ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಚಪ್ಪಾಳೆ ತಟ್ಟಿ, ಹೂಮಳೆಗೆರೆದು ಅಭಿನಂದನೆ..!

ಕೊರೊನಾ ಸೇನಾನಿಗಳಿಂದ ಪಥಸಂಚಲನ; ಸೋಂಕಿನ ವಿರುದ್ಧ ಜನ ಜಾಗೃತಿ
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಗದಗ: ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಪಥಸಂಚಲನ ನಡೆಸಿದ ಕೊರೊನಾ ಸೇನಾನಿಗಳಿಗೆ, ಸಾರ್ವಜನಿಕರು ಮನೆಯ ಮುಂದೆ ನಿಂತು ಚಪ್ಪಾಳೆ ತಟ್ಟಿ, ಹೂಮಳೆಗೆರೆದು, ಸಿಹಿ ವಿತರಿಸಿ ಅಭಿನಂದನೆ ಸಲ್ಲಿಸಿದರು.

ಲಾಕ್‌ಡೌನ್‌ ಜಾರಿಯಾದ ದಿನದಿಂದಲೂ ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಪೊಲೀಸರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗುರುವಾರ ಇವರು ಪಥಸಂಚಲನ ನಡೆಸಿದಾಗ, ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜನರಿಂದ ಕೊರೊನಾ ಸೇನಾನಿಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂತು.

ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಜಾಗೃತಿ ಪಥಸಂಚಲನ ಕೈಗೊಂಡಿತ್ತು. ಗದುಗಿನ ತೋಂಟದಾರ್ಯ ಮಠದ ಆವರಣದಿಂದ ಆರಂಭವಾದ ಪಥಸಂಚಲನ ಮಹೇಂದ್ರಕರ್‌ ವೃತ್ತ, ಶಹಪೂರ ಪೇಟೆ, ಗಂಗಾಪೂರ ಪೇಟೆ, ವೀರನಾರಾಯಣ ದೇವಸ್ಥಾನ, ಸರಾಫ್‌ ಬಜಾರ್‌, ಜುಮ್ಮಾ ಮಸೀದಿ, ತಿಲಕ್‌ ಪಾರ್ಕ್‌, ಬಸವೇಶ್ವರ ವೃತ್ತ ಮಾಗರ್ವಾಗಿ ಗ್ರೇನ್‌ ಮಾರುಕಟ್ಟೆ ಪ್ರದೇಶಕ್ಕೆ ಬಂದು ಸಮಾರೋಪಗೊಂಡಿತು.

ಪೌರಕಾರ್ಮಿಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ಪಥಸಂಚಲನಕ್ಕೆ ಚಾಲನೆ ನೀಡಿದರು.

ಪಥಸಂಚಲನ ಮಾರ್ಗದುದ್ದಕ್ಕೂ ಸಾರ್ವಜನಿಕರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಕೊರೊನಾ ಸೇನಾನಿಗಳ ಮೇಲೆ ಹೂವಿನ ಮಳೆ ಸುರಿಸಿ, ಚಪ್ಪಾಳೆ ಬೆಟಗೇರಿ ಪೊಲೀಸ್‌ ಠಾಣೆ ಪಿಎಸ್‌ಐ ರಾಜೇಶ್‌ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಯಮ, ಕಿಂಕರ ವೇಷ ಧರಿಸಿ ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ, ಸಾವು ಕೊರೊನಾ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಯಮ, ಕಿಂಕರರು ಅಭಿನಯಿಸಿ ತೋರಿಸಿದರು.

ಪೊಲೀಸ್‌ ಜೀಪಿನಲ್ಲಿ ಕುಳಿತು ಸಾಗಿದ ಯಮ, ಕಿಂಕರರು ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ವಾಹನ ಸವಾರರನ್ನು ಯಮಪಾಶ ಹಾಕಿ ಹಿಡಿದು ನಿಲ್ಲಿಸಿದರು. ಮನೆ ಬಿಟ್ಟು ಹೊರಬರಬಾರದು, ಬಂದರೆ ಯಮಲೋಕಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.

ಗುರುವಾರ ಮಾರುಕಟ್ಟೆ ಬಂದ್‌ ಇದ್ದ ಕಾರಣ ಸಾರ್ವಜನಿಕರು ಮಾರುಕಟ್ಟೆಯತ್ತ ಸುಳಿಯಲಿಲ್ಲ. ಎಪಿಎಂಸಿಯಲ್ಲಿ ಸಗಟು ತರಕಾರಿ ವ್ಯಾಪಾರವು ಮಧ್ಯರಾತ್ರಿ 12ಕ್ಕೆ ಆರಂಭವಾಗಿ ಬೆಳಿಗ್ಗೆ 6ಕ್ಕೆ ಮುಕ್ತಾಯಗೊಂಡಿತು. ಬ್ಯಾಂಕ್‌ ಖಾತೆಯಿಂದ ಹಣ ತೆಗೆಯಲು, ಔಷಧಿ ತರಲು ಬೆರಳೆಣಿಕೆಯ ಜನರಷ್ಟೇ ರಸ್ತೆಗಿಳಿದಿದ್ದರು. ಉಳಿದಂತೆ ಇಡೀ ನಗರ ಬಿಕೊ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT