ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಗ್ಗಿದರೂ ಎಚ್ಚರಿಕೆಯ ನಡೆ

ಸಂಭಾವ್ಯ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಜ್ಜು; ಸಾರ್ವಜನಿಕರಿಂದ ನಿತ್ಯವೂ ನಿಯಮ ಉಲ್ಲಂಘನೆ
Last Updated 22 ಆಗಸ್ಟ್ 2021, 16:04 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದ್ದು, ಜಿಲ್ಲಾಡಳಿತ ಸಂಭಾವ್ಯ ಮೂರನೇ ಅಲೆ ಎದುರಿಸಲು ಭರದ ಸಿದ್ಧತೆ ಕೂಡ ನಡೆಸಿದೆ.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಕ್ಕಳಿಗಾಗಿಯೇ 100 ಹಾಸಿಗೆಗಳ ಪ್ರತ್ಯೇಕ ಘಟಕ ಸಿದ್ಧಪಡಿಸಲಾಗಿದೆ. 150 ವೆಂಟಿಲೇಟರ್‌ಗಳು, 100 ಐಸಿಯು ಬೆಡ್‌ಗಳು ಜಿಮ್ಸ್‌ನಲ್ಲಿವೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲೂ ಮಕ್ಕಳ ಆರೈಕೆಗಾಗಿಯೇ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

‘ಈ ಹಿಂದೆ ಜಿಮ್ಸ್‌ನಲ್ಲಿದ್ದ 13 ಕೆ.ಎಲ್‌. ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಘಟಕದ ಜತೆಗೆ ಈಗ 20 ಕೆ.ಎಲ್‌.ಸಾಮರ್ಥ್ಯದ ಮತ್ತೊಂದು ಆಮ್ಲಜನಕ ಸಂಗ್ರಹಣಾ ಘಟಕ ನಿರ್ಮಿಸಲಾಗಿದೆ. ಇದರ ಜತೆಗೆ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಗದಗ ಜಿಲ್ಲೆಗೆ ಕೋವಿಡ್‌–19 ಮೂರನೇ ಅಲೆ ಅಪ್ಪಳಿಸಿದರೆ ಕಳೆದಬಾರಿಯಂತೆ ಈ ಬಾರಿ ಆಮ್ಲಜನಕ ಕೊರತೆ ಕಾಡದು’ ಎನ್ನುತ್ತಾರೆ ಜಿಮ್ಸ್‌ ನಿರ್ದೇಶಕ ಡಾ. ಭೂಸರೆಡ್ಡಿ ಪಿ.ಎಸ್‌.

ಗದಗ ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಅರ್ಹರಿರುವ 7,98,435 ಮಂದಿ ಇದ್ದಾರೆ. ಈ ಪೈಕಿ 3,84,208 ಮಂದಿಗೆ ಕೋವಿಡ್‌–19 ಮೊದಲ ಡೋಸ್‌ ಹಾಕಲಾಗಿದ್ದು, ಶೇ 48.1ರಷ್ಟು ಗುರಿ ಸಾಧನೆಯಾಗಿದೆ. ಅದೇರೀತಿ 1,35,809 ಮಂದಿಗೆ ಎರಡನೇ ಡೋಸ್‌ ಹಾಕಲಾಗಿದ್ದು, ಶೇ 35.37ರಷ್ಟು ಗುರಿ ಮುಟ್ಟಲಾಗಿದೆ.

‘ಕೋವಿಡ್‌–19 ಲಸಿಕೆ ಪಡೆದುಕೊಳ್ಳಲು ಜನರು ಈ ಹಿಂದಿನಂತೆ ಮೌಢ್ಯ ಅಥವಾ ಭಯ ಪ್ರದರ್ಶನ ಮಾಡುತ್ತಿಲ್ಲ. ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾಮ ಪಂಚಾಯ್ತಿ ವತಿಯಿಂದ ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಲಸಿಕೆ ಹಾಕುವ ದಿನಾಂಕ, ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೊಲದ ಕೆಲಸ, ಹಬ್ಬ ಹರಿದಿನಗಳ ಸಂಭ್ರಮ, ಮದುವೆಯಂತಹ ಕಾರ್ಯಕ್ರಮಗಳಿಂದಾಗಿ ಕೆಲವರು ಲಸಿಕೆ ಹಾಕಿಸಿಕೊಳ್ಳಲು ನಿಧಾನ ಮಾಡುತ್ತಿದ್ದಾರೆ. ಈ ತರಹದ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಡೆತಡೆ ಇಲ್ಲ’ ಎನ್ನುತ್ತಾರೆ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಬಿ.ಎಂ.ಗೋಜನೂರ.

ಮೂರನೇ ಅಲೆ ನಿಯಂತ್ರಿಸಲು ಸನ್ನದ್ಧ

ಶಿರಹಟ್ಟಿ: ಸಂಭಾವ್ಯ ಕೋವಿಡ್‌ ಮೂರನೇ ಅಲೆಯನ್ನು ನಿಯಂತ್ರಿಸಲು ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮಗಳಾದ ಆಮ್ಲಜನಕ ಸಂಗ್ರಹ, ಕೋವಿಡ್‌ ರೋಗಿಗಳ ಆರೈಕೆಗೆ ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಸುಭಾಸ ದಾಯಗೊಂಡು ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 24 ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಚಿಕತ್ಸೆ ನೀಡಲಾಗಿದ್ದು, ಅವರ ಪಾಲಕರಿಗೂ ಕೋವಿಡ್‌ ಲಸಿಕೆ ನೀಡಲಾಗಿದೆ.‌ ತಾಲ್ಲೂಕಿನಲ್ಲಿ ಈವರೆಗೆ 202 ಮಕ್ಕಳಿಗೆ ಕೋವಿಡ್–19 ದೃಢಪಟ್ಟಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿದ್ದಾರೆ. ಶಿರಹಟ್ಟಿ ತಾಲ್ಲೂಕಿನಲ್ಲಿ ಶೇ 70ರಷ್ಟು ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಎರಡನೇ ಡೋಸ್‌ ಶೇ 30ರಷ್ಟಾಗಿದೆ ಎಂದು ಮಾಹಿತಿ ನೀಡಿದರು.

‘30 ಸಾವಿರ ಅಂಗನವಾಡಿ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವ ಕೆಲಸ ಪ್ರಗತಿಯಲ್ಲಿದೆ. ತಾಲ್ಲೂಕಿನ ಬೆಳ್ಳಟ್ಟಿ ಮತ್ತು ಹೆಬ್ಬಾಳ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಲಸಿಕೆ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು.

ಮೆಗಾ ಹೆಲ್ತ್‌ ತಪಾಸಣೆ

ನರೇಗಲ್:‌ ಇಲಾಖೆಯ ಮಾರ್ಗದರ್ಶನದಂತೆ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಗರ್ಭಿಣಿಯರು, ಶಿಶುಗಳು ಹಾಗೂ 18 ವರ್ಷದೊಳಗಿನ ಎಲ್ಲಾ ಮಕ್ಕಳ ಮೆಗಾ ಹೆಲ್ತ್‌ ತಪಾಸಣೆ ಕಾರ್ಯವನ್ನು ಆರೋಗ್ಯ ಸಿಬ್ಬಂದಿ ನಡೆಸಿದ್ದಾರೆಎಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ತಿಳಿಸಿದರು.

ಶಾಲೆ ಆರಂಭವಾದರೆ ನಮ್ಮ ವ್ಯಾಪ್ತಿಯ ಶಾಲೆಗಳಿಗೂ ಹೋಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಲಸಿಕೆ ನೀಡುವ ಕಾರ್ಯವು ಭರದಿಂದ ನಡೆದಿದೆ ಎಂದು ತಿಳಿಸಿದ್ದಾರೆ.

ನಿಧಾನಗತಿಯಲ್ಲಿ ಲಸಿಕೆ ಕಾರ್ಯ

ಲಕ್ಷ್ಮೇಶ್ವರ: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ಹಾಕುವುದೇ ಕೊನೆಯ ದಾರಿ ಎಂದು ಸರ್ಕಾರ ನಿರ್ಧರಿಸಿದ್ದು ಈ ಹಿನ್ನಲೆಯಲ್ಲಿ ಎಲ್ಲರಿಗೂ ಲಸಿಕೆ ಹಾಕಲು ಯೋಜನೆ ರೂಪಿಸಿದೆ. ಆದರೆ ಲಸಿಕೆ ಹಾಕುವ ಕಾರ್ಯ ಮಾತ್ರ ನಿಧಾನಗತಿಯಲ್ಲಿ ಸಾಗಿದೆ.

ತಾಲ್ಲೂಕಿನಲ್ಲಿ ಈವರೆಗೆ ಶೇ 46ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿಸಂಖ್ಯೆಗಳು ಬಹಿರಂಗ ಪಡಿಸಿವೆ.

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯ್ತಿಗಳು ಇದ್ದು ಅವುಗಳಲ್ಲಿ ರಾಮಗಿರಿ ಶೇ 53, ಪುಟಗಾಂವ್‍ಬಡ್ನಿ ಶೇ 100, ಯಳವತ್ತಿ ಶೇ 36, ಮಾಡಳ್ಳಿ ಶೇ 99.39, ಗೊಜನೂರು ಶೇ 89, ಅಡರಕಟ್ಟಿ ಶೇ 30, ಆದರಹಳ್ಳಿ ಶೇ 36, ಬಾಲೆಹೊಸೂರು ಶೇ 54, ಬಟ್ಟೂರು ಶೇ 34, ದೊಡ್ಡೂರು ಶೇ 38, ಗೋವನಾಳ ಶೇ 30, ಹುಲ್ಲೂರು ಶೇ 34, ಶಿಗ್ಲಿ ಶೇ 42, ಸೂರಣಗಿ ಶೇ 38ರಷ್ಟು ಗುರಿ ಸಾಧನೆಯಾಗಿದೆ.

‌ಇವುಗಳಲ್ಲಿ ಪುಟಗಾಂವ್‍ಬಡ್ನಿ ಮತ್ತು ಮಾಡಳ್ಳಿ ಗ್ರಾಮ ಪಂಚಾಯ್ತಿಗಳನ್ನು ಹೊರತು ಪಡಿಸಿದರೆ ಇನ್ನೂ ಸಾಕಷ್ಟು ಜನರಿಗೆ ಲಸಿಕೆ ನೀಡುವುದು ಬಾಕಿ ಉಳಿದಿದೆ.

‘ಸದ್ಯ ಹಳ್ಳಿಗಳಲ್ಲಿ ಒಕ್ಕಲುತನದ ಕೆಲಸಗಳು ಜೋರಾಗಿವೆ. ಹೀಗಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿಲ್ಲ’ ಎಂದು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್. ಹಿರೇಮಠ ಹೇಳುತ್ತಾರೆ. ಆದರೆ, ಸರಿಯಾಗಿ ಲಸಿಕೆ ಪೂರೈಕೆ ಆಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಆರೋಗ್ಯ ನಂದನ ಯೋಜನೆ

ಮುಳಗುಂದ: ಪಟ್ಟಣ ಸೇರಿದಂತೆ ಗದಗ ತಾಲ್ಲೂಕಿನಲ್ಲಿ ಕೋವಿಡ್–19 ಎರಡನೇ ಅಲೆ ತೀವ್ರತೆ ಹೆಚ್ಚಿತ್ತು. ಸಾಕಷ್ಟು ಜನರು ಸೋಂಕಿಗೆ ತುತ್ತಾಗಿ ಸಾವುಗಳು ಸಂಭವಿಸಿದ್ದವು. ಸದ್ಯ ಸೋಂಕಿನ ಭಯ ಕಡಿಮೆ ಆಗಿದ್ದರೂ ಮತ್ತೇ ಮೂರನೇ ಅಲೆ ಬರುವ ಸೂಚನೆ ಇರುವುದರಿಂದ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಂಡಿದೆ.

‘ಜಿಮ್ಸ್‌ನಲ್ಲಿ 100 ಹಾಸಿಗೆ ಸೇರಿದಂತೆ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಸಹಿತ 20 ಹಾಸಿಗೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ’ ಎಂದು ಗದಗ ತಾಲ್ಲೂಕು ಆರೋಗ್ಯಾಧಿಕಾರಿ ಎಸ್.ಎಸ್.ನೀಲಗುಂದ ಮಾಹಿತಿ ನೀಡಿದರು.

ಮಕ್ಕಳ ತಜ್ಞರ ಕೊರತೆ

ರೋಣ: ಮೂರನೇ ಅಲೆ ಎದುರಿಸುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆರೋಗ್ಯ ಕೇಂದ್ರ ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದೆ. ಆದರೆ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರ ಕೊರತೆ ಕಾಡುತ್ತಿದೆ.

ಪರಿಸ್ಥಿತಿಗೆ ಅನುಗುಣವಾಗಿ ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞರ ಸಹಾಯ ಪಡೆಯಲು ಇಲಾಖೆಯ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ದಾರೆ. ಈಗಾಗಲೇ ರೋಣ ಕೇಂದ್ರದಲ್ಲಿ ಅಪೌಷ್ಟಿಕ ಮಕ್ಕಳ ಶಿಬಿರಗಳನ್ನು ನಡೆಸಿ, ಪೌಷ್ಟಿಕ ಆಹಾರ ಹಾಗೂ ಆರೈಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕಾ ಆರೋಗ್ಯ ವೈದ್ಯಾಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ತಿಳಿಸಿದರು.

ಗಡಿಗಳಲ್ಲಿ ತಪಾಸಣೆ ಆರಂಭಿಸಿ

ಮುಂಡರಗಿ: ಕೋವಿಡ್-19 ನಿಯಂತ್ರಿಸುವ ಕುರಿತಂತೆ ತಾಲ್ಲೂಕಿನಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಕೊರೊನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವ ಕಾರಣದಿಂದ ಸಾರ್ವಜನಿಕರು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ನಿರ್ಭಯದಿಂದ ಮನ ಬಂದಂತೆ ತಿರುಗಾಡುತ್ತಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಜನರಲ್ಲಿದ್ದ ಭಯವನ್ನು ನಿವಾರಿಸಿದೆ.

ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಲಾಗಿದೆ. ಸೇತುವೆಯಾಚೆ ಬಳ್ಳಾರಿ ಜಿಲ್ಲೆ ಪ್ರಾರಂಭವಾಗುತ್ತದೆ. ಅದೇರೀತಿ ಮುಂಡರಗಿ ಪಟ್ಟಣದಿಂದ ಒಂದು ಕಿ.ಮೀ. ಅಂತರದಲ್ಲಿ ಕೊಪ್ಪಳ ಜಿಲ್ಲಾ ಗಡಿ ಪ್ರಾರಂಭವಾಗುತ್ತದೆ. ಅದರೆ ಈ ಎರಡೂ ಅಂತರ ಜಿಲ್ಲಾ ಗಡಿಗಳಲ್ಲಿ ಅಧಿಕಾರಿಗಳು ಯಾವ ತಪಾಸಣೆಯನ್ನೂ ಮಾಡುತ್ತಿಲ್ಲ. ಹೀಗಾಗಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಜನರು ನಿರಾಯಾಸವಾಗಿ ಪಟ್ಟಣಕ್ಕೆ ಬರುತ್ತಿದ್ದಾರೆ.

ಅಂತರ ಜಿಲ್ಲಾ ಗಡಿ ಭಾಗಗಳಲ್ಲಿ ಕೊರೊನಾ ತಪಾಸಣೆ ಕೈಬಿಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ ಲಸಿಕೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ವೇಗ ತುಂಬಬೇಕಿದೆ. ಇಲ್ಲದಿದ್ದಲ್ಲಿ ಕೊರೊನಾ ಮೂರನೇ ಅಲೆ ತೀವ್ರ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಐಸಿಯು, ಬೆಡ್‌, ಆಮ್ಲಜನಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮಾತ್ರೆ, ಔಷಧಿ, ಲಸಿಕೆಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ

ಡಾ. ಎಚ್.ಎಲ್. ಗಿರಡ್ಡಿ, ತಾಲ್ಲೂಕಾ ವೈದ್ಯಾಧಿಕಾರಿ

18 ವರ್ಷದೊಳಗಿನ ಮಕ್ಕಳಿಗಾಗಿ ‘ಆರೋಗ್ಯ ನಂದನ ಯೋಜನೆ’ ಅಡಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇದು ಮುಂದಿನ 20 ದಿನಗಳಲ್ಲಿ ಪೂರ್ಣಗೊಳ್ಳಲಿದೆ

ಡಾ. ಎಸ್‌.ಎಸ್‌.ನೀಲಗುಂದ, ಗದಗ ಟಿಎಚ್‌ಒ

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಖಲೀಲಅಹ್ಮದ ಶೇಖ, ಚಂದ್ರು ಎಂ.ರಾಥೋಡ್‌, ನಾಗರಾಜ ಎಸ್‌.ಹಣಗಿ, ಕಾಶೀನಾಥ ಬಿಳಿಮಗ್ಗದ, ಡಾ. ಬಸವರಾಜ ಹಲಕುರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT