ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಹಾದಿಯಲ್ಲಿ ಗದಗ ವಿಭಾಗ

ಬಿಗಿ ಕ್ರಮದ ಜತೆಗೆ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸಾರಿಗೆ ಇಲಾಖೆ
Last Updated 13 ಜುಲೈ 2022, 2:53 IST
ಅಕ್ಷರ ಗಾತ್ರ

ಗದಗ: ಆದಾಯ ಸೋರಿಕೆಗೆ ತಡೆ, ಬಸ್‌ಗಳ ಸುಸ್ಥಿತಿಗೆ ಕಟ್ಟುನಿಟ್ಟಿನ ಕ್ರಮ, ಇಂಧನ ಉಳಿತಾಯದ ಬಗ್ಗೆ ಜಾಗೃತಿ, ಚಾಲಕ– ನಿರ್ವಾಹಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಆದಾಯ ಚೇತರಿಕೆ ಹಾದಿಯಲ್ಲಿದ್ದು, 2022ರ ಏಪ್ರಿಲ್‌, ಮೇ ಹಾಗೂ ಜೂನ್‌ನಲ್ಲಿ ಉತ್ತಮ ಗಳಿಕೆಯಾಗಿದೆ.

2019ರಲ್ಲಿ (ಕೋವಿಡ್‌ ಮುನ್ನ) ಗದಗ ವಿಭಾಗಕ್ಕೆ ಪ್ರತಿ ಕಿ.ಮೀ ಗೆ ₹27.31 ಆದಾಯವಿತ್ತು. ಈಗ ಅದು ₹33.07 ರಷ್ಟಿದ್ದು, ಪ್ರತಿ ಕಿ.ಮೀ ಗೆ ₹5.76 ಹೆಚ್ಚಾಗಿದೆ. 2019ರಲ್ಲಿ 544 ಷೆಡ್ಯೂಲ್‌ಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, 2022ರಲ್ಲಿ ಷೆಡ್ಯೂಲ್‌ಗಳ ಸಂಖ್ಯೆ ಕಡಿಮೆ ಆಗಿದ್ದು, 502 ಷೆಡ್ಯೂಲ್‌ನಲ್ಲೇ ಹಿಂದಿನ ಗುರಿ ಮುಟ್ಟಿದೆ.

‘2019 ಮತ್ತು 2022ರ ಏಪ್ರಿಲ್‌, ಮೇ ಮತ್ತು ಜೂನ್‌ನ ಆದಾಯ ತುಲನೆ ಮಾಡಿ ನೋಡಿದಾಗ ಗದಗ ವಿಭಾಗ ಚೇತರಿಕೆ ಹಾದಿಯಲ್ಲಿರುವುದು ಗೋಚರಿಸುತ್ತದೆ. 2019ರ ಏಪ್ರಿಲ್‌, ಮೇ, ಜೂನ್‌ನಲ್ಲಿ ಪ್ರತಿದಿನದ ಸರಾಸರಿ ಕಲೆಕ್ಷನ್‌ ₹45 ರಿಂದ ₹46 ಲಕ್ಷ ಇತ್ತು. 2022ರಲ್ಲಿ ಅದು ಕ್ರಮವಾಗಿ ₹50 ಲಕ್ಷ, ₹56 ಲಕ್ಷ ಮತ್ತು ₹50 ಲಕ್ಷದಷ್ಟಿದೆ. 544 ಷೆಡ್ಯೂಲ್‌ಗಳಿಂದ ಬರುತ್ತಿದ್ದ ಆದಾಯ ಈಗ 502 ಷೆಡ್ಯೂಲ್‌ಗಳಲ್ಲೇ ಸಿಗುತ್ತಿದೆ. ಆದಾಯದಲ್ಲಿ ಚೇತರಿಕೆ ಆಗಿದ್ದರೂ ಸಾರಿಗೆ ಸಂಸ್ಥೆ ನಷ್ಟದಿಂದ ಹೊರಬರಲು ಇನ್ನೂ ಹೆಚ್ಚಿನ ಸಮಯ ಬೇಕು’ ‌ಎಂದು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯ ಹೇಳಿದರು.

ಏಪ್ರಿಲ್‌ ಮತ್ತು ಮೇ ಸಾರಿಗೆ ಸಂಸ್ಥೆಗೆ ಉತ್ತಮ ಆದಾಯ ತಂದು ಕೊಡುವ ತಿಂಗಳು. ಇಂತಹ ಸಂದರ್ಭದಲ್ಲಿ ದುರಸ್ತಿಗೆ ಬಂದಿದ್ದ ಬಸ್‌ಗಳನ್ನು ಸುಸ್ಥಿತಿಗೆ ತಂದು ಎಲ್ಲ ಬಸ್‌ಗಳೂ ರಸ್ತೆಗಳಿಯುವಂತೆ ಕ್ರಮವಹಿಸಲಾಯಿತು. ಬಸ್‌ಗಳು ಸುಸ್ಥಿತಿಗೆ ಬಂದಿದ್ದರಿಂದ ಮೈಲೇಜ್‌ ಕೂಡ ಚೆನ್ನಾಗಿ ಸಿಗುತ್ತಿದೆ. ಇದರ ಜತೆಗೆ, ಚಾಲಕ– ನಿರ್ವಾಹಕರಿಗೆ ಸಮಯಕ್ಕೆ ಸರಿಯಾಗಿ ಸೌಲಭ್ಯ ಒದಗಿಸಿ, ಅವರನ್ನು ಪ್ರೋತ್ಸಾಹಿಸಿದ ಕಾರಣ ಆದಾಯ ಸಂಗ್ರಹಣೆಯಲ್ಲಿ ಚೇತರಿಕೆ ಸಾಧ್ಯವಾಯಿತು ಎನ್ನುತ್ತಾರೆ
ಅವರು.

‘ಕಳೆದ ಎರಡು ತಿಂಗಳ ಅವಧಿಯಲ್ಲಿ ₹1 ಕೋಟಿಯಷ್ಟು ಬಾಕಿ ಹಣ ಬಿಡುಗಡೆ ಮಾಡಲಾಗಿದೆ. ನೌಕರ ಸೇವೆಯಿಂದ ನಿವೃತ್ತನಾದ ದಿನವೇ ₹25 ಸಾವಿರ ಚೆಕ್‌ ಕೊಡಲಾಗುತ್ತಿದೆ. ವಿಭಾಗದಲ್ಲಿ ಸಿಬ್ಬಂದಿ ಹೆಚ್ಚುವರಿಯಾಗಿ ಇರುವುದರಿಂದ ಕೆಲಸದ ಸಂಬಂಧ ಕಿರುಕುಳ ಆಗುತ್ತಿಲ್ಲ’ ಎನ್ನುತ್ತಾರೆ ಅವರು.

ಬಸ್‌ನಿಲ್ದಾಣ; ಸ್ವಚ್ಛತೆಗೆ ಗಮನ ಅಗತ್ಯ

‘ಬಸ್‌ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ವಿಶೇಷ ಒತ್ತು ನೀಡಲಾಗಿದೆ. ವಾರದಲ್ಲಿ ಎರಡು ಬಾರಿ ಪ್ರತಿ ನಿಲ್ದಾಣಕ್ಕೂ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ’ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಸೀನಯ್ಯ.

ಆದರೆ, ಬಸ್‌ ನಿಲ್ದಾಣದ ಆವರಣ,ಶೌಚಾಲಯಗಳ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿವೆ.

‘ಇಲಾಖೆ ಸಿಬ್ಬಂದಿ ನಿಲ್ದಾಣ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸುತ್ತಿರಬಹುದು. ಆದರೆ, ತಂಬಾಕು ಜಗಿದು ಎಲ್ಲೆಂದರಲ್ಲಿ ಉಗಿಯುವ ಚಾಳಿಯನ್ನು ಜನ ಮೊದಲು ಬಿಡಬೇಕು. ಆಗಷ್ಟೇ ಬಸ್‌ ನಿಲ್ದಾಣಗಳು ಪ್ರಯಾಣಿಕರ ಸ್ನೇಹಿ ಆಗುತ್ತವೆ’ ಎಂದು ರಾಜೂ ಖಾನಾಪೂರ ಹೇಳಿ‌ದ್ದಾರೆ.

ನೌಕರರ ಸಮಸ್ಯೆ ಬಗೆಹರಿಸಿ ಅವರನ್ನು ಖುಷಿಯಿಂದ ಇರಿಸಿದರೆ ಸಂಸ್ಥೆಗೇ ಹೆಚ್ಚಿನ ಲಾಭ. ಈ ನಿಟ್ಟಿನಲ್ಲಿ ಅವರ ಸಮಸ್ಯೆಗಳಿಗೆ ಸದಾ ಕಿವಿಗೊಡುವುದು ಮುಖ್ಯ

ಜಿ.ಸೀನಯ್ಯ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT