ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರಿಕರಿಗೆ ಚೈತನ್ಯ ತುಂಬುತ್ತಿದ್ದ ಶ್ರೀಗಳು..!

Last Updated 29 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪೇಜಾವರ ಶ್ರೀಗಳು ಲಕ್ಷ್ಮೇಶ್ವರದ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು.ಪಟ್ಟಣಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಅವರು, ಇಲ್ಲಿನ ಮಂತ್ರಾಲಯ ಪಾದಯಾತ್ರೆ ಸಂಘದ ಜತೆ ಅವಿನಾಭಾವ ನಂಟು ಹೊಂದಿದ್ದರು.ಈ ಸಂಘದ ಜತೆಗೆ ತಾವೇ ಪಾದಯಾತ್ರೆಯಲ್ಲಿ ಭಾಗವಹಿಸಿ ಸಾವಿರಾರು ಜನರಿಗೆ ಚೈತನ್ಯ ತುಂಬುತ್ತಿದ್ದರು.

ಪಟ್ಟಣದಲ್ಲಿ 50 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ನೀಡುತ್ತಿದ್ದ ಹಾಗೂ ಮಂತ್ರಾಲಯ ಪಾದಯಾತ್ರಾ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ವೈದ್ಯ ಬಾಬುರಾವ್ ಕುಲಕರ್ಣಿ ಅವರನ್ನು ಶ್ರೀಗಳು ಅಭಿಮಾನದಿಂದ ಕಾಣುತ್ತಿದ್ದರು. 9 ತಿಂಗಳ ಹಿಂದೆ ಅಂದರೆ 2019ರ ಮಾರ್ಚ್‌ನಲ್ಲಿಬಾಬುರಾವ್ ಕುಲಕರ್ಣಿ ಅವರು ನಿಧನರಾದ ಸಂದರ್ಭದಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಜಿಲ್ಲೆಗೆ ಅವರ ಭೇಟಿ ಅದೇ ಕೊನೆಯದಾಗಿತ್ತು.

‘ಪೇಜಾವರ ಶ್ರೀಗಳು ಪ್ರತಿ ವರ್ಷವೂ ಒಂದು ದಿನ ನಮ್ಮ ಪಾದಯಾತ್ರೆ ಸಂಘದ ಜತೆಗೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಸುಮಾರು 6 ರಿಂದ 8 ಕಿ.ಮೀ.ವರೆಗೆ ಪಾದಯಾತ್ರೆ ಮುನ್ನಡೆಸುತ್ತಿದ್ದರು’ ಎಂದು ಪಾದಯಾತ್ರಾ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಕುಲಕರ್ಣಿ ತಂಗೋಡ ಸ್ಮರಿಸಿಕೊಂಡರು.

‘ಮಂತ್ರಾಲಯ ಪಾದಯಾತ್ರೆ ಸಂಘದ ಸಂರಕ್ಷರಾಗಿದ್ದ ಶ್ರೀಗಳು ನೀಡುತ್ತಿದ್ದ ಮಾರ್ಗದರ್ಶನ ಸಾವಿರಾರು ಪಾದಯಾತ್ರಿಕರಿಗೆ ನವ ಚೈತನ್ಯ ತುಂಬುತ್ತಿತ್ತು’ ಎಂದು ಅವರು ಹೇಳಿದರು. ‘ಬಾಬುರಾವ್ ಕುಲಕರ್ಣಿ ಅವರು ನಡೆಸುತ್ತಿದ್ದ ಅಸ್ತಮಾ ಯಜ್ಞಕ್ಕೆ ಆಗಮಿಸಿದ್ದ ಶ್ರೀಗಳು ಸ್ವತಃ ತಾವೇ ರೋಗಿಗಳಿಗೆ ಔಷಧಿ ವಿತರಿಸಿದ್ದರು’ ಎಂದು ಸಂಘದ ಸದಸ್ಯ ಡಿ.ಎಂ.ಪೂಜಾರ ಸ್ಮರಿಸಿಕೊಂಡರು.

ಹಿರೇಬಣದ ವೆಂಕಟೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡ ನಂತರ ಲೋಕಾರ್ಪಣೆಗೆ ಆಗಮಿಸಿದ್ದ ಶ್ರೀಗಳು ಅಂದೇ ಉಡುಪಿಗೆ ತೆರಳಿದ್ದರು. ಮರುದಿನ ಮತ್ತೆ ಲಕ್ಷ್ಮೇಶ್ವರಕ್ಕೆ ಬಂದು, ಭಕ್ತರ ಮನೆ ಮನೆಗೆ ಹೋಗಿ ಪಾದಪೂಜೆಯಲ್ಲಿ ಭಾಗವಹಿಸಿದ್ದನ್ನು ಇಲ್ಲಿನ ಭಕ್ತರು ಸದಾ ಸ್ಮರಿಸುತ್ತಾರೆ. ಸಮೀಪದ ಶಿಗ್ಲಿ ಗ್ರಾಮಕ್ಕೆ ತೆರಳಿ ವೀರಣ್ಣ ಪವಾಡದ ಅವರ ಮನೆಯಲ್ಲಿ ಪೂಜೆ ಸ್ವೀಕರಿಸಿದ್ದರು.

ಮಂತ್ರಾಲಯ ಪಾದಯಾತ್ರೆಯಲ್ಲಿ ಒಂದು ದಿನ ಪಾಲ್ಗೊಂಡು, ಮಂತ್ರಾಲಯದಲ್ಲಿ ಹೆಲಿಕಾಪ್ಟರ್‌ ಮೂಲಕ ಮಂತ್ರಾಲಯ ಶ್ರೀಗಳು ಹಾಗೂ ಬಾಬುರಾವ ಕುಲಕರ್ಣಿ ಅವರೊಂದಿಗೆ ರಾಯರ ಬೃಂದಾವನಕ್ಕೆ ಪುಷ್ಪವೃಷ್ಟಿ ಮಾಡಿದ ಘಟನೆಯನ್ನು ಕೃಷ್ಣ ಕುಲಕರ್ಣಿ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT