ಗುರುವಾರ , ನವೆಂಬರ್ 21, 2019
21 °C
ಸಿಬ್ಬಂದಿಗೆ ದಿಗ್ಬಂಧನ; ರಸ್ತೆಗೆ ಕಲ್ಲುಗಳನ್ನು ಅಡ್ಡ ಇರಿಸಿ ಪ್ರತಿಭಟನೆ

ಈರುಳ್ಳಿ ದರ ಕುಸಿತ: ಎಪಿಎಂಸಿ ಕಚೇರಿಗೆ ಬೀಗ ಜಡಿದ ರೈತರು

Published:
Updated:
Prajavani

ಗದಗ: ಇಲ್ಲಿನ ಎಪಿಎಂಸಿಯಲ್ಲಿ ಶುಕ್ರವಾರ ಈರುಳ್ಳಿ ಬೆಲೆ  ಕ್ವಿಂಟಲ್‌ಗೆ ಸರಾಸರಿ ₹2 ಸಾವಿರಕ್ಕೆ ಕುಸಿದಿದ್ದನ್ನು ಖಂಡಿಸಿ, ರೈತರು ಎಪಿಎಂಸಿ ಸಿಬ್ಬಂದಿಗೆ ಕಚೇರಿಯಲ್ಲೇ ದಿಗ್ಬಂಧನ ಹಾಕಿ, ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಟೆಂಡರ್ ಪ್ರಕ್ರಿಯೆ ವೇಳೆ ಎಪಿಎಂಸಿ ವರ್ತಕರು ಈರುಳ್ಳಿಗೆ ಅ.17ಕ್ಕಿಂತಲೂ ಕಡಿಮೆ ದರವನ್ನು ಅ.18ರಂದು ನಮೂದಿಸಿದರು. ಕ್ವಿಂಟಲ್‌ಗೆ ಸರಾಸರಿ ₹2 ಸಾವಿರ ದರವೂ ಲಭಿಸದಾದಾಗ, ಆಕ್ರೋಶಗೊಂಡ ರೈತರು ವರ್ತಕರನ್ನು ಪ್ರಶ್ನಿಸಿದರು. ಈರುಳ್ಳಿ ಗುಣಮಟ್ಟ ಉತ್ತಮವಾಗಿಲ್ಲ, ಇದರ ಬೆಲೆ ಇಷ್ಟೇ ಎಂದು ವರ್ತಕರು ಜಾರಿಕೊಂಡರು. ಇದರಿಂದ ಅಸಮಾಧಾನಗೊಂಡ ರೈತರು, ಏಕಾಏಕಿ ಎಪಿಎಂಸಿ ಆಡಳಿತ ಕಚೇರಿಗೆ ಬಂದು, ಕಚೇರಿಗೆ ಬೀಗ ಜಡಿದರು. ಬಳಿಕ ಎಪಿಎಂಸಿ ಮುಖ್ಯ ದ್ವಾರವನ್ನು ಬಂದ್ ಮಾಡಿ,  ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

‘ನಿನ್ನೆಯಷ್ಟೇ (ಅ.17) ಕ್ವಿಂಟಲ್‌ಗೆ ₹2,700 ರಂತೆ ಈರುಳ್ಳಿ ಮಾರಿದ್ದೇನೆ. ಇಂದು (ಅ.18) ಅದೇ ರಾಶಿಯ ಉಳಿದ ಈರುಳ್ಳಿಗೆ ವರ್ತಕರು ₹1,400 ರಿಂದ ₹ 1600 ದರ ನಿಗದಿಪಡಿಸಿ ಖರೀದಿಗೆ ಮುಂದಾಗಿದ್ದಾರೆ. ಏಕಾಏಕಿ ₹1 ಸಾವಿರ ದರ ಕುಸಿಯಲು ಹೇಗೆ ಸಾಧ್ಯ. ಹೀಗಾಗಿ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸುತ್ತಿದ್ದೇವೆ’ ಎಂದು ಚಿಕ್ಕಮಣ್ಣೂರು ಗ್ರಾಮದ ರೈತ ಯಲ್ಲಪ್ಪಗೌಡ ಕೆಂಚನಗೌಡ್ರ ಹೇಳಿದರು.

‘ಜಿಲ್ಲೆಯ ರೋಣ ಹಾಗೂ ಕೊಪ್ಪಳದಿಂದ ಎಪಿಎಂಸಿಗೆ ಶುಕ್ರವಾರ ಸುಮಾರು 2 ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿದೆ. ಆದರೆ, ವರ್ತಕರು, ದಲ್ಲಾಳಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಉದ್ದೇಶ ಪೂರ್ವಕವಾಗಿ ಬೆಲೆ ಕಡಿಮೆ ಮಾಡಿದ್ದಾರೆ. ಉತ್ತಮ ಗುಣಮಟ್ಟದ ನಾಲ್ಕೈದು ಕ್ವಿಂಟಲ್‌ ಈರುಳ್ಳಿಗೆ ಮಾತ್ರ ₹2400, ಇನ್ನುಳಿದಸಾಮಾನ್ಯ ಗುಣಮಟ್ಟದ ಈರುಳ್ಳಿಗೆ ₹1400 ರೂ. ನಿಗದಿಗೊಳಿಸಿ ರೈತರನ್ನು ವಂಚಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕೆ ಬಂದ ರಾಜೀವಗಾಂಧಿ ನಗರ ಠಾಣೆ ಪೊಲೀಸರು ಪ್ರತಿಭಟನಾಕರರನ್ನು ಸಮಾಧಾನ ಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಸಂಧಾನ ಸಭೆ: ರೈತರ ಪ್ರತಿಭಟನೆ ನಂತರ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ವರ್ತಕರ ಸಮ್ಮುಖದಲ್ಲಿ ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ವರ್ತಕರು ನೀರಾವರಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ನಾಲ್ಕೈದು ದಿನಕ್ಕಿಂತ ಹೆಚ್ಚು ಸಂಗ್ರಹ ಯೋಗ್ಯವಲ್ಲ. ಕೇಂದ್ರ ಸರ್ಕಾರವೂ ಈರುಳ್ಳಿ ರಫ್ತು ನಿಷೇಧಿಸಿದ್ದರಿಂದ ಬೆಲೆ ಇಳಿಕೆಯಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.

‘ರೈತರ ಒತ್ತಾಯದಂತೆ ಮರು ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಖರೀದಿದಾರರೂ ಕೂಡ ಸೂಕ್ತ ಬೆಲೆ ನೀಡಬೇಕು’ ಎಂದು ಹೇಳುವ ಮೂಲಕ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ವಿವಾದಕ್ಕೆ ತೆರೆ ಎಳೆದರು. ಎಪಿಎಂಸಿ ಉಪಾಧ್ಯಕ್ಷ ನಿಂಗನಗೌಡ ಹಿರೇಮನಿ ಪಾಟೀಲ, ಸದಸ್ಯ ವಿ.ಎಚ್. ದೇಸಾಯಿಗೌಡ್ರ, ಎಪಿಎಂಸಿ ಸಹ ಕಾರ್ಯದರ್ಶಿ ಎಂ.ಆರ್.ನದಾಫ್, ಸಿಪಿಐ ವೆಂಕಟೇಶ ಯಡಹಳ್ಳಿ ಇದ್ದರು.

ಪ್ರತಿಕ್ರಿಯಿಸಿ (+)