ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಬ್ಯಾಂಕ್‌ ಮುಂದೆ ಸಾಲುಗಟ್ಟಿ ನಿಲ್ಲುವ ರೈತರು, ಬೀಜ ಗೊಬ್ಬರಗಳನ್ನು ತರಲು ಹರಸಾಹಸ

ಕಠಿಣ ನಿರ್ಬಂಧ: ಕೃಷಿ ಚಟುವಟಿಕೆಗಳಿಗೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮು ಚಟುವಟಿಕೆಗಳು ಗರಿಗೆದರಿವೆ. ರೋಣ, ನರಗುಂದ ತಾಲ್ಲೂಕುಗಳಲ್ಲಿ ಹದ ಮಳೆ ಆಗಿರದ ಕಾರಣ ಅಲ್ಲಿ ಇನ್ನೂ ಭೂಮಿ ಹದಗೊಳಿಸುವ ಕಾರ್ಯ ಆರಂಭಗೊಂಡಿಲ್ಲ. ಆದರೆ, ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕೋವಿಡ್‌ ಲಾಕ್‌ಡೌನ್‌ ರೈತರಿಗೆ ಹೆಜ್ಜೆಹೆಜ್ಜೆಗೂ ತೊಡರುಗಾಲು ಹಾಕುತ್ತಿದೆ.

ಈಗಂತೂ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದ್ದು, ಜನರು ಹೊರಗೆ ಬರದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ಸಂಬಂಧಿತ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಪ್ರತಿದಿನ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ದೂರದ ಊರುಗಳಿಂದ ನಗರಕ್ಕೆ ಬಂದು ಹೋಗಲು ಈ ಸಮಯ ಸಾಲುತ್ತಿಲ್ಲ. ಮಧ್ಯಾಹ್ನ 12ರವರೆಗೆ ಅವಕಾಶ ಮಾಡಿಕೊಟ್ಟರೆ ಹೆಚ್ಚಿನ ಅನುಕೂಲ ಆಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಗ್ಯಾರೇಜ್‌, ಮೋಟರ್‌ ರಿವೈಂಡಿಗ್‌ ಶಾಪ್‌ಗಳು ಬಂದ್‌ ಆಗಿದ್ದು, ಟ್ರ್ಯಾಕ್ಟರ್‌ ಹಾಗೂ ‍ಪಂಪ್‌ಸೆಟ್‌ಗಳು ಕೆಟ್ಟರೆ ಪರದಾಡುವ ಸ್ಥಿತಿ ಇದೆ. ಬೆಳಿಗ್ಗೆ 8ರ ನಂತರ ಓಡಾಟಕ್ಕೆ ಕಠಿಣ ನಿರ್ಬಂಧ ವಿಧಿಸಲಾಗಿದ್ದು, ರೈತರು ಹೊಲಗಳಿಗೆ ಹೋಗಿಬರಲು ಸಾಧ್ಯವಾ
ಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಸಂಬಂಧಿತ ಚಟುಟಿಕೆಗಳನ್ನು ನಡೆಸಲು ಬ್ಯಾಂಕ್‌ನಲ್ಲೂ ಅವಕಾಶ ಸಿಗುತ್ತಿಲ್ಲ.

‘ಜಿಲ್ಲೆಯಲ್ಲಿ ಪ್ರಮುಖವಾಗಿ ಗೋವಿನ ಜೋಳ 82,600 ಹೆಕ್ಟೇರ್‌, ಹೆಸರು 1,27,800 ಹೆಕ್ಟೇರ್‌, ಶೇಂಗಾ 39,000 ಹೆಕ್ಟೇರ್‌, ಸೂರ್ಯ
ಕಾಂತಿ 9,000 ಹೆಕ್ಟೇರ್‌ ಹಾಗೂ ಹತ್ತಿಯನ್ನು 33,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ. 

‘ಬೇಡಿಕೆ ಪ್ರಕಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ’ ಎಂದು ತಿಳಿಸಿದ್ದಾರೆ. 

ಕೃಷಿ ಚಟುವಟಿಕೆಗಳಿಗೆ ಹಿನ್ನಡೆ

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿದಿದೆ. ಚೆನ್ನಾಗಿ ಮಳೆ ಆಗಿರುವುದರಿಂದ ಈಗಾಗಲೇ ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ತಾಲ್ಲೂಕಿನಾದ್ಯಂತ ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಇದೀಗ ಕೊರೊನಾ ದಿಗ್ಭಂದನಗಳನ್ನು ಗ್ರಾಮೀಣ ಭಾಗಕ್ಕೂ ಕಟ್ಟುನಿಟ್ಟಾಗಿ ವಿಸ್ತರಿಸಲಾಗಿದೆ. ಹೀಗಾಗಿ ಹಳ್ಳಿಗಳಲ್ಲಿಯೂ ರೈತರು ಮುಕ್ತವಾಗಿ ಸಂಚರಿಸದಂತಾಗಿದೆ. ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ರೈತರು ರಂಟೆ, ಕುಂಟೆ ಹೊಡೆದು ಜಮೀನನ್ನು ಹದಗೊಳಿಸುತ್ತಾರೆ. ಬೀಜ, ಗೊಬ್ಬರ ಸಂಗ್ರಹಿಸಿಕೊಳ್ಳುತ್ತಾರೆ. ಈ ಬಾರಿ ಲಾಕ್‌ಡೌನ್ ಕಾರಣದಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬಡ ರೈತರು ಕೃಷಿ ಸಾಮಗ್ರಿ ಖರಿದೀಸಲು, ಸಾಲ ಪಡೆದುಕೊಳ್ಳಲು ವಿವಿಧ ಕಚೇರಿಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಯಂತ್ರಗಳನ್ನು ದುರಸ್ತಿಗೊಳಿಸಿ, ನಂತರ ಶೇಂಗಾ ಒಡೆಯಲು ಪ್ರಾರಂಭಿಸುತ್ತಾರೆ. ಅದರೆ ವಿವಿಧ ಕಾರಣಗಳಿಂದ ಶೇಂಗಾ ಒಡೆಯುವ ಯಂತ್ರಗಳು ಪ್ರಾರಂಭವಾಗದೇ ಇರುವುದರಿಂದ ರೈತರು ತಾವೇ ಕೈಯಿಂದ ಶೇಂಗಾ ಒಡೆಯುತ್ತಿದ್ದಾರೆ.

ಬೀಜ, ಗೊಬ್ಬರ ತರಲು ಹರಸಾಹಸ

ನರಗುಂದ: ತೀವ್ರ ತೊಂದರೆಗೆ ಒಳಗಾಗಿರುವ ರೈತರು ಪಟ್ಟಣ ಹಾಗೂ ಹೋಬಳಿ ಪ್ರದೇಶಗಳಿಗೆ ತೆರಳಿ ಬೀಜ, ಗೊಬ್ಬರ ತರಲು ಹರಸಾಹಸ ಪಡಬೇಕಿದೆ.

ಸಾರಿಗೆ ವ್ಯವಸ್ಥೆ ಬಂದ್‌ ಆಗಿದೆ. ಬೈಕ್‌ಗಳೇ ಆಧಾರವಾದರೂ ಎಲ್ಲ ರೈತರೂ ಬೈಕ್‌ ಚಾಲನೆ ಮಾಡುವುದನ್ನು ಕಲಿತಿಲ್ಲ. ಕೃಷಿ ಇಲಾಖೆಯಲ್ಲಿ ಬೀಜ, ಗೊಬ್ಬರ ಪೂರೈಕೆ ಇದ್ದರೂ ತರಲು ಆಗುತ್ತಿಲ್ಲ. ಜತೆಗೆ ಕೋವಿಡ್–19 ಭಯ ಬೇರೆ. ಇದರಿಂದ ಸಕಾಲಕ್ಕೆ ಮುಂಗಾರು ಬಿತ್ತನೆಯ ಸಿದ್ಧತೆ ಕಾರ್ಯ ಸಾಧ್ಯವಾಗುತ್ತಿಲ್ಲ.

ಕೃಷಿಗೆ ಈಗ ಟ್ರ್ಯಾಕ್ಟರ್‌ಗಳ ಅವಲಂಬನೆ ಹೆಚ್ಚಾಗಿದ್ದು, ಅವು ದುರಸ್ತಿಗೆ ಬಂದರೆ ರಿಪೇರಿ ಮಾಡಿಸಲು ಗ್ಯಾರೇಜ್‌, ಆಟೊಮೊಬೈಲ್ಸ್‌ ಬಂದ್‌ ಆಗಿವೆ. ರಿಪೇರಿಗೆ ಎಲ್ಲಿಗೆ ಹೋಗುವುದು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಟ್ಯಾಕ್ಟರ್‌ ದುರಸ್ಥಿಗೆ ಅಡ್ಡಿ

ನರೇಗಲ್:‌ ಮುಂಗಾರು ಆರಂಭವಾಗಿದ್ದು ಮಳೆ ಚೆನ್ನಾಗಿ ಆಗಿದೆ. ಸದ್ಯ ಹದಗೊಳಿಸಿರುವ ಭೂಮಿಯಲ್ಲಿ
ಬಿತ್ತನೆಕಾರ್ಯ ಭರದಿಂದ ಸಾಗಬೇಕು. ಆದರೆ ಲಾಕ್‌ಡೌನ್ ಪ್ರಭಾವದಿಂದ ನರೇಗಲ್‌ ಹೋಬಳಿಯಾದ್ಯಂತ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

ರೈತರಿಗೆ ಸರಿಯಾಗಿ ಬಿತ್ತನೆ  ಬೀಜ, ರಸಗೊಬ್ಬರ ತಂದಿಟ್ಟುಕೊಳ್ಳಲು ಆಗುತ್ತಿಲ್ಲ. ಕಟ್ಟುನಿಟ್ಟಿನ ನಿಯಮಾವಳಿಗಳಿಂದ ಗ್ರಾಮೀಣ ಭಾಗದ ರೈತರು ಕೃಷಿ ಕೇಂದ್ರಗಳಿಗೆ, ಪಕ್ಕದ ಊರುಗಳಿಗೆ ಹೋಗಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ತರಲು ಆಗುತ್ತಿಲ್ಲ. ಟ್ರ್ಯಾಕ್ಟರ್ ರಿಪೇರಿಗೆ ಬಂದರೆ ಸರಿ ಮಾಡಿಸಲು ಗ್ಯಾರೇಜ್‌ಗಳು ತೆರೆಯುತ್ತಿಲ್ಲ. ಇದರಿಂದ ಮುಂಗಾರು ಕೃಷಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೊಳೆಆಲೂರು ಎಪಿಎಂಸಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ತಿಳಿಸಿದರು.

ರೈತರಿಗೆ ತೊಂದರೆ

ಲಕ್ಷ್ಮೇಶ್ವರ: ಲಾಕ್‍ಡೌನ್ ನೇರವಾಗಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಬೆಳಿಗ್ಗೆ 10ರವರೆಗೆ ಜನರು ತರಕಾರಿ, ದಿನಸಿ ಖರೀದಿಸಲು ಅವಕಾಶ ನೀಡಲಾಗಿದೆ. ಆದರೆ 10ರ ನಂತರ ಸಂಪೂರ್ಣ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ಜಾರಿಗೆ ತರುತ್ತಿದ್ದಾರೆ. ಹೀಗಾಗಿ ಹೊಲಕ್ಕೆ ಹೋಗಿ ಬರಲು ರೈತರಿಗೆ ತೀವ್ರ ತೊಂದರೆ ಆಗುತ್ತಿದೆ.

ಇದೀಗ ತಾನೇ ತಾಲ್ಲೂಕಿನಾದ್ಯಂತ ಮಳೆ ಆಗಿದ್ದು ಸದ್ಯದಲ್ಲೇ ಬಿತ್ತನೆ ಕಾರ್ಯ ಆರಂಭವಾಗಲಿದೆ. ಆದರೆ ಎಲ್ಲ ರೈತರಿಗೆ ಬೆಳಿಗ್ಗೆ 10ರ ಒಳಗಾಗಿ ಗೊಬ್ಬರ, ಬೀಜ ಖರೀದಿಸಲು ಆಗುವುದಿಲ್ಲ. ಅಲ್ಲದೆ ಬೆಳೆ ಸಾಲಕ್ಕಾಗಿ ಬ್ಯಾಂಕುಗಳಿಗೆ ಹೋಗಲೂ ಕಿರಿಕಿರಿ ಆಗುತ್ತಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ತಪ್ಪದ ಬ್ಯಾಂಕ್ ಅಲೆದಾಟ

ಮುಳಗುಂದ: ಲಾಕ್‌ಡೌನ್ ಪರಿಣಾಮ ಕೃಷಿಕರು ನಿತ್ಯವೂ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಂತರೂ ಹಣ ಸಿಗದಿರುವ ಸ್ಥಿತಿ ನಿರ್ಮಾಣವಾಗಿದೆ.

ಮುಳಗುಂದ ಸೇರಿದಂತೆ ಚಿಂಚಲಿ, ಕಲ್ಲೂರ ನೀಲಗುಂದ, ಬಸಾಪೂರ ಹಾಗೂ ಶೀತಾಲಹರಿ ಗ್ರಾಮದ ರೈತರು ದೈನಂದಿನ ಆರ್ಥಿಕ ವ್ಯವಹಾರಕ್ಕೆ ಪಟ್ಟಣದ ಕೆವಿಜಿ ಬ್ಯಾಂಕ್‌ ನೆಚ್ಚಿಕೊಂಡಿದ್ದಾರೆ. ಆದರೆ 15 ದಿನಗಳಿಂದ ಬ್ಯಾಂಕ್ ವ್ಯವಹಾರ ಮಧ್ಯಾಹ್ನ 2 ಗಂಟೆವರೆಗೆ ಸೀಮಿತಗೊಂಡಿದೆ.

ಬೆಳೆಸಾಲ, ಕಿಸಾನ್ ಸಮ್ಮಾನ್‌ ಯೋಜನೆ ಸೇರಿದಂತೆ ಉಳಿತಾಯ ಹಣ ತೆಗೆದುಕೊಳ್ಳಲು ನಿತ್ಯ 200ಕ್ಕೂ ಹೆಚ್ಚು ರೈತರು ಬರುತ್ತಾರೆ. ಬ್ಯಾಂಕ್ ಅವಧಿಯಲ್ಲಿ 70ರಿಂದ 100 ಜನರಿಗೆ ಮಾತ್ರ ಸೇವೆ ದೊರಕುತ್ತಿದೆ ಎಂದು ರೈತ ಮುತ್ತಪ್ಪ ಬಳಿಗೇರ ಹೇಳಿದರು.

‘ಸರ್ಕಾರದ ಯೋಜನೆಗಳ ಹಣ ಜಮೆ ಮತ್ತು ಕೃಷಿ ಚಟುವಟಿಕೆ ಸಮಯವಾಗಿದ್ದು ಏಕಕಾಲಕ್ಕೆ ಜನರು ಸೇರುತ್ತಾರೆ ಹೀಗಾಗಿ ತೊಂದರೆಯಾಗುತ್ತಿದೆ’ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದರು.

ಲಾಕ್‌ಡೌನ್‌ನಿಂದ ತೊಡಕು

ಗಜೇಂದ್ರಗಡ: ಲಾಕ್‌ಡೌನ್‌ನಿಂದಾಗಿ ಕೃಷಿ ಚಟುವಟಿಕೆಗಳು ಪ್ರತಿ ವರ್ಷದಂತೆ ಸರಾಗವಾಗಿರದೆ ಕೆಲವು ತೊಡಕುಗಳನ್ನು ಎದುರಿಸುತ್ತಿದೆ.

ಈಗಾಗಲೇ ಒಂದೆರಡು ಬಾರಿ ಹದ ಮಳೆ ಆಗಿರುವುದರಿಂದ ಎರಿ ಮತ್ತು ಮಸಾರಿ ಜಮೀನು ಹೊಂದಿರುವ ರೈತರು ಹೊಲಗಳನ್ನು ಹರಗಿ, ಕಸ ಆರಿಸುತ್ತಿದ್ದಾರೆ. ಲಾಕ್‌ಡೌನ್‌ ಇರುವುದರಿಂದ ಬೆಳಿಗ್ಗೆ 10ರ ಒಳಗಾಗಿ ಪೇಟೆಗೆ ಹೋಗಿ ಬೀಜ, ಗೊಬ್ಬರ ಸೇರಿದಂತೆ ಇನ್ನಿತರ ಕೆಲಸಗಳನ್ನು ಮುಗಿಸಿಕೊಂಡು ಬರಬೇಕು. ಇತ್ತ ಕೃಷಿ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನ ಹಾಗೂ ಟ್ರ್ಯಾಕ್ಟರ್ ಕರೆದುಕೊಂಡು ಹೋಗಬೇಕು. ಹೀಗಾಗಿ ಈ ಅವಧಿಯಲ್ಲಿ ಎಲ್ಲ ಕೆಲಸಗಳು ಆಗುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿವೆ.

ಸರ್ಕಾರ ರೈತರಿಗೆ ಪ್ರತಿ ವರ್ಷ ರಿಯಾಯಿತಿ ದರದಲ್ಲಿ ವಿತರಿಸುವ ತುಂತುರು ನೀರಾವರಿ ಉಪಕರಣಗಳು ಈ ಬಾರಿ ಲಾಕ್‌ಡೌನ್‌ನಿಂದಾಗಿ ನೂರಾರು ರೈತರಿಗೆ ಇನ್ನೂ ವಿತರಣೆಯಾಗಿಲ್ಲ ಎನ್ನುತ್ತಾರೆ ರೈತ ಮಹೇಶ ಪಾಟೀಲ.

ಕಾಡುವ ಕೃಷಿ ಕಾರ್ಮಿಕರ ಕೊರತೆ

ರೋಣ: ಕೊರೊನಾ ಭಯದಲ್ಲಿರುವ ರೈತರು, ಕೂಲಿ ಕಾರ್ಮಿಕರು ಕೃಷಿ ಚಟುವಟಿಕೆಗಳ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

‘ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ, ಗೊಬ್ಬರ ಸಿಗುತ್ತಿಲ್ಲ. ಹೊರಗಡೆ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಸೌಲಭ್ಯಕ್ಕಾಗಿ ಕೃಷಿ ಕೇಂದ್ರಕ್ಕೆ ಬೆಳಿಗ್ಗೆ ಹೋದರೆ ಸಿಬ್ಬಂದಿ 10 ಗಂಟೆಯ ನಂತರ ಸಿಗುತ್ತಾರೆ. ಕೃಷಿ ಇಲಾಖೆಯ ಮಾಹಿತಿಯನ್ನು ಅಧಿಕಾರಿಗಳು ರೈತರಿಗೆ ತಲುಪಿಸುತ್ತಿಲ್ಲ. ಇದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಮುಖಂಡ ಅಣ್ಣಪ್ಪ ದೇಸಾಯಿ ಹೇಳಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ಬಸವರಾಜ ಪಟ್ಟಣಶೆಟ್ಟಿ, ಡಾ. ಬಸವರಾಜ ಹಲಕುರ್ಕಿ, ಚಂದ್ರು ಎಂ.ರಾಥೋಡ್‌, ಚಂದ್ರಶೇಖರ ಭಜಂತ್ರಿ, ನಾಗರಾಜ ಹಣಗಿ, ಶ್ರೀಶೈಲ ಎಂ. ಕುಂಬಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.