ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಕೃಷಿಗೆ ಸಿದ್ಧತೆ ಜೋರು: ರೋಹಿಣಿ ಮಳೆ ನಿರೀಕ್ಷೆಯಲ್ಲಿ ರೈತರು

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ: ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ
Last Updated 30 ಮೇ 2022, 3:53 IST
ಅಕ್ಷರ ಗಾತ್ರ

ಗದಗ: ಅಕಾಲಿಕ ಮಳೆಯ ತೇವಾಂಶ ಹಾಗೂ ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟಿರುವ ಜಿಲ್ಲೆಯ ಕೆಲವು ರೈತರುಈಗಾಗಲೇ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ಬಹಳಷ್ಟು ಮಂದಿ ರೈತರು ರೋಹಿಣಿ ಮಳೆಗಾಗಿ ಕಾದಿದ್ದು, ಬಿತ್ತನೆಗೆ ಬೇಕಿರುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

‘ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆಗಿದ್ದರೂ ಕೃಷಿ ಚಟುವಟಿಕೆಗಳು ಸ್ವಲ್ಪ ಪ್ರಮಾಣದಲ್ಲಿ ಆರಂಭಗೊಂಡಿದೆ. ಮೇ 25ಕ್ಕೆ ಆರಂಭಗೊಳ್ಳಬೇಕಿದ್ದ ರೋಹಿಣಿ ಮಳೆ ಕೈಕೊಟ್ಟಿರುವುದರಿಂದ ಬಹಳಷ್ಟು ರೈತರು ಮಳೆಗಾಗಿ ಕಾದಿದ್ದಾರೆ. ಜಿಲ್ಲೆಯಲ್ಲಿ ಬಿತ್ತನೆಗೆ ಬೇಕಿರುವ ಬೀಜ, ರಸಗೊಬ್ಬರದ ಕೊರತೆ ಇಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದ್ದಾರೆ.

‘ರಸಗೊಬ್ಬರ ಮಾರಾಟಗಾರರು ಲಿಂಕ್‌ ಗೊಬ್ಬರ ತೆಗೆದುಕೊಳ್ಳುವಂತೆ ರೈತರನ್ನು ಒತ್ತಾಯಿಸುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಅಖಿಲ ಭಾರತದ ಮಟ್ಟದಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ರೈತರು ಕೂಡ ನಿರ್ದಿಷ್ಟ ಬ್ರ್ಯಾಂಡ್‌ನ ರಸಗೊಬ್ಬರಕ್ಕೆ ಕಾದು ಕುಳಿತುಕೊಳ್ಳಬಾರದು. ಲಭ್ಯವಿರುವ ರಸಗೊಬ್ಬರ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

60 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ

ಮುಳಗುಂದ: ಗದಗ ತಾಲೂಕಿನಲ್ಲಿ ಪ್ರಸಕ್ತ ವರ್ಷ 60 ಸಾವಿರ ಹೆಕ್ಟರ್ ಭೂ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹ ಸಿದ್ಧತೆಗಳು ಭರದಿಂದ ಸಾಗಿವೆ.

ಗದಗ ಮತ್ತು ಬೆಟಗೇರಿ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಚಟುವಟಿಕೆ ಗರಿಗೆದರಿವೆ. ಕಳೆದ ವಾರ ಸುರಿದ ಸತತ ಮಳೆಗೆ ಕೃಷಿ ಭೂಮಿ ತೇವಗೊಂಡಿತ್ತು. ಮಳೆ ಕಡಿಮೆಯಾದ ನಾಲ್ಕು ದಿನಗಳ ನಂತರ ತೇವಾಂಶ ಕಡಿಮೆಯಾಗಿದೆ. ನೇಗಿಲು ಹೊಡೆದ ಕಪ್ಪು ಮಣ್ಣಿನ ಹೊಲಗಳನ್ನ ಹರಗುವುದು, ಕೆಂಪು ಮಿಶ್ರಿತ ಭೂಮಿಯನ್ನು ರಂಟೆ ಹೊಡೆಯುವ ಮತ್ತು ಕಸ ತೆಗೆಯುವ ಕಾಯಕ ಸಾಗಿದೆ.

ಮುಳಗುಂದ ಭಾಗದಲ್ಲಿ ಮುಂಗಾರು ಬಿತ್ತನಗೆ ಅವಶ್ಯವಿರುವ ಕಂಟಿ ಶೇಂಗಾ, ಹಬ್ಬು ಶೇಂಗಾ, ಹೆಸರು, ಹತ್ತಿ ಮತ್ತು ಗೋವಿನ ಜೋಳ ಬೀಜ ಸಂಗ್ರಹದಲ್ಲಿ ರೈತರು ತೊಡಗಿಕೊಂಡಿದ್ದಾರೆ. ಜತೆಗೆ ಇಲ್ಲಿನ 2 ಖಾಸಗಿ ಆಗ್ರೋ ಕೇಂದ್ರಗಳಿಗೆ ಡಿಎಪಿ ಮತ್ತು ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು ಖರೀದಿ ಜೋರಾಗಿ ನಡೆದಿದೆ. ಆದರೆ ರೈತರ ಬೇಡಿಕೆಗೆ ಅನುಗುಣವಾಗಿ ಸ್ಪಿಕ್ ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಗದಗ ತಾಲ್ಲೂಕಿನಲ್ಲಿ 60 ಸಾವಿರ ಹೆಕ್ಟೇರ್‌ ಭೂಪ್ರದೇಶದ ಪೈಕಿ 30 ಸಾವಿರ ಹೆಕ್ಟೇರ್‌ ಹೆಸರು, 13 ಸಾವಿರ ಹೆಕ್ಟೇರ್‌ ಗೋವಿನಜೋಳ, 10 ಸಾವಿರ ಹೆಕ್ಟೇರ್ ಶೇಂಗಾ, 5 ಸಾವಿರ ಹೆಕ್ಟೇರ್‌ ಹತ್ತಿ ಮತ್ತು 2 ಸಾವಿರ ಹೆಕ್ಟೇರ್‌ ಜೋಳ ಇತರೆ ಬೆಳೆಗಳ ಬೀಜ ಬಿತ್ತನೆ ಅಂದಾಜಿಸಲಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯು ಹುಲಕೋಟಿ, ಮುಳಗುಂದ, ಸೊರಟೂರ ಮತ್ತು ಬೆಟಗೇರಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯತಿ ದರದ ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಗಳ ವಿತರಣೆಗೆ ಸಿದ್ದತೆ ಮಾಡಿಕೊಂಡಿದೆ.

ಮುಂಗಾರು ಬಿತ್ತನೆ ಭರದ ಸಿದ್ಧತೆ

ಮುಂಡರಗಿ: ಕಳೆದ ವಾರಸುರಿದ ಉತ್ತಮ ಮಳೆಯು ಬಿತ್ತನೆ ಪೂರ್ವ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತುಂಬಾ ಅನಕೂಲವಾಗಿದೆ. ಈ ಕಾರಣದಿಂದ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕೃಷಿ ಇಲಾಖೆಯು ಈಗಾಗಲೇ ತಾಲ್ಲೂಕಿನ ಮುಂಡರಗಿ ಹಾಗೂ ಡಂಬಳ ಹೋಬಳಿಗಳಲ್ಲಿ ಬಿತ್ತನೆ ಬೀಜ ವಿತರಣೆಯನ್ನು ಆರಂಭಿಸಿದೆ.

ಮುಂಡರಗಿ ಹೋಬಳಿಯಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸಲು 25 ಕ್ವಿಂಟಲ್ ಹೆಸರು, 15 ಕ್ವಿಂಟಲ್ ತೊಗರಿ, 4 ಕ್ವಿಂಟಲ್ ಹೈಬ್ರಿಡ್ ಜೋಳ, 6 ಕ್ವಿಂಟಲ್ ಸೂರ್ಯಕಾಂತಿ ಹಾಗೂ 60 ಕ್ವಿಂಟಲ್ ಮೆಕ್ಕೆಜೋಳದ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದೆ. ಮುಂಗಾರು ಮಳೆಯು ಪ್ರಾರಂಭವಾಗುತ್ತಿದ್ದಂತೆಯೇ ಶೇಂಗಾ ಹಾಗೂ ಮತ್ತಿತರ ಬಿತ್ತನೆ ಬೀಜಗಳು ಪೂರೈಕೆಯಾಗಲಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಡಿಕೆಗಿಂತ ಹೆಚ್ಚಿನ ಸಹಕಾರ ನೀಡಿದ ವರುಣ

ರೋಣ: ಪ್ರಸಕ್ತ ವರ್ಷದ ಮುಂಗಾರು ಬಿತ್ತನೆಗೆ ಅಕಾಲಿಕ ಮಳೆ ಅನುಕೂಲ ಮಾಡಿಕೊಟ್ಟಿದ್ದು, ರೈತರು ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ.

ಮುಂಗಾರಿನಲ್ಲಿ 7,000 ಹೆಕ್ಟೇರ್‌ ಗೋವಿನಜೋಳ, 500 ಹೆಕ್ಟೇರ್‌ ಸಜ್ಜೆ, 47,500 ಹೆಕ್ಟೇರ್‌ ಹೆಸರು, 100 ಹೆಕ್ಟೇರ್‌ ತೊಗರಿ, ಶೇಂಗಾ 3000 ಹೆಕ್ಟೇರ್‌, ಸೂರ್ಯಕಾಂತಿ 500 ಹೆಕ್ಟೇರ್‌ ಹಾಗೂ ಹತ್ತಿ 2,000 ಹೆಕ್ಟೇರ್‌ ಸೇರಿದಂತೆ ಒಟ್ಟು 59,700 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ.

ತಾಲ್ಲೂಕಿನಲ್ಲಿ 134 ಮಿ.ಮೀ. ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ಬಿತ್ತನೆ ಅವಶ್ಯಕತೆಗೆ 19,000 ಟನ್ ರಸಗೊಬ್ಬರ ಬೇಕಾಗಿದ್ದು, 17,500 ಲಭ್ಯವಿದೆ. ಕೊರತೆಯಾಗಿರುವ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಗೆ ಕ್ರಮವಹಿಸಬೇಕಿದೆ.

‘ತಾಲ್ಲೂಕಿನಲ್ಲಿ ಮೂರು ಕಡೆ ರೈತ ಸಂಪರ್ಕ ಕೇಂದ್ರಗಳಿದ್ದು ಅವುಗಳಲ್ಲಿ 50 ಕ್ವಿಂಟಲ್ ಮೆಕ್ಕೆಜೋಳ, 12 ಕ್ವಿಂಟಲ್ ಸಜ್ಜೆ, 10 ಕ್ವಿಂಟಲ್ ಜೋಳ, 20 ಕ್ವಿಂಟರ್‌ ತೊಗರಿ ಹಾಗೂ 230 ಕ್ವಿಂಟಲ್ ಹೆಸರು ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ ತಿಳಿಸಿದ್ದಾರೆ.

ಮುಂಗಾರು ಮಳೆ ನಿರೀಕ್ಷೆಯಲ್ಲಿ ರೈತರು

ಹೊಳೆಆಲೂರ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದು, ರೈತ ಸಂಪರ್ಕ ಕೇಂದ್ರ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದೆ.

ಹೊಳೆಆಲೂರ ರೈತ ಸಂಪರ್ಕ ಕೇಂದ್ರದಲ್ಲಿ ಬಿಜಿಎಸ್ 9 ಮತ್ತು ಡಿಜಿಜಿವಿ 2 ತಳಿಯ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ಸಾಮಾನ್ಯ ವರ್ಗದ ರೈತರಿಗೆ ₹435, ಎಸ್‌ಸಿ, ಎಸ್‌ಟಿ ರೈತರಿಗೆ ₹372.50 ದರ ನಿಗದಿಪಡಿಸಲಾಗಿದೆ.

ಈ ಬಾರಿ ಅವಧಿಗೂ ಮುನ್ನವೇ ಮಳೆ ಸುರಿದಿದ್ದರೂ ವಾಡಿಕೆಯಂತೆ ರೋಹಿಣಿ ಮಳೆಯು ಮೇ 25ರಿಂದ ಪ್ರಾರಂಭವಾಗಬೇಕಿತ್ತು. ರೋಹಿಣಿ ಮಳೆ ಇನ್ನೂ ಪ್ರಾರಂಭವಾಗದಿರುವುದು ಹೆಸರು ಬಿತ್ತನೆ ಮಂದಗತಿಯಲ್ಲಿ ಸಾಗಲು ಕಾರಣವಾಗಿದೆ.

ಹೆಸರು, ಶೇಂಗಾ ಮತ್ತು ತೊಗರಿ ಬೆಳೆಯುವ ರೈತರು ಈಗಾಗಲೇ ಸ್ಥಳೀಯ ಮಾರುಕಟ್ಟೆಯಲ್ಲಿ ಗೊಬ್ಬರ ಖರೀದಿಸಿದ್ದು ಮಳೆಗಾಗಿ ಕಾಯ್ದು ಕುಳಿತಿದ್ದಾರೆ. ರೋಹಿಣಿ ಮಳೆ ಬೀಳುತ್ತಿದ್ದಂತೆ ಬಿತ್ತನೆ ಪ್ರಕ್ರಿಯೆ ಭರದಿಂದ ಸಾಗುತ್ತದೆ.

‘ಈ ವರ್ಷದಲ್ಲಿ ಡಿಸೇಲ್ ಬೆಲೆ ಏರಿಕೆಯಿಂದಾಗಿ ಟ್ರ್ಯಾಕ್ಟರ್ ಬಾಡಿಗೆ ದುಪ್ಪಟ್ಟಾಗಿದೆ. ಪ್ರತಿ ಎಕರೆಗೆ ಬಿತ್ತನೆ ಮಾಡಲು ₹500ರಿಂದ ₹1,000 ಹೆಚ್ಚುವರಿಯಾಗಿ ನೀಡಬೇಕಿರುವುದರಿಂದ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ’ ಎಂದು ರೈತರು ತಿಳಿಸಿದ್ದಾರೆ.

ಇದರ ಜತೆಗೆ ದನದ ಮಾರುಕಟ್ಟೆಯಲ್ಲಿ ಎತ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು ಒಂದು ಜೊತೆ ಸಾಧಾರಣ ಎತ್ತುಗಳು ಲಕ್ಷದ ಮೇಲೆ ಮಾರಾಟವಾಗುತ್ತಿವೆ.

ಕೈಗೆಟುಕದ ‘ಸೂರ್ಯಕಾಂತಿ’

ಮುಂಡರಗಿ: ಪ್ರಸ್ತುತ ವರ್ಷ ಸೂರ್ಯಕಾಂತಿ ಬಿತ್ತನೆ ಬೀಜದ ದರ ಗಗನಕ್ಕೇರಿದ್ದು, ರೈತರು ಬಿತ್ತನೆ ಬೀಜ ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಕಳೆದ ವರ್ಷ 2 ಕೆ.ಜಿ. ತೂಕದ ಸೂರ್ಯಕಾಂತಿ ಬಿತ್ತನೆ ಬೀಜದ ಪ್ಯಾಕೆಟ್‌ ದರ ₹900ರಿಂದ ₹1,000 ಇತ್ತು. ಈ ವರ್ಷ ಅದರ ದರ ಮೂರುಪಟ್ಟು ಹೆಚ್ಚಾಗಿದೆ.

ಸೂರ್ಯಕಾಂತಿ ಬಿತ್ತನೆ ಬೀಜ ಸೇರಿದಂತೆ ಎಲ್ಲ ಬಿತ್ತನೆ ಬೀಜಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ರೈತರ ಪ್ರತಿಭಟನೆ ಯಾವುದೆ ಫಲ ನೀಡಿಲ್ಲ.

ಎರಡು ವರ್ಷಗಳ ಹಿಂದೆ ಸೂರ್ಯಕಾಂತಿ ಕಳಪೆ ಬಿತ್ತನೆ ಬೀಜ ಪೂರೈಸಿದ ಕೆಲವು ಕಂಪನಿಗಳ ವಿರುದ್ಧ ತಾಲ್ಲೂಕಿನ ಕೆಲವು ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ರೈತರು ತೀರ್ಪು ಬರುವುದನ್ನು ಕಾಯುತ್ತಿದ್ದಾರೆ.

ಬಿತ್ತನೆಗೆ ಜೂನ್‌ ಸೂಕ್ತ ಸಮಯ

ಮುಳಗುಂದ: ‘ಜೂನ್ 15ರ ನಂತರದ ದಿನಗಳು ಬಿತ್ತನೆಗೆ ಸೂಕ್ತ ಸಮಯ. ಭೂಮಿ ತೇವವಿದೆ ಎಂದು ಈಗಲೇ ಬಿತ್ತನೆ ಮಾಡಿದರೆ ಬೆಳೆಗೆ ರೋಗ ತಗಲುವ ಸಾಧ್ಯತೆ ಹೆಚ್ಚು. ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಬೇಕು. ಬೀಜ, ರಸಗೊಬ್ಬರ ಖರೀದಿ ವೇಳೆ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು’ ಎಂದು ಗದಗ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ.ಪಿ ತಿಳಿಸಿದರು.

‘ಕೃಷಿ ಇಲಾಖೆಯಿಂದ ರೈತ ಶಕ್ತಿ ಯೋಜನೆ ಚಾಲ್ತಿಯಲಿದ್ದು, ಪ್ರತಿ ಎಕರೆಗೆ ₹250 ಡೀಸೆಲ್ ಖರೀದಿಗೆ ಸಹಾಯಧನ ಸಿಗಲಿದೆ. ಇದು ಗರಿಷ್ಠ 5 ಎಕರೆಗೆ ಸೀಮಿತವಾಗಿದೆ. ರೈತರು ತಮ್ಮ ಖಾತೆಗಳಿಗೆ ಎಫ್‌ಐಡಿ ಮಾಡಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಪೂರ್ವ ಮಳೆ ಬಿತ್ತನೆಗೆ ಅನುಕೂಲ ಕಲ್ಪಿಸಿದೆ. ರೋಹಿಣಿ ಮಳೆಯಾದರೆ ಬಿತ್ತನೆ ಕಾರ್ಯ ಕೈಗೊಳ್ಳುತ್ತೇವೆ. ಸರ್ಕಾರ ಗೊಬ್ಬರ ಹಾಗೂ ಗುಣಮಟ್ಟದ ಬಿತ್ತನೆ ಬೀಜದ ಸೌಲಭ್ಯ ನೀಡಿದರೆ ಅನುಕೂಲ ‌‌‌
ಮುತ್ತಪ್ಪ ಕೊಪ್ಪದ, ಸ್ಥಳೀಯ ರೈತ

28,000 ಹೆಕ್ಟೇರ್‌ನಲ್ಲಿ 4 ಸಾವಿರ ಹೆಕ್ಟೇರ್ ನೀರಾವರಿ ಇದೆ. ಉಳಿದ ಕ್ಷೇತ್ರದಲ್ಲಿ 1,500 ಹೆಕ್ಟೇರ್ ಮುಂಗಾರು ಬಿತ್ತನೆ ಚಟುವಟಿಕೆ ನಡೆದಿದೆ. ನರೇಗಲ್ ವ್ಯಾಪ್ತಿಯಲ್ಲಿ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ
ಸಿ. ಕೆ. ಕಮ್ಮಾರ, ನರೇಗಲ್‌ ರೈತ ಸಂಪರ್ಕ ಕೇಂದ್ರ

ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಬಿತ್ತನೆ ವಿವರ

ಬೆಳೆ;ಬಿತ್ತನೆ ಗುರಿ

ಹೆಸರು;1.17 ಲಕ್ಷ ಹೆಕ್ಟೇರ್‌
ಹತ್ತಿ;22 ಸಾವಿರ ಹೆಕ್ಟೇರ್‌
ಮೆಕ್ಕೆಜೋಳ;1 ಲಕ್ಷ ಹೆಕ್ಟೇರ್‌
ಸೂರ್ಯಕಾಂತಿ;10 ಸಾವಿರ ಹೆಕ್ಟೇರ್‌
ಹೈಬ್ರಿಡ್‌ ಜೋಳ;10 ಸಾವಿರ ಹೆಕ್ಟೇರ್
ಇತರೆ ಬೆಳೆ;63 ಸಾವಿರ ಹೆಕ್ಟೇರ್‌
ಒಟ್ಟು; 3.22 ಲಕ್ಷ ಹೆಕ್ಟೇರ್‌

ನಿರ್ವಹಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ
ಪ್ರಜಾವಾಣಿ ತಂಡ: ಉಮೇಶ ಬಸನಗೌಡರ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ಪ್ರಕಾಶ್‌ ಗುದ್ನೆಪ್ಪನವರ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT