ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಒದಗಿಸಲು ಪ್ರಾಮಾಣಿಕ ಪ್ರಯತ್ನ

ಪ್ರತಿಜ್ಞಾ ಪಂಚಾಯತ್‌: ಸತ್ಯಾಗ್ರಹ ಕೈಬಿಡುವಂತೆ ಸಚಿವ ಸಿ.ಸಿ.ಪಾಟೀಲ ಮನವಿ
Last Updated 27 ಸೆಪ್ಟೆಂಬರ್ 2021, 5:33 IST
ಅಕ್ಷರ ಗಾತ್ರ

ಗದಗ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅಡಿಪಾಯ ಹಾಕಿದ್ದಲ್ಲದೇ, ಆಯೋಗ ರಚಿಸಿ ಮೀಸಲಾತಿ ನೀಡುವ ಕಾರ್ಯವನ್ನು ಆರಂಭಿಸಿದ್ದರು ಎಂಬುದು ಸಮಾಜ ಬಾಂಧವರಿಗೆ ಗೊತ್ತಿರಲಿ. ಮೀಸಲಾತಿ ಕುರಿತು ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅನೇಕ ಸಲ ಚರ್ಚೆ ನಡೆಸಲಾಗಿದ್ದು, ಬೇರೆಯವರಿಗೆ ಅನ್ಯಾಯವಾಗದಂತೆ ನ್ಯಾಯ ಕೊಡಿಸುವ ಕಾರ್ಯ ಮಾಡಲಾಗುವುದು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯಿಸಿ ಪ್ರತಿಜ್ಞಾ ಪಂಚಾಯತ್, ಸಮುದಾಯದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಕಾಶಪ್ಪನವರ ತಂಡವು ಹೋರಾಟ ಮಾಡುತ್ತಿದೆ. ಮೀಸಲಾತಿ ನೀಡುವ ಮೂಲಕ ಪಕ್ಷಕ್ಕೆ ಅದರ ಸಂಪೂರ್ಣ ಲಾಭವನ್ನು ನಾವೇ ಪಡೆದುಕೊಳ್ಳುತ್ತೇವೆ. ಕಾಂಗ್ರೆಸ್‌ನವರಿಗೆ ಇದರ ಲಾಭ ಪಡೆಯಲು ಅವಕಾಶ ಕೊಡುವುದಿಲ್ಲ’ ಎಂದು ವೇದಿಕೆ ಮೇಲಿದ್ದ ವಿಜಯಾನಂದ ಕಾಶಪ್ಪನವರಿಗೆ ಹಾಸ್ಯ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸೆ.30ರಂದು ದಾವಣಗೆರೆಯಲ್ಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಆಂದೋಲನ ಆಯೋಜಿಸಲಾಗಿದ್ದು, ಸಚಿವರು ನೀಡಿರುವ ಭರವಸೆ ಕುರಿತು ಚರ್ಚಿಸಲಾಗುವುದು. ಅಲ್ಲದೇ, ಅ.1ರಂದು ಸಮಾಜದ ಮಾಜಿ ಸಿಎಂ ದಿ. ಜೆ.ಎಚ್.ಪಟೇಲ್ ಅವರ ಜನ್ಮದಿನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರ ಕುರಿತು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಮೀಸಲಾತಿಗಾಗಿ ನಡೆಯುತ್ತಿರುವ ಈ ಹೋರಾಟವನ್ನು ನಮ್ಮವರೇ ಕೆಲವರು ಹತ್ತಿಕ್ಕಲು ಯತ್ನಿಸಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಪಡೆಯಲು, ಮಂತ್ರಿಯಾಗಲು ಸಮಾಜದ ಹೆಸರು ಬಳಸುವ ಕೆಲವರು ಮೀಸಲಾತಿ ಹೋರಾಟಕ್ಕೆ ಕೈಜೋಡಿಸುತ್ತಿಲ್ಲ. ಮಂತ್ರಿಯಾದ ಬಳಿಕ ಸಮಾಜಕ್ಕೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ಹೋರಾಟದಲ್ಲಿ ಸ್ವಾಮೀಜಿ ಆದಿಯಾಗಿ ಯಾರದ್ದೂ ಸ್ವಾರ್ಥವಿಲ್ಲ. ಎಲ್ಲವೂ ಸಮಾಜದ ಜನರಿಗಾಗಿ ಮಾಡುತ್ತಿರುವುದು. ನಾವೇನು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಸಮಾಜದ ಮಕ್ಕಳ ಶಿಕ್ಷಣ ಮತ್ತು ನೌಕರಿ ಸೌಲಭ್ಯಕ್ಕಾಗಿ ಮಾತ್ರ. ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾದಾಗ ಅದಕ್ಕೆ ಅಡೆತಡೆ ಮಾಡಲು ವಿಜಯೇಂದ್ರ ಅವರು ಸಾಕಷ್ಟು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ನಿಕಟಪೂರ್ವ ಮುಖ್ಯಮಂತ್ರಿಗಳು ಭರವಸೆ ಮಾತ್ರ ನೀಡಿದರು. ಹಾಲಿ ಸಿಎಂ ಬೊಮ್ಮಾಯಿ ಅವರ ಅಂತರಾತ್ಮ ತಿಳಿದಿದೆ. ಹಿಂದಿನ ಮುಖ್ಯಮಂತ್ರಿಯಂತೆ ಮೋಸ ಮಾಡುವುದಿಲ್ಲ ಎಂಬ ಭರವಸೆ ಇದೆ’ ಎಂದು ಹೇಳಿದರು.

ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಮುಗಿದಿಲ್ಲ. ಸರ್ಕಾರ ಸಮಯ ಕೇಳಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಭರವಸೆ ಮೂಡಿಸಿದೆ. ಅ.1 ರ ಹೋರಾಟದ ಬಗ್ಗೆ ಚರ್ಚಿಸಿ, ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ನಂದಿಹಳ್ಳಿ ಹಾಲಪ್ಪ, ಡಾ. ಬಿ.ಎಸ್.ಪಾಟೀಲ ನಾಗರಾಳ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಸಮಾಜದ ಮುಖಂಡರಾದ ಅನಿಲಕುಮಾರ ಪಾಟೀಲ, ಅಯ್ಯಪ್ಪ ಅಂಗಡಿ, ಅಶೋಕ ಸಂಕಣ್ಣವರ, ಅಜ್ಜನಗೌಡ ಹಿರೇಮನಿ ಪಾಟೀಲ, ಚಂದ್ರಶೇಖರ ಭದ್ರವಾಡಗಿ, ಬಸನಗೌಡ ಪಾಟೀಲ ತೊಂಡಿಹಾಳ, ಮಲ್ಲಿಕಾರ್ಜುನ ಹಿರೇಕೊಪ್ಪ, ಶಿವರಾಜ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT