ಪ್ರೋತ್ಸಾಹಧನ: ಒಂದೇ ದಿನ 13,439 ಕ್ವಿಂಟಲ್‌ ಈರುಳ್ಳಿ ಆವಕ,ಖರೀದಿ ಅವಧಿ ವಿಸ್ತರಣೆ

7
ವಿಸ್ತರಣೆಯಿಂದ ನಿಟ್ಟುಸಿರು ಬಿಟ್ಟ ಬೆಳೆಗಾರರು

ಪ್ರೋತ್ಸಾಹಧನ: ಒಂದೇ ದಿನ 13,439 ಕ್ವಿಂಟಲ್‌ ಈರುಳ್ಳಿ ಆವಕ,ಖರೀದಿ ಅವಧಿ ವಿಸ್ತರಣೆ

Published:
Updated:
Deccan Herald

ಗದಗ: ಪ್ರೋತ್ಸಾಹ ಧನ ಯೋಜನೆಯಡಿ ಈರುಳ್ಳಿ ಮಾರಾಟ ಮಾಡಲು ಕೊನೆಯ ದಿನ ಎಂದು ನಿಗದಿಪಡಿಸಲಾಗಿದ್ದ ಸೋಮವಾರ, ಇಲ್ಲಿನ ಎಪಿಎಂಸಿಯಲ್ಲಿ ರೈತರ ದಟ್ಟಣೆ ಕಂಡುಬಂತು. ಜಿಲ್ಲೆಯ ವಿವಿಧೆಡೆಯಿಂದ ಈರುಳ್ಳಿ ಹೇರಿಕೊಂಡು ಬಂದಿದ್ದ ಟ್ರಾಕ್ಟರ್‌ಗಳು ಎಪಿಎಂಸಿ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದವು.

ಸಾಮಾನ್ಯ ದಿನಗಳಲ್ಲಿ ಎಪಿಎಂಸಿಗೆ ಸರಾಸರಿ 3ರಿಂದ 4 ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ಆವಕ ಆಗುತ್ತದೆ. ಆದರೆ, ಸೋಮವಾರ ಒಂದೇ ದಿನ 13,439 ಕ್ವಿಂಟಲ್‌ ಈರುಳ್ಳಿ ಆವಕವಾಗಿ ದಾಖಲೆ ನಿರ್ಮಿಸಿತು. 700 ರೈತರು ಈರುಳ್ಳಿ ಮಾರಾಟ ಮಾಡಿದರು. ಹರಾಜಿನಲ್ಲಿ ಎಪಿಎಂಸಿ ವರ್ತಕರು ಕ್ವಿಂಟಲ್‌ಗೆ ಕನಿಷ್ಠ ₹300ರಿಂದ ಆರಂಭಗೊಂಡು ₹1 ಸಾವಿರದವರೆಗೆ ದರ ನೀಡಿ ಖರೀದಿಸಿದರು.

ಮಾರಾಟ ಮಾಡಲು ನಿಗದಿಪಡಿಸಿದ ಸಮಯ ಮೀರುತ್ತಿದ್ದಂತೆ, ಕೆಲವು ರೈತರು ಪ್ರೋತ್ಸಾಹಧನ ಕೈತಪ್ಪಿತು ಎಂದು ನಿರಾಸೆ ಅನುಭವಿಸಿದರು.ಆದರೆ, ಸಂಜೆಯ ವೇಳೆಗೆ, ಖರೀದಿ ಅವಧಿ ವಿಸ್ತರಿಸಲಾಗುತ್ತದೆ ಎಂಬ ಸುದ್ದಿ ಬಂದಿದ್ದರಿಂದ ನಿಟ್ಟುಸಿರು ಬಿಟ್ಟರು.

ಪ್ರೋತ್ಸಾಹ ಧನ ಪ್ರಕಟವಾದ ನಂತರ ಅಂದರೆ ಜ.28ರಿಂದ ಡಿ.17ರವರೆಗೆ ಗದಗ ಎಪಿಎಂಸಿ ದಾಖಲೆ ಪ್ರಮಾಣದಲ್ಲಿ ಅಂದರೆ ಒಟ್ಟು 55,114 ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿದೆ. ಇದರಲ್ಲಿ ಡಿ.14ರವರೆಗೆ ಪ್ರತಿ ಕ್ವಿಂಟಲ್‌ಗೆ ₹700ಕ್ಕಿಂತ ಕಡಿಮೆ ದರದಲ್ಲಿ 34,487 ಕ್ವಿಂಟಲ್‌ ಈರುಳ್ಳಿ ಖರೀದಿಸಲಾಗಿದೆ.

ಡಿ.15ರವರೆಗೆ 1,427 ರೈತರು ಪ್ರೋತ್ಸಾಹಧನ ಯೋಜನೆಯಡಿ ಈರುಳ್ಳಿ ಮಾರಾಟ ಮಾಡಿದ್ದಾರೆ. ದಾಖಲೆ ಪರಿಶೀಲನೆ ನಂತರ ಪ್ರೋತ್ಸಾಹ ಧನ ಲಭಿಸಲಿದೆ. ಪ್ರೋತ್ಸಾಹಧನ ಪ್ರಕಟ ಗೊಳ್ಳುವ ಮೊದಲು ರಫ್ತು ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್‌ಗೆ ₹1 ಸಾವಿರ ದರ ಇತ್ತು. ಈಗಲೂ ಈ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ಮಾರಾಟ ಅವಧಿ ವಿಸ್ತರಣೆ

ಪ್ರೋತ್ಸಾಹಧನ ಯೋಜನೆಯಡಿ ಈರುಳ್ಳಿ ಖರೀದಿ ಅವಧಿಯನ್ನು ಡಿ.17ರಿಂದ 15 ದಿನ ಅಂದರೆ ಜ.1ರವರೆಗೆ ವಿಸ್ತರಿಸಲಾಗಿದೆ.ಜಿಲ್ಲೆಯ ರೈತರು ಕ್ವಿಂಟಲ್‌ಗೆ ₹700ಕ್ಕಿಂತ ಕಡಿಮೆ ದರ ಲಭಿಸುವ ಸಾಧ್ಯತೆ ಇರುವ ಈರುಳ್ಳಿಯನ್ನು ಎಪಿಎಂಸಿಗೆ ತಂದು ಮಾರಾಟ ಮಾಡುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗದಗ ಎಪಿಎಂಸಿ ಕಾರ್ಯದರ್ಶಿ ಮಂಜುನಾಥ ಎಂ. ಹೇಳಿದ್ದಾರೆ.

‘ಈ ಮೊದಲು ಡಿ.17 ಕೊನೆಯ ದಿನ ಎಂದು ನಿಗದಿಪಡಿಸಲಾಗಿತ್ತು. ಹೀಗಾಗಿ ಡಿ.16 ಮತ್ತು 17ರಂದು ಮಾರಾಟದ ಒತ್ತಡ ಹೆಚ್ಚಿತ್ತು. ಈ ಎರಡು ದಿನಗಳಲ್ಲಿ ಕ್ವಿಂಟಲ್‌ಗೆ ₹700ಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದ ರೈತರ ಸಂಖ್ಯೆ ಮತ್ತು ತೂಕವನ್ನು ಸಿಬ್ಬಂದಿ ಪ್ರತ್ಯೇಕಿಸಿ, ದತ್ತಾಂಶವನ್ನು ಕಂಪ್ಯೂಟರ್‌ಗೆ ಸೇರ್ಪಡೆ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ನಂತರವೇ ನಿಖರವಾದ ಅಂಕಿ ಅಂಶ ಲಭಿಸಲಿದೆ’ಎಂದು ಮಂಜುನಾಥ ಅವರು ಹೇಳಿದರು.

* ಪ್ರೋತ್ಸಾಹಧನದಡಿ ಈರುಳ್ಳಿ ಮಾರಾಟ ಅವಧಿಯನ್ನು15 ದಿನ ವಿಸ್ತರಿಸಲಾಗಿದೆ. ಜಿಲ್ಲೆಯ ರೈತರು ಗರಿಷ್ಠ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು

ಮಂಜುನಾಥ ಎಂ., ಗದಗ ಎ.ಪಿ.ಎಂ.ಸಿ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !