ಬಸವರಾಜ ಹಲಕುರ್ಕಿ
ನರಗುಂದ: ‘ಮೂಗು ಮುಚ್ಚಿಕೊಂಡು ಬಸ್ ನಿಲ್ದಾಣ್ಕೆ ಬರಬೇಕ; ಕೂಡ್ರಾಕ ಆಗಲ್ಲ; ಸೊಳ್ಳೆ ಕಾಟ ಹೇಳತೀರದು’ ಎಂದು ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳಾ ಪ್ರಯಾಣಿಕರು ದೂರುತ್ತಿರುವುದು ನೋಡಿದರೆ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಅವ್ಯವಸ್ಥೆ ತಿಳಿದು ಬರುತ್ತದೆ.
ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ವಿಶಾಲವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಇಲ್ಲಿ ದುರ್ವಾಸನೆ ಸಾಮಾನ್ಯ ಎನ್ನುವಂತಾಗಿದೆ. ನಿತ್ಯ ನೂರಕ್ಕೂ ಹೆಚ್ಚು ಬಸ್‌ಗಳು ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಇಳಕಲ್ ಕಡೆ ಸಂಚರಿಸುತ್ತವೆ. ಆದರೂ ಸಮಸ್ಯೆ ಬಗೆಹರಿಸುವತ್ತ ಕೆಎಸ್ಆರ್‌ಟಿಸಿ ಅಧಿಕಾರಿಗಳು ಗಮನಹರಿಸದೇ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಕೆಸರಿನ ತಾಣ: ಗ್ರಾಮೀಣ ಭಾಗಗಳಿಗೆ ತೆರಳುವ ಬಸ್‌ಗಳಿಗೆ ಪ್ರತ್ಯೇಕ ಜಾಗ ಮೀಸಲಿರಿಸಲಾಗಿದೆ. ಈ ಜಾಗ ತಗ್ಗು ಪ್ರದೇಶವಾಗಿದ್ದು ಮಳೆ ಬಂದರೆ ನೀರು ನಿಂತು ಕೆಸರಿನ ತಾಣವಾಗುತ್ತದೆ. ಕೆಲವೊಮ್ಮೆ ಕೆಸರಿನ ಪಕ್ಕದಲ್ಲಿಯೇ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ. ಆಗ ಜನರು ಬಸ್‌ಗಳನ್ನು ಹತ್ತಬೇಕಾಗುತ್ತದೆ. ಸಂಜೆಯಾದರಂತೂ ಇಲ್ಲಿ ಕೂರಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಸೊಳ್ಳೆಗಳ ಹಾವಳಿಯಿಂದ ನಿತ್ಯ ಪ್ರಯಾಣಿಕರು ತೊಂದರೆ ಪಡಬೇಕಾಗುತ್ತದೆ. ವಿದ್ಯುತ್ ವ್ಯವಸ್ಥೆಯೂ ಸರಿಯಿಲ್ಲ. ಬಿದ್ದ ಮಳೆ ನೀರು ಚರಂಡಿ ಸೇರಲು ಇಲ್ಲಿ ಯಾವುದೇ ಮಾರ್ಗ ಇಲ್ಲದಿರುವುದರಿಂದ, ಇದರ ಬಗ್ಗೆ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಮುಚ್ಚಿದ ಕ್ಯಾಂಟೀನ್: ಬಸ್ ನಿಲ್ದಾಣದ ಆವರಣದಲ್ಲಿಯ ಕ್ಯಾಂಟೀನ್ ಮೂರು ತಿಂಗಳುಗಳಿಂದ ಬಂದ್ ಆಗಿದೆ. ಇದರಿಂದಾಗಿ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಬಸ್ ನಿಲ್ದಾಣದ ಹೊರಗೆ ಇರುವ ಹೊಟೇಲ್‌ಗಳಿಗೆ ತೆರಳಬೇಕಿದೆ. ವಿಶ್ರಾಂತಿ, ನೀರಿಗೂ ಪರದಾಡಬೇಕಿದೆ. ಬೇಗನೇ ಟೆಂಡರ್ ಕರೆದು ಕ್ಯಾಂಟೀನ್ ಆರಂಭಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಕ್ಯಾಂಟೀನ್ ಬಾಡಿಗೆ ತಿಂಗಳಿಗೆ ₹ 2 ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ ಬೇಗನೇ ಟೆಂಡರ್‌ದಾರರು ಬರದೇ ಕ್ಯಾಂಟೀನ್ ಹಾಳು ಬಿದ್ದಿದೆ. ಸಮೀಪದ ಕೊಣ್ಣೂರ ಕೆಎಸ್ಆರ್‌ಟಿಸಿ ಕ್ಯಾಂಟೀನ್ ಸಹ ಬಂದ್ ಆಗಿದೆ.
ವಿಸ್ಚ್ಛತೆ ಮರೀಚಿಕೆ: ನವೀಕರಣಗೊಂಡ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕುಡಿಯುವ ನೀರಿನ ನಲ್ಲಿಗಳ ಸುತ್ತ ಸ್ವಚ್ಛತೆ ಇಲ್ಲ. ಶೌಚಾಲಯದ ಸಮೀಪ ಬಯಲು ಜಾಗವಿದ್ದು ಅಲ್ಲಿ ಸಂಪೂರ್ಣ ಕಸದ ತಾಣವಾಗಿದೆ. ದುರ್ವಾಸನೆ ಬೀರುತ್ತಿದೆ. ಕಸದ ತೊಟ್ಟಿಗಳು ಸರಿಯಾಗಿ ನಿರ್ವಹಣೆಯಾಗಬೇಕಿವೆ. ಪ್ರಯಾಣಿಕರು ಇಲ್ಲಿಯ ಅವ್ಯವಸ್ಥೆ ನೋಡಿ ಶಪಿಸುತ್ತಲೇ ಸಾಗುವುದು ಸಾಮಾನ್ಯವಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಕಸ ಚೆಲ್ಲುವುದು ಸಾಮಾನ್ಯ ಎಂಬಂತಾಗಿದೆ. ಆದ್ದರಿಂದ ನಿಲ್ದಾಣವನ್ನು ಕೆಸರಿನಿಂದ ಮುಕ್ತ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Cut-off box - ಸುವ್ಯವಸ್ಥೆಗೆ ಶೀಘ್ರ ಕ್ರಮ ಗ್ರಾಮೀಣ ಬಸ್ ನಿಲ್ಲುವ ಸ್ಥಳ ತಗ್ಗು ಪ್ರದೇಶದಲ್ಲಿ ಇರುವ ಪರಿಣಾಮವಾಗಿ ಮಳೆ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರ ನೀರು ಹರಿದು ಹೋಗುವಂತೆ ಮಾಡಿ ಮಣ್ಣು ತುಂಬಿಸಲಾಗುವುದು. ಕ್ಯಾಂಟೀನ್ ಆರಂಭಕ್ಕೆ ಬೇಗನ ಕ್ರಮ ಕ್ರಮ ಕೈಗೊಳ್ಳಲಾಗುವುದು – ಪ್ರಶಾಂತ ಪಾನಬುಡೆ ವ್ಯವಸ್ಥಾಪಕ ಕೆಎಸ್ಆರ್‌ಟಿಸಿ ನರಗುಂದ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.