ಗೋವಿನ ಜೋಳಕ್ಕೆ ಕೀಟಬಾಧೆ: ರೈತ ಕಂಗಾಲು

7
ತಾಲ್ಲೂಕು ವ್ಯಾಪ್ತಿಯಲ್ಲಿ ತೀವ್ರಗೊಂಡ ಲದ್ದಿಹುಳು ಮತ್ತು ಕಾಂಡಕೊರಕ ಹುಳು ಕಾಟ

ಗೋವಿನ ಜೋಳಕ್ಕೆ ಕೀಟಬಾಧೆ: ರೈತ ಕಂಗಾಲು

Published:
Updated:
Deccan Herald

ಲಕ್ಷ್ಮೇಶ್ವರ: ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಉತ್ಸಾಹಗೊಂಡ ರೈತರು, ನಿರೀಕ್ಷೆಗೆ ಮೀರಿ ಗೋವಿನ ಜೋಳ ಮತ್ತು ಶೇಂಗಾ ಬಿತ್ತನೆ ಮಾಡಿದ್ದರು. ಬೆಳೆಗಳು ಇನ್ನೇನು ಕೈಗೆ ಬರಬೇಕು ಎನ್ನುವಷ್ಟರಲ್ಲಿ ರೋಗಬಾಧೆ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ಕಳೆದ ಮುಂಗಾರಿನಲ್ಲಿ ಗೋವಿನ ಜೋಳಕ್ಕೆ ಲದ್ದಿಹುಳು ಕಾಟದಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿತ್ತು. ಈ ಬಾರಿಯೂ ತಾಲ್ಲೂಕು ವ್ಯಾಪ್ತಿಯಲ್ಲಿ ಲದ್ದಿಹುಳು ಮತ್ತು ಕಾಂಡಕೊರಕ ಹುಳುವಿನ ಕಾಟ ತೀವ್ರಗೊಂಡಿದೆ.
ಲಕ್ಷ್ಮೇಶ್ವರ ಸುತ್ತಮುತ್ತಲಿನ ಒಡೆಯರ ಮಲ್ಲಾಪುರ, ಶಿಗ್ಲಿ, ದೊಡ್ಡೂರು ಭಾಗಗಳಲ್ಲಿ ವ್ಯಾಪಕವಾಗಿ ಗೋವಿನಜೋಳಕ್ಕೆ ಕೀಟಬಾಧೆ ಕಾಣಿಸಿಕೊಂಡಿದೆ. ಈ ಬಾರಿ ಉತ್ತಮ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಕಿಟಬಾಧೆ ತಣ್ಣೀರು ಎರಚಿದೆ.

‘ಈ ಹುಳುಗಳು ಹಗಲು ಗಿಡದ ಸುಳಿಯಲ್ಲಿ ಅಡಗಿಕೊಂಡಿರುತ್ತವೆ. ರಾತ್ರಿವೇಳೆ ಸಮರೋಪಾದಿಯಲ್ಲಿ ಎಲೆಗಳನ್ನು ತಿಂದು ಮುಗಿಸುತ್ತವೆ. ಬೆಳಕು ಹರಿಯುತ್ತಿದ್ದಂತೆ, ಹಸಿರಿನಿಂದ ನಳನಳುತ್ತಿದ್ದ ಇಡೀ ಜಮೀನು ಬಟಾಬಯಲಾಗಿರುತ್ತದೆ. ಜಮೀನಿನಲ್ಲಿ ಹುಳುಗಳ ಸಂಖ್ಯೆ ಹೆಚ್ಚಾದಷ್ಟು ಹಾನಿ ಪ್ರಮಾಣವೂ ಹೆಚ್ಚುತ್ತದೆ. ಗೋವಿನ ಜೋಳದ ಎಲೆಯ ನಡುವಿನ ನರವೊಂದದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ತಿಂದು ಮುಗಿಸುತ್ತವೆ’ ಎನ್ನುತ್ತಾರೆ ಈ ಭಾಗದ ರೈತರು.

‘ಮೊದಲೇ ಮಳೆ ಕೊರತೆಯಿಂದ ಬೆಳೆಗಳು ಒಣಗಲು ಪ್ರಾರಂಭಿಸಿವೆ. ಚೆನ್ನಾಗಿ ಬೆಳೆದಿದ್ದ ಗೋವಿನಜೋಳಕ್ಕೆ ಈಗ ಕೀಟಬಾಧೆ ಪ್ರಾರಂಭಗೊಂಡಿದೆ. ಪರಿಸ್ಥಿತಿ ಹೀಗಾದರೆ ರೈತರ ಗತಿ ಏನು’ ಎಂದು ಪ್ರಶ್ನಿಸುತ್ತಾರೆ ಲಕ್ಷ್ಮೇಶ್ವರದ ಪ್ರಗತಿಪರ ರೈತ ಸೋಮನಗೌಡ ಪಾಟೀಲ.

‘ಕೀಟಬಾಧೆ ಕಾಣಿಸಿಕೊಂಡಾಗ ಮೊದಲು ಎಲೆಗಳಲ್ಲಿ ಸಣ್ಣ ರಂಧ್ರಗಳು ಕಾಣಿಸುತ್ತವೆ. ನಂತರ ಎಲೆ ಒಣಗಲು ತೊಡಗುತ್ತವೆ. ಅಷ್ಟರಲ್ಲಿ ಕಾಂಡಕೊರಕ ಹುಳು, ಇಡೀ ಕಾಂಡವನ್ನೇ ತಿಂದು ಮುಗಿಸುತ್ತದೆ’ ಎನ್ನುತ್ತಾರೆ ಅವರು.

ಲದ್ದಿಹುಳು ನಿಯಂತ್ರಣಕ್ಕೆ ಪಾಷಾಣ ಪ್ರಯೋಗ..!
1.ಕಾಂಡ ಕೊರಕ ಹುಳು
ಲಕ್ಷಣ: ಕೀಟ ಬಾಧೆ ಕಾಣಿಸಿಕೊಂಡ ಗಿಡಗಳ ಎಲೆಗಳಲ್ಲಿ ಮೊದಲು ಸಣ್ಣ ರಂಧ್ರಗಳು ಕಾಣಿಸುತ್ತವೆ. ಕ್ರಮೇಣ ಸುಳಿಗಳು ಒಣಗುತ್ತವೆ. ಕಾಂಡ ಟೊಳ್ಳಾಗಿ ಬೆಳೆ ಒಣಗುತ್ತದೆ.
ನಿಯಂತ್ರಣ: ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ 7.5 ಕಿ. ಗ್ರಾಂ ಲಿಂಡೇನ್, ಶೇ.1ರ ಹರಳು ಅಥವಾ 7.5 ಕಿ. ಗ್ರಾಂ ಕಾರ್ಬಾರಿಲ್ ಶೇ. 4 ರ ಹರಳನ್ನು ಎಲೆ ಸುರುಳಿಯಲ್ಲಿ ಹಾಕಬೇಕು. ಕೀಟಬಾಧೆ ಮರುಕಳಿಸಿದರೆ, 2 ವಾರಗಳ ನಂತರ ಮತ್ತೊಮ್ಮೆ ಇದೇ ಕ್ರಮ ಅನುಸರಿಸಬೇಕು.

ಲದ್ದಿಹುಳು
ಲಕ್ಷಣ
: ಹುಳುಗಳು ಎಲೆಯ ಮಧ್ಯದ ನರವೊಂದನ್ನು ಬಿಟ್ಟು ಎಲ್ಲ ಭಾಗವನ್ನು ತಿಂದು ಹಾಕುತ್ತವೆ.
ನಿಯಂತ್ರಣ: ಕಳಿತ ಪಾಷಾಣ ಬಳಕೆಯಿಂದ ಲದ್ದಿಹುಳು ನಿಯಂತ್ರಿಸಬಹುದು. ಇದಕ್ಕಾಗಿ 5-ರಿಂದ8 ಲೀಟರ್ ನೀರಿನಲ್ಲಿ 250ಮಿ.ಲೀ ಮೊನೊಕ್ರೋಟೊಫಾಸ್ 36 ಎಸ್.ಎಲ್ ಕೀಟನಾಶಕವನ್ನು 4 ಕಿ. ಗ್ರಾಂ ಬೆಲ್ಲದೊಂದಿಗೆ ಬೆರೆಸಬೇಕು. ಈ ದ್ರಾವಣವನ್ನು 50 ಕಿ.ಗ್ರಾಂ ಅಕ್ಕಿಯ ಅಥವಾ ಗೋದಿ ತೌಡಿನಲ್ಲಿ ಬೆರಸಬೇಕು. ನಂತರ ಇದನ್ನು 2 ದಿನ ಪ್ಲಾಸ್ಟಿಕ್ ಚೀಲ ಅಥವಾ ಪೀಪಾಯಿಯಲ್ಲಿ ಕಳಿಯಲು ಬಿಡಬೇಕು. ನಂತರ ಇದನ್ನು ಪ್ರತಿ ಹೆಕ್ಟೇರಿಗೆ 50 ಕಿ. ಗ್ರಾಂನಂತೆ ಸಂಜೆಯ ವೇಳೆ ಗೋವಿನ ಜೋಳದ ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !