ಗುರುವಾರ , ಸೆಪ್ಟೆಂಬರ್ 23, 2021
21 °C
ಗಾಣಿಗ ಸಮುದಾಯದ ಹಿರಿಯ ಮುಖಂಡ ನಿಂಗಪ್ಪ ಕಿಡಿ

ಗದಗ: ಲಕ್ಷ್ಮಣ ಸವದಿ ಕೈ ಬಿಟ್ಟಿದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಗಾಣಿಗ ಸಮುದಾಯದ ನಾಯಕ ಲಕ್ಷ್ಮಣ ಸವದಿ ಅವರನ್ನು ಕೈಬಿಟ್ಟಿರುವುದು ಆಕ್ಷೇಪಾರ್ಹ ನಡೆಯಾಗಿದ್ದು, ಈ ಕೂಡಲೇ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಇಲ್ಲವಾದಲ್ಲಿ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಗಾಣಿಗ ಸಮುದಾಯದ ಹಿರಿಯ ಮುಖಂಡ ನಿಂಗಪ್ಪ ಕೆಂಗಾರ ಎಚ್ಚರಿಸಿದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಜೆಪಿ ಬಲವರ್ಧನೆಗೆ ಗಾಣಿಗ ಸಮುದಾಯದ ಕೊಡುಗೆ ಸಾಕಷ್ಟಿದ್ದು, ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನದ ಜತೆಗೆ ಉಪ ಮುಖ್ಯಮಂತ್ರಿ ಹುದ್ದೆ ಸಹ ನೀಡಲಾಗಿತ್ತು. ಹಿಂದಿನ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿರುವ ಅವರನ್ನು ಈ ಬಾರಿ ಸಚಿವ ಸಂಪುಟದಿಂದ ಕೈಬಿಟ್ಟಿದ್ದೇಕೆ, ಈ ಹಿಂದೆ ಅವರೊಂದಿಗೆ ಇದ್ದ ಅನೇಕರಿಗೆ ಅವಕಾಶ ನೀಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯಗಳ ನಾಯಕರಿಗೆ ಸ್ಥಾನ ನೀಡಲಾಗಿದೆ. ಆದರೆ ಪ್ರಬಲ ಗಾಣಿಗ ಸಮುದಾಯವನ್ನು ಕಡೆಗಣಿಸಲಾಗಿದ್ದು ಸರಿಯಲ್ಲ’ ಎಂದು ಖಂಡಿಸಿದರು.

ಗಾಣಿಗ ಸಮಾಜದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ‘52 ಲಕ್ಷ ಜನಸಂಖ್ಯೆ ಹೊಂದಿರುವ ಪ್ರಬಲ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗಿದೆ’ ಎಂದು ಖಂಡಿಸಿದರು.

ನೂತನ ಸಂಪುಟದಲ್ಲಿ ಸವದಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಕೂಡಲೇ ಸಮುದಾಯದ ಯುವಕರು ಸರ್ಕಾರದ ವಿರುದ್ಧ ಪ್ರತಿಭಟನೆಗೂ ಮುಂದಾಗಿದ್ದರು. ಆದರೆ ಸವದಿಯವರೇ ಯುವಕರನ್ನು ಶಾಂತಗೊಳಿಸಿದರು ಎಂದು ಹೇಳಿದರು. 

ಗಾಣಿಗ ಸಮಾಜದ ಜಿಲ್ಲಾ ಕಾರ್ಯದರ್ಶಿ ಮುರುಘ ರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಹಿರಿಯರಾದ ಷಣ್ಮುಖಪ್ಪ ಬಡ್ನಿ, ಹಾಲಪ್ಪ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಬಸವಂತಪ್ಪ ನವಲಹಳ್ಳಿ, ಐ.ಕೆ ಕಿರೇಸೂರ, ಫಕೀರೇಶ ಸಿಂಧಗಿ, ಶಿವಣ್ಣ ಹಿಟ್ನಳ್ಳಿ, ಮುತ್ತಣ್ಣ ಚಳ್ಳಮರದ, ಗವಿಸಿದ್ದಪ್ಪ ಗಾಣಿಗೇರ, ಬಿ.ಬಿ. ಐನಾಪೂರ, ಶಿವಾನಂದ ಕರಿಗೌಡ್ರ, ಚಂದ್ರು ಓದು, ಬಸವರಾಜ ಕಣವಿ, ನಿಂಗರಾಜ ಭರಮಗೌಡ್ರ, ಹನುಮಂತ ಭಾವಿಕಟ್ಟಿ, ಗಿರಿಯಪ್ಪ ಅಸೂಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.