ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಲ ಸ್ವಾಮಿಗಳಿಗೆ ತೆಲಿ ಮ್ಯಾಲ ಕೊಂಬು ಮೂಡ್ಯಾವ’

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಾದಾಮಿ ಸನಿಹದ ಮಲಪ್ರಭಾ ದಂಡೆಯಲ್ಲಿರುವ ಶಿವಯೋಗ ಮಂದಿರ ಶುದ್ಧಾನುಶುದ್ಧ ಜಂಗಮ ಆಧ್ಯಾತ್ಮಿಕ ಕೇಂದ್ರ. ವೀರಶೈವ- ಲಿಂಗಾಯತ ವಟುಗಳಿಗೆ ದೀಕ್ಷೆ- ಶಿಕ್ಷಣ ನೀಡಿ ಸನ್ಯಾಸ ಬದುಕಿಗೆ ಸಿದ್ಧಗೊಳಿಸುವ ಸಂಸ್ಥೆ. ಸಾವಿರಾರು ಮಠಾಧೀಶರು ಇಲ್ಲಿಂದ ತರಬೇತಿ ಪಡೆದಿದ್ದಾರೆ. ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸ ಉಳ್ಳ ಈ ಮಂದಿರದ ಸ್ಥಾಪಕರು ಹಾನಗಲ್ ಕುಮಾರಸ್ವಾಮಿಯವರು. ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಈ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಬೇಡಿಕೆಯನ್ನು ಮಾನ್ಯ ಮಾಡಬಾರದೆಂಬ ಸಲಹೆಯನ್ನು ಶಿವಯೋಗ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಡಾ. ಸಂಗನಬಸವ ಸ್ವಾಮೀಜಿ ನೀಡಿದ್ದರು. ಶಾ ಈ ಸಲಹೆಯನ್ನು ಮಾನ್ಯ ಮಾಡುವುದಾಗಿ ಹೇಳಿದ್ದರು. ಲಿಂಗಾಯತ- ವೀರಶೈವ ಕುರಿತು ಸ್ವಾಮೀಜಿ ಜೊತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ:

l ಲಿಂಗಾಯತ-ವೀರಶೈವ ಚಳವಳಿ ಕುರಿತು ತಮ್ಮ ನಿಲುವೇನು?

ಏನೂ ಪ್ರಯೋಜನ ಆಗಲ್ಲ, ಸಾಮಾನ್ಯ ಜನರಿಗಂತೂ ವೀರಶೈವ- ಲಿಂಗಾಯತ ಅಂತ ತಲ್ಯಾಗೇ ಇಲ್ಲ. ಹಳ್ಯಾಗ ಲಿಂಗಾಯತರು ಅಂತ ಕರೆದರೆ, ಪಟ್ಟಣಗಳಲ್ಲಿ ವೀರಶೈವರು ಅಂತಾರ. ಅವರೂ ಲಿಂಗ ಕಟ್ತಾರ, ಇವರೂ ಲಿಂಗ ಕಟ್ತಾರ, ಅವರೂ ಲಿಂಗಪೂಜೆ, ಇವರೂ ಲಿಂಗಪೂಜೆ ಮಾಡತಾರ. ಅವರೂ ಪಾದಪೂಜೆ ಮಾಡತಾರ ಇವರೂ ಮಾಡತಾರ. ಚಳವಳಿಯನ್ನು ಬೆಂಬಲಿಸಿರುವ ಹಲವು ಸ್ವಾಮಿಗೋಳು ಇಲ್ಲೇ ಶಿವಯೋಗ ಮಂದಿರದಲ್ಲಿ ಓದಿ ಹೋದೋರು ಹೌದು. ಆದರೆ ಅವರಿಗೆ ಈಗ ತೆಲಿ ಮ್ಯಾಲ ಕೊಂಬು ಮೂಡ್ಯಾವ.

l ಲಿಂಗಾಯತವು ಹಿಂದೂ ಧರ್ಮ ಅಲ್ಲ ಅಂತಾರೆ...

ಎಲ್ಲ ಹಿಂದೂನೆ. ಜೈನ ಧರ್ಮ ಎಲ್ಲಿ ಹುಟ್ಟಿತು, ಬೇಸಿಸ್ ಏನು ಅದಕ್ಕೆ? ಬೌದ್ಧ, ಸಿಖ್, ಜೈನ ಎಲ್ಲ ಅಲ್ಲೇ ಹಿಂದುತ್ವದಲ್ಲೇ ಹುಟ್ಯಾವ. ತತ್ವ, ಸಿದ್ಧಾಂತ ಆಚರಣೆ ಬೇರೆ ಇರಬಹುದು. ಆದರೆ ಹುಟ್ಟಾಕ ಮೊದಲ ಒಂದು ಆಧಾರ ಬೇಕಲ್ಲ. ಹಿಂದೂ ಧರ್ಮವೇ ಎಲ್ಲಕ್ಕೂ ಆಧಾರ. ಅದರ ಮೇಲೇ ನಿಂತಿದೆ ಎಲ್ಲ.

l ವೀರಶೈವವು ಬಸವತತ್ವವನ್ನು ಹಿಂದಕ್ಕೆ ಹಾಕಿದೆ ಎಂಬ ಅಸಮಾಧಾನವಿದೆಯಲ್ಲ...

ಬಸವತತ್ವಾನ ಬ್ಯಾರೇ ಮಾಡಾಕ ಹೊಂಟಾರ. ಎಲ್ಲರನ್ನೂ ಸಮಾನವಾಗಿ ಕಂಡ ಧರ್ಮ ಬಸವತತ್ವ. ಕಾಯಕ ಸಮಾನತೆ, ದಾಸೋಹಕ್ಕೆ ಹೆಚ್ಚಿನ ಮಹತ್ವ ಕೊಟ್ಟವರು ಬಸವಣ್ಣ.

l ಅಡ್ಡಪಲ್ಲಕ್ಕಿ, ಕಿರೀಟ ಧಾರಣೆ ಬೇಡ ಅಂತಾರೆ...

ಅದಕ್ಯಾಕ ಮಹತ್ವ ಕೊಡಬೇಕು. ಮಾಡೋರು ಮಾಡ್ತಾರ ಮಾಡಿಸಿಗೊಳ್ಳೋರು ಮಾಡಿಸಿಗೊಳತಾರ. ಇಬ್ಬರೂ ತಯಾರದಾರ. ಎಲ್ಲ ಕಡೀ ನಡೀತದೇನು... ಇಲ್ಲ. ನಾವೆಲ್ಲ ಒಂದು, ಸಾಮರಸ್ಯ ಸದ್ಭಾವನೆಗೆ ಪ್ರಯತ್ನ ಮಾಡಬೇಕು. ಮೊದಲ ಹಲವಾರು ಒಳಪಂಗಡಗಳಿಂದ ಈ ಧರ್ಮ ಜರ್ಝರಿತ ಆಗ್ಯಾದ. ನೀವ್ಯಾರು ಅಂತ ಕೇಳಿದರ ಬಣಜಿಗ, ಪಂಚಮಸಾಲಿ ಅಂತಾರ. ಲಿಂಗಾಯತ ವೀರಶೈವ ಅನ್ನಾಕ ಸಹಿತ ತಯಾರಿಲ್ಲ.

l ವೀರಶೈವರು ತಮ್ಮನ್ನು  ಕೀಳಾಗಿ ನೋಡುತ್ತಾರೆಂ ಬುದು ಲಿಂಗಾಯತ ಚಳವಳಿಯ ದೂರು...

ಲಿಂಗಾಯತ ಈಗ ಹುಟ್ಟೇತಿ, ಮೊದಲ ಎಲ್ಲಿತ್ತು ಲಿಂಗಾಯತ? 12ನೇ ಶತಮಾನದಾಗೂ ಲಿಂಗಾಯತ ವೀರಶೈವ ಎರಡೂ ಒಂದ, ಬ್ಯಾರೇ ಬ್ಯಾರೇ ಇರಲಿಲ್ಲ. ಬಸವಣ್ಣನವರು ತಮ್ಮ ವಚನದಾಗ ಹೇಳ್ಯಾರಲ್ಲ, ಶೈವನಾದ ನಾನು ವೀರಶೈವನಾದೆ ಅಂತ. ಅವರ ವಚನಗಳಲ್ಲಿ ಲಿಂಗಾಯತ ಪ್ರಯೋಗವೇ ಇಲ್ಲ. ಇದ್ದರ ಹುಡುಕ್ಕೊಂಬರ್ರೀ.

l ಪಂಚಾಚಾರ್ಯರು ತಾವು ಶ್ರೇಷ್ಠ ಅನ್ನೋ ಭಾವನೆಯಿಂದ ಕೆಳಗೆ ಇಳಿದು ಬರಲಿ ಎಂಬುದು ಲಿಂಗಾಯತ ಚಳವಳಿಯ ಆಗ್ರಹ...

ಅವರು ಬಂದಾರಲ್ರೀ ಇಳದು...ತಮ್ಮ ಆಸನ ಒಂದು ಫೂಟು ಹೆಚ್ಚಿರಬೇಕು ಅಂತಿದ್ರು. ಒಂದು ಫೂಟು ಹೆಚ್ಚಿದ್ರೇ ನಾವು ಬರತೇವಿ ಅಂತಿದ್ರು. ಬಸವತತ್ವಕ್ಕೆ ಹೊಂದಿಕೊಂಡಾರಲ್ಲ.

l ಎಂ.ಬಿ.ಪಾಟೀಲ, ಬಿ.ಎಸ್.ಹೊರಟ್ಟಿ, ವಿನಯ ಕುಲಕರ್ಣಿ ಅವರ ಕುರಿತು ವೀರಶೈವರು ಆಗ್ರಹ ತಳೆದಿದ್ದಾರೆ…

ಅವರ ಬಗ್ಗೆ ನಾವು ತೆಲಿ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ಬಂದೇತಿ. ಜನರೇ ಅವರಿಗೆ ಬುದ್ಧಿ ಕಲಸ್ತಾರ. ನಾವು ತೆಲಿ ಕೆಡಿಸಿಗೊಳೋ ಅಗತ್ಯ ಇಲ್ಲ. ದೇವರು ಒಳ್ಳೆ ಬುದ್ಧಿ ಕೊಡಲೆಪಾ ಅಂತೀವಿ. ಏನೇನಾಗೂದೈತಿ ಅದೆಲ್ಲ ಆಗಲೇಬೇಕು. ತಪ್ಪಸಾಕಾ ಬರ್ತಾತೇನೂ... ಇಲ್ಲ. ಪಾಕಿಸ್ತಾನ ಹಿಂದೂಸ್ತಾನ ಒಂದಾಗಿರಬೇಕಂತ ಪ್ರಯತ್ನ ಮಾಡಿದರು. ಆಗಲಿಲ್ಲ. ಅದರ ಫಲಾ ಊಟ ಮಾಡಿಕೋತ ಬಂದೇವು. ಈಗಲೂ ಹಂಗಾ ಅಕ್ಕೇತಿ. ಫಲವನ್ನ ವೀರಶೈವರೂ ಉಣಬೇಕು, ಲಿಂಗಾಯತರೂ ಉಣಬೇಕು.

l ವೈದಿಕ ಆಚರಣೆ ಕೈಬಿಡಬೇಕು ವೀರಶೈವ ಎನ್ನುತ್ತಿದೆ ಲಿಂಗಾಯತ...

ವೈದಿಕ ಆಚರಣೆ ಅಂದರೇನು... ಅದರಿಂದ ಏನು ಯಾರರೆ ನರಕಕ್ಕ ಹೋಗತಾರೇನು. ವೈದಿಕ ಆಚರಣೆ ಯಾರನರೆ ಕೊಲ್ಲು ಅಂತದಾ, ಬಡಿ ಅಂತದಾ? ಯಜ್ಞ ಯಾಗ ಹೋಮ ವಿಶ್ವಾಸ ಐತೀ, ಮಾಡತಾರ. ಲಿಂಗಪೂಜೆ ಮಾಡಿಕೊಂಡು ಕೂರಾವರು ಕುಂದರಲೀ.

l ಬಸವಣ್ಣನವರನ್ನು ಗುರು ಅಂತ ವೀರಶೈವರು ಒಪ್ಪಲ್ಲ ಅಂತ ಅವರದು ತಕರಾರು...

ಗುರು ಅಂತ ಒಪ್ಪಿದರೇನೇ ಬಸವಣ್ಣನ್ನ ಒಪ್ಪಿದಾಂಗೇನ್ರೀ. ಗುರು ಯಾರು, ಲಿಂಗ ಯಾರು, ಜಂಗಮ ಯಾರು, ವಿಭೂತಿ ಯಾರು, ರುದ್ರಾಕ್ಷಿ ಯಾರು ಅಂತ ವೀರಶೈವದಾಗ ಒಂದು ಪದ್ಧತೀನೇ ಐತಿರೀ. ಗುರುವಿಗಿಂತ ಹೆಚ್ಚಿನ ಸ್ಥಾನದಾಗ ಅದಾನ ಬಸವಣ್ಣ. ನೀವ್ಯಾಕ ಆತನ್ನ ತಂದು ಗುರುವಿನ ಸ್ಥಾನದಾಗ ಕುಂದರಿಸ್ತೀರಿ. ಎಲ್ಲ ಗುರುಗಳಿಗೆ, ಎಲ್ಲ ಜಂಗಮರಿಗೆ ದೊಡ್ಡಾತ ಆಗ್ಯಾನ ಅಂವ. ಜಗತ್ತೇ ಪೂಜೆ ಮಾಡ್ತದ. ವಿಶ್ವ ವಿಭೂತಿ ಪುರುಷಾಗ್ಯಾನ. ಗುರುಗಳ ಸಾಲಿಗೆ ಯಾಕ ಕುಂದರಿಸ್ತೀರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT