ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ತಡೆಗೆ ಶ್ರೀರಾಮ ಸೇನೆ ಸಜ್ಜು: ಪ್ರಮೋದ್‌ ಮುತಾಲಿಕ್‌ ಹೇಳಿಕೆ

ಪಥ ಸಂಚಲನ ಸಮಾರಂಭದಲ್ಲಿ ಪ್ರಮೋದ್‌ ಮುತಾಲಿಕ್‌ ಹೇಳಿಕೆ
Last Updated 18 ಅಕ್ಟೋಬರ್ 2021, 6:24 IST
ಅಕ್ಷರ ಗಾತ್ರ

ಗದಗ: ‘ರಾಜ್ಯದಲ್ಲಿ ಮತಾಂತರದ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಗದಗ ಜಿಲ್ಲೆಯಲ್ಲಿ ಕೂಡ ಹತ್ತು ಸಾವಿರಕ್ಕೂ ಅಧಿಕ ಮಂದಿ ಮತಾಂತರಗೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವ ಮತಾಂತರ ತಡೆಯುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ಯುವಪಡೆಯನ್ನು ಸಜ್ಜುಗೊಳಿಸುತ್ತಿದೆ’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ನಗರದ ಮುನ್ಸಿಪಲ್‌ ಮೈದಾನದಲ್ಲಿ ಭಾನುವಾರ ನಡೆದ ಮತಾಂತರ ತಡೆಗಾಗಿ ಪಥ ಸಂಚಲನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾನುವಾರ ಗದಗ ನಗರದಲ್ಲಿ ನಡೆದ ಪಥಸಂಚಲನದ ಘೋಷವಾಕ್ಯವೇ ಮತಾಂತರ ತಡೆಯುವುದಾಗಿದೆ. ಗೆದ್ದಲು ಹುಳುವಿನಂತೆ ದೇಶವನ್ನು ಕಾಡುತ್ತಿರುವ ಮತಾಂತರವನ್ನು ತಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಒಂದು ಸಮಿತಿ ರಚಿಸಿ, ಕಾನೂನು ರೂಪಿಸಲು ತಕ್ಷಣವೇ ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಕ್ರಿಶ್ಚಿಯನ್‌ ಪಾದ್ರಿಗಳು ಇಲ್ಲೀವರೆಗೆ ಬಡವರು, ದೀನ ದಲಿತರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದರು. ಆದರೆ, ಈಗ ಅವರ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದ್ದು ಕುರುಬರು, ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರು ಎಲ್ಲರನ್ನೂ ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ಆಯಾಯ ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ಆಲೋಚಿಸಿ ಮತಾಂತರ ತಡೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮಠಕ್ಕೆ ಬರಲು, ವೋಟು ಹಾಕಲು ಸಮುದಾಯದ ಜನರು ಇರುವುದಿಲ್ಲ’ ಎಂದು ಎಚ್ಚರಿಸಿದರು.

‘ಬಡವರ ಕಷ್ಟ ನಷ್ಟಗಳನ್ನೇ ಬಂಡವಾಳ ಆಗಿಸಿಕೊಂಡ ಕ್ರೈಸ್ತ ಮಿಷನರಿಗಳು ಮತಾಂತರ ಪ್ರಕ್ರಿಯೆ ಆರಂಭಿಸಿದವು. ವೃದ್ಧಾಶ್ರಮಗಳು ಕೂಡ ಬ್ರಿಟಿಷರ ಕೊಡುಗೆ. ಸಮೃದ್ಧ ಭಾರತದಲ್ಲಿ ಹಿಂದೂ ಧರ್ಮವನ್ನು ನಾಶ ಮಾಡುವುದಕ್ಕಾಗಿಯೇ ಕ್ರೈಸ್ತರು ಚರ್ಚ್, ಪಾದ್ರಿಗಳನ್ನು ಕರೆತಂದರು. ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದಿರುವ ಭಾರತವನ್ನು ಒಡೆದು ಆಳಲು ಇಲ್ಲಿನ ಜನರನ್ನು ಅವರು ವೈಚಾರಿಕವಾಗಿಯೂ ಮತಾಂತರ ಮಾಡಿದರು’ ಎಂದು ದೂರಿದರು.

‘ಈ ನಿಟ್ಟಿನಲ್ಲಿ ಹಳ್ಳಿಹಳ್ಳಿಯಲ್ಲಿ ಜನಜಾಗೃತಿ ಮೂಡಿಸಲು ಶ್ರೀರಾಮ ಸೇನೆಯ ಯುವಪಡೆ ಸಜ್ಜಾಗಿದೆ. ಮತಾಂತರಕ್ಕಾಗಿ ಹಳ್ಳಿಗೆ ಬರುವ ಪಾದ್ರಿಗಳನ್ನು ಒದ್ದೊಡಿಸಲಿದೆ’ ಎಂದು ಹೇಳಿದರು.

‘ದೇಶದಲ್ಲಿ ವ್ಯಾಲೆಂಟೈನ್‌ ಡೇ ಆಚರಣೆ ಸಂಭ್ರಮವನ್ನು ಶೇ 70ರಷ್ಟು ತಗ್ಗಿಸಿದ ಕೀರ್ತಿ ಶ್ರೀರಾಮ ಸೇನೆಗೆ ಸಲ್ಲುತ್ತದೆ. ಈ ಬಗೆಯ ವಿದೇಶಿ ಆಚರಣೆಗಳ ಹಿಂದೆ ಡ್ರಗ್ಸ್‌, ಸೆಕ್ಸ್‌ ಮಾಫಿಯಾ ನಡೆಯುತ್ತದೆ’ ಎಂದು ಆರೋಪ ಮಾಡಿದರು.

‘ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಗೋವುಗಳ ಹತ್ಯೆ ನಿಂತಿಲ್ಲ. ಅಂತೆಯೇ, ಮತಾಂತರ ತಡೆ ಕಾನೂನು ಆಗಬಾರದು. ಮತಾಂತರಕ್ಕೆ ಮುಂದಾಗುವ ಪಾದ್ರಿಗಳಿಗೆ ಜೈಲು ಶಿಕ್ಷೆ ಆಗಬೇಕು. ಒಂದು ವರ್ಷದವರೆಗೆ ಜಾಮೀನು ಸಿಗಬಾರದು. ಈ ರೀತಿಯಾಗಿ ಮತಾಂತರ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ಶ್ರೀರಾಮ ಸೇನೆ ಸಂಘಟನೆಯ ರಾಜು ಖಾನಾಪುರ ಇದ್ದರು.

‘ವೆಂಕಟೇಶ್ವರ ದೇವಸ್ಥಾನ’

‘ಗದುಗಿನ ಜುಮ್ಮಾ ಮಸೀದಿಯನ್ನು ಹೊರಗಿನಿಂದ ನೋಡಿದರೇ ಅದು ದೇವಸ್ಥಾನ ಎಂದು ಗೊತ್ತಾಗುತ್ತದೆ’ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

‘ನೂರಕ್ಕೆ ನೂರು ಅದು ವೆಂಕಟೇಶ್ವರ ದೇವಸ್ಥಾನವೇ ಆಗಿತ್ತು. ಈ ಸಂಬಂಧ ಸಮಗ್ರ ದಾಖಲೆ ಸಂಗ್ರಹಿಸಿ ಹೋರಾಟ ನಡೆಸಲು ತಯಾರಿ ನಡೆಸಿದ್ದೇವೆ. 80 ವರ್ಷ ದಾಟಿ ಹಿರಿಯರ ಅಭಿಪ್ರಾಯ ಸಂಗ್ರಹ, ದಾಖಲೆಗಳ ಸಂಗ್ರಹ ಮಾಡಿ ಪಿಐಎಲ್‌ ಹಾಕುವವರಿದ್ದೇವೆ. ಕರ್ನಾಟಕದಲ್ಲಿ ಈ ರೀತಿ ಸಾಕಷ್ಟು ದೇವಸ್ಥಾನಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈ ಬಗ್ಗೆಯೂ ಸಮಗ್ರ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT