ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಲಾಕ್‌‌ಡೌನ್‌ ಸಡಿಲಿಕೆ, ಗರಿಗೆದರಿದ ಕೃಷಿ ಚಟುವಟಿಕೆ

ಹೊಲದತ್ತ ಮುಖ ಮಾಡಿದ ರೈತಾಪಿ ವರ್ಗ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಲಾಕ್‍ಡೌನ್‍ನಿಂದಾಗಿ ಪ್ರತಿಯೊಂದು ಕ್ಷೇತ್ರದ ಚಟುವಟಿಕೆಗಳು ಸ್ಥಬ್ದಗೊಂಡಿದ್ದವು. ಕೃಷಿ ವಲಯವೂ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಸರ್ಕಾರ ರೈತರ ಸಮಸ್ಯೆಗಳನ್ನು ಅರಿತು ಲಾಕ್‍ಡೌನ್‍ ನಿರ್ಬಂಧಗಳನ್ನು ಸ್ವಲ್ಪ ಸಡಿಲಿಕೆ ಮಾಡಿ, ಕೃಷಿ
ಚಟುವಟಿಕೆಗಳಿಗೆ ಕೊಂಚ ರಿಯಾಯಿತಿ ನೀಡಿದೆ. ಪರಿಣಾಮ, ಗ್ರಾಮೀಣ ಭಾಗಗಳಲ್ಲಿ ಕೃಷಿ ವಲಯ ಚುರುಕುಗೊಂಡಿದೆ.

ಇನ್ನೇನು ಮುಂಗಾರು ಹಂಗಾಮು ಆರಂಭವಾಗಲಿದ್ದು, ಇದಕ್ಕಾಗಿ ರೈತರು ಬಿತ್ತನಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೊಲಗಳನ್ನು ರಂಟಿ ಹೊಡೆಯುವುದು, ಹರಗುವುದು, ಹತ್ತಿ ಕಟಗಿ ಹಿಡಿಯುವುದು, ಕರಕಿ ಎಣ್ಣೆ ಹೊಡೆಯುವುದು, ಸಗಣಿ
ಗೊಬ್ಬರ ಹಾಕುವ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಅಲ್ಲಲ್ಲಿ ಮಳೆ ಸುರಿಯುತ್ತಿರುವುದು ರೈತರಲ್ಲಿ ಹೊಸ ಚೈತನ್ಯ ಮೂಡಿಸಿದೆ.

ತಾಲ್ಲೂಕಿನಾದ್ಯಂತ ಮುಂಗಾರು ಬಿತ್ತನೆಗಾಗಿ ಹೊಲಗಳನ್ನು ಹಸನು ಮಾಡುವ ಕೆಲಸ ಜೋರಾಗಿ ನಡೆದಿದೆ. ಬೆಳಿಗ್ಗೆ ಮತ್ತು ಸಂಜೆ ಹೊಲಕ್ಕೆ ತೆರಳುವ ರೈತರು ಮಾಗಿ ಉಳುಮೆಯಲ್ಲಿ ನಿರತರಾಗುತ್ತಿದ್ದಾರೆ. ಬಿತ್ತನೆಗಾಗಿ ಕಂಟಿ ಶೇಂಗಾ, ಹೆಸರು, ಮಡಿಕಿ, ಉದ್ದು, ಹೈಬ್ರಿಡ್‌ ಜೋಳ, ಗೋವಿನ ಜೋಳ, ಈರುಳ್ಳಿ, ಹವೀಜ, ಬೆಳ್ಳುಳ್ಳಿ ಬೀಜಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಬಳ್ಳಿಶೇಂಗಾ ಬೀಜಕ್ಕಾಗಿ ಶೇಂಗಾ ಕಾಯಿ ಒಡೆಸುವುದು ಭರ್ಜರಿಯಿಂದ ಸಾಗಿದೆ.

ಇನ್ನು ಕೃಷಿ ವಲಯಕ್ಕೆ ಪೂರಕವಾದ ಸಾಮಾನುಗಳನ್ನು ತಯಾರಿಸಲು ಬಡಿಗೇರರು, ಕಮ್ಮಾರರು ಶ್ರಮಿಸುತ್ತಿರುವ ದೃಶ್ಯ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ವಿಶೇಷವಾಗಿ ಕಮ್ಮಾರರು ಕುಳ ಹಣಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಿತ್ತನೆಗೆ ಪೂರ್ವ ಹೊಲ ರಂಟಿ ಹೊಡೆಯುವುದು ಅಗತ್ಯ. ರೈತರು ಟ್ರಾಕ್ಟರ್ ಮತ್ತು ಎತ್ತುಗಳ ಸಹಾಯದಿಂದ ಭೂಮಿಯನ್ನು ರಂಟಿ ಹೊಡೆದು, ಹದ ಮಾಡುತ್ತಿದ್ದಾರೆ.

ಕಮ್ಮಾರರ ಮೊಗದಲ್ಲಿ ಮಂದಹಾಸ
ಬಿರುಸಾಗಿರುವ ಭೂಮಿಯನ್ನು ರಂಟಿ ಹೊಡೆಯುವಾಗ ಕುಳಗಳು ಬಾಗುವುದು ಸಾಮಾನ್ಯ. ಇಂತಹ ಕುಳಗಳನ್ನು ಕಮ್ಮಾರರು ಹಣಿದು ಕೊಡುತ್ತಿದ್ದು, ಇದರೊಂದಿಗೆ ಕುಡಾ, ಕುರ್ಚಿಗಿ, ಕೊಡಲಿ, ಗುದ್ದಲಿ, ಕೊಡಗೋಲುಗಳನ್ನೂ ಹಣಿಯುತ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಕೆಲಸ ಇಲ್ಲದೆ ಖಾಲಿಯಿದ್ದ ಅವರಿಗೂ ಈಗ ಕೆಲಸ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT