ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕುಂಚದಲ್ಲಿ ಅರಳಿತು ದೃಶ್ಯಕಾವ್ಯ..!

ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ
Last Updated 18 ಸೆಪ್ಟೆಂಬರ್ 2019, 14:23 IST
ಅಕ್ಷರ ಗಾತ್ರ

ಗದಗ: ಆಗಸ್ಟೇ ಉದಯಿಸುತ್ತಿರುವ ಸೂರ್ಯ, ನರ್ತಿಸುತ್ತಿರುವ ನವಿಲು, ಹಸಿರು ಹೊನ್ನು ಮುಡಿದು ನಿಂತಿರುವ ಸಹ್ಯಾದ್ರಿ ಪರ್ವತ, ಧುಮ್ಮಿಕ್ಕುತ್ತಿರುವ ಜಲಧಾರೆ, ನಳ ನಳಿಸುತ್ತಿರುವ ಶಾಲಾ ಕೈತೋಟ, ಮಿಕ್ಕಿಮೌಸ್, ಛೋಟಾ ಭೀಮ್.. ಹೀಗೆ ಅಲ್ಲಿ ಮಕ್ಕಳ ಕಲ್ಪನೆಯಲ್ಲಿ ದೃಶ್ಯಕಾವ್ಯವೇ ಅರಳಿತ್ತು.

ಒಂದೆರಡಲ್ಲ, ಎರಡೂವರೆ ಸಾವಿರಕ್ಕಿಂತ ಹೆಚ್ಚಿನ ಚಿತ್ರಗಳು. ಒಂದಕ್ಕಿಂತ ಒಂದು ಚೆಂದ. ಯಾವುದನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು, ಯಾವುದನ್ನು ಕೈಬಿಡಬೇಕು ಎನ್ನುವುದು ಸಂಘಟಕರಿಗೇ ಗೊಂದಲ.

ಹೌದು. ಇದು ಬುಧವಾರ ಗದುಗಿನ ವಿವೇಕಾನಂದ ಸಭಾ ಭವನದಲ್ಲಿ ಧಾರವಾಡದ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಗದುಗಿನ ವಿಜಯ ಕಲಾ ಮಂದಿರ, ಚಿತ್ರಕಲಾ ಶಿಕ್ಷಕರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ನೂರಾರು ಶಾಲಾ ಕಾಲೇಜುಗಳ 2354 ವಿದ್ಯಾರ್ಥಿಗಳು ಸೇರಿದ್ದರು. ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದಲೂ ಕೆಲವು ವಿದ್ಯಾರ್ಥಿಗಳು ಬಂದಿದ್ದರು. ಮಕ್ಕಳಿಗೆ ಚಿತ್ರ ಬಿಡಿಸಲು ಬೇಕಾದ ಕಾಗದವನ್ನು ಮಾತ್ರ ಸಂಘಟಕರು ನೀಡಿದ್ದರು. ಬಣ್ಣ, ಪೆನ್ಸಿಲ್‌ ಸೇರಿದಂತೆ ಉಳಿದ ಪರಿಕರಗಳನ್ನು ಮಕ್ಕಳೇ ತಂದಿದ್ದರು. ವಿವೇಕಾನಂದ ಸಭಾಭವನದ ಆವರಣದಲ್ಲಿ ಕುಳಿತು ಹಕ್ಕಿಗಳಂತೆ ಚಿಲಿಪಿಲಿ ಮಾಡುತ್ತಾ ಮಕ್ಕಳು ಚಿತ್ರ ಬಿಡಿಸಿದರು. ಈ ಚಿತ್ರಗಳು ಕ್ಯಾನ್ವಾಸ್‌ ಮೇಲೆ ಬಿರಿದ ಕುಸುಮಗಳಂತೆ ಮೂಡಿಬಂದವು.

ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ‘ಬನ್ನಿ ಮಕ್ಕಳ ಕನಸುಗಳಿಗೆ ಬಣ್ಣ ತುಂಬೋಣ’ ಎಂಬ ಶೀರ್ಷಿಕೆಯಡಿ ಈ ಸ್ಪರ್ಧೆ ಆಯೋಜಿಸಿತ್ತು. ಸಂಘಟಕರು 1500 ಮಕ್ಕಳು ಭಾಗವಹಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆ ಮೀರಿ ಇನ್ನೂ ಒಂದು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದರು. ಅಂತಿಮವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 15 ಹಾಗೂ ಕಾಲೇಜು ವಿಭಾಗದಲ್ಲಿ 5 ಸೇರಿ ಒಟ್ಟು 35 ವಿದ್ಯಾರ್ಥಿ ಕಲಾವಿದರಿಗೆ ತಲಾ ₹1 ಸಾವಿರ ನಗದು ಬಹುಮಾನ ನೀಡಲಾಯಿತು. ಇನ್ನುಳಿದ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಡಿಡಿಪಿಯು ಎಸ್.ಎಸ್. ಹಿರೇಮಠ, ಡಿಡಿಪಿಐ ಎನ್.ಎಚ್. ನಾಗೂರ, ಡಯಟ್ ಉಪನಿರ್ದೇಶಕ ಎಚ್.ಎಂ. ಖಾನ್, ವಸಂತ ಅಕ್ಕಿ, ಕೆ.ವಿ. ಕುಂದಗೋಳ, ಡಾ.ಜಿ.ಬಿ. ಪಾಟೀಲ, ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಮಂಜುಳಾ ಎಲಿಗಾರ ಸಂಭ್ರಮ ವ್ಯಕ್ತಪಡಿಸಿದರು. ವಿಜಯ ಕಲಾ ಮಂದಿರದ ಪ್ರಾಚಾರ್ಯ ಆರ್.ಡಿ. ಕಡ್ಲಿಕೊಪ್ಪ, ಚಿತ್ರ ಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ, ಸುರೇಶ ಡಿ. ಹಾಲಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT