ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರ ವಿಫಲಗೊಳಿಸುವ ಶಕ್ತಿ ಪಕ್ಷಕ್ಕಿದೆ

ಸಂಕನೂರ ಪರ ಪ್ರಚಾರ ಸಭೆಯಲ್ಲಿ ಸಚಿವ ಶ್ರೀರಾಮುಲು ಹೇಳಿಕೆ
Last Updated 19 ಅಕ್ಟೋಬರ್ 2020, 16:22 IST
ಅಕ್ಷರ ಗಾತ್ರ

ಗದಗ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತಂತ್ರ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಕುತಂತ್ರಗಳು ಏನೇ ಇದ್ದರೂ ಆರು ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಅವರ ತಂತ್ರ–ಕುತಂತ್ರಗಳನ್ನು ಛಿದ್ರಗೊಳಿಸುವ ಶಕ್ತಿ ಬಿಜೆಪಿಗೆ ಇದೆ’ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಗದಗ ನಗರದಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ.ಸಂಕನೂರ ಪರ ಇಡೀ ದಿನ ಮತಯಾಚನೆ ನಡೆಸುವುದಾಗಿ ತಿಳಿಸಿದರು.

‘ಸಂಕನೂರ ಕೇವಲ ಶಿಕ್ಷಕರ ಸಮಸ್ಯೆಗಳಿಗಷ್ಟೇ ಧ್ವನಿಯಾಗಿಲ್ಲ. ವಿವಿಧ ಇಲಾಖೆಗಳಲ್ಲಿ ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ವಿಧಾನ ಪರಿಷತ್‌ನಲ್ಲಿ ಮಾತನಾಡಿದ್ದಾರೆ. ಶೈಕ್ಷಣಿಕ ರಂಗ ಮತ್ತು ಸಮಾಜಸೇವೆ ಎರಡರಲ್ಲೂ ಗುರುತಿಸಿಕೊಂಡಿರುವ ಸಂಕನೂರ ಈ ಬಾರಿ ಕೂಡ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಅವರ ಪರವಾಗಿ ಪಕ್ಷದ ಮುಖಂಡರೆಲ್ಲರೂ ಪ್ರಚಾರ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಜನಸಂಖ್ಯೆ ಆಧಾರದ ಮೇಲೆ ಶೇ 7.5 ಮೀಸಲಾತಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಅಂತಿಮ ತೀರ್ಮಾವನ್ನು ಶೀಘ್ರವೇ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಸುಳ್ಳು. ಆರೋಗ್ಯ ಇಲಾಖೆಯಲ್ಲಿ ಒಂದು ನಯಾಪೈಸೆ ಕೂಡ ಭ್ರಷ್ಟಾಚಾರ ನಡೆದಿಲ್ಲ. ಖಾತೆ ಬದಲಾವಣೆ ಆ ಕಾರಣಕ್ಕಾಗಿಯೇ ನಡೆದಿದೆ ಎಂಬುದು ಸಹ ಸತ್ಯವಲ್ಲ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಒಬ್ಬರಲ್ಲೇ ಇದ್ದರೆ ಆಡಳಿತಾತ್ಮಕವಾಗಿ ಚೆನ್ನಾಗಿರುತ್ತದೆ. ಹಾಗಾಗಿ, ತಾಂತ್ರಿಕ ಕಾರಣಗಳಿಂದಾಗಿ ಮುಖ್ಯಮಂತ್ರಿಗಳು ಈ ನಿರ್ಧಾರ ಮಾಡಿ ಖಾತೆ ಬದಲಾವಣೆ ಮಾಡಿದ್ದಾರೆ’ ಎಂದು ತಿಳಿಸಿದರು.

ಸಂಸದ ಉದಾಸಿ ಮಾತನಾಡಿ, ‘ಎಸ್‌.ವಿ.ಸಂಕನೂರ ಅವರು ಒಬ್ಬ ಸೂಕ್ಷ್ಮಮತಿ. ವಿಜ್ಞಾನ ಕ್ಷೇತ್ರದ ಬಗ್ಗೆ ಅಪಾರ ಒಲವು ಉಳ್ಳವರು. ಅತ್ಯಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಲು ಪದವೀಧರರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಂಕನೂರ ಅವರು ಕಳೆದ ಬಾರಿ 14 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ನಾಲ್ಕು ಜಿಲ್ಲೆಗಳಿಂದ 19 ಮಂದಿ ಶಾಸಕರು ಹಾಗೂ ನಾಲ್ಕು ಮಂದಿ ಸಂಸದರು ಇದ್ದು ಅವರ ಗೆಲುವಿಗೆ ಶ್ರಮಿಸಲಿದ್ದೇವೆ. ಈ ಬಾರಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಸರ್ವರಿಗೂ ಪ್ರವೇಶ, ನ್ಯಾಯಸಮ್ಮತ, ಕೈಗೆಟುಕುವ ಶಿಕ್ಷಣ, ಹೊಣೆಗಾರಿಕೆ ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ. ಅದನ್ನು ಜಾರಿಗೆ ತಂದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅನಿಲ್ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ ಇದ್ದರು.

‘ಹೊಸ ಕ್ರಾಂತಿಗೆ ಮುನ್ನುಡಿ’

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಟ್ಟ ನಂತರ ಕೆಲವೊಂದು ಗುರಿಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಕಾಲಮಿತಿಯೊಳಗೆ ಮುಗಿಸಲಾಗುವುದು’ ಎಂದು ಸಚಿವ ಶ್ರೀರಾಮುಲು ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಬಳಸಿ 10 ವರ್ಷಗಳ ಕಾಲಮಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT