ಶನಿವಾರ, ಮೇ 15, 2021
25 °C
ಕೋವಿಡ್‌ ಎರಡನೇ ಅಲೆ ನಿಯಂತ್ರಣ

ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹ: ಸಿಎಂಗೆ ಶಾಸಕ ಎಚ್‌.ಕೆ.ಪಾಟೀಲ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕೋವಿಡ್‌–19 ಎರಡನೇ ಅಲೆಯ ಪರಿಣಾಮಕಾರಿ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗದಗ ಶಾಸಕ ಎಚ್‌.ಕೆ.ಪಾಟೀಲ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಕೊರೊನಾ ವೈರಸ್ ಎರಡನೇ ಅಲೆ ತಲೆ ಎತ್ತುತ್ತಿದ್ದಂತೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದು ಆತಂಕ ಸೃಷ್ಟಿಸಿವೆ. 14 ತಿಂಗಳ ಸುದೀರ್ಘ ಅವಧಿಯ ಕೊರೊನಾ ಸೋಂಕಿನ ವಿಪತ್ತು ಎದುರಿಸಿದ ಅನುಭವವಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಆದರೆ, ಇಂದಿಗೂ ಸಹ ಬೆಂಗಳೂರಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳಿಲ್ಲ. ನಮ್ಮ ರಾಜ್ಯಕ್ಕೆ ಹೊರ ದೇಶಗಳಿಂದ, ಹೊರ ರಾಜ್ಯಗಳಿಂದ ಬರುವ ಜನರ ಸಮರ್ಪಕ ವೈದ್ಯಕೀಯ ತಪಾಸಣೆ, ಮೇಲ್ವಿಚಾರಣೆ ನಡೆಯುತ್ತಿಲ್ಲ. ರೋಗಿಗಳನ್ನು ಲಕ್ಷಣ ಕಂಡುಬಂದ ಕೆಲವೇ ಗಂಟೆಗಳಲ್ಲಿ ಪ್ರತ್ಯೇಕಿಸುವ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ದೂರಿದ್ದಾರೆ.

‘ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡುವ ಕ್ರಮವನ್ನು ಯಾವಾಗ ಮತ್ತು ಏಕೆ ಕೈ ಬಿಡಲಾಯಿತೋ ಗೊತ್ತಿಲ್ಲ. ಈಗ ಮತ್ತೆ ಹಾಸಿಗೆಗಳನ್ನು ಪಡೆಯುತ್ತಿದ್ದೇವೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಆಕ್ಸಿಜನ್ ಕೊರತೆ ಎದುರಾಗಿದೆ. ರಾಜ್ಯದ ಶೇ 80ರಷ್ಟು ಆಸ್ಪತ್ರೆಗಳಲ್ಲಿ ಜೀವರಕ್ಷಕ ರೆಮಿಡ್‍ಸ್ವಿಯರ್ ಚುಚ್ಚುಮದ್ದು ಲಭ್ಯವಿಲ್ಲ. ಬೆಂಗಳೂರು, ಬೀದರ್, ಕಲಬುರ್ಗಿ ಭಾಗದಲ್ಲಿ ಭಾರಿ ಕೊರತೆ ಇದೆ. ಈ ಔಷಧಿ ದೊರೆಯುತ್ತಿಲ್ಲ’ ಎಂದು ಹೇಳಿದ್ದಾರೆ.

‘ತೀವ್ರ ಉಸಿರಾಟದ ತೊಂದರೆಯಿಂದ ಬಳಲುವ ರೋಗಿಗಳ ಸಂಖ್ಯೆ ರಾಜ್ಯದಲ್ಲಿ 40ರಿಂದ 50 ಸಾವಿರದಷ್ಟಿದೆ. ಆಮ್ಲಜನಕ ಸಹಿತ ಹಾಸಿಗೆಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ 4ರಿಂದ 5 ಸಾವಿರದಷ್ಟು ಮಾತ್ರ ಇವೆ. ಖಾಸಗಿ ಆಸ್ಪತ್ರೆಗಳು ಆಕ್ಸಿಜಿನೇಟೆಡ್ ಹಾಸಿಗೆಗಳನ್ನು ಇನ್ನೂ ಒದಗಿಸಿಲ್ಲ. ಇದು ಸರ್ಕಾರಿ ಅಂಕಿ-ಸಂಖ್ಯೆಗಳಿಂದಲೇ ಸ್ಪಷ್ಟವಾಗಿದೆ. ಸರ್ಕಾರ ಏನನ್ನು ಮಾಡಲು ಹೊರಟಿದೆ, ಕ್ರಮಗೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೇವಲ ನಗೆ ಪಾಟಿಲಿಗೆ ಈಡಾಗುವ ರಾತ್ರಿ ಕರ್ಫ್ಯೂನಂತಹ ಕ್ರಮಗಳಿಂದ ಯಾವುದೇ ಪುರುಷಾರ್ಥ ಸಾಧನೆಯಾಗದು. ರಾತ್ರಿ ಕರ್ಫ್ಯೂನಂತಹ ಕ್ರಮಗಳನ್ನು ಬಿಟ್ಟು ಪರಿಣಾಮಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಿ’ ಎಂದು ಅವರು ಆಗ್ರಹಿಸಿದ್ದಾರೆ.

‘ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು. (ಕಾಗದದ ಮೇಲೆ ಉಳಿಯುವ ಆದೇಶ ಮಾಡಬೇಡಿ). ಆಕ್ಸಿಜನ್ ವಿಪುಲವಾಗಿ ಲಭ್ಯವಾಗುವಂತೆ ವ್ಯವಸ್ಥೆಗೊಳಿಸಬೇಕು. ಅಗತ್ಯವೆನಿಸಿದರೆ, ಆಕ್ಸಿಜನ್ ಬಳಕೆ ಮಾಡುವ ಕೈಗಾರಿಕಾ ಉದ್ದೇಶಕ್ಕೆ ಆಕ್ಸಿಜನ್ ಉಪಯೋಗಿಸುವ ಕೈಗಾರಿಕೆಗಳನ್ನು ಕೆಲ ಕಾಲ ಬಂದ್ ಮಾಡಬೇಕು. ಆಕ್ಸಿಜನ್ ಹಾಸಿಗೆಗಳನ್ನು ತುರ್ತಾಗಿ ಹೆಚ್ಚಿಸಬೇಕು’ ಎಂದು ಸೂಚಿಸಿದ್ದಾರೆ.

‘ಎಲ್ಲಿ ಜನ ಹೆಚ್ಚು ಸೇರುತ್ತಾರೆ ಎಂಬ ಭಾವನೆ ಇದೆಯೋ ಅಲ್ಲಿ ತಾತ್ಕಾಲಿಕ ಕೊರೊನಾ ತಪಾಸಣಾ ಕೇಂದ್ರ ಸ್ಥಾಪಿಸಬೇಕು. ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಸೋಂಕಿತರು ಮತ್ತು ಶಂಕಿತರನ್ನು ಉಳಿದವರಿಂದ ಪ್ರತ್ಯೇಕಿಸಿ. ಪರೀಕ್ಷೆ ಮತ್ತು ಪರಿಣಾಮಕಾರಿಯಾಗಿ ಪ್ರತ್ಯೇಕಿಸುವುದರಿಂದ ಮಾತ್ರ ಈ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು’ ಎಂದು ಹೇಳಿದ್ದಾರೆ.

‘ತುರ್ತಾಗಿ ಅಗತ್ಯ ಪ್ರಮಾಣದಲ್ಲಿ ಔಷಧಿ ಮತ್ತು ಪರಿಕರಗಳ ದಾಸ್ತಾನು ಮಾಡಿಕೊಳ್ಳಬೇಕು. ಕೊರೊನಾ ಚಿಕಿತ್ಸೆ ನೀಡುವ ಪ್ರತಿಯೊಂದು ಆಸ್ಪತ್ರೆಯಲ್ಲೂ ಲಭ್ಯವಿರುವ ಔಷಧಿ ಮತ್ತು ಪರಿಕರಗಳ ವಿವರಗಳನ್ನು ಸಾರ್ವಜನಿಕವಾಗಿ ದೈನಂದಿನ ಆಧಾರದ ಮೇಲೆ ಪ್ರಕಟಿಸಬೇಕು’ ಎಂದು ತಿಳಿಸಿದ್ದಾರೆ.

‘ಲಸಿಕಾ ಕಾರ್ಯಕ್ರಮ ನಿಸ್ತೇಜಗೊಂಡಿದೆ. ಲಸಿಕೆ ಪಡೆದವರೂ ಸೋಂಕಿಗೆ ತುತ್ತಾಗಿರುವುದರಿಂದ ಜನರಲ್ಲಿ ಲಸಿಕೆ ಪಡೆಯುವುದರಿಂದ ಆಗುವ ಪ್ರಯೋಜನಗಳ ಕುರಿತು ಅನುಮಾನ ಮೂಡಿದೆ. ಒಂದು ವೇಳೆ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೇ, ವೈಜ್ಞಾನಿಕ ಆಧಾರಗಳು ಮತ್ತು ಪ್ರಮಾಣಗಳೊಂದಿಗೆ ಅದನ್ನು ಸಾಬೀತುಪಡಿಸಿ ಜನ ಜಾಗೃತಿ ಮೂಡಿಸಬೇಕು’ ಎಂದು ಹೇಳಿದ್ದಾರೆ.

‘ಚುನಾವಣಾ ನೆಪದಿಂದ ಸರ್ವಪಕ್ಷ ಸಭೆ ವಿಳಂಬ ಮಾಡುವುದು ಸೂಕ್ತವಲ್ಲ. ತುರ್ತಾಗಿ ಸರ್ವಪಕ್ಷಗಳ ಸಭೆ ಮಾಡಬೇಕು. ಸಭೆಯ ಅಜೆಂಡಾ ನಿರ್ಧರಿಸಿ, ಬಹಿರಂಗಗೊಳಿಸಬೇಕು. ಈ ಸಭೆಯಲ್ಲಿ ತಜ್ಞ ಸಮಿತಿಯ ಶಿಫಾರಸುಗಳನ್ನು ಮಂಡಿಸಿ, ಅಗತ್ಯ ನಿರ್ಣಯ ಕೈಗೊಳ್ಳಲು ವಿಳಂಬ ಮಾಡಬಾರದು. ಔಷಧಿಗಳು ನಾಗರಿಕರಿಗೆ ಸುಲಭವಾಗಿ, ಸರಳವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮತ್ತೆ ಬೇರೆ ವಿವರಗಳು ಅಂದರೆ, ಸೋಂಕಿತರ ಆಧಾರ್ ಮತ್ತಿತರ ವೈಯಕ್ತಿಕ ವಿವರಗಳು ಮೆಡಿಕಲ್ ಸ್ಟೋರ್‌ಗಳಿಗೆ ಅಗತ್ಯವಿಲ್ಲ. ಉಳಿದ ಔಷಧಿಗಳಂತೆ ಈ ಔಷಧಿಗಳನ್ನು ಲಭ್ಯಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ... Covid-19 Karnataka Update: ರಾಜ್ಯದಲ್ಲಿಂದು 11,265 ಹೊಸ ಪ್ರಕರಣ, 38 ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು