ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಸಂತರಾಗಿದ್ದ ಪೇಜಾವರ ಶ್ರೀಗೆ ತೋಂಟದ ಶ್ರೀ ಕಂಬನಿ

Last Updated 29 ಡಿಸೆಂಬರ್ 2019, 13:28 IST
ಅಕ್ಷರ ಗಾತ್ರ

ಗದಗ: ‘ಪೇಜಾವರ ಶ್ರೀಗಳು ನಮ್ಮ ರಾಷ್ಟ್ರಕಂಡ ಅಪರೂಪದ ಸಂತರಾಗಿದ್ದರು. ಇಡೀ ರಾಷ್ಟ್ರದ ಜನರ ಮೇಲೆ ಅವರಷ್ಟು ಪ್ರಭಾವವನ್ನು ಬೀರಿದ ಸಂತರು ಬಹಳ ವಿರಳ. ಸಂಪ್ರದಾಯಬದ್ಧ ಮಠಾಧೀಶರಾಗಿದ್ದೂ ಅವರು ಪ್ರಗತಿಪರ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ಅಗಲುವಿಕೆಯ ನೋವು ನಮ್ಮನ್ನು ನಿರಂತರ ಬಾಧಿಸದೇ ಇರದು’ ಎಂದು ಗದುಗಿನ ತೊಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.

‘ಸಂಪ್ರದಾಯಗಳನ್ನು ಮೀರಿ ಎಲ್ಲ ಸಮುದಾಯದ ಮಠಗಳಿಗೆ ಆಗಮಿಸಿ ಧಾರ್ಮಿಕ ಸಾಮರಸ್ಯ ಸಾಧಿಸುವ ನಿರಂತರ ಪ್ರಯತ್ನ ಅವರದಾಗಿತ್ತು. ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆಯ ವಿಷಯದಲ್ಲಿ ಅವರ ಕಾಳಜಿ ಅನನ್ಯವಾಗಿತ್ತು. ಹಾಗಾಗಿ ರಾಷ್ಟ್ರಸಂತರೆಂಬ ಅಭಿದಾನಕ್ಕೆ ಅವರು ಅನ್ವರ್ಥಕವಾಗಿದ್ದರು. ಜಾತಿ, ಮತ ಪಂಥಗಳ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ, ಸಮರಸಗೊಳಿಸುವ ಅವರ ಔದಾರ್ಯ ಇತರ ಮಠಾಧೀಶರಿಗೆ ಆದರ್ಶಪ್ರಾಯವಾದುದು’ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

‘ಸಂಪ್ರದಾಯಬದ್ಧ ಮಠಾಧೀಶರ ವಿರೋಧದ ಮಧ್ಯೆಯೂ ಅವರು ತಮ್ಮ ಸಂಪ್ರದಾಯವನ್ನು ಬದಿಗಿರಿಸಿ, ಪ್ರಪ್ರಥಮವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಕಾರ್ಯಕ್ರಮಕ್ಕೆ ಬಂದು, ಮಠ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಮೆಚ್ಚಿಕೊಂಡಿದ್ದರು. ಲಿಂಗಾಯತ ಮಠಗಳು ಬಡವಿದ್ಯಾರ್ಥಿಗಳಿಗೆ ಅನ್ನ-ಆಶ್ರಯ ನೀಡಿ ಶೈಕ್ಷಣಿಕ ಅಭಿವೃದ್ಧಿ ಸಾಧಿಸುತ್ತಿರುವುದನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು. ಹೀಗೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಕ್ರಮದಿಂದ ಲಿಂಗಾಯತ ಮಠಗಳು ದೇಶದ ಎಲ್ಲ ಮಠ, ಮಠಾಧೀಶರಿಗೆ ಮಾದರಿಯಾಗಿವೆ’ ಎಂದೂ ಅವರು ಅಭಿಮಾನದಿಂದ ಹೇಳುತ್ತಿದ್ದರು’ ಎಂದು ತೋಂಟದ ಶ್ರೀಗಳು ಸ್ಮರಿಸಿದ್ದಾರೆ.

‘ಹಿಂದೂ ಧರ್ಮದ ವರ್ಣಾಶ್ರಮ ಭೇದಗಳ ಮಧ್ಯೆಯೂ ಅವರು ದೇಶದ ಜನರ ಐಕ್ಯತೆ ಹಾಗೂ ಸಮಗ್ರತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ನಿರಂತರ ಶ್ರಮಿಸಿರುವುದನ್ನು ಈ ರಾಷ್ಟ್ರವು ಎಂದೂ ಮರೆಯಲು ಸಾಧ್ಯವಿಲ್ಲ. ಧರ್ಮದ ಸಂವಿಧಾನದ ಜೊತೆಗೆ ರಾಷ್ಟ್ರದ ಸಂವಿಧಾನವನ್ನು ಗೌರವಿಸಿ ರಾಷ್ಟ್ರದ ಜನತೆಗೆ ಉದಾತ್ತ ಸಂದೇಶ ನೀಡಿದ ಅವರು ಮಹಾನ್ ಸಂತರಾಗಿದ್ದರು. ಅವರ ನೆನಪು ಚಿರಸ್ಮರಣೀಯ’ ಎಂದು ಶ್ರೀಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT