ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ರೋಗಗಳಿಗೆ ಚಿಕಿತ್ಸೆ ಅಬಾಧಿತ, ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಲಭ್ಯ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಜೆವರೆಗೆ ಚಿಕಿತ್ಸೆ
Last Updated 24 ಮೇ 2021, 3:38 IST
ಅಕ್ಷರ ಗಾತ್ರ

ಗದಗ: ಕಳೆದ ವರ್ಷದಂತೆ ಈ ವರ್ಷ ಜಿಲ್ಲೆಯಲ್ಲಿ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ಹೆಚ್ಚು ತೊಂದರೆ ಎದುರಾಗಿಲ್ಲ. ಜಿಲ್ಲಾ ಆಸ್ಪತ್ರೆಯೂ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರ ಸಾಮಾನ್ಯ ಕಾಯಿಲೆಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಸಾಮಾನ್ಯ ರೋಗಿಗಳಿಗೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ವರ್ಷ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ವೈದ್ಯರು ಜ್ವರ, ಕೆಮ್ಮು, ಶೀತದಂತಹ ಸಣ್ಣಪುಟ್ಟ ಕಾಯಿಲೆಗೂ ಚಿಕಿತ್ಸೆ ಕೊಡುತ್ತಿದ್ದಾರೆ’ ಎಂದು ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್‌.ಭೂಸರೆಡ್ಡಿ ತಿಳಿಸಿದ್ದಾರೆ.

‘ಗದಗ ತಾಲ್ಲೂಕಿನಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಜತೆಗೆ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಇವೆ. ಈ ಎಲ್ಲ ಆಸ್ಪತ್ರೆಗಳಲ್ಲಿ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಟಿಎಚ್‌ಒ ಡಾ. ನೀಲಗುಂದ ತಿಳಿಸಿದ್ದಾರೆ.

ಒಂದೇ ಸೂರಿನಡಿ ಎಲ್ಲ ಪರೀಕ್ಷೆ

ಮುಳಗುಂದ: ಜಿಮ್ಸ್ ಹೊರತುಪಡಿಸಿ ಪಟ್ಟಣ ಸೇರಿದಂತೆ ಗದಗ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಸೇರಿದಂತೆ ಚಿಕಿತ್ಸೆಗೆ ಎಲ್ಲೂ ಕೂಡಾ ಪ್ರತ್ಯೇಕ ವ್ಯವಸ್ಥೆ ಇಲ್ಲ. ಸಾಮಾನ್ಯವಾಗಿ ಇರುವ ಸ್ಥಿತಿ ಈಗಲೂ ಮುಂದುವರೆದಿದೆ.

ಕೋವಿಡ್ ಎರಡನೇ ಅಲೆ ಉಲ್ಬಣಿಸಿದ ನಂತರವೂ ಆರೋಗ್ಯ ಇಲಾಖೆ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ. ಆಸ್ಪತ್ರೆ ಒಳಗೆ ಆರ್‌ಟಿಪಿಸಿಆರ್ ಮತ್ತು ಸ್ವ್ಯಾಬ್ ಟೆಸ್ಟ್‌ ತೆಗೆದುಕೊಳ್ಳಲಾಗುತ್ತಿದೆ. ಸಾಮಾನ್ಯ ರೋಗಿಗಳು ಸಹ ಅದೇ ಜಾಗದಲ್ಲೇ ಕುಳಿತುಕೊಳ್ಳಬೇಕಿದೆ. ಕೋವಿಡ್ ಭಯ ಸಾರ್ವಜನಿಕರನ್ನು ಆವರಿಸಿದ್ದು ಬಹುತೇಕರು ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಿದ್ದಾರೆ.

‘ಕೋವಿಡ್ ಕಾಣಿಸಿಕೊಳ್ಳುವುದಕ್ಕೂ ಮುನ್ನ ಬೇಸಿಗೆಯಲ್ಲಿ ಕಂಡು ಬರುತ್ತಿದ್ದ ಕಾಲರ, ಡೆಂಗಿ, ಚಿಕುನ್‌ಗುನ್ಯ, ಮಲೇರಿಯಾ ಪ್ರಕರಣಗಳು ಈ ವರ್ಷ ಪತ್ತೆಯಾಗಿಲ್ಲ. ಕಾರಣ ಜನರು ಮನೆಯಿಂದ ಹೊರಹೋಗಿಲ್ಲ ಮತ್ತು ನಿರಂತರ ಸೋಂಕು ನಾಶಕ ಸಿಂಪಡಣೆ ನಡೆದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣದಲ್ಲಿದೆ. ಮೇ 19 ರವರೆಗೆ ಪಟ್ಟಣದಲ್ಲಿ 122 ಜನರಿಗೆ ಕೋವಿಡ್ ದೃಢಪಟ್ಟಿದ್ದು, 61 ಸಕ್ರಿಯ ಪ್ರಕರಣಗಳಿವೆ. 4 ಮಂದಿ ಮೃತಪಟ್ಟಿದ್ದಾರೆ’ ಎಂದು ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಂದಾ ತಿಳಿಸಿದರು.

ಅನ್ಯ ರೋಗಿಗಳಿಗೆ ಚಿಕಿತ್ಸೆ

ಮುಂಡರಗಿ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿತ್ಯ ಶೇ 95ಕ್ಕಿಂತಲೂ ಹೆಚ್ಚು ಪ್ರಕರಣಗಳು ಕೋವಿಡ್ ಸಂಬಂಧಿತವಾಗಿದ್ದು, ಅನ್ಯ ಕಾಯಿಲೆಗಳು ನಗಣ್ಯವಾಗಿವೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರಭಾಗದಲ್ಲಿ ವೈದ್ಯರು ಅನ್ಯ ಕಾಯಿಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತಾಲ್ಲೂಕು ಅಸ್ಪತ್ರೆಯಲ್ಲಿ ಸದ್ಯ ಆರು ಜನ ವೈದ್ಯರು ಸರದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಅನ್ಯ ಕಾಯಿಲೆಗಳಿಂದ ಬಳಲುವವರಿಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

ಸ್ವಯಂ ವೈದ್ಯಕೀಯದತ್ತ ರೋಗಿಗಳು

ನರಗುಂದ: ಕೊರೊನಾ ಸೋಂಕು ಹೆಚ್ಚಳಗೊಂಡ ನಂತರ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಇತರೆ ರೋಗಿಗಳ ಸ್ಥಿತಿ ಅಯೋಮಯವಾಗಿದೆ.

ಆಸ್ಪತ್ರೆಗೆ ತೆರಳಲು ಕೋವಿಡ್–19 ಭಯ ಕಾಡುತ್ತಿದೆ. ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸಿ ನಿಗದಿತ ರೋಗಲಕ್ಷಣ ಬಗ್ಗೆ ತಿಳಿಸಿ ಮೆಡಿಕಲ್‌ ಶಾಪ್‌ಗಳಲ್ಲಿ ಗುಳಿಗೆ ತಂದು ನುಂಗುತ್ತಿದ್ದಾರೆ.

ಸಾಮಾನ್ಯ ಕಾಯಿಲೆ ಇರುವ ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ದೊರೆಯುತ್ತಿಲ್ಲ. ಉಳಿದ ರೋಗಿಗಳ ಚಿಕಿತ್ಸೆ ಬಗ್ಗೆಯೂ ತಾಲ್ಲೂಕು ಆಡಳಿತ ಕ್ರಮವಹಿಸಬೇಕು’ ಎಂದು ಪಟ್ಟಣದ ಬಸವರಾಜ ತಾವರೆ ಆಗ್ರಹಿಸಿದ್ದಾರೆ.

ಸಾಮಾನ್ಯ ರೋಗಕ್ಕೆ ಉತ್ತಮ ಸ್ಪಂದನೆ

ನರೇಗಲ್:‌ ಸ್ಥಳೀಯವಾಗಿ ಒಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, 4 ಖಾಸಗಿ ಆಸ್ಪತ್ರೆಗಳು, 5 ಖಾಸಗಿ ಕ್ಲಿನಿಕ್‌ಗಳು ಇದ್ದು ಎಲ್ಲಾ ಕಡೆಗಳಲ್ಲೂ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಆದ ಕಾರಣ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿರುತ್ತವೆ.

ಕೆಲವೊಮ್ಮೆ ರಾತ್ರಿ 11ರವರೆಗೂ ರೋಗಿಗಳನ್ನು ಸ್ಥಳೀಯ ವೈದ್ಯರು ನೋಡುತ್ತಾರೆ. ಗದಗ ಜಿಲ್ಲೆಯ ರೋಣ, ಗಜೇಂದ್ರಗಡ, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರ ತಾಲ್ಲೂಕಿನ ಜನರು ನರೇಗಲ್‌ ಆಸ್ಪತ್ರೆಗಳ ಮೇಲೆ ಅವಲಂಬನೆಯಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ತೆರಳಲು ಹಿಂದೇಟು

ಗಜೇಂದ್ರಗಡ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಆಸ್ಪತ್ರೆ, ಅಲ್ಲಿನ ಸಿಬ್ಬಂದಿ ಕೋವಿಡ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

ಇದರ ಮಧ್ಯೆ ಜ್ವರ, ಕೆಮ್ಮು, ನೆಗಡಿ ಯಂತಹ ಬೇರೆ ಕಾಯಿಲೆಗಳಿಂದ ಬಳಲುವ ಜನರು ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಎಲ್ಲಿ ಕೊರೊನಾ ಎನ್ನುತ್ತಾರೋ, ಪರೀಕ್ಷೆಗೆ ಒಳಪಡಿಸುತ್ತಾರೋ ಎಂಬ ಭಯ ಜನರಲ್ಲಿ ಮನೆಮಾಡಿದೆ. ಹೀಗಾಗಿ ಜನರು ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಕೊರತೆ

ಡಂಬಳ: ಮೇವುಂಡಿ, ಹೊಸಡಂಬಳ, ನಾರಾಯಣಪುರ, ತಾಮ್ರಗುಂಡಿ, ಹೈತಾಪುರ, ಯಾಕಲಾಸಪುರ ಗ್ರಾಮಗಳ ಜನರು ಹುಷಾರು ತಪ್ಪಿದರೆ ಚಿಕಿತ್ಸೆಗೆ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಇಲ್ಲಿ ವೈದ್ಯರ ಕೊರತೆ ಇರುವುದರಿಂದ ಅವರೆಲ್ಲರೂ ಅನಿವಾರ್ಯವಾಗಿ ಖಾಸಗಿ ವೈದ್ಯರ ಬಳಿಗೆ ಹೋಗುವಂತಾಗಿದೆ.

‘ಕೋವಿಡೇತರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಅಗತ್ಯ ಕ್ರಮ ತೆಗೆದುಕೊ ಳ್ಳಲಾಗುವುದು’ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜೇಶ್ ಟಿ.ಎಸ್.

ಆರ್.ಎಂ.ಪಿ.ಗಳ ಮೇಲೆ ಅವಲಂಬನೆ

ರೋಣ: ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ತಾಲ್ಲೂಕು ಆಸ್ಪತ್ರೆ ಕೋವಿಡ್‌ ರೋಗಿಗಳಿಂದ ತುಂಬಿದೆ. ಇದರಿಂದಾಗಿ, ಸಾಮಾನ್ಯ ಕಾಯಿಲೆಗಳ ಚಿಕಿತ್ಸೆ ಜನರು ತಾಲ್ಲೂಕು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಡೆಂಗಿ, ಮಲೇರಿಯಾ, ಕೆಮ್ಮು, ಸಾಮಾನ್ಯ ಜ್ವರದಂತಹ ಕಾಯಿಗಳು ಬಂದಾಗ ಭಯದಿಂದ ಆಸ್ಪತ್ರೆಗೆ ಬಾರದೆ ಮನೆಮದ್ದು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕಡಿಮೆ ಆಗದಿದ್ದರೆ ಸಮೀಪದ ಖಾಸಗಿ ಕ್ಲಿನಿಕ್‌ಗೆ ಹೋಗುತ್ತಾರೆ.

ಆದರೆ ಗ್ರಾಮೀಣ ಭಾಗದಲ್ಲಿ ಜನರು ಸಾಮಾನ್ಯ ಕಾಯಿಲೆಗಳಿಗೆ ಆರ್‌ಎಂಪಿಗಳ ಮೇಲೆ ಅವಲಂಬಿಸಿದ್ದಾರೆ. ಮನೆಗೆ ಬಂದು ನೋಡುವ ಸಂಚಾರ ವೈದ್ಯರು, ಊರಿಂದ ಊರಿಗೆ, ಮನೆ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಬಾರದ ಜನ

ಶಿರಹಟ್ಟಿ: ತಾಲ್ಲೂಕು ಆಸ್ಪತ್ರೆಯಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 300ಕ್ಕೂ ಹೆಚ್ಚು ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕೊರೊನಾ ಭಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 100 ದಾಟುತ್ತಿಲ್ಲ.

ತಾಲ್ಲೂಕು ಆಸ್ಪತ್ರೆಯನ್ನು ಕೋವಿಡ್‌ ಆರೈಕೆ ಕೇಂದ್ರವೆಂದು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ಜನ ಕೊರೊನಾ ಭಯದಿಂದ ಪಾರಾಗಲು ಕೆಮ್ಮು, ಶೀತ, ಜ್ವರ ಇತ್ಯಾದಿ ಕಾಯಿಲೆಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ ಎಂದು ಮಾಚೇನಹಳ್ಳಿ ಗ್ರಾಮದ ನಿವಾಸಿ ಸತೀಶ ಹೇಳಿದರು.

ಸದ್ಯದಲ್ಲೇ ಒಪಿಡಿ ಬಂದ್

ಲಕ್ಷ್ಮೇಶ್ವರ: ಕೊರೊನಾ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಪಿಡಿ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐಸೋಲೇಷನ್ ವಾರ್ಡ್ ಸೋಂಕಿತರಿಗೆ ಆಮ್ಲಜನಕ ಸಹಿತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯ ಆರು ಸಿಬ್ಬಂದಿಗೆ ಸೋಂಕು ತಗುಲಿದೆ. ಹೀಗಾಗಿ ಹೊರರೋಗಿಗಳ ಆರೋಗ್ಯ ತಪಾಸಣೆ ಬಂದ್ ಮಾಡುವ ಹಂತಕ್ಕೆ ವೈದ್ಯರು ಬಂದಿದ್ದಾರೆ.ಸಾಮಾನ್ಯ ರೋಗಗಳ ಚಿಕಿತ್ಸೆಗೆ ಬಂದಾಗ ಸೋಂಕಿನ ಲಕ್ಷಣಗಳು ಇದ್ದರೆ ವೈದ್ಯರು ಮೊದಲು ಪರೀಕ್ಷೆ ಮಾಡಲು ಹೇಳುತ್ತಿದ್ದಾರೆ. ಇದರಿಂದಾಗಿ ಹೆದರಿ ಜನರು ಆಸ್ಪತ್ರೆಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಡೆಂಗಿ, ಚಿಕುನ್‌ಗುನ್ಯ, ಸಾಮಾನ್ಯ ಜ್ವರದಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆ ದೊರೆಯುವುದೂ ಕಷ್ಟವಾಗುತ್ತಿದೆ‘ಮೊದಲು ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಪಿಡಿ ಬಂದ್ ಆದರೂ ಆಗಬಹುದು. ಆದರೆ ತುರ್ತು ಚಿಕಿತ್ಸೆಗೆ ಅವಕಾಶ ಇದೆ’ ಎಂದು ಲಕ್ಷ್ಮೇಶ್ವರ ಪಿಎಚ್‍ಸಿ ವೈದ್ಯಾಧಿಕಾರಿ ಗಿರೀಶ ಮರಡ್ಡಿ ಹೇಳಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಡಾ. ಬಸವರಾಜ ಹಲಕುರ್ಕಿ, ಶ್ರೀಶೈಲ ಎಂ. ಕುಂಬಾರ, ಚಂದ್ರು ಎಂ.ರಾಥೋಡ್‌, ಚಂದ್ರಶೇಖರ ಭಜಂತ್ರಿ, ಬಸವರಾಜ ಪಟ್ಟಣಶೆಟ್ಟಿ, ಲಕ್ಷ್ಮಣ ಎಚ್‌.ಡಂಬಳ, ನಾಗರಾಜ ಎಸ್‌.ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT