ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಖಿಯರ ದೃಷ್ಟಿಯಲ್ಲಿ ‘ಸಂಧಾನ’

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಮಹಾಭಾರತ, ರಾಮಾಯಣಗಳು ಕ್ಷಯವಾಗದ ಕಥಾಸಂಕಲಗಳು. ಎಲ್ಲ ಕಾಲದಲ್ಲಿಯೂ, ಎಲ್ಲ ಪ್ರದೇಶಗಳಲ್ಲಿಯೂ ಈ ಮಹಾಕಾವ್ಯಗಳ ಉಪಕತೆಗಳು ನಾಟಕ, ಯಕ್ಷಗಾನ, ಗೀತೆ, ನೃತ್ಯ ಸೇರಿದಂತೆ ವಿವಿಧ ಜನಪದ ಪ್ರಕಾರಗಳಾಗಿ ಜನರ ಮನದಲ್ಲಿ ಅಚ್ಚೊತ್ತಿವೆ. ಪ್ರತಿ ಓದುಗನ ಗ್ರಹಿಕೆಗೆ ಭಿನ್ನವಾಗಿ ಕಾಣುವ ಈ ಕಥಾಸಾರದ ಎಲ್ಲ ಪಾತ್ರಗಳು ಅವರರವರ ಭಾವಕ್ಕೆ ಎನ್ನುವಂತೆ ಭಿನ್ನ ನಿರೂಪಣೆ, ದೃಷ್ಟಿಕೋನ ಪಡೆದಿವೆ.

ಸುರಭಿ ವಸಿಷ್ಟ್‌ ಅವರು ಸಹ ಮಹಾಭಾರತದ ಕೃಷ್ಣ ಸಂಧಾನವನ್ನು ಮುಖ್ಯವಾಗಿಟ್ಟುಕೊಂಡು ‘ಸಂಧಾನ’ ನಾಟಕ ನಿರ್ದೇಶಿಸಿದ್ದಾರೆ. ಎಚ್‌.ಎಸ್‌.ವೆಂಕಟೇಶಮೂರ್ತಿ ರಚನೆಯ ಈ ನಾಟಕದಲ್ಲಿ ಗಾಂಧಾರಿ ದೃಷ್ಟಿಕೋನದಲ್ಲಿ ಸಂಧಾನವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಸುರಭಿ ಅವರ ‘ಸಂಧಾನ’ದಲ್ಲಿ ಅಲ್ಲಿನ ದಾಸಿಯರು ಅಥವಾ ಸಖಿಯರೇ ಪ್ರಮುಖರು. ಅವರ ಮೂಲಕ ನಾಟಕ ತೆರೆದುಕೊಳ್ಳುತ್ತದೆ. ದಾಸಿಯರನ್ನು ಕೇಂದ್ರವಾಗಿಟ್ಟುಕೊಂಡು ಲಿಂಗ ಸಂವೇದನೆ, ಪಿತೃಪ್ರಧಾನ ಸಮಾಜದಲ್ಲಿನ ಮಹಿಳೆಯ ತಲ್ಲಣಗಳನ್ನು ಮುನ್ನೆಲೆಗೆ ತಂದಿದ್ದಾರೆ.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯ ಕೇವಲ ಸ್ತ್ರೀಯರಿಗೆ ಮಾತ್ರ ಮುಳುವಾಗಿಲ್ಲ. ಪುರುಷರನ್ನೂ ಅದು ಹೇಗೆ ಕಾಡುತ್ತಿದೆ ಎನ್ನುವುದರ ಮೇಲೆ ಈ ‘ಸಂಧಾನ’ ಬೆಳಕು ಚೆಲ್ಲಲಿದೆ. ಆದರ್ಶ ಮಹಿಳೆ, ಆದರ್ಶ ಪುರುಷ ಎಂದರೆ ಯಾರು? ‘ಆದರ್ಶ’ದ ಮಾನದಂಡ ರೂಪಿಸಿದವರಾರು? ಎಂಬ ತರ್ಕಗಳನ್ನು ನಾಟಕ ಪ್ರೇಕ್ಷಕರ ಮುಂದಿಡಲಿದೆ. ‘ಮಾದರಿ ಪುರುಷತ್ವ’ವನ್ನು ಕಾಪಾಡಿಕೊಳ್ಳಲು ಪುರುಷ ತನ್ನ ನೈಜ ಭಾವನೆಗಳನ್ನು ಅದುಮಿಡಬೇಕಾದ ಬಗೆಯನ್ನೂ ಇದು ಕಟ್ಟಿಕೊಡುತ್ತದೆ.

‘ಮಹಾಭಾರತ ಕಾಲದ ಸಮಾಜದಲ್ಲಿನ ‘ಪಿತೃಪ್ರಾಧಾನ್ಯ’ ಎನ್ನುವ ಅಹಂ ಭಾವವೇ ಯುದ್ಧಕ್ಕೆ ಕಾರಣ. ದುರ್ಯೋಧನನಿಗೆ ಯದ್ಧ ಇಷ್ಟವಿಲ್ಲದಿರಬಹುದು. ಆದರೆ ಕೃಷ್ಣನ ಒತ್ತಡ ಆತನಲ್ಲಿ ಯುದ್ಧಕ್ಕೆ ಪ್ರೇರೆಪಿಸಿತು. ಕೃಷ್ಣ ಮಹಾಭಾರತದ ಖಳನಾಯಕ ಮಾತ್ರವಲ್ಲ ಸಮಕಾಲೀನ ಸಮಾಜದ ರೂಪಕವಿದ್ದಂತೆ ಅದನ್ನೇ ಈ ನಾಟಕದಲ್ಲಿ ಹೇಳ ಹೊರಟಿದ್ದೇನೆ’ ಎನ್ನುತ್ತಾರೆ ಸುರಭಿ.

‘ಈ ಯುದ್ಧ, ಸಂಧಾನಗಳು ಹೆಚ್ಚು ಪ್ರಭಾವ ಬೀರಿದ್ದೆ ದಾಸಿಯರ ಮೇಲೆ. ಆದರೆ ಮಹಾಭಾರತ ಅದರ ಮೇಲೆ ಬೆಳಕು ಚೆಲ್ಲಿಲ್ಲ. ಇಂದಿಗೂ ಹಾಗೆಯೇ ಸಮಾಜದ ಪ್ರತಿ ನಿಯಮ, ನಿಬಂಧನೆಗಳಿಂದ ಹೆಚ್ಚು ಪ್ರಭಾವಿತರಾಗುವವರು ತಳವರ್ಗದ ಮಹಿಳೆಯರು. ಅದನ್ನೆ ನಾಟಕದಲ್ಲಿ ಬಿಂಬಿಸಿದ್ದೇನೆ’ ಎನ್ನುವುದು ಸುರಭಿ ಅಭಿಪ್ರಾಯ.

1.5 ಗಂಟೆಯ ನಾಟಕದಲ್ಲಿ ‘ನಮ್ಕಂಪೆನಿ’ ತಂಡದ 17 ಕಲಾವಿದರು ಬಣ್ಣಹಚ್ಚಲಿದ್ದಾರೆ. ಸುರಭಿ ಅವರು 13 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಟನೆ, ಬೆಳಕಿನ ವಿನ್ಯಾಸ, ಪ್ರಸಾಧನ, ವಸ್ತ್ರವಿನ್ಯಾಸ ಹೀಗೆ ರಂಗಭೂಮಿ ಸಂಬಂಧಿತ ವಿವಿಧ ಕ್ಷೇತ್ರಗಳಲ್ಲಿ ಅವರು ಸಕ್ರಿಯರು. ಅವರ ನಿರ್ದೇಶನದ ಮೊದಲ ಪ್ರಯೋಗ ‘ಸಂಧಾನ’.


‘ಸಂಧಾನ’ ನಾಟಕ ತಾಲೀಮಿನಲ್ಲಿ ನಿರತ ಕಲಾವಿದರು

ಕಾಲೇಜು ದಿನಗಳಲ್ಲಿ ಭಾರತ್‌ ಯಾತ್ರಾ ಸ್ಪರ್ಧೆ ಮೂಲಕ ಆರಂಭವಾದ ಅವರ ರಂಗಭೂಮಿ ಸಾಂಗತ್ಯ, ಇಂದು ನಿರ್ದೇಶನದವರೆಗೂ ಕರೆತಂದಿದೆ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಪೂರೈಸಿರುವ ಅವರು ರಂಗಶಂಕರ ಆಯೋಜಿಸುವ ‘ಮೇಕಿಂಗ್ ಥಿಯೇಟರ್‌’ನಲ್ಲಿಯೂ ತರಬೇತಿ ಪಡೆದಿದ್ದಾರೆ. ಅಷ್ಟಕ್ಕೇ ತಣಿಯದ ಅವರ ರಂಗಭೂಮಿ ಹಸಿವು ಅವರನ್ನು ‘ಇಂಡಿಯನ್ ಎನ್ಸೆಂಬಲ್ ಡೈರೆಕ್ಟರ್ಸ್ ಟ್ರೈನಿಂಗ್ ಪ್ರೋಗ್ರಾಂ’ ಕೂರ್ಸ್‌ ಮಾಡುವಂತೆ ಪ್ರೇರೆಪಿಸಿತ್ತು. ಇಲ್ಲಿ ರಂಗ ನಿರ್ದೇಶಕ ಅಭಿಷೇಕ್ ಮಜುಂದಾರ್ ಅವರಿಂದ ತರಬೇತಿ ಪಡೆದರು. ಈ ಕೋರ್ಸ್‌ನ ಕೊನೆಯ ಸೆಮಿಸ್ಟರ್‌ನ ಭಾಗವಾಗಿ ‘ಸಂಧಾನ’ ನಾಟಕ ನಿರ್ದೇಶಿಸಿದ್ದಾರೆ.

ಸಮುದಾಯ, ಸಂಚಾರಿ, ಬಿಟಿಸಿ, ರಂಗಶಂಕರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಇವರ ‘ನಮ್ಕಂಪನಿ’ ಎನ್ನುವ ಹೊಸ ತಂಡ ಕಟ್ಟಿ  ಮಕ್ಕಳಿಗೆ ತರಬೇತಿ ನೀಡತ್ತಿದ್ದಾರೆ. ‘ನೀನಾನಾದ್ರೆ ನಾನೀನೆನಾ?’, ‘ಮಾರಿಕಾಡು’, ‘ಮೈಸೂರು ಮಲ್ಲಿಗೆ’, ‘ಕಿಂಗ್‌ಲಿಯರ್‘, ‘ಮೃಚ್ಚಕಟಿಕ’, ‘ವ್ಯಾನಿಟಿ ಬ್ಯಾಗ್‌‘, ‘ಶ್ರೀದೇವಿ ಮಹಾತ್ಮೆ’ ಮೊದಲಾದ ನಾಟಕಗಳು, ‘ಮಹಾಪರ್ವ‘, ‘ಪಾರ್ವತಿ ಪರಮೇಶ್ವರ’ ಇನ್ನಿತರ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ.
**
‘ಸಂಧಾನ’ ನಾಟಕ ಪ್ರದರ್ಶನ: ರಚನೆ–ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ. ನಿರ್ದೇಶನ–ಸುರಭಿ ವಸಿಷ್ಟ್‌. ಪ್ರಸ್ತುತಿ–ನಮ್ಕಂಪನಿ. ಸಂಗೀತ–ಎಂ.ಡಿ.ಪಲ್ಲವಿ. ಸ್ಥಳ–ರಂಗಶಂಕರ, ಜೆ.ಪಿ.ನಗರ. ಮಂಗಳವಾರ (ಮೇ 29) ರಾತ್ರಿ 7.30. ಟಿಕೆಟ್–₹100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT