ಪತ್ತೆದಾರಿ ‘ರಮ್ಯಾ’ ಇನ್ನು ನೆನಪು ಮಾತ್ರ..!

7
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದ ಪೊಲೀಸ್‌ ಶ್ವಾನ

ಪತ್ತೆದಾರಿ ‘ರಮ್ಯಾ’ ಇನ್ನು ನೆನಪು ಮಾತ್ರ..!

Published:
Updated:
Prajavani

ಗದಗ: ಕೊಲೆ,ದರೋಡೆ ಸೇರಿದಂತೆ ಜಿಲ್ಲೆಯಲ್ಲಿ ನಡೆದ 120ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿದ್ದ ಇಲಾಖೆಯ ಶ್ವಾನ ದಳದ ‘ರಮ್ಯಾ’ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹಳೆಯ ಪರೇಡ್‌ ಮೈದಾನದಲ್ಲಿ (ಹೆಲ್ತ್ ಕ್ಯಾಂಪ್‍ನಲ್ಲಿರುವ ಪೊಲೀಸ್ ವಸತಿ ಗೃಹ ಪ್ರದೇಶ) ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

‘ಡಾಬರಮನ್‌’ ಜಾತಿಯ 11ರ ಪ್ರಾಯದ ‘ರಮ್ಯಾ’ ಕಳೆದೊಂದು ದಶಕದಿಂದ, ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಪ್ರಮುಖ ಪತ್ತೆದಾರಿಯಾಗಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನ ದಳದಲ್ಲಿ 10 ತಿಂಗಳು ತರಬೇತಿ ಪಡೆದ ಈ ಶ್ವಾನ 2009 ರ ಅ.13 ರಂದು ಇಲಾಖೆಗೆ ಸೇರ್ಪಡೆಯಾಗಿತ್ತು.

ರಮ್ಯಾ ತನ್ನ ಚತುರ ಬುದ್ಧಿಯಿಂದ ಸಿಬ್ಬಂದಿಯ ಪ್ರೀತಿ, ಅಕ್ಕರೆ ಸಂಪಾದಿಸಿತ್ತು. ತರಬೇತುದಾರ ಸಂತೊಷ ನಾಯಕ್ ಅವರು ರಮ್ಯಾಳನ್ನು ಸಲಹುತ್ತಿದ್ದರು.ಸೋಮವಾರ ಅಂತಿಮ ನಮನ ಸಲ್ಲಿಸುವಾಗ ಸಂತೊಷ ನಾಯಕ್ ಅವರು ಬಿಕ್ಕಿ-ಬಿಕ್ಕಿ ಅತ್ತಿದ್ದು ನೆರೆದಿದ್ದವರ ಕಣ್ಣುಗಳು ತೋಯುವಂತೆ ಮಾಡಿದವು.

ಪೊಲೀಸ್‌ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶ್ವಾನಗಳಿಗೆ ನಿವೃತ್ತಿ ಘೋಷಿಸುವುದು ಸಾಮಾನ್ಯ. ಆದರೆ, ರಮ್ಯಾಳ ಚತುರತೆ ಕಂಡು ಸೇವೆಯನ್ನು ಒಂದು ವರ್ಷ ಮುಂದೂಡಲಾಗಿತ್ತು. ಈ ರೀತಿ ಸೇವೆ ವಿಸ್ತರಣೆಗೊಳ್ಳುವ ಶ್ವಾನಗಳು ಅಪರೂಪ. ಆದರೆ, ಇತ್ತೀಚೆಗೆ ಗರ್ಭಾಶಯ ಸೋಂಕು ಮತ್ತು ಶ್ವಾಸಕೋಶದ ತೊಂದರೆಯಿಂದ ಶ್ವಾನ ಬಳಲುತ್ತಿತ್ತು. ಸೋಮವಾರ ಬೆಳಿಗ್ಗೆ ಎದ್ದಿದ್ದ ರಮ್ಯಾ, ಕೆಲ ನಿಮಿಷಗಳಲ್ಲೇ ಕುಸಿದು ಬಿದ್ದಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಪ್ರಾಣಪಕ್ಷಿ ಹಾರಿಹೋಗಿದೆ.
ಜಿಲ್ಲಾ ಶ್ವಾನದಳದಲ್ಲಿ ರಮ್ಯಾಳೊಂದಿಗೆ ಶ್ವೇತಾ, ಸ್ವಾತಿ ಹಾಗೂ ರ್‍ಯಾಂಬೊ ಸೇವೆ ಸಲ್ಲಿಸುತ್ತಿದ್ದವು. ರಮ್ಯಾಳನ್ನು ಕಳೆದುಕೊಂಡ ಉಳಿದ ಶ್ವಾನಗಳು ಮೌನವಾಗಿ ರೋಧಿಸುತ್ತಿವೆ.

ಸರ್ಕಾರಿ ಗೌರವ: ಇಲಾಖೆಯಲ್ಲಿ ಅಪರಾಧ ಪತ್ತೆ ಶ್ವಾನವನ್ನೂ ಸಿಬ್ಬಂದಿ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಮೃತಪಟ್ಟ ಶ್ವಾನವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹಳೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.ಡಿವೈಎಸ್‍ಪಿ ವಿಜಯಕುಮಾರ ತಳವಾರ, ಡಿಸಿಆರ್‌ಬಿ ಡಿವೈಎಸ್‍ಪಿ ವೈ.ಬಿ. ಎಗನಗೌಡ್ರ, ಸಿಪಿಐ ವೆಂಕಟೇಶ ಯಡಹಳ್ಳಿ, ಡಿ.ಎಸ್. ಧನಗರ, ಲೋಕಾಯುಕ್ತ ಸಿಪಿಐ ಪುರುಷೋತ್ತಮ, ಪಿಎಸ್‍ಐಗ ಶಿವಾನಂದ ಪಾಲಭಾವಿ ಹಾಗೂ ಸಿಬ್ಬಂದಿ ಎರಡು ನಿಮಿಷ ಮೌನ ಆಚರಿಸಿ, ಅಂತಿಮನ ನಮನ ಸಲ್ಲಿಸಿದರು.

ಬಳಿಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಮೈದಾನದ ಮೂಲೆಯೊಂದರ ತೆಂಗಿನ ಮರವೊಂದರ ಕೆಳಗೆ ಹೂಳಲಾಯಿತು.

Tags: 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !