ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತುಲಿತ ಶಿಕ್ಷಣದ ದಾರಿಯಲ್ಲಿ...

Last Updated 11 ಮಾರ್ಚ್ 2018, 19:40 IST
ಅಕ್ಷರ ಗಾತ್ರ

–ಕಲ್ಗುಂಡಿ ನವೀನ್

ಪರೀಕ್ಷೆಯ ಕಾವು ಮಕ್ಕಳಲ್ಲಿ, ಮಕ್ಕಳಿಗಿಂತ ಹೆಚ್ಚು ಪೋಷಕರಲ್ಲಿ ಕಂಡುಬರುವ ದಿನಗಳಿವು! ಇನ್ನು ಕೆಲವೇ ದಿನಗಳಲ್ಲಿ ಎಸ್‍. ಎಸ್‍. ಎಲ್‍. ಸಿ. ಪರೀಕ್ಷೆಗಳೂ ಆರಂಭಗೊಂಡು ಪೋಷಕರು ಹೆಚ್ಚು ಆತಂಕಕ್ಕೊಳಗಾಗುವ ಕಾಲ! ಇದು ಇಂದಿನ ಕೊರಳಿರಿಯುವ ಸ್ಫರ್ಧಾತ್ಮಕ ಜಗತ್ತಿನಲ್ಲಿ ಸಹಜ ಕೂಡ. ಬದಲಾಗುತ್ತಿರುವ ಕಾಲಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಮಕ್ಕಳಲ್ಲಿ ಹೆಚ್ಚು ಇರುವುದರಿಂದ ಬಹುತೇಕ ಪೋಷಕರು ತಾವೊಂದು ದೊಡ್ಡ ನೈತಿಕ ಬೆಂಬಲವಾಗಿ ಮಕ್ಕಳ ಬೆನ್ನಿಗೆ ನಿಂತರೆ ಸಾಕು, ಅವರು ಜಗತ್ತನ್ನು ಗೆದ್ದು ಬರುತ್ತಾರೆ.

ಇಂದು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ, ಯೋಜಿಸಲಾಗುತ್ತಿರುವ ಹೊಸ ಪ್ರಯೋಗಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಈ ಮಾದರಿಯನ್ನು ನೋಡಿ: ಕಲಿಯುವ ಸ್ಥಳಕ್ಕೆ ಶಾಲೆ ಎನ್ನುತ್ತಾರೆಯಾದ್ದರಿಂದ ಇದನ್ನು ‘ಶಾಲೆ’ ಎನ್ನುತ್ತಾರೆ. ಆದರೆ ಇದು ಸ್ಥಾವರವಲ್ಲ, ಜಂಗಮ! ಪ್ರತಿವರ್ಷ ಜಗತ್ತಿನ ಬೇರೆ ಬೇರೆ ನಗರಗಳಲ್ಲಿ ಈ ಶಾಲೆ ಕಾರ್ಯನಿರ್ವಹಿಸುತ್ತದೆ. ವರ್ಷದಲ್ಲಿ ಒಂದು ಅಥವಾ ಎರಡು ತಿಂಗಳು ಮಾತ್ರ ಶಾಲೆ. ಉಳಿದಂತೆ ಕಲಿತಿದ್ದರ ಅನ್ವಯ. ಇಲ್ಲಿನ ಶಿಕ್ಷಕರು ಬಿ. ಎಡ್‍. ಮಾಡಿ ಬಂದವರಲ್ಲ, ಜಾಗತಿಕ ತಜ್ಞರು, ನೊಬೆಲ್‍ ಪ್ರಶಸ್ತಿ ವಿಜೇತರು, ದೊಡ್ಡ ಸಾಧಕರು, ಸಾಧು–ಸಂತರು, ಜ್ಞಾನದ ಬೇರೆ ಬೇರೆ ಶಾಖೆಯ ಸ್ಥಾಪಕರು, ಪ್ರಯೋಗಶೀಲರು. ಅಂದಹಾಗೆ ಈ ಶಾಲೆ ಸೇರುವವರಿಗೆ ವಯೋಮಿತಿಯಿಲ್ಲ. ಮಗುವಿನೊಂದಿಗೆ ತಂದೆತಾಯಿಯೂ ಸೇರಬಹುದು. ಎಲ್ಲರಿಗೂ ಶಿಕ್ಷಣ! ಶಿಕ್ಷಣಾರ್ಥಿಯ ಸಹಪಾಠಿ ತನ್ನ ತಂದೆಯೂ ಆಗಿರಬಹುದು, ಮೊಮ್ಮಗನೂ ಆಗಿರಬಹುದು. ನಿಗದಿತ ಪಠ್ಯವೆಂದಿಲ್ಲ; ಮಹತ್ವದ ಪುಸ್ತಕಗಳೆಲ್ಲವೂ ಪಠ್ಯವೇ. ಇಂತಹ ದಿಗ್ಭ್ರಮೆ ಹಿಡಿಸುವಂತಹ ಆಲೋಚನೆಗಳೂ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುತ್ತಿವೆ. ಇದು ಕೋಟಿ ಸುರಿಯುವವರಿಗೆ ಮಾತ್ರವಲ್ಲವಂತೆ, ಬಡವರಿಗೂ ನಿಲುಕುವಂತೆ ಇದನ್ನು ಯೋಜಿಸುತ್ತಾರಂತೆ.

ಒಂದೆಡೆ ಪರೀಕ್ಷೆ ಎಂಬ ಆತಂಕ, ಮತ್ತೊಂದೆಡೆ ಜ್ಞಾನಪಿಪಾಸುವಿನ ಅಲೆದಾಟ! ಇದು ವಿಕಾಸಶೀಲ ಸಮಾಜದ ಲಕ್ಷಣ. ಎಲ್ಲ ವ್ಯವಸ್ಥೆಗಳಲ್ಲಿಯೂ ಕಲಿಕೆ; ಆ ಪದದ ನಿಜ ಅರ್ಥದಲ್ಲಿ ಸಂಪೂರ್ಣವಾಗಿ ಆಗಬೇಕಾದದ್ದು ಬಹಳ ಮುಖ್ಯ.

ಹೀಗೆ ಅಂದರೆ ಇಂಥ ಕಲಿಕೆ ಈಗ ನಡೆಯುತ್ತಿದೆಯೇ? ‘ಇಲ್ಲ’ ಎಂಬುದು ನಮ್ಮ ಉತ್ತರವಾದರೆ ಅದಕ್ಕೆ ಪರಿಹಾರಗಳೇನು? ಇದರ  ಸಮಸ್ಯೆಗಳೇನು? ಕಲಿಕೆಯನ್ನು ಕುಂಠಿತಗೊಳಿಸುವ ಅಂಶಗಳಾವವು? ಇಂಥವುಗಳನ್ನು ಕುರಿತ ಗಂಭೀರ ಚರ್ಚೆ ನಡೆಯುತ್ತಲೇ ಬಂದಿದೆ. ಶಿಕ್ಷಣ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವ ಅಧ್ಯಯನಗಳನ್ನು ಈ ಚರ್ಚೆಗೆ ಪೂರಕವಾಗಿ ಬಳಸಿ ಕಲಿಕೆಯಲ್ಲಿನ ಸಮಸ್ಯೆಗಳನ್ನು ಸಮಗ್ರವಾಗಿ ವಿಶ್ಲೇಷಣೆ ನಡೆಸಿ 2015ರಲ್ಲಿ ಒಂದು ವರದಿ ತಯಾರಿಸಲಾಗಿದೆ. ಇದರ ಗುರಿ 2030ರ ಹೊತ್ತಿಗೆ ಎಲ್ಲರಿಗೂ ‘ಸಂತುಲಿತ ಶಿಕ್ಷಣ' (Equitable Education) ದೊರೆಯಬೇಕೆಂಬುದು. ಇದು ಭಾರತಕ್ಕೆ ಮಾತ್ರವೇ ಎಂದಲ್ಲ, ಜಾಗತಿಕವಾಗಿ ಅಳವಡಿಸಬೇಕೆಂಬುದು ಉದ್ದೇಶ. ಸಮಸ್ಯೆಗಳು ಹೆಚ್ಚು ಕಂಡುಬರುವುದು ಕಡಿಮೆ ಆದಾಯದ ಬಹುದೊಡ್ಡ ಸಮುದಾಯಗಳಿರುವ ರಾಷ್ಟ್ರಗಳಲ್ಲಿ. ಹೀಗಾಗಿ ಈ ವರದಿ ಅಂಥ ರಾಷ್ಟ್ರಗಳನ್ನೂ ಒಳಗೊಂಡಿದೆ. ಆ ಗುಂಪಿನಲ್ಲಿ ಭಾರತವೂ ಇದೆ.

ಈ ವರದಿಯನ್ನು ತಯಾರಿಸಿದ್ದು ಯುನೈಟೆಡ್‍ ಕಿಂಗ್‍ಡಮ್‍ನ ಅಂತರರಾಷ್ಟ್ರೀಯ ಅಭಿವೃದ್ಧಿ ವಿಭಾಗ (ಯುಕೆ-ಡಿಎಫ್‍ಐಡಿ). ತಜ್ಞರು ಯಾರೆಂದರೆ – ಪೌಲೀನ್‍ ರೋಸ್‍ ಮತ್ತು ಬೆಂಜಮಿನ್‍ ಅಲ್‍ಕಾಟ್‍. ಪೌಲೀನ್‍ ಕೇಂಬ್ರಿಜ್‍ ವಿಶ್ವವಿದ್ಯಾನಿಲಯದ ಅಂತರರಾಷ್ಟ್ರೀಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕರು ಮತ್ತು ರಿಸರ್ಚ್‍ ಫಾರ್ ಈಕ್ವಿಟಬಲ್‍ ಆಕ್ಸೆಸ್‍ ಅಂಡ್‍ ಲರ್ನಿಂಗ್‍ ಕೇಂದ್ರದ ನಿರ್ದೇಶಕರು. ಬೆಂಜಮಿನ್‍ ಕೇಂಬ್ರಿಜ್‍ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರು.

‘2030ರ ಹೊತ್ತಿಗೆ ಎಲ್ಲರಿಗೆ ಸಂತುಲಿತ ಶಿಕ್ಷಣ’ – ಈ ಪರಿಕಲ್ಪನೆಗೆ ಒಂದು ಹಿನ್ನೆಲೆಯಿದೆ. ಅನೇಕ ಅಂತರರಾಷ್ಟ್ರೀಯ ಪ್ರಯತ್ನಗಳ ಫಲವಾಗಿ ಜಾಗತಿಕವಾಗಿ, ಅದರಲ್ಲಿಯೂ ಕಡಿಮೆ ಮತ್ತು ಕೆಳಮಧ್ಯಮ ಆದಾಯವಿರುವ ಕುಟುಂಬದಿಂದ ಬಂದ ಮಕ್ಕಳು ಹೆಚ್ಚಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ; ಸಂತೋಷದ ವಿಷಯವೇ. ಆದರೆ, ಶಾಲೆಗೆ ಹೋಗುತ್ತಿದ್ದಾರೆ ಎಂದರೆ ಅದು ಕಲಿಯುತ್ತಿದ್ದಾರೆ ಎಂದರ್ಥವಲ್ಲ ಎಂಬ ಕಹಿಸತ್ಯ ಕ್ರಮೇಣ ಅರಿವಿಗೆ ಬಂದಿತು. ಇದರ ಕಾರಣಗಳನ್ನು ವಿಶ್ಲೇಷಿಸಿ, ಪರಿಹಾರಗಳನ್ನು ಸೂಚಿಸಲಾಗಿದೆ. ಈ ವರದಿಯ ಆಶಯವೇ 2030ರ ಹೊತ್ತಿಗೆ ಎಲ್ಲರಿಗೂ ಸಂತುಲಿತ ಮೂಲಭೂತ ಶಿಕ್ಷಣ ದೊರೆಯಬೇಕೆಂಬುದು.

ಜಾಗತಿಕವಾಗಿ ಸುಮಾರು ಇಪ್ಪತ್ತೈದು ಕೋಟಿ ಮಕ್ಕಳು ಶಾಲೆಗೆ ಹೋದರೂ ಅವರಲ್ಲಿ ‘ಕಲಿಕೆ’ ಸಾಧ್ಯವಾಗುತ್ತಿಲ್ಲ ಎಂಬುದು ಯುನೆಸ್ಕೊ ವರದಿಯ ಅಂಶ. ಬಹಳ ಮುಖ್ಯವಾಗಿ ಕೆಳ ಹಂತದ ತರಗತಿಯಲ್ಲಿ ಕಲಿಯಬೇಕಾದದ್ದನ್ನು ಮಗು ಕಲಿತಿರುವುದಿಲ್ಲ. ಮುಂದಿನ ತರಗತಿಗಳಲ್ಲಿ ಕಲಿಸುವ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ, ಸಹಜವಾಗಿಯೇ ಇದು ದೀರ್ಘಾವಧಿ ಪರಿಣಾಮ ಬೀರುತ್ತದೆ.

ಕೆಲವು ವರ್ಷಗಳ ಹಿಂದೆ ನಮ್ಮ ಸರ್ಕಾರಿ ಶಾಲೆಗಳ ಎಂಟು, ಒಂಬತ್ತನೆಯ ತರಗತಿಯ ಮಕ್ಕಳಿಗೆ ಓದಲು ಬಾರದು. ಒಂದು ಸರಳ ವಾಕ್ಯ ರಚಿಸಲೂ ಸಾಧ್ಯವಾಗುತ್ತಿಲ್ಲವೆಂಬ ಕೂಗೆದ್ದಿತ್ತಲ್ಲವೆ? ವಾಸ್ತವವಾಗಿ ಅದು ಜಾಗತಿಕ ಸಮಸ್ಯೆ! ಐದನೇ ತರಗತಿ (ಸುಮಾರು ಹನ್ನೆರೆಡು ವರ್ಷ ವಯಸ್ಸಿನ ಹೊತ್ತಿಗೆ) ಮಗುವಿಗೆ ಸರಾಗವಾಗಿ ಓದಲು, ಬರೆಯಲು ಬರಬೇಕು ಮತ್ತು ಸರಳ ಗಣಿತ ಕರಗತವಾಗಿರಬೇಕು ಎಂಬುದು ತಜ್ಞರು ಸೂಚಿಸಿರುವ ಕಲಿಕೆಯ ಗುರಿ. ಈಗ ಒಂಬತ್ತನೇ ತರಗತಿಯ ಮಗುವಿಗೆ ಓದಲು ಬಾರದು, ಸರಳ ಲೆಕ್ಕಬಾರದು ಎಂದಾದರೆ ಅದು ಇನ್ನು ಐದನೇ ತರಗತಿಯಲ್ಲಿ ಕಲಿಯ ಬೇಕಾದನ್ನೇ ಕಲಿತಿಲ್ಲ ಎಂದಾಯಿತು. ಒಟ್ಟಾರೆ, ಒಂದು ಮಗು ಒಂದು ತರಗತಿಯಲ್ಲಿ ಕಲಿಯಬೇಕಾದ್ದನ್ನು ಕಲಿಯದೇ ಮುಂದಿನ ತರಗತಿಗೆ ಬರುತ್ತಿದೆ. ಅದು ಸಮಸ್ಯೆಗಳ ಸರಮಾಲೆಗೆ ಕಾರಣ ಎಂಬುದು ಇದರ ಹೂರಣ. ಇದನ್ನು ಸರಿಪಡಿಸಿ ಮಕ್ಕಳು ಕಲಿಯಬೇಕಾದ್ದನ್ನು ಆಯಾ ತರಗತಿಯಲ್ಲಿಯೇ ಕಲಿಯುವಂತೆ ಮಾಡಿದರೆ ಅದೇ ಸಂತುಲಿತ ಶಿಕ್ಷಣ.

ಸದ್ಯ ಈ ಸಂತುಲಿತ ಶಿಕ್ಷಣವನ್ನು ನಮ್ಮ ಶಾಲೆಗಳಲ್ಲಿ ನೀಡಲಾಗುತ್ತಿಲ್ಲ, ಈ ಸಮಸ್ಯೆಗೆ ಕಾರಣಗಳೇನು? ಯಾವ ಮಕ್ಕಳು ಕಲಿಯುತ್ತಿಲ್ಲ? ಕಲಿಕೆಯಲ್ಲಿನ ಕಂದಕ ಎಲ್ಲಿ ಸೃಷ್ಟಿಯಾಗುತ್ತಿದೆ? ನಮ್ಮ ಶಾಲಾ ವ್ಯವಸ್ಥೆಯೇ ಇದಕ್ಕೆ ಕಾರಣವೇ? ಈ ಪ್ರಶ್ನೆಗಳನ್ನು ಪರಿಗಣಿಸಿ ಉತ್ತರ ಕಂಡುಕೊಂಡರೆ ಕಡೆಯ ಪಕ್ಷ ಈ ಕಲಿಕಾ ಕಂದರವನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದು.

ಈ ಬಗೆಯ ಕಲಿಕಾ ಸಮಸ್ಯೆಯು ಪ್ರಾಥಮಿಕ ಶಾಲೆಯಿಂದ ಮಾತ್ರವಲ್ಲದೆ ಎಷ್ಟೋ ಸಂದರ್ಭದಲ್ಲಿ ಮಗು ಶಾಲೆಗೆ ಹೋಗುವ ಮೊದಲೇ ಆರಂಭವಾಗಿರುತ್ತದೆ ಎನ್ನುತ್ತದೆ ವರದಿ. 2030ರ ಹೊತ್ತಿಗೆ ಎಲ್ಲರಿಗೂ ಸಂತುಲಿತ ಶಿಕ್ಷಣ ಎಂಬ ಗುರಿಯನ್ನು ತಲುಪಲು ಈ ಕಂದಕವನ್ನು ಮೊದಲು ಕಡಿಮೆಯನ್ನಾದರೂ ಮಾಡಬೇಕು ಎಂದು ಅದು ಎಚ್ಚರಿಸುತ್ತದೆ.

ಸಮಸ್ಯೆಗೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಬಡತನ, ಕೌಟುಂಬಿಕ ವ್ಯವಸ್ಥೆ, ಲಿಂಗ, ಅವರು ವಾಸಿಸುವ ಸ್ಥಳ (ಪರಿಸರ), ವಿಶೇಷ ಅವಶ್ಯಕತೆಯುಳ್ಳ ಮಕ್ಕಳು – ಇವು ಮುಖ್ಯವಾದವು. ಈ ಸಮಸ್ಯೆ ಭಾರತದ್ದು ಮಾತ್ರವಲ್ಲ, ಜಾಗತಿಕವಾದದ್ದು ಹಾಗೂ ವಿಶೇಷವಾಗಿ ಕಡಿಮೆ ಆದಾಯವಿರುವ ರಾಷ್ಟ್ರಗಳದ್ದು ಎಂದು ವರದಿ ಹೇಳುತ್ತದೆ. ಸಮಸ್ಯೆಯ ಪರಿಹಾರಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ವರದಿ ನೀಡಿದೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಇವನ್ನು ಪರಿಶೀಲಿಸಿ ನಮ್ಮ ವ್ಯವಸ್ಥೆಗೆ ಸೂಕ್ತವಾಗಿ ಮಾರ್ಪಡಿಸಿಕೊಂಡರೆ ಶಿಕ್ಷಣದ ಉದ್ದೇಶ ಈಡೇರುವಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ.

ಪರಿಹಾರಕ್ಕೆ ಮಹತ್ವದ ಅಂಶಗಳು

*ಸಮಸ್ಯೆಯನ್ನು ಬಾಲ್ಯದ ಮೊದಲ ವರ್ಷಗಳಲ್ಲಿಯೇ ಗುರುತಿಸಿ.

*ನಿಧಾನವಾಗಿ ಕಲಿಯುವವರಿಗೆ ಸೂಕ್ತವಾದ ವೇಗದಲ್ಲಿಯೇ ಕಲಿಸುವಂತೆ ನೋಡಿಕೊಳ್ಳಿ.

*ಸಮಸ್ಯೆಯಿರುವ ಮಕ್ಕಳಿಗೆ ಉತ್ತಮ ಶಿಕ್ಷಕರ ಬೆಂಬಲ ಸಿಗುವಂತೆ ನೋಡಿಕೊಳ್ಳಿ.

*ಮಕ್ಕಳಿಗೆ ಸರಿಯಾದ ವೇಗದಲ್ಲಿ ಕಲಿಯಲು ಅಗತ್ಯವಿರುವ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ.

*ಕಲಿಕೆಯಲ್ಲಿ ಉಂಟಾಗುವ ನ್ಯೂನತೆಗಳಿಗೆ ಶಾಲೆಗಳನ್ನು ಹೊಣೆ ಮಾಡುವಂತೆ ಪೋಷಕರು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸಿ.

ಇವು ವರದಿಯಲ್ಲಿರುವ ಮಾರ್ಗದರ್ಶಿ ಸೂತ್ರಗಳು. ಇವುಗಳನ್ನು ನೇರಾನೇರ ಅನ್ವಯಿಸಲು ಸಾಧ್ಯವಿಲ್ಲ. ಹಾಗೆಯೇ ಮೇಲುನೋಟಕ್ಕೆ ಕಾಣುವಷ್ಟು ಸರಳವೂ ಅಲ್ಲ! ಸಾರ್ವಜನಿಕ ಹಾಗೂ ಖಾಸಗೀ – ಈ ಎರಡೂ ವಲಯಗಳು ತಮ್ಮತಮ್ಮಲ್ಲಿನ ಸ್ಥಿತಿಗತಿಗಳನ್ನು ಪರಾಮರ್ಶನೆಗೆ ಒಡ್ಡಿ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸಿನಿಕತೆಯಲ್ಲಿಯೇ ಎಲ್ಲವೂ ಮುಗಿದುಹೋಗುತ್ತದೆ. ರಾಷ್ಟ್ರದ ಮಾನವ ಸಂಪನ್ಮೂಲದ ಸೃಷ್ಟಿಯಾಗುವುದೇ ನಮ್ಮ ಶಾಲೆಗಳಲ್ಲಿ. ಇದರ ಗಹನತೆಯನ್ನು ಅರಿತು, ಅಗತ್ಯ ಕಾರ್ಯಗಳು ಇನ್ನು ಹೆಚ್ಚಿನ ವೇಗದಲ್ಲಿ ನಡೆಯಬೇಕು. ಇಂಥ ಅದ್ಭುತ ಕಾರ್ಯದಲ್ಲಿ ನಮ್ಮ ಪಾಲಿದೆ ಎಂಬ ಹೆಮ್ಮೆ ಶಿಕ್ಷಕರಿಗೂ ಮತ್ತು ಶಾಲಾಡಳಿತ ಮಂಡಳಿಯವರಿಗೂ ಮೂಡುವಂತೆ ಅವರನ್ನು ಸಿದ್ಧಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT