ಮಂಗಳವಾರ, ಜೂನ್ 28, 2022
21 °C
ಪರಿಹಾರ ವಿತರಣೆಯಲ್ಲಿ ತಾರತಮ್ಯ– ಶಾಸಕ ಎಚ್‌.ಕೆ.ಪಾಟೀಲ ಕಿಡಿ

ತಾರಾಲಯ ಲೋಕಾರ್ಪಣೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ನಿರ್ಮಾಣ ಹಂತದಲ್ಲಿರುವ ತಾರಾಲಯದ ಕೆಲಸಗಳನ್ನು ಆ.15ರ ಒಳಗೆ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲಾಗುವುದು’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ಭಾನುವಾರ ನಗರದ ಬೆಟಗೇರಿಯಲ್ಲಿರುವ ತಾರಾಲಯ ಕಟ್ಟಡ ವೀಕ್ಷಣೆ ಮಾಡಿ ಅವರು ಮಾತನಾಡಿ, ‘ಮುಂದಿನ 15– 20 ದಿನಗಳ ಒಳಗಾಗಿ ಪ್ಲಾನಿಟೋರಿಯಂಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಲಾಗುವುದು. ಜೂನ್‌ ಅಂತ್ಯದ ವೇಳೆಗೆ ಟ್ರಯಲ್‌ ಅಂಡ್‌ ಎರರ್‌ ನಡೆಯಲಿದ್ದು, ಆ ವೇಳೆ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿ ಆ.15ರ ಒಳಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಗದಗ ನಗರದಲ್ಲೂ ವಿಜ್ಞಾನ ಕೇಂದ್ರ ಆಗಬೇಕು ಎಂಬುದು ಬಹಳಷ್ಟು ಜನರ ಅಪೇಕ್ಷೆಯಾಗಿತ್ತು. ಅವರ ಆಸೆಗೆ ತಕ್ಕಂತೆ ತಾರಾಲಯ ಮೂಡಿಬಂದಿದೆ’ ಎಂದು ತಿಳಿಸಿದರು.

‘ಕಳೆದ ಮೂರು ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದ ಸಾಕಷ್ಟು ಆಸ್ತಿ ಹಾನಿ ಆಗಿದೆ. ಶಾಸಕನಾಗಿ ಮನೆ ಬಿದ್ದು ಹೋದವರ ಸಂತ್ರಸ್ತರ ಮನೆಗೆ ಭೇಟಿ ನೀಡಿ, ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ, ಗದುಗಿನ ಕೆಲವು ಅಧಿಕಾರಿಗಳು ಬ್ರಿಟಿಷ್‌ ನೀತಿ ಅನುಸರಿಸುತ್ತಿದ್ದು, ನಾಲ್ಕು ಸಂತ್ರಸ್ತರಲ್ಲಿ ಒಬ್ಬರಿಗೆ ಅತ್ಯಂತ ಕಡಿಮೆ ಪರಿಹಾರ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಳೆಹಾನಿಯಿಂದ ನೊಂದಿರುವ ಜನರಿಗೆ ತಾರತಮ್ಯ ಮಾಡದೇ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ದುರಸ್ತಿ ಕೆಲಸವನ್ನು ಆದಷ್ಟು ಬೇಗ ಆರಂಭಿಸಲಾಗುವುದು’ ಎಂದು ಅವರು ಹೇಳಿದರು. 

‘ಗದಗ ನಗರದಲ್ಲಿರುವ ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದಿರುವಂತೆ ಆಗ್ರಹಿಸಿದ್ದೇನೆ. ಈ ಆಸ್ಪತ್ರೆ ಹಿಂದಿನಂತೆ 24x7 ಕಾರ್ಯನಿರ್ವಹಿಸುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೆಕು. ಸೇವೆಯಲ್ಲಿ ಸಣ್ಣ ವ್ಯತ್ಯಯ ಕೂಡ ಆಗಕೂಡದು ಎಂದು ಸೂಚಿಸಿರುವೆ’ ಎಂದು ತಿಳಿಸಿದರು.

‘ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ. ನಿರುದ್ಯೋಗ ಪ್ರಮಾಣ ಹಿಗ್ಗುತ್ತಿದೆ. ಬೆಲೆ ಏರಿಕೆ ಏರುಮುಖದಲ್ಲಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ವಿಶ್ಲೇಷಣೆ ಮಾಡಿರುವ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿಯವರು ತಪ್ಪು ವ್ಯಾಖ್ಯಾನ ಮಾಡುವುದು ಸರಿಯಲ್ಲ. ದೇಶದಲ್ಲಿ ಶಾಂತ ವಾತಾವರಣ ಇಲ್ಲ ಎಂಬುದನ್ನು ಪ್ರತಿಯೊಬ್ಬ ಪ್ರಜೆ ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ’ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಅಶೋಕ್‌ ಮಂದಾಲಿ, ಉಮರ್‌ ಫಾರೂಕ್‌ ಹುಬ್ಬಳ್ಳಿ ಇದ್ದರು.

ಮನೆ ತಗ್ಗಿನಲ್ಲಿ; ರಸ್ತೆ ಎತ್ತರದಲ್ಲಿ!

ಮೊನ್ನೆ ಸುರಿದ ಮಳೆಯಿಂದಾಗಿ ಗಂಗಿಮಡಿಯಲ್ಲಿ ಬಹಳಷ್ಟು ಮನೆಗಳಿಗೆ ಮಳೆನೀರು ನುಗ್ಗಿದೆ. ಬಡಾವಣೆ ವಿನ್ಯಾಸದಲ್ಲಿನ ಅವೈಜ್ಞಾನಿಕತೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಗಂಗಿಮಡಿಯಲ್ಲಿ ಮನೆಗಳು ತಗ್ಗಿನಲ್ಲಿವೆ. ರಸ್ತೆ ಎತ್ತರದಲ್ಲಿದೆ. ಇದು ಸಮಸ್ಯೆಗೆ ಮೂಲ ಕಾರಣ. ಈ ಬಗ್ಗೆ ಎಂಜಿನಿಯರ್‌ ಜತೆಗೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

‌ಗಂಗಿಮಡಿಯಲ್ಲಿ ದೊಡ್ಡದೊಂದು ಚರಂಡಿ ನಿರ್ಮಾಣ ಆಗಬೇಕು. ಜತೆಗೆ ಬೀದಿದೀಪ ವ್ಯವಸ್ಥೆ ಆಗಬೇಕು. ಇವೆರಡೂ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಶೀಘ್ರದಲ್ಲೇ ಬಗೆಹರಿಸಲಾಗುವುದು. ಇದರ ಜತೆಗೆ ಬಡಾವಣೆಯಲ್ಲಿರುವ ದೊಡ್ಡ ಸಮಸ್ಯೆಗಳನ್ನು ತಾಂತ್ರಿಕ ಮಾರ್ಗದರ್ಶನ ಪಡೆದುಕೊಂಡು ಪರಿಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು