ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ

ಗರಿಷ್ಠ ಪ್ರಮಾಣದಲ್ಲಿ ಹೆಸರು ಆವಕ: ರೈತರಲ್ಲಿ ಸಂತಸ– ಎಚ್‌.ಕೆ.ಪಾಟೀಲ
Last Updated 29 ಆಗಸ್ಟ್ 2021, 4:32 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಮತ್ತಷ್ಟು ಹೆಸರು ಬೆಳೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಸರು ಬೆಳೆ ಖರೀದಿ ಕೇಂದ್ರ ತೆರೆಯುವ ನಿರ್ಣಯದಲ್ಲಿ ಜಿಲ್ಲಾಧಿಕಾರಿಗಳಿಂದ ಕೆಲವು ತಪ್ಪಾಗಿವೆ. ಗದಗ ವಿಧಾನಸಭಾ ಕ್ಷೇತ್ರದ ಪ್ರಮುಖ ಕೇಂದ್ರಗಳಾದ ಕುರ್ತಕೋಟಿ, ಹೊಸಳ್ಳಿ, ನೀಲಗುಂದದಲ್ಲಿ ಖರೀದಿ ಕೇಂದ್ರಗಳಿಲ್ಲ. ಆದರೆ, ಹೊಂಬಳದಲ್ಲಿ ಎರಡು ಕೇಂದ್ರ ತೆರೆಯುವುದಾಗಿ ತಿಳಿಸಿದ್ದಾರೆ. ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿ ಮತ್ತಷ್ಟು ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

‘ಈ ವರ್ಷ ಗದಗ ಜಿಲ್ಲೆಯಲ್ಲಿ ಹೆಸರು ಬೆಳೆ ಚೆನ್ನಾಗಿ ಬಂದಿದೆ. ರೈತರು ಕೂಡ ಖುಷಿಯಲ್ಲಿ ಇದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹೆಸರು ಆವಕ ಆಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲಿ ರೈತರ ಶೋಷಣೆ ನಡೆದಿದೆ. ಮಾರುಕಟ್ಟೆಯಲ್ಲಿ ಅವರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆದು, ಕನಿಷ್ಠ ಬೆಂಬಲ‌ಬೆಲೆ ನೀಡಿ ಹೆಸರು ಖರೀದಿಸಬೇಕು’ ಎಂದು ಹೇಳಿದರು.

‘ಪ್ರಸ್ತುತ ನಿಯಮಾನುಸಾರ ಒಬ್ಬ ರೈತ ನಾಲ್ಕು ಕ್ವಿಂಟಲ್‌ ಹೆಸರನ್ನು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದು. ಗರಿಷ್ಠ ಆರು ಕ್ವಿಂಟಲ್‌ ಮಾರಬಹುದು. ಇದರಿಂದಾಗಿ ಅತಿ ಸಣ್ಣ ರೈತನ ಉತ್ಪನ್ನ ಪೂರ್ಣ ಪ್ರಮಾಣದಲ್ಲಿ ಖರೀದಿ ಆಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರೈತರಿಗೆ ಆಗುತ್ತಿರುವ ಈ ಅನನಕೂಲ ತಪ್ಪಿಸಲು ಪ್ರತಿ ಖಾತೆಗೆ ಒಬ್ಬ ರೈತನಿಂದ ಕನಿಷ್ಠ ಆರು ಕ್ವಿಂಟಲ್, ಗರಿಷ್ಠ 15 ಕ್ವಿಂಟಲ್ ಖರೀದಿಸಬೇಕು’ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡರಾದ ಅಶೋಕ ಮಂದಾಲಿ, ಉಮರ್‌ ಫಾರೂಕ್‌ ಹುಬ್ಬಳ್ಳಿ ಇದ್ದರು.

‘ಮಂತ್ರಿ ಕಾರ್ಯಕರ್ತನಂತೆ ವರ್ತಿಸಬಾರದು’

ಗದಗ: ‘ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವ ಮೊದಲೇ ಎಡವಿದ್ದಾರೆ. ಮಂತ್ರಿ ಆದವರು ಕಾರ್ಯಕರ್ತರಂತೆ ವರ್ತಿಸಬಾರದು’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ರಾತ್ರಿ ವೇಳೆ ಯುವತಿಯರು ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಗೃಹ ಸಚಿವರ ಹೇಳಿಕೆ ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ತಪ್ಪು ಸಂದೇಶ ನೀಡುತ್ತದೆ. ಇಂತಹ ಸಂದರ್ಭಗಳಲ್ಲಿ ಗೃಹ ಸಚಿವರು ದೃಢ ನಿರ್ಣಯ ತೆಗೆದುಕೊಳ್ಳುವ ಮೂಲಕ ಕೆಟ್ಟ ಶಕ್ತಿಗಳಿಗೆ ಭಯ ಹುಟ್ಟಿಸಬೇಕು. ಆರೋಪಿಗಳನ್ನು ಹಿಡಿದು ಮಟ್ಟ ಹಾಕುವಂತೆ ಪೊಲೀಸರಿಗೆ ಸ್ಫೂರ್ತಿ ತುಂಬಬೇಕು. ಅದು ಬಿಟ್ಟು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಹೆಣ್ಣುಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು ಅವರಿಗೆ ಮಾಡುವ ಅವಮಾನ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT