ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಿ

ಮುಖ್ಯಮಂತ್ರಿಗೆ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಆಗ್ರಹ: ರಾಷ್ಟ್ರಪತಿಗೆ ಮನವಿ
Published : 21 ಆಗಸ್ಟ್ 2024, 16:13 IST
Last Updated : 21 ಆಗಸ್ಟ್ 2024, 16:13 IST
ಫಾಲೋ ಮಾಡಿ
Comments

ಗದಗ: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಆಗ್ರಹಿಸಿದರು.

ಕಾಂಗ್ರೆಸ್‌ ನಾಯಕರಿಂದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರತಿಭಟನೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಗದಗ ಜಿಲ್ಲಾ ಘಟಕದಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಭಾಗಿಯಾಗಿ, ತನಿಖೆಗೆ ಒಳಪಟ್ಟಿರುವುದು ನಾಚಿಕೆಗೇಡು’ ಎಂದರು.

‘ಕಾಂಗ್ರೆಸ್‌ ನಾಯಕ ಐವನ್‌ ಡಿಸೋಜಾ ದೇಶದ್ರೋಹಿ ಹೇಳಿಕೆ ನೀಡಿದ್ದು, ಅವರ ಮಾತುಗಳು ಕಾಂಗ್ರೆಸ್‌ ಪಕ್ಷದ ಮನಸ್ಥಿತಿಯನ್ನು ಬಿಂಬಿಸುತ್ತವೆ. ಅದೇರೀತಿ, ಸಚಿವ ಜಮೀರ್‌ ಕೂಡ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಐವನ್‌ರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಗದಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಎಂ.ಎಸ್‌.ಕರಿಗೌಡ್ರ ಮಾತನಾಡಿ, ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ಪಾಲಿನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‌ ನಾಯಕರು ಪ್ರತಿಭಟನೆಗೆ ಬರದಿದ್ದರೆ ಬಿಟ್ಟಿ ಭಾಗ್ಯಗಳನ್ನು ಬಂದ್‌ ಮಾಡುತ್ತೇವೆ ಎಂದು ಬೆದರಿಸಿ, ಜನರನ್ನು ಕರೆತಂದು ಎಲ್ಲೆಡೆ ಪ್ರತಿಭಟನೆ ನಡೆಸಿ ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ‘ಸಾಂವಿಧಾನಿಕ ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ಅಪಪ್ರಚಾರ ಮತ್ತು ಕಾನೂನು ಸುವ್ಯವಸ್ಥೆ ವಿಫಲಗೊಳಿಸುವ ಮೂಲಕ ಆಡಳಿತ ನಡೆಸುವಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡಿರುವ ಕರ್ನಾಟಕ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಹಾಗೂ ಸಚಿವ ಜಮೀರ್‌ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಫಕ್ಕಿರೇಶ ರಟ್ಟಿಹಳ್ಳಿ, ವಿಜಯಕುಮಾರ ಗಡ್ಡಿ, ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಎಂ.ಎಂ. ಹಿರೇಮಠ, ಬಿ.ಎಸ್. ಚಿಂಚಲಿ, ಸಂತೋಷ ಅಕ್ಕಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಚಂದ್ರು ತಡಸದ, ಶಿವಕುಮಾರ ನೀಲಗುಂದ, ಅಶೋಕ ಕರೂರ, ಲಕ್ಷ್ಮಣ ದೊಡ್ಮನಿ, ಬೂದಪ್ಪ ಹಳ್ಳಿ, ಅಶ್ವಿನಿ ಜಗತಾಪ, ನಿರ್ಮಲಾ ಕೊಳ್ಳಿ, ಲಕ್ಷ್ಮೀ ಕಾಕಿ, ವಿದ್ಯಾವತಿ ಗಡಗಿ, ಸ್ವಾತಿ ಅಕ್ಕಿ, ವಂದನಾ ವರ್ಣೇಕರ್, ಶಂಕರ ಕಾಕಿ, ಅಮರನಾಥ ಗಡಗಿ, ನಾಗರಾಜ ತಳವಾರ ಇದ್ದರು.

ದೇಶದ್ರೋಹಿ ಹೇಳಿಕೆ ನೀಡಿರುವ ಐವನ್‌ ಡಿಸೋಜಾ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸಚಿವ ಜಮೀರ್‌ ವಿರುದ್ಧ ಕ್ರಮಕೈಗೊಳ್ಳಬೇಕು.
–ರಾಜು ಕುರಡಗಿ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ
ಸಿ.ಎಂ ಸಿದ್ದರಾಮಯ್ಯ ಸತ್ಯವಂತರಾಗಿದ್ದರೆ ತಕ್ಷಣವೇ ರಾಜೀನಾಮೆ ನೀಡಬೇಕು. ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತುಪಡಿಸಿ ಮತ್ತೆ ಸಿ.ಎಂ ಆಗಲಿ.
–ಎಂ.ಎಸ್‌. ಕರಿಗೌಡ್ರ ಬಿಜೆಪಿ ಮುಖಂಡ

ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮೇಲೆ ಮನವಿ ಸ್ವೀಕರಿಸಲು ಪಟ್ಟು

ಆ.19ರಂದು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮೇಲೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಬುಧವಾರ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ಭವನದ ಮುಖ್ಯ ಗೇಟ್ ಬಳಿ ಮನವಿ ಸ್ವೀಕರಿಸಲು ಬರುತ್ತಿದ್ದಂತೆ ಬಿಜೆಪಿ ಮುಖಂಡರು ಸಿಟ್ಟಿಗೆದ್ದರು.

‘ನಾವು ಗೇಟ್ ಬಳಿ ಮನವಿ ಸಲ್ಲಿಸುವುದಿಲ್ಲ. ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮೇಲೆಯೇ ಮನವಿ ಸಲ್ಲಿಸುತ್ತೇವೆ’ ಎಂದು ಪಟ್ಟು ಹಿಡಿದರು. ‘ಕಾಂಗ್ರೆಸ್‍ಗೆ ಒಂದು ನ್ಯಾಯ ಬಿಜೆಪಿಗೊಂದು ನ್ಯಾಯವೇ’ ಎಂದು ಪ್ರಶ್ನಿಸಿದರು. ನಂತರ ಬಿಜೆಪಿ ಪ್ರತಿಭಟನಕಾರರ ಆಗ್ರಹಕ್ಕೆ ಮಣಿದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಮೆಟ್ಟಿಲುಗಳ ಬಳಿ ತೆರಳಿ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT