ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ವಿದ್ಯಾರ್ಥಿಗಳಿಗೆ ಶೌಚಾಲಯ ಕೊರತೆ

ನಿರ್ವಹಣೆ ಕೊರತೆ; ಬಳಕೆಗೆ ಲಭ್ಯವಾಗದ ಶೌಚಾಲಯಗಳು‘ ವಿದ್ಯಾರ್ಥಿನಿಯರಿಗೆ ಸಂಕಷ್ಟ
Last Updated 28 ನವೆಂಬರ್ 2022, 5:10 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೌಚಾಲಯದ ಸೌಲಭ್ಯ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ನೇತಾರರು, ಸರ್ಕಾರ ಸ್ವಚ್ಛತೆ ಹಾಗೂ ಶೌಚಾಲಯ ಬಳಸುವಂತೆ ಕುರಿತಾಗಿ ಹೇಳುವ ಮಾತುಗಳು ಕೇವಲ ಮಾತಿಗಷ್ಟೇ ಸೀಮಿತವಾಗಿದ್ದು, ಕೃತಿಯಲ್ಲಿ ಇಲ್ಲ ಎಂಬುದು ಶಾಲೆಗಳಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಇರುವ ಕೆಲವೆಡೆಗಳಲ್ಲಿ ನೀರಿನ ಸೌಲಭ್ಯವಿಲ್ಲ. ಇನ್ನೂ ಕೆಲವೆಡೆ ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.

ಗದಗ ಜಿಲ್ಲೆಯಲ್ಲಿ ಒಟ್ಟು 666 ಪ್ರಾಥಮಿಕ ಶಾಲೆಗಳಿವೆ. 176 ಪ್ರೌಢಶಾಲೆಗಳಿವೆ. ಅದರಲ್ಲಿ ಪ್ರಾಥಮಿಕ ವಿಭಾಗದಲ್ಲಿ 1,01,968 ವಿದ್ಯಾರ್ಥಿಗಳು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 31,993 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಿಗೆ 3,275 ಪ್ರಾಥಮಿಕ ಶಾಲಾ ಶಿಕ್ಷಕರು, 1,176 ಪ್ರೌಢ ಶಾಲಾ ಶಿಕ್ಷಕರು ಕಲಿಸುತ್ತಿದ್ದಾರೆ.

ಬಹುತೇಕ ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳನ್ನು ಬಳಸುತ್ತಿರುವ ಕಾರಣ ಶಾಲಾ ಮಕ್ಕಳ ಬಯಲು ಶೌಚ ಕಡಿಮೆಯಾಗಿದೆ. ಗದಗ ಜಿಲ್ಲೆಯ ಶಾಲೆಗಳಲ್ಲಿ 1,028 ಬಾಲಕರು, 1024 ಬಾಲಕಿಯರ ಹಾಗೂ 410 ಶಾಲಾ ಸಿಬ್ಬಂದಿ ಶೌಚಾಲಯಗಳಿವೆ. ಹೆಚ್ಚುವರಿಯಾಗಿ ಪ್ರಾಥಮಿ ಶಾಲೆಗಳಿಗೆ 368, ಪ್ರೌಢಶಾಲೆಗಳಿಗೆ 222 ಶೌಚಾಲಯದ ಅವಶ್ಯಕತೆ ಇರುತ್ತದೆ. ಅದರಲ್ಲಿ ಮುಂಡರಗಿ 3, ರೋಣ 11, ನರಗುಂದ 4,ಗದಗ ಗ್ರಾಮೀಣ 120 ಶಾಲೆಗಳಿಗೆ ಅಂದರೆ 129 ಪ್ರಾಥಮಿಕ ಶಾಲೆಗಳಿಗೆ ಹಾಗೂ 25 ಪ್ರೌಢಶಾಲೆಗಳಿಗೆ ನೀರಿನ ಪೂರೈಕೆ ಇರುವುದಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಮಾಹಿತಿ ನೀಡಿದರು.

ಶೌಚಾಲಯ ನಿರ್ವಹಣೆಯೇ ದೊಡ್ಡ ಸಮಸ್ಯೆ

ಲಕ್ಷ್ಮೇಶ್ವರ: ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇದೆ. ಆದರೆ ಅವುಗಳ ನಿರ್ವಹಣೆ ಮಾತ್ರ ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗಿದೆ.

ಕಾಂಪೌಂಡ್ ಇಲ್ಲದ ಊರ ಹೊರಗಿನ ಶಾಲೆಗಳು ಮತ್ತು ಗ್ರಾಮೀಣ ಭಾಗದಲ್ಲಿನ ಶೌಚಾಲಯಗಳಿಗೆ ಆ ಭಾಗದ ಸಾರ್ವಜನಿಕರು ಶೌಚ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲ ಕಡೆ ಶಾಲಾ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಅವುಗಳನ್ನು ನಿರ್ವಹಿಸುವುದೇ ಶಿಕ್ಷಕರಿಗೆ ಕಷ್ಟದ ಕೆಲಸವಾಗಿದೆ.

ಇನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ಇಲ್ಲ. ಹತ್ತು ಮಕ್ಕಳು ಇರುವ ಶಾಲೆಗೆ ಒಂದು ಶೌಚಾಲಯ ಇದ್ದರೆ, ನೂರು ಮಕ್ಕಳಿರುವ ಶಾಲೆಗೂ ಒಂದೇ ಶೌಚಾಲಯ ಇದೆ. ಇದರಿಂದಾಗಿ ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ ಶೌಚಾಲಯಗಳ ಸಮಸ್ಯೆ ಕಾಡುತ್ತಿದೆ.

‘ಅಗತ್ಯ ಇರುವ ಕಡೆ ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಬಿಇಒ ಜಿ.ಎಂ. ಮುಂದಿನಮನಿ ಮಾಹಿತಿ ನೀಡುತ್ತಾರೆ.

ಮೂಲಸೌಲಭ್ಯ ವಂಚಿತ ಶೌಚಾಲಯಗಳು

ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಶಾಲೆಗಳಲ್ಲಿ ಬಾಲಕ ಹಾಗೂ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳಿವೆ. ಆದರೆ ಅವುಗಳ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ. ಬಹುತೇಕ ಶೌಚಾಲಯಗಳಿಗೆ ನೀರಿನ ಸಂಪರ್ಕ ಇಲ್ಲದ್ದರಿಂದ ಮಕ್ಕಳು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಿದೆ.

ಕೆಲವು ಗ್ರಾಮಗಳ ಶಾಲೆಗಳಲ್ಲಿ ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನಳ ಹಾಗೂ ನೀರಿನ ಟ್ಯಾಂಕ್‌ಗಳನ್ನು ನಾಶಮಾಡುತ್ತಾರೆ. ಹೀಗಾಗಿ ಅಂತಹ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಸಿಬ್ಬಂದಿ ಹಿಂದೇಟು ಹಾಕುವಂತಾಗಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಲು ಅವಕಾಶವಿದೆ. ಗ್ರಾಮ ಪಂಚಾಯ್ತಿಯವರು ಶೌಚಾಲಯ ನಿರ್ಮಿಸುತ್ತಾರೆ. ಆದರೆ, ನೀರು ಹಾಗೂ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಸಮಸ್ಯೆಯಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಶೌಚಾಲಯ ನಿರ್ಮಿಸಲು ಪುರಸಭೆಯಲ್ಲಿ ಅವಕಾಶವಿಲ್ಲ. ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲು ಇಲಾಖೆಯು ಸಕಾಲದಲ್ಲಿ ಅನುದಾನವನ್ನೂ ನೀಡುವುದಿಲ್ಲ. ಹೀಗಾಗಿ ಪಟ್ಟಣದ ಬಹುತೇಕ ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಇದೆ. ಬಾಲಕಿಯರು ಶೌಚಕ್ಕೆ ಪರದಾಡುವಂತಾಗಿದೆ.

ಪಟ್ಟಣದಲ್ಲಿರುವ ಶತಮಾನಗಳಷ್ಟು ಹಳೆಯದಾದ ಎಂ.ಸಿ.ಎಸ್. ಶಾಲೆ, ಸರ್ಕಾರಿ ಕೋಟೆ ಶಾಲೆ, ಉರ್ದು ಶಾಲೆ ಮೊದಲಾದವುಗಳಲ್ಲಿ ಸಮರ್ಪಕ ಶೌಚಾಲಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತಾಲ್ಲೂಕಿನ ಬರದೂರು, ಯಕ್ಲಾಸಪುರ ಹಾಗೂ ಮತ್ತಿತರ ಆಯ್ದ ಕೆಲವೇ ಶಾಲೆಗಳಲ್ಲಿ ಪಿಂಕ್ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಬರದೂರು ಶಾಲೆಯ ಪಿಂಕ್ ಶೌಚಾಲಯಕ್ಕೆ ದಿನದ 24 ಗಂಟೆಯೂ ಜೆಜೆಎಂ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ನೀರಿನ ಕೊರತೆ, ಶೌಚಾಲಯದ ಸ್ಥಿತಿ ಶೋಚನಿಯ

ಮುಳಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ನೀರಿನ ಕೊರತೆ ಕಾಡುತ್ತಿದ್ದು, ಇದರಿಂದ ಶೌಚಾಲಯ ಬಳಕೆ, ನಿರ್ವಹಣೆ ಕಷ್ಟವಾಗಿ ಅವುಗಳ ಸ್ಥಿತಿ ಶೋಚನಿಯವಾಗಿದೆ.

ಇಲ್ಲಿನ ವಿದ್ಯಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 2006ರಲ್ಲಿ ಆರಂಭಗೊಂಡಿದೆ. ಆದರೆ, ಈವರೆಗೂ ವಿದ್ಯುತ್ ಸಂಪರ್ಕ ದೊರೆತಿಲ್ಲ. ಇಲ್ಲಿ ಹಾಕಿದ ಕೊಳವೆಬಾವಿ ವ್ಯರ್ಥವಾಗಿದೆ. ಶೌಚಾಲಯ ಸ್ವಚ್ಛತೆಗಾಗಿ ನೀರು ಹೊತ್ತೇ ತರಬೇಕು. ಹೀಗಾಗಿ ಇಲ್ಲಿನ ಮಕ್ಕಳು ಶೌಚಾಲಯ ಬಳಸುತ್ತಿಲ್ಲ. ವಿದ್ಯುತ್ ಸಂಪರ್ಕ ಇದ್ದರೆ ಮೋಟರ್‌ ಅಳವಡಿಸಿ ನೀರು ಪಡೆಯಬಹುದು. ಆದರೆ, ವಿದ್ಯುತ್ ಸಂಪರ್ಕಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಶಿಕ್ಷಕ ಎಚ್.ಟಿ.ಕಟ್ಟಿಮನಿ ಹೇಳಿದರು.

ಅಂಜುಮನ್ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಶೌಚಗೃಹದ ಮುಂದೆ ಸಾಕಷ್ಟು ಕಸ ಬೆಳೆದು ನಿಂತಿದೆ. ಸ್ವಚ್ಛತೆ ಇಲ್ಲದೇ ವಿಷ ಜಂತುಗಳ ತಾಣವಾಗಿದೆ. ಹೆಣ್ಣು ಮಕ್ಕಳು ಶೌಚಗೃಹ ಬಳಸುವುದೇ ಕಷ್ಟವಾಗಿದೆ. ಶೌಚಕ್ಕೆ ನೀರಿನ ಟ್ಯಾಂಕ್ ಇಲ್ಲದೇ ದುರ್ನಾತ ಬೀರುತ್ತಿದೆ. ಇಲ್ಲಿ ಪ್ರೌಢಶಾಲೆ ಜತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು ವಿದ್ಯಾರ್ಥಿಗಳು ನಿಸರ್ಗ ಕರೆಗೆ ಬಯಲನ್ನೇ ಆಶ್ರಯಿಸಬೇಕಿದೆ.

ಶಾಲಾ ಶೌಚಾಲಯಕ್ಕೆ ದುರಸ್ತಿ ಬೇಕಾಗಿದೆ

ನರೇಗಲ್: ಹೋಬಳಿ ಹಾಗೂ ಪಟ್ಟಣದ ಹಲವು ಸರ್ಕಾರಿ ಶಾಲಾ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಶೌಚಾಲಯಗಳ ದುರಸ್ತಿ ಕಾರ್ಯ ಕೈಗೊಳ್ಳುವ ಅನಿವಾರ್ಯತೆ ಇದೆ.

ಅನೇಕ ಕಡೆಗಳಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣ ಬಳಕೆಗೆ ಹಿಂದೇಟು ಹಾಕಲಾಗುತ್ತದೆ. ಬಾಲಕಿಯರು ಶಾಲೆಯ ಸಮೀಪದ ಹೊಲದ ಬಯಲಿಗೆ ಶೌಚಕ್ಕೆ ಹೋಗುವ ದೃಶ್ಯಗಳು ಕಂಡು ಬರುತ್ತವೆ.

ಶೌಚಾಲಯ ಕೊರತೆ ವಿದ್ಯಾರ್ಥಿಗಳ ಪರದಾಟ

ಶಿರಹಟ್ಟಿ: ತಾಲ್ಲೂಕಿನ ಬಹುತೇಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ತೊಂದರೆ ಹೇಳತೀರದಾಗಿದೆ. ತಾಲ್ಲೂಕಿನಲ್ಲಿನ ಒಟ್ಟು 281 ಶಾಲೆಗಳ ಪೈಕಿ ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇದ್ದರೂ ನಿರ್ವಹಣೆ ಇಲ್ಲದೆ ಪಾಳುಬಿದ್ದು, ಗಬ್ಬು ನಾರುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಬಯಲು ಶೌಚಾಲಯ ಇಲ್ಲವೇ ಕಾಂಪೌಂಡ್‌ ಮರೆಯನ್ನೇ ಆಶ್ರಯಿಸಬೇಕಿದೆ. ಬೆರಳೆಣಿಕೆಯಷ್ಟು ಶಾಲೆಗಳಲ್ಲಿರುವ ಶೌಚಾಲಯಗಳಲ್ಲಿ ನೀರು ಮತ್ತು‌ ಸ್ವಚ್ಛತೆ ಕನಸಿನ ಮಾತಾಗಿದೆ.

ಶೌಚಾಲಯವಿಲ್ಲದ ಶಾಲೆಯಲ್ಲಿ ಹೆಣ್ಣುಮಕ್ಕಳು ಹಾಗೂ ಮಹಿಳಾ ಶಿಕ್ಷಕಿಯರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳಂತೂ ಶಾಲಾ ಎಸ್‌ಡಿಎಂಸಿಯತ್ತ ಬೆರಳು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಎಲ್ಲಾ ಶಾಲೆಗಳಿಗೆ ಸುಸಜ್ಜಿತ ಶೌಚಾಲಯ ಸೌಲಭ್ಯ ಒದಗಿಸಲು ಕ್ರಮ ವಹಿಸುತ್ತಿದೆ
ಜಿ.ಎಂ.ಬಸವಲಿಂಗಪ್ಪ, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ್‌ ಭಜಂತ್ರಿ, ನಿಂಗರಾಜ ಹಮ್ಮಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT