ನಾರಾಯಣಪುರ ಶಾಲೆಗೆ ಶೀಘ್ರ ಭೇಟಿ: ಬಿಇಒ

6
ಗ್ರಾಮದ ದೇವಸ್ಥಾನದ ಆವರಣದಲ್ಲಿ ಎಂಜಿನಿಯರಿಂಗ್‌ ಪದವೀಧರನಿಂದ ಮಕ್ಕಳಿಗೆ ಪಾಠ

ನಾರಾಯಣಪುರ ಶಾಲೆಗೆ ಶೀಘ್ರ ಭೇಟಿ: ಬಿಇಒ

Published:
Updated:
Deccan Herald

ಡಂಬಳ: ‘ಹೋಬಳಿಯ ನಾರಾಯಣಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹಳ್ಳಿಗುಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ, ಈ ಶಾಲೆಯ ಮುಖ್ಯ ಶಿಕ್ಷಕ ಸರಿಯಾಗಿ ಪಾಠ ಮಾಡುವುದಿಲ್ಲ ಎಂದು ಆರೋಪಿಸಿ ಕೆಲವು ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸಿದ್ದರು.

ಇದಕ್ಕೆ ಪರ್ಯಾಯವಾಗಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ರಮೇಶ ವಡವಿ ಎಂಬ ಎಂಜಿನಿಯರಿಂಗ್‌ ಪದವೀಧರ ತಾತ್ಕಾಲಿಕವಾಗಿ ತರಗತಿ ಪ್ರಾರಂಭಿಸಿ, ಕಳೆದ 4 ದಿನಗಳಿಂದ ಪಾಠ ಪ್ರಾರಂಭಿಸಿದ್ದರು.

‘ಇದೇ ಶಾಲೆಯ ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಹಾಕಿದ್ದೆ. ಆದರೆ, ಶಿಕ್ಷಕ ಹುದ್ದೆಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ ಇಲ್ಲ ಎಂದು ಅರ್ಜಿ ತಿರಸ್ಕರಿಸಿದ್ದಾರೆ.ಶಿಕ್ಷಕರ ನಿರ್ಲಕ್ಷ್ಯದಿಂದ ನಮ್ಮೂರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರ ಕಲಿಕೆಗೆ ಅಡ್ಡಿಯಾಗಬಾರದು ಎಂದು ತಾತ್ಕಾಲಿಕವಾಗಿ ದೇವಸ್ಥಾನದ ಆವರಣದಲ್ಲಿ ತರಗತಿ ಪ್ರಾರಂಭಿಸಿದ್ದೇನೆ’ ಎಂದು ರಮೇಶ ಹೇಳಿದರು.

‘ರಮೇಶ ಅವರ ಕಾರ್ಯಕ್ಕೆ ಎಲ್ಲ ಪಾಲಕರು ಸಹಕಾರ ನೀಡಿದ್ದೇವೆ. ಶಿಕ್ಷಕರನ್ನು ಬದಲಿಸುವ ತನಕ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕವಲೂರ, ಉಪಾಧ್ಯಕ್ಷೆ ರೇಣುಕಾ ಕ್ಯಾಸಲಾಪೂರ ಹೇಳಿದರು.
‘ಅತಿಥಿ ಶಿಕ್ಷಕ ಹುದ್ದೆ ಸಿಗದ ಹಿನ್ನೆಲೆಯಲ್ಲಿ, ರಮೇಶ ಅವರು, ಕೆಲವು ಪಾಲಕರ ಮೇಲೆ ಒತ್ತಡ ಹಾಕಿ, ಮಕ್ಕಳಿಗೆ ದೇವಸ್ಥಾನದಲ್ಲಿ ಪಾಠ ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ವ್ಯಕ್ತಿಗಳು ದೂರಿದರು.
ಶನಿವಾರ ಸರ್ಕಾರಿ ಶಾಲೆಗೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಮುಖ್ಯ ಶಿಕ್ಷಕ ಇವರಿಬ್ಬರಿಗಷ್ಟೇ ಪಾಠ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !