ಬರಿದಾದ ಕೆಂಪಗೆರೆ:ನೀರಿಗಾಗಿ ಪರದಾಟ

7
15 ದಿನಗಳಿಗೊಮ್ಮೆ ನೀರು ಪೂರೈಕೆ; ಕೆಂಪಗೆರೆ ತುಂಬಿಸಲು ಸಾರ್ವಜನಿಕರ ಆಗ್ರಹ

ಬರಿದಾದ ಕೆಂಪಗೆರೆ:ನೀರಿಗಾಗಿ ಪರದಾಟ

Published:
Updated:

ನರಗುಂದ:ಮಳೆಗಾಲ ಮುಗಿಯುವ ಮುನ್ನವೇ ನರಗುಂದ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ನಗರಕ್ಕೆ ಕುಡಿಯುವ ನೀರಿನ ಏಕೈಕ ಮೂಲವಾಗಿರುವ ಕೆಂಪಗೆರೆ ಬರಿದಾಗಿದ್ದು, ಜಲಕ್ಷಾಮ ಉಲ್ಬಣಿಸಿದೆ.

‘ಸದ್ಯ ಕೆರೆಯ ತಳಮಟ್ಟದಲ್ಲಿರುವ ಕೆಸರು ಮಿಶ್ರಿತ ನೀರು 15 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಇದು ಸಂಪೂರ್ಣ ರಾಡಿಯಾಗಿದೆ. ಅಧ್ಯಾಪಕ ನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಈ ನೀರು ಶುದ್ಧೀಕರಣವಾಗದೆ ನೇರವಾಗಿ ಪೂರೈಕೆಯಾಗುತ್ತಿದೆ.ಇದನ್ನು ಕುಡಿದು ಜನರು ಕಾಯಿಲೆಗೆ ತುತ್ತಾಗಿದ್ದಾರೆ.

ಮಲಪ್ರಭಾ ಜಲಾಶಯದಿಂದ ನೀರು ಹರಿಸಿದರೆ ಮಾತ್ರ ಕೆಂಪಗೆರೆ ತುಂಬುತ್ತದೆ. ಒಂದು ತಿಂಗಳಿನ ಹಿಂದೆಯೇ ಇಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಆದರೆ, ಇದರ ಬಗ್ಗೆ ತಾಲ್ಲೂಕಾಡಳಿತ, ಪುರಸಭೆ, ಜಿಲ್ಲಾಡಳಿತ ಕ್ರಮ ವಹಿಸಿಲ್ಲ. ಹೀಗಾಗಿ ನೀರಿಲ್ಲದೆ ಜನರು ತೊಂದರೆಗೆ ಸಿಲುಕಿದ್ದಾರೆ.

‘15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಆ ನೀರು ಸಂಪೂರ್ಣ ಕಲುಷಿತವಾಗಿದೆ. ಮುಖ ತೊಳೆಯಲು ಹೋದರೆ ಕೆಟ್ಟ ವಾಸನೆ ಬರುತ್ತದೆ. ಕುಡಿಯುವುದು ದೂರದ ಮಾತು’ ಎಂದು ಪಟ್ಟಣದ ಕೃಷ್ಣ ಮಹಾಲಿನಮನಿ ಆರೋಪಿಸಿದರು.

ಮಲಪ್ರಭಾ ಜಲಾಶಯದಿಂದ ಕೆರೆಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ವಿಭಾಗೀಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ವಾರ ನೀರು ಬರಬಹುದು
ಎನ್‌.ಎಸ್‌.ಪೆಂಡ್ಸೆ, ಪುರಸಭೆ ಮುಖ್ಯಾಧಿಕಾರಿ

ಶಾಸಕ ಸಿ.ಸಿ ಪಾಟೀಲ ಎಚ್ಚರಿಕೆ

ನರಗುಂದಲ್ಲಿನ ಕೆರೆಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ಉದ್ದೇಶಕ್ಕೆ ನೀರು ತುಂಬಿಸುವಂತೆ ಒಂದೂವರೆ ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಇದುವರೆಗೂ ಸ್ಪಂದಿಸಲಿಲ್ಲ. ಆಗ ಜಮೀನುಗಳಲ್ಲಿ ಯಾವುದೇ ಬೆಳೆ ಇದ್ದಿಲ್ಲ. ಇದೀಗ ಮತ್ತೆ ನೀರು ಬಿಟ್ಟರೆ, ಅದನ್ನು ರೈತರು ತಮ್ಮ ಜಮೀನಿಗೆ ಬಿಟ್ಟುಕೊಳ್ಳುತ್ತಾರೆ ಎಂಬ ನೆಪವೊಡ್ಡುತ್ತಿದ್ದಾರೆ. ‘80ರ ದಶಕದಲ್ಲಿ ನೀರಿಗಾಗಿಯೇ ಪಟ್ಟಣದಲ್ಲಿ ದಂಗೆ ನಡೆದಿದ್ದನ್ನು ಅಧಿಕಾರಿಗಳು ಮರೆಯಬಾರದು’ ಎಂದು ಶುಕ್ರವಾರ ಗದುಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನರಗುಂದ ಶಾಸಕ ಸಿ.ಸಿ ಪಾಟೀಲ ಎಚ್ಚರಿಕೆ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !