ ಸಾಲಿನ ಆಗಸ್ಟ್‌ ವರೆಗೆ ₹ 15.46 ಲಕ್ಷ ದಂಡ ವಸೂಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರಾಣೇಶ ರಾವ್,ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಾವಿತ್ರಿ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT