ಭಾನುವಾರ, ಜುಲೈ 3, 2022
23 °C
ರಸ್ತೆಯಲ್ಲೇ ಧರಣಿ; ನಿರಂತರ ಹೋರಾಟದ ಎಚ್ಚರಿಕೆ

ದಿಂಗಾಲೇಶ್ವರ ಶ್ರೀಗಳು ನರಗುಂದ ಪ್ರವೇಶಕ್ಕೆ ತಡೆಯೊಡ್ಡಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ (ಗದಗ ಜಿಲ್ಲೆ): ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮುಂದೆ ಧರಣಿ ನಡೆಸಲು ಬರುತ್ತಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳನ್ನು ತಾಲ್ಲೂಕಿನ ಕಲಕೇರಿ ಚೆಕ್‌ಪೋಸ್ಟ್ ಬಳಿ ಪೊಲೀಸರು ತಡೆದ ಘಟನೆ ಬುಧವಾರ ನಡೆಯಿತು. ಇದರಿಂದ ನರಗುಂದದಲ್ಲಿ ದಿಂಗಾಲೇಶ್ವರರ ಧರಣಿ ನಡೆಯದೇ ಕಲಕೇರಿಯಲ್ಲಿ ಮೊಟಕುಗೊಂಡಿತು.

ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಕಲಕೇರಿ ಬಳಿಗೆ ಬಂದ ದಿಂಗಾಲೇಶ್ವರ ಶ್ರೀಗಳನ್ನು ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸರು ತಡೆದಿದ್ದರಿಂದ, ಶ್ರೀಗಳು ಸಿಡಿಮಿಡಿಗೊಂಡರು.

ನರಗುಂದಕ್ಕೆ ತೆರಳಿ ಧರಣಿ ಮಾಡಲು ಅವಕಾಶ ಕೊಡುವಂತೆ ಶ್ರೀಗಳು ಬಿಗಿಪಟ್ಟು ಹಿಡಿದರು. ಇದರಿಂದ ಪೊಲೀಸರು ಮತ್ತು ಸ್ವಾಮೀಜಿ ನಡುವೆ ಕೆಲವು ನಿಮಿಷಗಳ ಕಾಲ ವಾಗ್ವಾದ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ‘ಸಚಿವ ಸಿ.ಸಿ.ಪಾಟೀಲ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ತೇಜೋವಧೆ ಮಾಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಮಾಡಲು ಬಂದರೆ ಪೊಲೀಸರು ನಮ್ಮನ್ನು ರಸ್ತೆಯಲ್ಲೇ ತಡೆದಿದ್ದಾರೆ’ ಎಂದು ಆರೋಪಿಸಿದರು.

‘ಸಾರ್ವಜನಿಕರನ್ನು ಯಾವುದೇ ತಪಾಸಣೆ  ಮಾಡದೇ ಪೊಲೀಸರು ನರಗುಂದಕ್ಕೆ ಬಿಡುತ್ತಿದ್ದಾರೆ. ನಾವೆಲ್ಲ ಮಠಾಧಿಪತಿಗಳು. ನ್ಯಾಯ, ಕಾನೂನು ಸುವ್ಯವಸ್ಥೆ ಕಾಪಾಡುವಂತವರು. ನಮ್ಮನ್ನು ದಾರಿಯಲ್ಲಿ ತಡೆದಿರುವುದು ಸಲ್ಲದು. ಇಂತಹ ಸಚಿವರಿಗೆ ಸಂಘ ಪರಿವಾರದಿಂದ ಸಂಸ್ಕಾರದ ಅಗತ್ಯವಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಾದರೂ ಇವರಿಗೆ ಬುದ್ದಿವಾದ ಹೇಳಬೇಕಾಗಿತ್ತು. ಆದರೆ, ಜವಾಬ್ದಾರಿ ಸ್ಥಾನದಲ್ಲಿರುವ ಅವರು ಸುಮ್ಮನಿರುವುದನ್ನು ನೋಡಿದರೆ ಅನುಮಾನ ಮೂಡುತ್ತಿದೆ’ ಎಂದು ಕಿಡಿಕಾರಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಗೋಸ್ಕರ ನಾನು ಮಾತನಾಡಿದ್ದೇನೆ. ಆದರೆ, ಅವುಗಳಿಗೆ ಸ್ಪಂದಿಸದೇ ನನ್ನ ತೇಜೋವಧೆಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸರು ತಡೆಯೊಡ್ಡಿದ್ದರಿಂದ ಧರಣಿ ಕೈಬಿಟ್ಟು ಹೋಗುತ್ತೇನೆ. ಇನ್ನು ಮುಂದಾದರು ಸಚಿವರು ಮಠಾಧಿಶರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು.

‘ರಾಜ್ಯದ ವಿವಿಧೆಡೆಯಿಂದ ನರಗುಂದಕ್ಕೆ ಬರುತ್ತಿದ್ದ 25 ಮಠಾಧೀಶರನ್ನು ಪೊಲೀಸರು ತಡೆದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ. ಇಂದಿನಿಂದ ನಮ್ಮ ಹೋರಾಟ ಬೇರೆ ರೀತಿಯಾಗಿ ನಿರಂತರ ಮುಂದುವರಿಯುತ್ತದೆ. ಶಿರಹಟ್ಟಿ ಮಠಕ್ಕೆ 60 ಶಾಖಾ ಮಠಗಳು, 5 ಶಾಖಾ ಮಸೀದಿಗಳಿವೆ. ಎಲ್ಲ ಮಠಗಳ ಕೋಟ್ಯಂತರ ಭಕ್ತರಿಗೆ ನಾನು ಉತ್ತರವನ್ನು ಕೊಡಲು ಹೋರಾಟ ಮಾಡುವುದು ಅನಿವಾರ್ಯ. ಅನ್ಯಾಯ, ಅನಾಚಾರ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ’ ಎಂದು ತಿಳಿಸಿದರು.

ಗಂಗಾಧರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಜಗದೀಶ್ವರ ಸ್ವಾಮೀಜಿ, ಶಿವಾನಂದ ಶ್ರೀಗಳು, ಮಂಟೂರ ಶ್ರೀಗಳು, ದೊಡ್ಡವಾಡ ಜಡೆಸಿದ್ದೇಶ್ವರ ಸ್ವಾಮೀಜಿ, ಚೆನ್ನವೀರ ಶ್ರೀಗಳು, ಸಿದ್ದರಾಮ ಶ್ರೀಗಳು, ಮಾಧುಲಿಂಗ ಶ್ರೀಗಳು, ನರೇಂದ್ರ ಸ್ವಾಮೀಜಿ ಹಾಗೂ ಅನೇಕ ಭಕ್ತರು ಶ್ರೀಗಳೊಂದಿಗೆ ಇದ್ದರು.

ಸಚಿವರ ಮನೆ ಮುಂದೆ ಜನದಟ್ಟಣೆ:

ಶ್ರೀಗಳ ಧರಣಿ ಹಿನ್ನೆಲೆಯಲ್ಲಿ ಸಚಿವ ಸಿ.ಸಿ.ಪಾಟೀಲ ಅವರ ಮನೆ ಮುಂದೆ ಮತಕ್ಷೇತ್ರದ ವಿವಿಧ ಗ್ರಾಮಗಳ ನೂರಾರು ಜನರು ಸೇರಿದ್ದು ಕಂಡು ಬಂತು.

ವಿಜಯಪುರದ ಇಬ್ಬರು ಸ್ವಾಮೀಜಿಗಳು, ಬೀಳಗಿಯಿಂದ ಆರು ಕ್ರೂಷರ್‌ಗಳಲ್ಲಿ ಬಂದಿದ್ದ ದಿಂಗಾಲೇಶ್ವರರ ಬೆಂಬಲಿಗರನ್ನು ಸಚಿವರ ನಿವಾಸದಿಂದ ತೆರಳುವಂತೆ ಪೊಲೀಸರು ಸೂಚಿಸಿದರು.

ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನರಗುಂದ ತಾಲ್ಲೂಕಿನ ಕುರ್ಲಗೇರಿ, ಅಳಗವಾಡಿ, ಕಲಕೇರಿ ಗ್ರಾಮದ ಬಳಿ ಮೂರು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿಕೊಂಡಿದ್ದ ಪೊಲೀಸರು ಸೂಕ್ತ ತಪಾಸಣೆ ಕೈಗೊಂಡಿದ್ದರು. ಕಲಕೇರಿ ಚೆಕ್‍ಪೋಸ್ಟ್ ಬಳಿ ಕೆಲ ಹೊತ್ತು ಗೊಂದಲ ಉಂಟಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. 

ಕಲಕೇರಿ ಬಳಿ ಚೆಕ್ ಪೋಸ್ಟ್ ನಿರ್ಮಿಸಿಕೊಂಡಿದ್ದ ಪೊಲೀಸರು ಬೆಳಿಗ್ಗೆಯಿಂದ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿರುವುದು ಕಂಡು ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು