ಶನಿವಾರ, ಜೂನ್ 25, 2022
27 °C
ಅಧ್ಯಾಪಕ ವಿವೇಕಾನಂದಗೌಡ ಪಾಟೀಲರಿಂದ ವಿನೂತನ ಪ್ರಯೋಗ

ಮಕ್ಕಳ ಕಲಿಕೆಗೆ ಪರ್ಯಾಯ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೋವಿಡ್‌–19ನಂತಹ ಸಂದಿಗ್ಧ ಸಂದರ್ಭದಲ್ಲಿ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ನೆರವಾಗುವಂತಹ ವಿಡಿಯೊಗಳನ್ನು ನಿರ್ಮಿಸಿ, ಅವರಲ್ಲಿ ಕಲಿಕೆಯ ಆಸಕ್ತಿಯನ್ನು ಉದ್ದೀಪಿಸುತ್ತಿದ್ದಾರೆ ಗದುಗಿನ ಎಸ್.ಎಂ.ಕೆ. ನಗರದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಿವೇಕಾನಂದಗೌಡ ಪಾಟೀಲ.

ಇಡೀ ದಿನ ಶಾಲೆ, ಸ್ನೇಹಿತರು, ಆಟ, ಹಾಡು, ಕುಣಿತಗಳಲ್ಲಿ ತೊಡಗಿರುತ್ತಿದ್ದ ಮಕ್ಕಳಿಗೆ ಲಾಕ್‍ಡೌನ್ ಕಾರಣದಿಂದ ಸಿಕ್ಕಿರುವ ದೀರ್ಘ ರಜೆ ಸಜೆಯಾಗಿದೆ. ಈಗ ಹೊರಕ್ಕೆ ಹೋಗಿ ಆಡುವಂತಿಲ್ಲ. ಕುಣಿಯುವಂತಿಲ್ಲ. ಮಕ್ಕಳಿಗೆ ಒಂದು ರೀತಿಯ ಸಮಸ್ಯೆಯಾದರೆ, ಅವರನ್ನು ನಿಭಾಯಿಸುವುದು ಪಾಲಕರಿಗೆ ಸವಾಲಿನ ಕಾರ್ಯವಾಗಿದೆ. ಕೆಲವು ಮಕ್ಕಳು ಚಟುವಟಿಕೆಗಳಿಲ್ಲದೇ ಖಿನ್ನತೆಗೂ ಒಳಗಾಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ನಿರಂತರವಾಗಿಡುವ ನಿಟ್ಟಿನಲ್ಲಿ ಶಿಕ್ಷಕ ವಿವೇಕಾನಂದಗೌಡ ಪಾಟೀಲ ಸಾಮಾನ್ಯ ಜ್ಞಾನ, ಕತೆ, ಚಟುವಟಿಕೆ ಹಾಗೂ ಪಾಠಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ತಯಾರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿವಿಧ ವಯೋಮಾನದ ವಿದ್ಯಾರ್ಥಿಗಳು ಮತ್ತು ಪಾಲಕರು ವಿಡಿಯೊ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈವಿಧ್ಯದ ಕತೆಗಳನ್ನು ಸರಳ ನಿರೂಪಣೆ ಮೂಲಕ ಹೇಳುವ ಶೈಲಿ ಮಕ್ಕಳು ಹಾಗೂ ಪಾಲಕರ ಗಮನ ಸೆಳೆದಿದೆ. ಕತೆಯ ಸಂದೇಶವನ್ನು ಕೊನೆಗೆ ಹೇಳದೇ ಕೇಳುಗರೇ ಆಲೋಚಿಸುವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿದ್ದಾರೆ. ಅಲ್ಲದೇ, ಕತೆ ಕೇಳಿದ ನಂತರ ಇತರರಿಗೆ ಹೇಳುವ ಚಟುವಟಿಕೆಯನ್ನೂ ನೀಡಿದ್ದಾರೆ.

ಪರೀಕ್ಷೆಗಳು ರದ್ದಾಗಿರುವುದು ಹಾಗೂ ಮುಂದೆ ಹೋಗಿರುವುದರಿಂದ ಅಭ್ಯಾಸದ ನಿರಂತರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯ ಆಧರಿತ ವಿಡಿಯೊ ಪಾಠಗಳನ್ನು ತಯಾರಿಸಿ, ವಿದ್ಯಾರ್ಥಿಗಳ ವಾಟ್ಸ್‌ಆ್ಯ‍ಪ್‌ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯಜ್ಞಾನದ ವೃದ್ಧಿಗಾಗಿ ‘ಹತ್ತು ಪ್ರಶ್ನೆ ಆಟ’ ಎಂಬ ಶೀರ್ಷಿಕೆಯಲ್ಲಿ ಅನೇಕ ವಿಡಿಯೊಗಳನ್ನು ತಯಾರಿಸಿದ್ದಾರೆ. ಇವು ವಿದ್ಯಾರ್ಥಿಗಳ ಐಕ್ಯೂ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ.

‘ರಜೆಯ ಅವಧಿಯಲ್ಲಿ ದಿನಕ್ಕೊಂದರಂತೆ ವಿವಿಧ ವಿಷಯ ಇಟ್ಟುಕೊಂಡು ವಿಡಿಯೊಗಳನ್ನು ತಯಾರಿಸುವ ಯೋಜನೆ ಇದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವರು ಅನ್ನದಾಸೋಹ, ಪರಿಕರಗಳ ವಿತರಣೆ ಕಾರ್ಯದಲ್ಲಿ ತೊಡಗಿಕೊಂಡು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ, ನಾನು ಒಬ್ಬ ಶಿಕ್ಷಕನಾಗಿ ನಾನು ವಿದ್ಯಾರ್ಥಿಗಳ ಕಲಿಕೆಯ ಕಡೆಗೆ ಗಮನ ಹರಿಸಿದ್ದೇನೆ’ ಎನ್ನುತ್ತಾರೆ ವಿವೇಕಾನಂದಗೌಡ ಪಾಟೀಲ.

ವಿದ್ಯಾರ್ಥಿಗಳು ಕೊಂಡಿ ಬಳಸಿ ವಿಡಿಯೊ ಪಾಠಗಳನ್ನು ವೀಕ್ಷಿಸಬಹುದು.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ

‘ವಿವೇಕಾನಂದಗೌಡ ಪಾಟೀಲ ಗುಣಾತ್ಮಕ ಶಿಕ್ಷಣ ನೀಡುವುದರ ಬಗ್ಗೆ ಒಲವು ಹೊಂದಿರುವ ಶಿಕ್ಷಕ. ಚೆನ್ನಾಗಿ ಓದಿಕೊಂಡಿದ್ದಾರೆ. ತರಗತಿಯಲ್ಲಿ ಮಕ್ಕಳ ಮನಸ್ಸಿಗೆ ನಾಟುವಂತೆ ಪಠ್ಯ ಬೋಧಿಸುತ್ತಾರೆ. ಹಾಗಾಗಿ, ಅವರು ಮಕ್ಕಳಿಗೂ ಅಚ್ಚುಮೆಚ್ಚು. ಅವರ ನಿರೂಪಣಾ ಶೈಲಿ ಅದ್ಭುತವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ನಿರಂತರವಾಗಿಡುವ ಪ್ರಯತ್ನದಲ್ಲಿ ತೊಡಗಿರುವುದು ಉತ್ತಮ ಅಂಶ’ ಎನ್ನುತ್ತಾರೆ ಡಯಟ್‌ ಪ್ರಾಂಶುಪಾಲ ಶಂಕ್ರಪ್ಪ ಗಾಂಜಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.