ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಹುಯಿಲಗೋಳ ನೆನೆದು ಪತ್ರಿಕಾ ವಿತರಕರ ಕಣ್ಣೀರು

Last Updated 1 ಡಿಸೆಂಬರ್ 2019, 10:48 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಪತ್ರಿಕಾ ವಿತರಕರ ಬಳಗದಲ್ಲಿ ‘ರಾಯರು’ ಎಂದೇ ಆತ್ಮೀಯರಾಗಿದ್ದ, ನ.29ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ‘ಪ್ರಜಾವಾಣಿ’ಪತ್ರಿಕೆಯ ಗದಗ ನಗರದ ಏಜೆಂಟರಾಗಿದ್ದ ನಾರಾಯಣರಾವ್‌ ತಮ್ಮಣ್ಣಾಚಾರ್‌ ಹುಯಿಲಗೋಳ (62) ಅವರ ಅಂತ್ಯಕ್ರಿಯೆ ಶನಿವಾರ ಇಲ್ಲಿನ ಹೊಂಬಳ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನಡೆಯಿತು.

ಅವರ ಅಂತಿಮ ದರ್ಶನಕ್ಕೆ ಸೇರಿದ ನೂರಾರು ಜನರು, ಅವರಿಗೆ ಕಂಬನಿಯ ವಿದಾಯ ಹೇಳಿದರು. ‘ರಾಯರ’ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡು ಪತ್ರಿಕಾ ವಿತರಕರು ಕಣ್ಣೀರಿಟ್ಟರು. ಜಿಲ್ಲಾ ಪತ್ರಿಕಾ ವಿತರಕರ ಸಂಘದಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗದುಗಿನ ವೀರನಾರಾಯಣ ದೇವಸ್ಥಾನದ ಸಮೀಪ ಇರುವ ಅವರ ಮನೆಯ ಆವರಣದಲ್ಲಿ ನೆರೆದಿದ್ದ ಪ್ರತಿಯೊಬ್ಬರ ಮುಖದಲ್ಲೂ ಗಾಢವಾದ ಮೌನ ಆವರಿಸಿತ್ತು. ಮೂರು ದಶಕಗಳ ಕಾಲ ಪತ್ರಿಕಾ ಏಜೆಂಟರಾಗಿ ಕೆಲಸ ಮಾಡಿದ್ದ ಅವರು, ಕಿರಿಯ ವಿತರಕರಿಗೆ ಮಾರ್ಗದರ್ಶಕರಾಗಿದ್ದರು.

‘ರಾಯರು ಸದಾ ಹಸನ್ಮುಖಿಗಳಾಗಿದ್ದರು. ಜಿಲ್ಲೆಯ ಪತ್ರಿಕಾ ವಿತರಕರ ಸಂಘದ ಬೆನ್ನೆಲುಬಾಗಿದ್ದ ಅವರು, ಸಂಘದ ಸ್ಥಾಪನೆಗೂ ಕಾರಣರಾಗಿದ್ದರು, ಪತ್ರಿಕೆ ವ್ಯವಹಾರದಲ್ಲಿ ಮಾತ್ರವಲ್ಲ, ಕಷ್ಟದ ಕಾಲದಲ್ಲೂ ಅವರು ತುಂಬು ಹೃದಯದಿಂದ ಸಹಕರಿಸುವ ವ್ಯಕ್ತಿಯಾಗಿದ್ದರು’ ಎಂದು ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ ಕುದರಿಮೋತಿ ಸ್ಮರಿಸಿದರು.

‘ಪ್ರಜಾವಾಣಿ’ ಪ್ರಸರಣ ವಿಭಾಗದ ಎಜಿಎಂ ಶಿವರಾಜ ಎಸ್‌.ನರೋಣ, ಶ್ರೀಶೈಲ ಮಣಕವಾಡ ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT