ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ; ಸಕಾಲದಲ್ಲಿ ಸಿಗದ ಸೇವೆ

ಫಾರಂ ನಂ.3 ಪಡೆಯಲು ಅಲೆದಾಡುವ ಪರಿಸ್ಥಿತಿ; ಸಾರ್ವಜನಿಕರ ಆರೋಪ
Last Updated 26 ಸೆಪ್ಟೆಂಬರ್ 2022, 3:11 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಜಿಲ್ಲೆಯಲ್ಲಿನ ಬಹುತೇಕ ಸ್ಥಳೀಯ ಸಂಸ್ಥೆಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಜಿಲ್ಲೆಯಲ್ಲಿ ಒಂದು ನಗರಸಭೆ, ಐದು ಪುರಸಭೆಗಳು ಹಾಗೂ ಮೂರು ಪಟ್ಟಣ ಪಂಚಾಯ್ತಿಗಳಿದ್ದು, ಎಲ್ಲೆಡೆಯೂ ಶೇ 50ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳು ದೊರೆಯುತ್ತಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ ನಂ.3 ಪಡೆಯಲು ಹರಸಾಹಸ ಪಡುವ ಪರಿಸ್ಥಿತಿ ಇದೆ. ಸಾರ್ವಜನಿಕರ ಚಪ್ಪಲಿ ಸವೆಯುತ್ತಿವೆಯೇ ಹೊರತು; ಕೆಲಸ ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅವರ ಮೂಲಕ ಹೋದರೆ ಮಾತ್ರ ಬೇಗ ಕೆಲಸಗಳಾಗುತ್ತವೆ. ಇಲ್ಲವಾದಲ್ಲಿ ವರ್ಷಗಟ್ಟಲೇ ಅಡ್ಡಾಡುವುದು ತಪ್ಪುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ಸೇವೆಗಳು ಆನ್‌ಲೈನ್‌ ಮೂಲಕ ನಡೆಯುತ್ತಿದ್ದರೂ ಸೇವೆಗಳು ಮಾತ್ರ ಸಕಾಲಕ್ಕೆ ಸಿಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ 3, ಕಟ್ಟಡ ನಿರ್ಮಾಣ ಪರವಾನಗಿ, ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಹೀಗೆ ಹಲವು ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳ ಅನುಮತಿ ಅವಶ್ಯಕ. ಆದರೆ, ಹೆಚ್ಚಿನ ಕಡೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೆಲಸ ಮುಂದಕ್ಕೆ ಸಾಗುತ್ತಿಲ್ಲ. ಅದರಲ್ಲೂ ಫಾರಂ 3 ಪಡೆಯುವುದು ತೀವ್ರ ಕಷ್ಟವಾಗಿದ್ದು, ಇದರಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಜಿಲ್ಲೆಯ ಸಿವಿಲ್‌ ಎಂಜಿನಿಯರ್ಸ್‌ ಸಂಘ ಆರೋಪಿಸಿದೆ.

ಪುರಸಭೆಯಲ್ಲಿ ಸಿಬ್ಬಂದಿ ಕೊರತೆ

ರೋಣ: ಪಟ್ಟಣದ ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕುಂದುಕೊರತೆ ನಿಭಾಯಿಸಲು ತುಂಬಾ ತೊಂದರೆಯಾಗುತ್ತಿದೆ.

ಪುರಸಭೆಯ ನಿಯೋಜಿತ ಪೌರಕಾರ್ಮಿಕರ ಸಂಖ್ಯೆ 35 ಇದ್ದು, ಅದರಲ್ಲಿ 12 ಮಂದಿ ಮಾತ್ರ ಕಾಯಂ ನೌಕರಿದ್ದಾರೆ. ಇನ್ನು 11 ಮಂದಿ ದಿನಗೂಲಿ ನೌಕರರಿದ್ದಾರೆ. ಇನ್ನುಳಿದಂತೆ 12 ಕಾರ್ಮಿಕರ ಅವಶ್ಯಕತೆ ಇದೆ.

ಪುರಸಭೆಯಲ್ಲಿ ತಾಂತ್ರಿಕ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ಹಾಗೂ ಎಂಜಿನಯರ್‌ಗಳು ಇಲ್ಲದೇ ಪಟ್ಟಣದ ಜನತೆಗೆ ಸಮ
ರ್ಪಕ ಸೇವೆ ಒದಗಿಸಲಾಗುತ್ತಿಲ್ಲ ಎಂದು ಜನಪ್ರತಿನಿದಿಗಳು ಕೂಡ ಬೇಸರಗೊಂಡಿದ್ದಾರೆ.

ಸುಮಾರು ವರ್ಷಗಳಿಂದಲೂ ಇಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇದೆ. ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳು ಕ್ರಮವಹಿಸದರಿವುದು ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.

ಸಕಾಲಕ್ಕೆ ಸಿಗದ ಪಟ್ಟಣ ಪಂಚಾಯ್ತಿ ಸೇವೆ

ಶಿರಹಟ್ಟಿ: ಇಲ್ಲಿನ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಸಿಗುತ್ತಿಲ್ಲ. ಸಾರ್ವಜನಿಕರು ಉತಾರಕ್ಕಾಗಿ ತಿಂಗಳುಗಟ್ಟಲೇ ಅಲೆಯಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮನೆ ಅಥವಾ ಖಾಲಿ ನಿವೇಶನ ಉತಾರಕ್ಕೆ ಪಂಚಾಯ್ತಿಗೆ ಅಲೆದು ಸಾಕಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಎಲ್ಲ ಕರಗಳನ್ನು ತಪ್ಪದೇ ಪಾವತಿಸಿಕೊಳ್ಳುವ ಪಂಚಾಯ್ತಿಯವರು ತೆಗೆದುಕೊಂಡ ಸಮಯಕ್ಕನುಸಾರವಾಗಿ ಉತಾರ ನೀಡದೆ ಸತಾಯಿಸುತ್ತಾರೆ. ಅಲ್ಲದೇ ಉತಾರಕ್ಕಾಗಿ ಕೊಟ್ಟ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳದೆ ಕಳೆದುಕೊಂಡು ಮತ್ತೆ ಮತ್ತೆ ತರಲು ಹೇಳುತ್ತಾರೆ. ಕೆಲಸ ಕಾರ್ಯಗಳನ್ನು ಬಿಟ್ಟು ಉತಾರಕ್ಕಾಗಿ ಸದಾ ಪಂಚಾಯ್ತಿ ಬಾಗಿಲು ಕಾಯುವ ದುಸ್ಥಿತಿ ಎದುರಾಗಿದೆ. ಸಿಬ್ಬಂದಿ ಸಹ ತಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪಂಚಾಯ್ತಿಯಲ್ಲಿ ಮುಖ್ಯವಾಗಿ ಕಂದಾಯ ನಿರೀಕ್ಷಕ ಹುದ್ದೆ ಖಾಲಿ ಇದೆ. ಕಿರಿಯ ಆರೋಗ್ಯ ನಿರೀಕ್ಷಕ, ಕಿರಿಯ ಎಂಜಿನಿಯರ್‌, ಪ್ರಥಮ ದರ್ಜೆ ಸಹಾಯಕ, ಸಮುದಾಯ ಸಂಘಟಕರ ಹುದ್ದೆ ಖಾಲಿ ಇದೆ. ಅಲ್ಲದೇ 27 ಕಾಯಂ ಪೌರಕಾರ್ಮಿಕರ ಮಂಜೂರಾತಿ ಹುದ್ದೆಗಳಲ್ಲಿ ಕೇವಲ 3 ಹುದ್ದೆ ಭರ್ತಿ ಅಷ್ಟೇ ಇವೆ. ಗುತ್ತಿಗೆ ಆಧಾರದ ಮೇಲೆಯೇ ಕೆಲಸಗಾರರನ್ನು ತೆಗೆದುಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸುವ ಅನಿವಾರ್ಯತೆ ಎದುರಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮಧ್ಯವರ್ತಿಗಳಿಂದ ಕೆಲಸ ಸಲೀಸು

ಗಜೇಂದ್ರಗಡ: ಪಟ್ಟಣದ ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ನಿಗದಿತ ಸಮಯದಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ಹೀಗಾಗಿ ಸಾರ್ವಜನಿಕರು ದಿನ ನಿತ್ಯ ಕಚೇರಿಗೆ ಅಲೆಯಬೇಕು. ಇಲ್ಲವೇ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಪುರಸಭೆಯಲ್ಲಿ ಒಟ್ಟು 112 ಸಿಬ್ಬಂದಿ ಬೇಕು. ಆದರೆ 14 ಕಾಯಂ ಸಿಬ್ಬಂದಿ, 5 ಕ್ಷೇಮಾಭಿವೃದ್ಧಿ, 14 ದಿನಗೂಲಿ ನೀರು ಸರಬರಾಜು, 38 ನೇರ ಪಾವತಿ, 2 ಗುತ್ತಿಗೆ ಆಧಾರ, 3 ಸಾಮಾನ್ಯ ಕೆಲಸ ಸಮಾನ ವೇತನ ಹಾಗೂ ಲೈನ್ ಮನ್, ಡ್ರೈವರ್, ಸ್ಯಾನಿಟರಿ ಸೂಪರ್‌ವೈಸರ್, ಕಂಪ್ಯೂಟರ್ ಆಪರೇಟರ್ ತಲಾ ಒಬ್ಬರು ಸೇರಿದಂತೆ ಒಟ್ಟು 80 ಸಿಬ್ಬಂದಿ ಇದ್ದು, ಇನ್ನೂ 22 ಸಿಬ್ಬಂದಿ ಕೊರತೆಯಿದೆ.

‘ಸಾರ್ವಜನಿಕರು ಪುರಸಭೆಗೆ ಕಂಪ್ಯೂಟರ್ ಉತಾರ, ಖಾತೆ ಬದಲಾವಣೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಇತರೇ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಪ್ರತಿದಿನ ಕಚೇರಿಗೆ ಅಲೆಯುವುದು ತಪ್ಪುವುದಿಲ್ಲ. ಮಧ್ಯವರ್ತಿಗಳ ಮೂಲಕ ಬಂದರೆ ಕೆಲಸ ಬೇಗ ಆಗುತ್ತದೆ. ಅಲ್ಲದೆ ಕಚೇರಿಯಲ್ಲಿ ಬಹುತೇಕೆ ಸಿಬ್ಬಂದಿ ಕಾಯಂ ನೌಕರರಲ್ಲ. ಹೀಗಾಗಿ ಲಂಚಕ್ಕೆ ಕೈ ಚಾಚುತ್ತಾರೆ’ ಎಂಬುದು ಸಾರ್ವಜನಿಕರ ದೂರಾಗಿದೆ.

‘ಗಜೇಂದ್ರಗಡ ಪುರಸಭೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿ, ಸಮುದಾಯ ಸಂಘಟಿಕರು, ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿ, ಬಿಲ್ ಕಲೆಕ್ಟರ್ ಸೇರಿದಂತೆ ಶೇ 60ರಷ್ಟು ಕಾಯಂ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸಾರ್ವಜನಿಕರಿಗೆ ಸೇವೆಗಳು ಸಕಾಲದಲ್ಲಿ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಸಿಬ್ಬಂದಿ ಕೊರತೆ: ಜನರ ಪರದಾಟ

ಮುಂಡರಗಿ: ಸ್ಥಳೀಯ ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಜತೆಗೆ ಹೆಚ್ಚುವರಿ ಕೆಲಸದ ಒತ್ತಡದಿಂದಾಗಿ ಪುರಸಭೆಯ ನೌಕರರೂ ಹೈರಾಣಾಗುತ್ತಿದ್ದಾರೆ.

ಪುರಸಭೆಯ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಗೆ ಒಟ್ಟು 102 ಸಿಬ್ಬಂದಿಯ ಅಗತ್ಯವಿದೆ. ಆದರೆ, ಪುರಸಭೆಯಲ್ಲಿ ಸದ್ಯ ಒಟ್ಟು 22 ನೌಕರರು ಮಾತ್ರ ಇದ್ದಾರೆ. ಹೀಗಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಲಿದೆ.

ಪ್ರತಿಯೊಬ್ಬ ನೌಕರನು ತನ್ನ ಕೆಲಸ ಕಾರ್ಯಗಳ ಜತೆಗೆ ಅನ್ಯ ಕಾರ್ಯಗಳನ್ನೂ ನಿರ್ವಹಿಸಬೇಕಿದೆ. ಒಬ್ಬೊಬ್ಬ ನೌಕರನು ಹಲವು ವಿಭಾಗಗಳನ್ನು ನಿರ್ವಹಿಸಬೇಕಿದೆ. ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ನನೆಗುದಿಗೆ ಬೀಳುತ್ತಲಿವೆ.

ಪರಿಸರ ನಿರ್ವಹಣೆ, ಲೆಕ್ಕಾಧಿಕಾರಿ, ಜೆಇ, ಎಸ್.ಡಿ.ಸಿ., ಎಫ್.ಡಿ.ಸಿ.ಯಂತಹ ಪ್ರಮುಖ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಬಿದ್ದಿವೆ. ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಕಾಲದಲ್ಲಿ ನೆರವೇರದಂತಾಗಿವೆ. ಈ ಕಾರಣದಿಂದ ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿಗಳು ನಡೆಯುತ್ತಲಿವೆ.

ಪುರಸಭೆಗೆ ಎಂಜಿನಿಯರ್ ಕೊರತೆ

ಲಕ್ಷ್ಮೇಶ್ವರ: ಬರೋಬ್ಬರಿ 23 ವಾರ್ಡ್‍ಗಳನ್ನು ಹೊಂದಿರುವ ಪುರಸಭೆಗೆ ಎಂಜಿನಿಯರ್ ಕೊರತೆ ಇದೆ. ಒಬ್ಬ ಪೂರ್ಣ ಪ್ರಮಾಣದ ಎಂಜಿನಿಯರ್ ಅಗತ್ಯ ಇದೆ.

ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಒಬ್ಬರೇ ಎಂಜಿನಿಯರ್ ಎರಡು ದಿನ ಗದಗ, ಎರಡು ದಿನ ಮುಂಡರಗಿ ಮತ್ತು ಎರಡು ದಿನ ಲಕ್ಷ್ಮೇಶ್ವರದ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಹಿಂದುಳಿಯುತ್ತಿವೆ. ಅಲ್ಲದೆ ಕಳಪೆ ಕಾಮಗಾರಿಗಳು ಆಗುತ್ತಿರುವುದರ ಬಗ್ಗೆ ದೂರುಗಳು ಬರುತ್ತಿವೆ.

‘ಖಾತೆ ಬದಲಾವಣೆ, ಮ್ಯುಟೇಶನ್, ಕಟ್ಟಡಕ್ಕೆ ನಿರ್ಮಾಣಕ್ಕೆ ಅನುಮತಿ ಕೊಡಲು ಯಾವುದೇ ಸಮಸ್ಯೆ ಸಾರ್ವಜನಿಕರಿಗೆ ಆಗುತ್ತಿಲ್ಲ’ ಎಂದು ಸ್ವತಃ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳುತ್ತಾರೆ. ಪುರಸಭೆಗೆ ಪರಿಸರ ಎಂಜಿನಿಯರ್‌ ಅಗತ್ಯ ಇದೆ. ಅದರಂತೆ ಆರೋಗ್ಯ ವಿಭಾಗಕ್ಕಾಗಿ ಒಬ್ಬರು ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು ಒಬ್ಬರು ಹಿರಿಯ ಆರೋಗ್ಯ ನಿರೀಕ್ಷಕರ ಅಗತ್ಯ ಇದೆ. ಆದರೆ ಸದ್ಯ ಒಬ್ಬರು ಕಿರಿಯ ಆರೋಗ್ಯ ನಿರೀಕ್ಷಕರು ಮಾತ್ರ ರ್ಕವ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಕಾಡುವ ಸಿಬ್ಬಂದಿ ಕೊರತೆ

ನರೇಗಲ್:‌ ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿರುವ ಕಾರಣ ಸಾರ್ವಜನಿಕರ ಅಗತ್ಯ ಸೇವೆಗಳು ವಿಳಂಬವಾಗುತ್ತಿವೆ. ಕಿರಿಯ ಎಂಜಿನಿಯರ್‌, ಕಂದಾಯ ನೀರಿಕ್ಷಕರು, ಕರ ವಸೂಲಿಗಾರ ಸಹಾಯಕರು, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸ್ಯಾನಿಟರಿ ಸೂಪರ್‌ವೈಸರ್‌ ಸೇರಿದಂತೆ ಅನೇಕ ಹುದ್ದೆಗಳಿಗೆ ಸಿಬ್ಬಂದಿ ಇಲ್ಲ. ಆದ್ದರಿಂದ ಅಗತ್ಯ ಕೆಲಸಗಳಿಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಸಿಬ್ಬಂದಿ ಕೊರತೆ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸ್ವಲ್ಪ ವಿಳಂಬವಾಗುತ್ತಿದೆ. ಇರುವ ಸಿಬ್ಬಂದಿ ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ.
ಆರ್.ಎಂ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ, ಮುಂಡರಗಿ

ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಸಿಬ್ಬಂದಿ ಕೊರತೆ ಎದುರಿಸುತ್ತಲೇ ಇದ್ದೇವೆ. ಇದರಿಂದಾಗಿ ನಮ್ಮ ವಾರ್ಡ್‌ನ ಜನತೆಗೆ ಸಮರ್ಪಕ ಸೇವೆ ಒದಗಿಸಲು ಪರದಾಡುವ ಸ್ಥಿತಿ ಬಂದೊದಗಿದೆ
ಸಂತೋಷ ಕಡಿವಾಲ, 16ನೇ ವಾರ್ಡ್‌ ಸದಸ್ಯ

ಪುರಸಭೆಗೆ ಅಗತ್ಯವಾಗಿ ಬೇಕಿರುವ ತಾಂತ್ರಿಕ, ಆರೋಗ್ಯ ನಿರೀಕ್ಷಕ ಹಾಗೂ ಪೌರಕಾರ್ಮಿಕರ ಕೊರತೆ ಇದೆ. ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
ಎಂ. ಕೃಷ್ಣಾ ನಾಯಕ, ಮುಖ್ಯಾಧಿಕಾರಿ, ರೋಣ

ನರೇಗಲ್‌ ಪಟ್ಟಣ ಹಾಗೂ ಐದು ಮಜರೆ ಹಳ್ಳಿಗಳನ್ನು ಒಳಗೊಂಡಿರುವ ಇಲ್ಲಿನ ಪಟ್ಟಣ ಪಂಚಾಯ್ತಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಮುಂದಾಗಬೇಕು
ನಿಂಗನಗೌಡ ಲಕ್ಕನಗೌಡ್ರ, ಯುವ ಮುಖಂಡ ನರೇಗಲ್

ನಿರ್ವಹಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ
ಪ್ರಜಾವಾಣಿ ತಂಡ: ಕಾಶೀನಾಥ ಬಿಳಿಮಗ್ಗದ, ನಿಂಗರಾಜ ಹಮ್ಮಿಗಿ, ನಾಗರಾಜ ಎಸ್‌.ಹಣಗಿ, ಪ್ರಕಾಶ್‌ ಗುದ್ನೆಪ್ಪನವರ, ಚಂದ್ರು ಎಂ.ರಾಥೋಡ್‌, ಶ್ರೀಶೈಲ ಎಂ. ಕುಂಬಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT