ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ತಪ್ಪಿದರೆ ಹೋರಾಟ ನಿಶ್ಚಿತ; ಎಚ್ಚರಿಕೆ

ಸರ್ಕಾರ ಕೊಟ್ಟ ಮಾತಿನಂತೆ ನಡೆಯಲಿ– ಪಂಚಮಸಾಲಿ ಸಮುದಾಯ ಆಗ್ರಹ
Last Updated 16 ಸೆಪ್ಟೆಂಬರ್ 2021, 4:35 IST
ಅಕ್ಷರ ಗಾತ್ರ

ಗದಗ: ‘ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗದಗ ಜಿಲ್ಲಾ ಯುವ ಘಟಕದ ವತಿಯಿಂದ ಬುಧವಾರ ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಚಕ್ಕಡಿ ಮೆರವಣಿಗೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಮಾಜದ ಸದಸ್ಯರು ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲದು’ ಎಂಬ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಮಾತನಾಡಿ, ‘2021 ಸೆ.15ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರಕಿಸಿಕೊಡಲಾಗುವುದು ಎಂದು ಸರ್ಕಾರ ಈ ಹಿಂದೆ ಮಾತು ಕೊಟ್ಟಿತ್ತು. ಕೊಟ್ಟ ಮಾತಿನಂತೆ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಅಕ್ಟೋಬರ್ 1ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಧರಣಿ, ಸತ್ಯಾಗ್ರಹ ಆರಂಭಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

‘ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ರಾಜ್ಯದಲ್ಲಿರುವ ಸಮಾಜದ ಎಲ್ಲ ಜನರು ಶಕ್ತಿ ತುಂಬಲಿದ್ದಾರೆ. ಗದಗ ಜಿಲ್ಲಾ ಪಂಚಮಸಾಲಿ ಸಮಾಜ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಅವರು ಹೇಳಿದರು.

‘ಪಂಚಮಸಾಲಿ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ 2ಎ ಮೀಸಲಾತಿ ದೊರಕಿಸಿ ಕೊಡುತ್ತಾರೆ ಎಂಬ ಭರವಸೆ ಇದೆ. ಈ ಮೂಲಕ ಪಂಚಮಸಾಲಿ ಸಮಾಜದ ಬಡ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮಾಜದ ಮುಖಂಡರಾದ ಅನಿಲಕುಮಾರ ಪಾಟೀಲ, ಮುತ್ತಣ್ಣ ಗದಗಿನ, ಶಿವರಾಜ ಶಿವನಗೌಡ್ರ, ಬಸವರಾಜ ಗಡ್ಡೆಪ್ಪನವರ, ಅಪ್ಪು ಮುಳವಾಡ, ರಮೇಶ ರೋಣದ, ಕೆ.ಕೆ.ಮಾಳಗೌಡ್ರ, ಸಂತೋಷ ಕೊಪ್ಪದ, ರಾಜು ಜಕ್ಕನಗೌಡ್ರ, ಚೇತನ ಅಬ್ಬಿಗೇರಿ, ಲಲಿತಾ ಗೊಳಗೊಳಕಿ, ಶರಣಪ್ಪ ಗೊಳಗೊಳಕಿ, ಪ್ರಶಾಂತ ಬೆಟಗೇರಿ, ವಿನೋದ ಬಿಳಿಗಿ, ಬಸವರಾಜ ಮನಗುಂಡಿ, ಕುಮಾರ್ ಹೊಂಬಳ, ಮಂಜುನಾಥ ಗುಡದೂರ ಹಾಗೂ ಪಂಚಮಸಾಲಿ ಸಮಾಜದ ಗದಗ ಜಿಲ್ಲೆ ಯುವ ಘಟಕ, ರೈತ ಘಟಕ,
ಮಹಿಳಾ ಘಟಕ, ಗ್ರಾಮೀಣ ಘಟಕ, ಗದಗ ಶಹರ ಘಟಕದ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT