ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಚರಶಕ್ತಿಯಿಂದಲೇ ಫಲಾಫಲಗಳು

Last Updated 31 ಮೇ 2018, 19:30 IST
ಅಕ್ಷರ ಗಾತ್ರ

‘ದುರ್ಬಲ ರಾಜಕಾರಣಿಗಳು’ (ಸಂಗತ, ಮೇ 28) ಎಂಬಹೊರೆಯಾಲ ದೊರೆಸ್ವಾಮಿಯವರ ಬರಹದ ಅಂಶಗಳು ಚಿಂತನಪ್ರದವಾಗಿವೆ. ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ‘ನಮ್ಮ ದೇಶ ಅಭಿವೃದ್ಧಿಯಾಗಲು ಗುಡಿಗುಂಡಾರಗಳ ಮುಂದಿನ ಕ್ಯೂ ಕಡಿಮೆಯಾಗಿ, ಗ್ರಂಥಾಲಯಗಳ ಮುಂದಿನ ಕ್ಯೂ ಹೆಚ್ಚಾಗಬೇಕು’ ಎಂದು ಅತ್ಯಂತ ಕಾಳಜಿಯಿಂದ ನುಡಿದಿದ್ದಾರೆ. ಸಂವಿಧಾನದಲ್ಲೇ ಅವರು, ‘ಭಾರತೀಯ ಪ್ರಜೆಗಳೆಲ್ಲರೂ ವೈಚಾರಿಕತೆ ರೂಢಿಸಿಕೊಳ್ಳಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಒತ್ತಿ ಹೇಳಿದ್ದಾರೆ.

ಪ್ರಾಚೀನ ಮಾನವರು ಮಳೆ, ಬಿಸಿಲಿಗೂ ಹೆದರುತ್ತಿದ್ದರು. ಗುಡುಗು, ಸಿಡಿಲು, ನೆರೆಯೂ ಅವರಲ್ಲಿ ಭಯ, ಭೀತಿ ಹುಟ್ಟಿಸುತ್ತಿದ್ದವು. ಇನ್ನು ಭೂಕಂಪ, ಅಗ್ನಿ ಪರ್ವತದಂತಹ ವಿದ್ಯಮಾನಗಳು ಅವರನ್ನು ಹೇಗೆ ಆತಂಕಗೊಳಿಸಿರಬೇಡ? ಬಿರುಕು ಬಿಡುವ ಇದೇ ಭೂಮಿ ಆಹಾರವನ್ನೂ ಬೆಳೆಯುತ್ತದೆ ಎನ್ನುವುದು ಅವರಿಗೆ ಮನವರಿಕೆಯಾಗಲು ಶತಮಾನಗಳೇ ಬೇಕಾಗಿರಬೇಕು! ಹಾಗಾಗಿ ನಾವು ಪಂಚಭೂತಗಳೆಂದು ಹೆಸರಿಸುವ ಭೂಮಿ, ನೀರು, ಆಗಸ, ಬೆಂಕಿ, ಗಾಳಿ ಅವರ ಪಾಲಿಗೆ ಶಾಪ– ವರ ನೀಡುವ ಆಕೃತಿಗಳಾಗಿ ತೋರಿದ್ದರಲ್ಲಿ ಅಚ್ಚರಿ ಇಲ್ಲ.

‘ಜಗತ್ತನ್ನು ನಿಯಮಿಸುವ, ನಿರ್ಬಂಧಿಸುವ ಒಂದು ಅಗೋಚರ ಶಕ್ತಿ ಇದೆ’ ಎನ್ನುವ ವಿಶ್ವಾಸವೇ ‘ದೇವರನ್ನು’ ಸೃಷ್ಟಿಸಿತು. ಆ ಕುರಿತ ನಂಬಿಕೆಗಳು, ಆಚರಣೆಗಳು ಅನೂಚಾನವಾಗಿ ರೂಢಿಗತವಾದವು. ಇದು ಹೇಗೂ ಇರಲಿ. ದೇವರನ್ನು ನಂಬುವುದು ಅಥವಾ ಬಿಡುವುದು ಅವರವರ ವೈಯಕ್ತಿಕ. ಆಸ್ತಿಕತೆ– ನಾಸ್ತಿಕತೆಗೂ ಶ್ರೇಷ್ಠತೆ– ಕನಿಷ್ಠತೆಗೂ ಯಾವುದೇ ಸಂಬಂಧವಿಲ್ಲ. ದೇವರೆಂಬಪರಿಕಲ್ಪನೆಯಿಂದ ವ್ಯಕ್ತಿಗತವಾಗಿ ಶಾಂತಿ, ಸಮಾಧಾನ ಮೂಡುವಂತಿದ್ದರೆ ಯಾರಿಗೂ ತೊಂದರೆಯಿಲ್ಲ. ಯಾರೂ ಬೇಡವೆನ್ನುವುದಿಲ್ಲ. ಸಮಸ್ಯೆ ಗರಿಗೆದರುವುದು, ಒಬ್ಬರು ತಮ್ಮ ನಂಬಿಕೆಯನ್ನು ಮತ್ತೊಬ್ಬರ ಮೇಲೆ ಹೇರಿದಾಗ. ಮೈಕಾಸುರರ ಅಬ್ಬರ, ಸಾರ್ವಜನಿಕ ಉದ್ಯಾನ ಮತ್ತು ರಸ್ತೆಗಳ ಒತ್ತುವರಿ, ವಸೂಲಿ ಒಂದೆಡೆ. ವಿಚಾರವಾದ ಅತಿರೇಕಕ್ಕೆ ತಿರುಗಿ ಸದಭಿರುಚಿಯಲ್ಲದ ಟೀಕೆ, ವ್ಯಾಖ್ಯಾನ, ವಿಮರ್ಶೆಗಳು ಇನ್ನೊಂದೆಡೆ.

ತಮ್ಮ ಅಧಿಕೃತ ಕಾರ್ಯಕ್ರಮವೋ ಎನ್ನುವಂತೆ ಅಧಿಕಾರಸ್ಥ ಗಣ್ಯಾತಿಗಣ್ಯರು ಮಠ, ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡುತ್ತಾರೆ. ಹಿಂದೆ, ಮುಂದೆ ಕಾರುಗಳ ಸಾಲು. ಅವರಿಗೊದಗಿಸುವ ಭದ್ರತೆಯ ದೆಸೆಯಿಂದ ವಿನಾಕಾರಣ ಸಾರ್ವಜನಿಕರ ಪರದಾಟ. ‘ಗುಡಿಯಲ್ಲಿ ಜಪಮಣಿ ಎಣಿಸುವುದನ್ನು ಬಿಡು, ಹೊರ ಬಂದು ಕಲ್ಲು ಕುಟ್ಟುವವನಲ್ಲಿ, ಹೊಲ ಉಳುವವನಲ್ಲಿ ದೇವರನ್ನು ಅರಸು’ ಎಂದರು ವಿಶ್ವಕವಿ ರವೀಂದ್ರರು. ಜಗತ್ತಿನ ಎಲ್ಲ ಧರ್ಮಗಳೂ ಕಾಯಕಕ್ಕೆ ಅಗ್ರ ಪ್ರಾಧಾನ್ಯ ನೀಡುತ್ತವೆ. ಗೀತೆಯಲ್ಲಿ ಶ್ರೀಕೃಷ್ಣನು ‘ನಿನ್ನ ಕರ್ತವ್ಯ ನಿರ್ವಹಣೆಯ ಮೇಲೆ ಮಾತ್ರ ನಿನಗೆ ಹಕ್ಕು, ಅದರ ಫಲಾಫಲಗಳ ಮೇಲಲ್ಲ’ ಎನ್ನುತ್ತಾನೆ. ವಾಲ್ಮೀಕಿ ಮಹರ್ಷಿರಾಮಾಯಣ ಕಾವ್ಯದ ಆರಂಭದಲ್ಲೇ ‘ಶ್ರೀರಾಮ ದೇವರಲ್ಲ, ಮಾದರಿಯಾಗಬಲ್ಲ ಒಬ್ಬ ಸಾಮಾನ್ಯ ಮನುಷ್ಯ’ ಎನ್ನುತ್ತಾರೆ. ಅಂದರೆ ಅವನನ್ನು ದೈವತ್ವಕ್ಕೇರಿಸಿ ಪೂಜಿಸುವುದರಲ್ಲೇ ಮಗ್ನರಾಗಿ ಅವನ ಉದಾತ್ತ ಆದರ್ಶಗಳನ್ನು ಓದುಗರು ಎಲ್ಲಿ ಮರೆತುಬಿಡುವರೋ ಎನ್ನುವ ಸಂಶಯ ಅವರಿಗೆ ಆಗಿರಬೇಕೇನೋ?

‘ಆರು ಯತ್ನ ನಿನ್ನದು, ಏಳನೆಯದು ದೈವದ್ದು’ ಎನ್ನುವಲ್ಲೂ ಮನುಷ್ಯ ಪ್ರಯತ್ನವೇ ಬಹುಮುಖ್ಯ ಎನ್ನುವ ಧ್ವನಿಯಿದೆ. ನಮ್ಮ ರೂವಾರಿ ನಾವೇ ಎನ್ನುವುದು ನಿತ್ಯ ಸತ್ಯ. ನಮ್ಮ ಅನುಭವ, ಚಿಂತನೆ, ಗ್ರಹಿಕೆ, ನಿರ್ಣಯಗಳೇ ನಮ್ಮ ಗೊತ್ತು– ಗುರಿಗೆ ಹಾದಿ. ನಮ್ಮಲ್ಲೇ ನಾವು ವಿಶ್ವಾಸ ವಂಚಿತರಾಗುವ ಸ್ಥಿತಿಯೇ ಪರಾವಲಂಬನೆ. ಯಾಗದಿಂದ, ಹೋಮ ಹವನದಿಂದ ಅಥವಾ ಪೂಜೆಯಿಂದ ಒಮ್ಮೆಗೇ ಸಿದ್ಧಿ ಕೈಗೂಡುವುದೆಂಬ ಭ್ರಮೆ ನಮ್ಮನ್ನು ಆಳುತ್ತದೆ. ರಾಜಕಾರಣಿಗಳು ಸಾಧಕರ ಸಲಹೆ, ಮಾರ್ಗದರ್ಶನದಿಂದ ಸಮರ್ಥ ಆಡಳಿತ ನಿರ್ವಹಣೆಗೆ ಪ್ರಭಾವಿತರಾಗುವುದೇ ನಿಜವಾಗಿ ಅವರಿಂದ ಪಡೆಯಬಹುದಾದ ಆಶೀರ್ವಾದ. ಮಹತ್ಕಾರ್ಯ ಕೈಗೂಡುವುದು, ಉನ್ನತ ಸದವಕಾಶ ಪ್ರಾಪ್ತವಾಗುವುದು ಸ್ವಪ್ರಯತ್ನ, ಸ್ವಶಕ್ತಿಯಿಂದಲೇ. ಪರೀಕ್ಷೆಗೆ ಹೊರಟ ವಿದ್ಯಾರ್ಥಿಯ ಬೆನ್ನು ತಟ್ಟಿ ‘ಚೆನ್ನಾಗಿ ಬರಿ, ಧೈರ್ಯವಾಗಿರು’ ಎನ್ನುವುದರಿಂದ ಅವನಲ್ಲಿ ಹುರುಪು ಪುಟಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಸ್ತಿಕತೆಯು ಆಡಂಬರವನ್ನೆಂದೂ ಉತ್ತೇಜಿಸದು. ದೇವರಲ್ಲಿ ನಂಬಿಕೆಯೆಂದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂಬ ನಂಬಿಕೆ. ದೇವರನ್ನು ನಂಬುವುದೇ ಬೇರೆ. ದೇವರಿದ್ದಾನೆ ಎಂದು ನಂಬುವುದೇ ಬೇರೆ. ಪ್ರತಿಮೆ, ಚಿತ್ರವೇ ಆಗಬೇಕಿಲ್ಲ, ಮನಸ್ಸಿನಲ್ಲಿನ ಕಲ್ಪನೆಯೇ ಬದುಕಿನಲ್ಲಿ ಭರವಸೆ ಮೂಡಿಸೀತು. ನಿಜಶ್ರದ್ಧೆ ಕಾರ್ಯಕಾರಣಬದ್ಧ ವಿವರಣೆ ಬಯಸುತ್ತದೆ. ಕಾರ್ಯಕಾರಣ ವಾದದ ಪರೀಕ್ಷೆಯಲ್ಲಿ ಉತ್ತೀರ್ಣವಾಗದ್ದು ಅಂಧ
ಶ್ರದ್ಧೆ ಎನ್ನಿಸುತ್ತದೆ. ಮೂರ್ತಿಗೆ ಅಭಿಷೇಕ ಮಾಡುವುದು, ಧೂಪ ಹಾಕುವುದು, ಆರತಿ ಬೆಳಗುವುದು ಅದರ ಮೇಲಿನ ಗೌರವ, ಭಕ್ತಿಯಿಂದ ಎನ್ನುವುದನ್ನು ಒಪ್ಪಬಹುದು. ಆದರೆ ಅಂಥ ಪುನಸ್ಕಾರಗಳಿಂದ ಇಷ್ಟಾರ್ಥ ಈಡೇರುತ್ತದೆ, ಬಯಸಿದ ಫಲ ಪ್ರಾಪ್ತವಾಗುತ್ತದೆ ಎನ್ನುವುದಕ್ಕೆ ಸಮರ್ಥನೆಯೇನು?

ಇಡೀ ಪ್ರಕೃತಿಯೇ ಕಾರ್ಯಕಾರಣಕ್ಕೊಳಪಟ್ಟಿದೆ. ಒಂದು ಸರಳ ಉದಾಹರಣೆ: ಆಗಸದಲ್ಲಿ ಮೋಡಗಳ ಘರ್ಷಣೆಯಿಂದಾಗಿ ಮಿಂಚು ಮತ್ತು ಗುಡುಗು ಏಕಕಾಲಕ್ಕೆ ಸಂಭವಿಸುತ್ತವೆ. ಆದರೆ ಮಿಂಚಿನ ನಂತರವೇ ಗುಡುಗಿನ ಸದ್ದೇಕೆ ಎನ್ನುವುದು ಪ್ರಶ್ನೆ. ಬೆಳಕು ಶಬ್ದಕ್ಕಿಂತಲೂ ವೇಗವಾಗಿ ಸಾಗುತ್ತದೆ ಎಂಬ ವಿವರಣೆ ಒಗಟನ್ನು ಸುಲಭವಾಗಿ ಪರಿಹರಿಸುತ್ತದೆ. ಮಿಂಚು ಹೊಡೆಯುತ್ತಲೇ ‘ಇಗೋ ಈಗ ಗುಡುಗು’ ಎಂದು ಯಾರಾದರೂ ಹೇಳಿದರೆ ಅವರು ತಮ್ಮ ‘ಅತೀಂದ್ರಿಯ ಚೈತನ್ಯ’ದಿಂದ ಮುಂದಾಗುವುದನ್ನು ಹೇಳುತ್ತಾರೆ ಎಂದರೆ ಹೇಗೆ? ನಮಗೆ ಅರ್ಥವಾಗದ ನೈಸರ್ಗಿಕ ವಿದ್ಯಮಾನಗಳನ್ನು
ಅರ್ಥೈಸಿಕೊಳ್ಳಬೇಕು. ಅದರ ಯತ್ನವೇ ವಿಜ್ಞಾನ ಮಾರ್ಗ. ವಿಜ್ಞಾನ ಪ್ರತಿಯೊಂದನ್ನೂ ಪರೀಕ್ಷಿಸಿಯೇ ಇದು ಸತ್ಯ, ಇದು ಮಿಥ್ಯ ಎಂದು ನಿರ್ಣಯಿಸುತ್ತದೆ. ಕಾರ್ಯಕಾರಣವೇ ವಿಜ್ಞಾನದ ಒರೆಗಲ್ಲು. ತಂತಿಯಲ್ಲಿ ವಿದ್ಯುತ್‌ ಹರಿಯುತ್ತಿದೆಯೋ ಇಲ್ಲವೋ ತಿಳಿಯಲು ಗೊತ್ತಾದ ಪರಿಕರವಿದೆ. ಮತ್ತೆ ಮತ್ತೆ ಪರೀಕ್ಷೆ, ತನಗೆ ಗೊತ್ತಾಗದ್ದನ್ನು ಗೊತ್ತಿಲ್ಲ ಎನ್ನುವ ಪ್ರಾಮಾಣಿಕತೆ, ವಿಜ್ಞಾನದ ಜಾಯಮಾನ. ಸುಮ್ಮನೆ ಕೂರದೆ ಒಗಟು ಭೇದಿಸಲು ತ್ರಿವಿಕ್ರಮ ಛಲವೂ ಅದಕ್ಕಿದೆ. ಒಂದರ್ಥದಲ್ಲಿ ವಿಜ್ಞಾನ ಮತ್ತು ಅಂದಾಜು ಪರಸ್ಪರ ತದ್ವಿರುದ್ಧವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT