ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಬಸ್‌ ತಂಗುದಾಣದಲ್ಲಿ ಪ್ರಯಾಣಿಕರ ಕಷ್ಟ

ಬಸ್ ನಿಲ್ದಾಣವನ್ನು ಯಾರು ನಿರ್ವಹಿಸಬೇಕು– ಬಗೆಹರಿಯದ ಪ್ರಶ್ನೆ
Last Updated 29 ಮಾರ್ಚ್ 2021, 4:14 IST
ಅಕ್ಷರ ಗಾತ್ರ

ಗದಗ: ಬಸ್‌ ಸಂಚಾರ ಇರುವ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ತಂಗುದಾಣಗಳು ಇಲ್ಲ. ಇಂತಹ ಸ್ಥಳಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ಬಿಸಿಲಲ್ಲಿ ಬಾಡುತ್ತಾರೆ. ಮಳೆಯಲ್ಲಿ ತೊಯ್ಯುತ್ತಾರೆ. ತಂಗುದಾಣ ಇರುವ ಕೆಲವೆಡೆಗಳಲ್ಲಿ ನಿರ್ವಹಣೆ ಸರಿ ಇಲ್ಲ. ಅವು ಇದ್ದೂ ಇಲ್ಲದಂತಹ ಪರಿಸ್ಥಿತಿ. ಒಟ್ಟಾರೆಯಾಗಿ ಪ್ರಯಾಣಿಕರು ಕಷ್ಟದಲ್ಲೇ ಕಾಯುವ ಸ್ಥಿತಿ ಜಿಲ್ಲೆಯಲ್ಲಿದೆ.

ಗದಗ ನಗರದಲ್ಲಿ ಕೂಡ ಇತ್ತೀಚಿನವರೆಗೆ ಬಸ್‌ ತಂಗುದಾಣಗಳ ಸ್ಥಿತಿ ಹೇಳಿಕೊಳ್ಳುವಂತೇನೂ ಇರಲಿಲ್ಲ. ಕೆಲವೆಡೆಯ ಹಳೆಯ ತಂಗುದಾಣಗಳು ನಿಲ್ಲಲು ಆಗದಷ್ಟು ಅಸಹ್ಯಕರವಾಗಿವೆ. ಪರವಾಗಿಲ್ಲ ಎಂಬಂತಿರುವ ತಂಗುದಾಣಗಳ ಬಳಿ ಬಸ್‌ಗಳೇ ನಿಲ್ಲುವುದಿಲ್ಲ. ಹಾಗಾಗಿ, ಇಂತಹ ತಂಗುದಾಣಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ಬಸ್‌ ನಿಲ್ದಾಣಗಳನ್ನು ಹೊರತು ಪಡಿಸಿದಂತೆ ಮುಖ್ಯ ಜಂಕ್ಷನ್‌ಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಈಗಲೂ ಬಿಸಿಲಿನಲ್ಲೇ ನಿಂತು ಬಸ್‌ಗಾಗಿ ಕಾಯುತ್ತಾರೆ.

‘ಗದಗ ಬೆಟಗೇರಿ ನಗರಸಭೆ ವತಿಯಿಂದ ಅಮೃತ್‌ ಯೋಜನೆಯ ನಗರ ಸಾರಿಗೆ ಯೋಜನೆ ಅಡಿಯಲ್ಲಿ ನಗರದ ಒಂಭತ್ತು ಸ್ಥಳಗಳಲ್ಲಿ ಈಗ ಸುಸಜ್ಜಿತ ಬಸ್‌ ತಂಗುದಾಣಗಳನ್ನು ಹೊಸದಾಗಿ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ’ ಎಂದು ನಗರಸಭೆ ಎಂಜಿನಿಯರ್‌ ವರ್ಧಮಾನ ಎಸ್‌.ಹುದ್ದಾರ ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ

ಮುಳಗುಂದ: ಸಮೀಪದ ಚಿಂಚಲಿ, ನೀಲಗುಂದ, ಸೊರಟೂರ, ಅಂತೂರ ಸೇರಿದಂತೆ ಗದಗ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬಸ್ ತಂಗುದಾಣಗಳು ದಯನೀಯ ಸ್ಥಿತಿಯಲ್ಲಿವೆ. ಹಲವು ವರ್ಷಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಚಿಂಚಲಿ ಗ್ರಾಮದಲ್ಲಿ ಬಸ್ ತಂಗುದಾಣವೇ ಇಲ್ಲ. ಇಲ್ಲಿಂದ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರು ಬಿಸಿಲು, ಮಳೆ, ಚಳಿ ಎನ್ನದೇ ಬೀದಿಯಲ್ಲಿ ನಿಂತು ಬಸ್ ಕಾಯುವುದು ಅನಿವಾರ್ಯವಾಗಿದೆ. ನೀಲಗುಂದ, ಕಲ್ಲೂರ, ಸೊರಟೂರ ಗ್ರಾಮದಲ್ಲಿ ಬಸ್ ತಂಗುದಾಣ ಕಟ್ಟಡಗಳು ಶಿಥಿಲವಾಗಿವೆ. ಇಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಬಸ್‍ಗಾಗಿ ಗಂಟೆಗಟ್ಟಲೆ ಬಿಸಿಲಿನಲ್ಲೇ ಕಾಯಬೇಕು.

ಕೆಲವು ಭಾಗದಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಹಚ್ಚಿದ್ದ ಬಣ್ಣ ಮಾಸಿದೆ. ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆ ಇಲ್ಲವಾದ್ದರಿಂದ ಮದ್ಯವ್ಯಸನಿಗಳ ಆಶ್ರಯ ತಾಣವಾಗಿವೆ. ಸ್ಥಳೀಯ ಪಂಚಾಯ್ತಿಯವರು ಸಹ ಸ್ವಚ್ಛತೆಗೆ ಮುಂದಾಗದೆ ಇರುವುದರಿಂದ ಗಲೀಜು ತುಂಬಿಕೊಂಡಿವೆ.

ಹಳೆ ಕಟ್ಟಡ ದುರಸ್ತಿಗೆ ಸಾರಿಗೆ ಇಲಾಖೆಗೆ ಹಲವು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಳ್ಳಿಯಿಂದ ನಗರಕ್ಕೆ ಹೋಗಲು ಬಸ್ ಕಾಯುವುದೇ ದುಸ್ತರವಾಗಿದೆ. ನಗರದಲ್ಲಿನ ಬಸ್ ಶೆಲ್ಟರ್ ನಿರ್ಮಿಸಿದ ಮಾದರಿಯಲ್ಲಿ ಹಳ್ಳಿಗಳಲ್ಲೂ ಸಹ ನಿರ್ಮಾಣ ಮಾಡಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಿಂಗರಡ್ಡಿ ತೇರಿನಗಡ್ಡಿ ಆಗ್ರಹಿಸಿದರು.

ಅಡ್ಡಾದಿಡ್ಡಿಯಾಗಿ ನಿಲ್ಲುವ ಬಸ್‌ಗಳು

ನರೇಗಲ್:‌ ಪಟ್ಟಣವೂ ಸೇರಿದಂತೆ ಗ್ರಾಮೀಣ ಪರಿಸರದಲ್ಲಿ ಬಸ್‌ ತಂಗುದಾಣ ಸ್ಥಿತಿ ಅಷ್ಟಕ್ಕಷ್ಟೇ ಎಂಬಂತಿದೆ. ಜತೆಗೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳು ಫ್ಲಾಟ್‌ಫಾರ್ಮ್‌ನಲ್ಲಿ ನಿಲ್ಲದೇ ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಬಸ್‌ ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್ ವ್ಯವಸ್ಥೆ ಇಲ್ಲ, ಎಲ್ಲಿಯೂ ಫ್ಲಾಟ್‌ಫಾರ್ಮ್ ನಂಬರ್ ಬರೆದಿಲ್ಲ ಹಾಗೂ ಗ್ರಾಮದ ಹೆಸರುಗಳನ್ನು ಬರೆದಿಲ್ಲ. ಇದರಿಂದ ಯಾವ ಬಸ್‌, ಯಾವ ಊರಿಗೆ ಹೋಗುತ್ತದೆ ಹಾಗೂ ಎಲ್ಲಿ ನಿಲ್ಲುತ್ತದೆ ಎಂದು ಪ್ರಯಾಣಿಕರು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣಕ್ಕೆ ದಿನವೂ ನೂರಾರು ಬಸ್‌ಗಳು ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಫ್ಲಾಟ್‌ಫಾರ್ಮ್‌ನಲ್ಲಿ ಬಸ್‌ ನಿಂತರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಕೆ.ಎಸ್‌.ಆರ್.‌ಟಿ.ಸಿ ಮಳಿಗೆಯಲ್ಲಿ ಇರುವ ಅಂಗಡಿಗಳಲ್ಲಿ ವ್ಯಾಪಾರವೂ ಆಗುತ್ತದೆ. ಆದ್ದರಿಂದ ಫ್ಲಾಟ್‌ಫಾರ್ಮ್ ವ್ಯವಸ್ಥೆ ಅಳವಡಿಸಬೇಕು ಹಾಗೂಬಸ್‌ ನಿಲ್ದಾಣದ ಒಳಗೆ ಆಗುತ್ತಿರುವ ಖಾಸಗಿ ವಾಹನಗಳ ಹಾವಳಿಯನ್ನು ತಡೆಯಬೇಕು ಎಂದು ಸ್ಥಳೀಯ ರಾಜೇಂದ್ರ ಜಕ್ಕಲಿ ಆಗ್ರಹಿಸಿದರು.

ಬಸ್ ನಿಲ್ದಾಣಗಳಿಗೆ ಕಾಯಕಲ್ಪ ನೀಡುವವರಾರು?

ಮುಂಡರಗಿ: ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ಬಸ್ ತಂಗುದಾಣಗಳು ದುಸ್ಥಿತಿಯಲ್ಲಿದ್ದು, ಅವುಗಳು ಹೆಸರಿಗೆ ಮಾತ್ರ ಬಸ್ ನಿಲ್ದಾಣಗಳಾಗಿವೆ. ಶೇ 90ರಷ್ಟು ಬಸ್ ನಿಲ್ದಾಣಗಳಲ್ಲಿ ನೆಲಕ್ಕೆ ಹಾಕಲಾಗಿದ್ದ ಹಾಸುಗಲ್ಲುಗಳು (ಪಾಟಿಕಲ್ಲುಗಳು) ಕಿತ್ತು ಹೋಗಿವೆ. ಗ್ರಾಮಸ್ಥರೇ ಅವುಗಳನ್ನು ಕಿತ್ತು ಒಯ್ದಿದ್ದಾರೆ ಎಂದು ಹೇಳಲಾಗುತ್ತದೆ.

ಯಾವ ಬಸ್ ನಿಲ್ದಾಣಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇರುವುದರಿಂದ ಅವೆಲ್ಲ ಕಸದ ತೊಟ್ಟಿಗಳಾಗಿವೆ. ಬೀದಿನಾಯಿಗಳ ವಾಸ ಸ್ಥಾನಗಳಾಗಿವೆ. ಬಸ್ ನಿಲ್ದಾಣದ ತುಂಬಾ ಕಸ ಕಡ್ಡಿಗಳು ಬಿದ್ದಿರುತ್ತವೆ. ಗ್ರಾಮೀಣ ಭಾಗದ ಯಾವ ಬಸ್ ನಿಲ್ದಾಣಗಳಲ್ಲಿಯೂ ದೀಪ ಹಾಗೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ.

ಹಳ್ಳಿಗಳಲ್ಲಿ ಲೆಕ್ಕಕ್ಕಿಲ್ಲದ ಬಸ್ ಶೆಲ್ಟರ್‌ಗಳು

ಲಕ್ಷ್ಮೇಶ್ವರ: ಬಸ್‍ಗಾಗಿ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಲ್ಲಬಾರದು ಎಂಬ ಉದ್ದೇಶದಿಂದ ಎಲ್ಲ ಊರುಗಳಲ್ಲಿ ಬಸ್ ಶೆಲ್ಟರ್‌ಗಳನ್ನು ಕಟ್ಟಲಾಗಿದೆ. ಆದರೆ ನಿರ್ಲಕ್ಷ್ಯದ ಕಾರಣ ವಿಶೇಷವಾಗಿ ಹಳ್ಳಿಗಳಲ್ಲಿನ ಬಸ್ ಶೆಲ್ಟರ್‌ಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.

ಸಮೀಪದ ಬಟ್ಟೂರು ಗ್ರಾಮದಲ್ಲಿನ ಬಸ್ ಶೆಲ್ಟರ್ ರಸ್ತೆಯಿಂದ ದೂರದಲ್ಲಿ ಇರುವುದರಿಂದ ಜನರಿಗೆ ಯಾವುದೇ ಉಪಯೋಗ ಇಲ್ಲ. ಹೀಗಾಗಿ ಗ್ರಾಮಸ್ಥರು ಅದನ್ನು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ರೈತರು ಅಲ್ಲಿ ಫಸಲು, ಸೊಪ್ಪಿ, ಹೊಟ್ಟು ಒಟ್ಟಿರುತ್ತಾರೆ. ಇನ್ನು ರಾತ್ರಿ ಹೊತ್ತು ಕುಡುಕರ ಅಡ್ಡೆಯಾಗುತ್ತದೆ.

ಅದರಂತೆ ಅಡರಕಟ್ಟಿ ಗ್ರಾಮದಲ್ಲಿನ ಶೆಲ್ಟರ್‌ನಿಂದಲೂ ಗ್ರಾಮದ ಪ್ರಯಾಣಿಕರಿಗೆ ಯಾವುದೇ ಉಪಯೋಗ ಇಲ್ಲ. ಕಾರಣ ಶೆಲ್ಟರ್‌ನಲ್ಲಿ ದನ ಕರುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಜನರು ಅಲ್ಲಿ ಕುಳಿತುಕೊಳ್ಳಲು ಅಥವಾ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಗ್ರಾಮೀಣ ಭಾಗಗಳಲ್ಲಿ ಶೆಲ್ಟರ್‌ಗಳು ವೈಯಕ್ತಿಕ ಕೆಲಸಗಳಿಗಾಗಿ ಉಪಯೋಗ ಆಗುತ್ತಿವೆ. ಶಿಗ್ಲಿ ಬಸ್ ಶೆಲ್ಟರ್ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ.
ಇನ್ನು ಲಕ್ಷ್ಮೇಶ್ವರದಲ್ಲಿ ಬಸ್ ಶೆಲ್ಟರ್‌ಗಳ ಸಂಖ್ಯೆ ಬಹಳ ಕಡಿಮೆ. ಮಹಾಕವಿ ಪಂಪ ವರ್ತುಲದಲ್ಲಿ ಇರುವ ಶೆಲ್ಟರ್‌ನಲ್ಲಿ ಯಾವಾಗಲೂ ಕಸಕಡ್ಡಿ ತುಂಬಿರುತ್ತದೆ. ಎಲೆ ಅಡಿಕೆ ತಿನ್ನುವವರು ಅಲ್ಲಲ್ಲಿ ಉಗುಳಿರುತ್ತಾರೆ.

ಹಳ್ಳಿಗಳಲ್ಲಿ ಲೆಕ್ಕಕ್ಕಿಲ್ಲದ ಬಸ್ ಶೆಲ್ಟರ್‌ಗಳು

ಲಕ್ಷ್ಮೇಶ್ವರ: ಬಸ್‍ಗಾಗಿ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಲ್ಲಬಾರದು ಎಂಬ ಉದ್ದೇಶದಿಂದ ಎಲ್ಲ ಊರುಗಳಲ್ಲಿ ಬಸ್ ಶೆಲ್ಟರ್‌ಗಳನ್ನು ಕಟ್ಟಲಾಗಿದೆ. ಆದರೆ ನಿರ್ಲಕ್ಷ್ಯದ ಕಾರಣ ವಿಶೇಷವಾಗಿ ಹಳ್ಳಿಗಳಲ್ಲಿನ ಬಸ್ ಶೆಲ್ಟರ್‌ಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.

ಸಮೀಪದ ಬಟ್ಟೂರು ಗ್ರಾಮದಲ್ಲಿನ ಬಸ್ ಶೆಲ್ಟರ್ ರಸ್ತೆಯಿಂದ ದೂರದಲ್ಲಿ ಇರುವುದರಿಂದ ಜನರಿಗೆ ಯಾವುದೇ ಉಪಯೋಗ ಇಲ್ಲ. ಹೀಗಾಗಿ ಗ್ರಾಮಸ್ಥರು ಅದನ್ನು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ರೈತರು ಅಲ್ಲಿ ಫಸಲು, ಸೊಪ್ಪಿ, ಹೊಟ್ಟು ಒಟ್ಟಿರುತ್ತಾರೆ. ಇನ್ನು ರಾತ್ರಿ ಹೊತ್ತು ಕುಡುಕರ ಅಡ್ಡೆಯಾಗುತ್ತದೆ.

ಅದರಂತೆ ಅಡರಕಟ್ಟಿ ಗ್ರಾಮದಲ್ಲಿನ ಶೆಲ್ಟರ್‌ನಿಂದಲೂ ಗ್ರಾಮದ ಪ್ರಯಾಣಿಕರಿಗೆ ಯಾವುದೇ ಉಪಯೋಗ ಇಲ್ಲ. ಕಾರಣ ಶೆಲ್ಟರ್‌ನಲ್ಲಿ ದನ ಕರುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಜನರು ಅಲ್ಲಿ ಕುಳಿತುಕೊಳ್ಳಲು ಅಥವಾ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಗ್ರಾಮೀಣ ಭಾಗಗಳಲ್ಲಿ ಶೆಲ್ಟರ್‌ಗಳು ವೈಯಕ್ತಿಕ ಕೆಲಸಗಳಿಗಾಗಿ ಉಪಯೋಗ ಆಗುತ್ತಿವೆ. ಶಿಗ್ಲಿ ಬಸ್ ಶೆಲ್ಟರ್ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ.
ಇನ್ನು ಲಕ್ಷ್ಮೇಶ್ವರದಲ್ಲಿ ಬಸ್ ಶೆಲ್ಟರ್‌ಗಳ ಸಂಖ್ಯೆ ಬಹಳ ಕಡಿಮೆ. ಮಹಾಕವಿ ಪಂಪ ವರ್ತುಲದಲ್ಲಿ ಇರುವ ಶೆಲ್ಟರ್‌ನಲ್ಲಿ ಯಾವಾಗಲೂ ಕಸಕಡ್ಡಿ ತುಂಬಿರುತ್ತದೆ. ಎಲೆ ಅಡಿಕೆ ತಿನ್ನುವವರು ಅಲ್ಲಲ್ಲಿ ಉಗುಳಿರುತ್ತಾರೆ.

ಕಾಮಗಾರಿ ತ್ವರಿತವಾಗಿ ನಡೆಸಿ: ಡಿಸಿ ಸೂಚನೆ

‘ಅವಳಿ ನಗರಗಳಾದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಅಮೃತ್‌ ಯೋಜನೆಯಡಿ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗುತ್ತಿದ್ದು, ತ್ವರಿತವಾಗಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ಕ್ರಮ ವಹಿಸಬೇಕು’ ಎಂದು ನಗರಸಭೆಯ ಆಡಳಿತಾಧಿಕಾರಿ ಎಂ.ಸುಂದರೇಶ್‌ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಎಸ್.ಎಂ.ಕೃಷ್ಣ ನಗರ, ಹಾಕಿ ಸ್ಟೇಡಿಯಂ, ಗಾಂಧಿ ವೃತ್ತ, ಬನ್ನಿಕಟ್ಟಿ ವೃತ್ತ, ಗಂಗಿಮಡಿ, ಜಿಲ್ಲಾಡಳಿತ ಭವನ, ಜಲಮಂಡಳಿ ಕಚೇರಿ ಹತ್ತಿರ, ಮುಳಗುಂದ ರಸ್ತೆ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ. ಮುಳಗುಂದ ನಾಕಾ ವೃತ್ತ, ಬನ್ನಿ ಮಹಾಕಾಳಿ ವೃತ್ತ, ಕಾರ್ಯಪ್ಪ ವೃತ್ತ ಹಾಗೂ ಭೂಮರಡ್ಡಿ ವೃತ್ತಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ವಹಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

ಜೂಜು ಕೇಂದ್ರವಾದ ಬಸ್ ನಿಲ್ದಾಣಗಳು

ಗಜೇಂದ್ರಗಡ: ಪಟ್ಟಣದ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ನಿಲ್ದಾಣಗಳಿವೆ. ಆದರೆ ಅವು ಬಳಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪ್ರಯಾಣಿಕರು ಅದರಲ್ಲೂ ಮಹಿಳೆಯರು ಬಸ್ ನಿಲ್ದಾಣದ ಬದಲು ಗಿಡದ ನೆರಳು, ಪಕ್ಕದಲ್ಲಿರುವ ಅಂಗಡಿಗಳಲ್ಲಿ ಬಸ್ಸಿಗಾಗಿ ಕಾಯುವುದು ಸಾಮಾನ್ಯವಾಗಿದೆ.

ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಬಸ್ ನಿಲ್ದಾಣಗಳು ಕೆಲವು ನೆಲಹಾಸು ಕಿತ್ತಿದ್ದರೆ, ಕೆಲವೆಡೆ ಗೋಡೆ ಬರಹಗಳು, ಅನೈತಿಕ ಚಟುವಟಿಕೆಗಳಿಂದ ಗಬ್ಬೆದ್ದು ನಾರುತ್ತಿವೆ.

‘ಸದ್ಯ ನೆತ್ತಿ ಸುಡುವ ಬಿರು ಬೇಸಿಗೆ ಆರಂಭವಾಗಿದೆ. ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ನೆರಳು ಕಲ್ಪಿಸಬೇಕಿದ್ದ ಬಸ್ ನಿಲ್ದಾಣಗಳು ಅನೈತಿಕ ಚಟುವಟಿಕೆ ಕೇಂದ್ರಗಳಾಗಿವೆ. ಅಲ್ಲದೆ ಕೆಲ ನಿಲ್ದಾಣಗಳು ದುರಸ್ತಿಯಲ್ಲಿವೆ. ಹೀಗಾಗಿ ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು' ಎಂದು ರಮೇಶ ರಾಮಜಿ, ನಿಂಗರಾಜ ಮುಗನೂರ, ಜಗದೀಶ ಕಟ್ಟಿಮನಿ ಆಗ್ರಹಿಸಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌, ಶ್ರೀಶೈಲ ಎಂ. ಕುಂಬಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT