ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇತು, ದೀಲಾತು ವ್ಯವಹಾರ ಬ್ಯಾಡ್ರಿ: ಬಗರ್ ಹುಕುಂ ಸಾಗುವಳಿದಾರರ ಪಾದಯಾತ್ರೆ

ಬೇಡಿಕೆಗಳ ಈಡೇರಿಕೆಗಾಗಿ ಕಪ್ಪತ್ತಗುಡ್ಡದಿಂದ ಬಗರ್ ಹುಕುಂ ಸಾಗುವಳಿದಾರರ ಪಾದಯಾತ್ರೆ
Last Updated 13 ಸೆಪ್ಟೆಂಬರ್ 2022, 6:02 IST
ಅಕ್ಷರ ಗಾತ್ರ

ಶಿರಹಟ್ಟಿ: ‘ನಮ್ಮ ಮುತ್ತಜ್ಜನ ಕಾಲ್ದಾಗಿಂದಾನೂ ಹೊಲದ ಬದಕ ಮಾಡ್ಕೊತಾ ಬಂದ ನಮ್ಗ ಎಷ್ಟ ಹೋರಾಟ ಮಾಡಿದ್ರು ಹಕ್ಕಪತ್ರ ಕೊಡ್ದಾ ಬರೀ ಮೂಗಿಗಿ ತುಪ್ಪ ಸವರಕತ್ತಾರೀ. ದೇತು, ದೀಲಾತು ವ್ಯವಹಾರ ಬ್ಯಾಡ್ರೀ ಸಾಹೇಬ್ರಾ, ನಮ್ಮ ಹಕ್ಕಪತ್ರ ಕೊಟ್ರ ಅಷ್ಟಾ ನಾವು ಹೋರಾಟ ಕೈಬಿಡ್ತಿವಿ...’

– ಬಗರ್ ಹುಕುಂ ಸಾಗುವಳಿದಾರರು ಹೀಗೆ ಪಟ್ಟು ಹಿಡಿದ ಘಟನೆ ಸೋಮವಾರ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆಯಿತು.

ಬಗರ್ ಹುಕುಂ ಸಾಗುವಳಿದಾರರ ಹಕ್ಕೊತ್ತಾಯಕ್ಕಾಗಿ ಕಪ್ಪತ್ತಗುಡ್ಡದಿಂದ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದವರೆಗೆ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪ್ರತಿಭಟನಕಾರರು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾದಯಾತ್ರೆಯುದ್ಧಕ್ಕೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅರಣ್ಯ, ಸಮಾಜ ಕಲ್ಯಾಣಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

15 ಕಿ.ಮೀ ಪಾದಯಾತ್ರೆ ಮಾಡುತ್ತಾ ತಹಶೀಲ್ದಾರ್ ಕಚೇರಿಯನ್ನು ಮುತ್ತಿಗೆ ಹಾಕಿದ ಪ್ರತಿಭಟನಕಾರರು, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟುಹಿಡಿದರು.

ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ತಲೆತಲಾಂತರದಿಂದ ಉಳುಮೆ ಮಾಡುತ್ತಾ ಬದುಕು ಕಟ್ಟಿ ಕೊಂಡು ಬಂದ ರೈತರನ್ನು ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ. ಸರ್ಕಾರದ ನಿಯಮ ರೈತರ ವಿರೋಧಿಯಾಗಿಯೂ ಗಣಿಧಣಿಗಳ ಪರವಾಗಿ ಮಾಡುತ್ತಿರುವುದು ಘೋರ ವಾದ ಅನ್ಯಾಯ ಎಂದು ಹೇಳಿದರು.

ಈ ಭಾಗದ ಅರಣ್ಯ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 802 ರೈತರ ಅರ್ಜಿಗಳನ್ನು ತಿರಸ್ಕರಿಸಿದ ವಿರುದ್ಧ ಪ್ರತಿಭಟನೆ ಮಾಡಿದ್ದು ಅಧಿವೇಶನದಲ್ಲಿ ಚರ್ಚೆಯಾದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನಾಚಿಕೆಗೇಡಿತನ ಸಂಗತಿ ಎಂದು ಹೇಳಿದರು.

ಕಪ್ಪತ್ತಗುಡ್ಡ ಉಳಿವಿಗೆ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಹಲವು ಬಾರಿ ಮನವಿ ಮತ್ತು ಪ್ರತಿಭಟನೆ ನಡೆಸಲಾಗಿದೆ. ಅಧಿವೇಶನಗಳಲ್ಲಿ ಚರ್ಚೆಯಾದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಮುಂಡರಗಿ ತಾಲ್ಲೂಕಿನ ಕೆಲೂರ ಗ್ರಾಮದ ನಿರ್ಮಲಾ ರಾಮನಗೌಡ ಪಾಟೀಲ ಎಂಬ ರೈತ ಮಹಿಳೆ ಬಗರ್ ಹುಕುಂ ಸಾಗುವಳಿದಾರರ ಹೋರಾಟಕ್ಕೆ ಪ್ರಾಣ ತ್ಯಾಗ ಮಾಡಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.

ಕಪ್ಪತ್ತಗುಡ್ಡ ರಕ್ಷಣೆ ಎಲ್ಲರ ಹೊಣೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎಂಬ ಹುನ್ನಾರ ನಡೆಯುತ್ತಿದೆ. ಅದಕ್ಕೆ ಸಚಿವರ ಭೇಟಿಯೂ ಆಯ್ತು. ಗುಡ್ಡದ ಒಡಲು ಬಗೆಯಲು ಯೋಚಿಸಿದ್ದ ಸಚಿವರಿಗೆ ಪರಿಸರ ಮಾತೆ ತಕ್ಕ ಪಾಠ ಕಲಿಸಿದ್ದಾಳೆ. ಕಪ್ಪತ್ತಗುಡ್ಡ ಹಾಗೂ ರೈತರ ರಕ್ಷಣೆಗೆ ಪ್ರಾಣ ಮುಡಿಪಾಗಿಡುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇನ್ನೊಂದು ರೈತ ಬಂಡಾಯಕ್ಕೆ ಅವಕಾಶ ಕೊಡದೆ ಹಕ್ಕು ಪತ್ರ ನೀಡಬೇಕು. ಸಂಬಂಧಪಟ್ಟ ಸರ್ಕಾರದ ರಾಜ್ಯ ಪ್ರತಿನಿಧಿಗಳು ಜಿಲ್ಲಾ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಶಾಶ್ವತ ಪರಿಹಾರ ನೀಡುವವರೆಗೂ ಪ್ರತಿಭಟನೆ ಹಿಂಪಡೆವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ದೇವಪ್ಪ ಲಮಾಣಿ, ಎನ್.ಟಿ.ಪೂಜಾರ, ಚಂದ್ರಕಾಂತ ಚವ್ಹಾಣ, ಈರಣ್ಣ ಚವ್ಹಾಣ, ಹನುಮಂತ ತಳವಾರ, ಮಂಜುನಾಥ ಅರೆಪಲ್ಲಿ, ಮಾಂತೇಶ ನಾದಿಗಟ್ಟಿ ಇದ್ದರು.

ಪ್ರತಿಭಟನಾ ಸ್ಥಳಕ್ಕೆ ಎಡಿಸಿ ಭೇಟಿ

ಶಿರಹಟ್ಟಿ: ಬಗರ್ ಹುಕುಂ ಸಾಗುವಳಿದಾರರ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಭೇಟಿ ನೀಡಿದರು.

ಪ್ರಸ್ತುತ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾದ ಪ್ರದೇಶದ ಪರಿಶೀಲನೆ ನಡೆಯುತ್ತಿದ್ದು, ಜಿಲ್ಲಾಡಳಿತಕ್ಕೆ 15 ದಿನಗಳ ಕಾಲಾವಕಾಶ ನೀಡಿ. ಮಂದೆ ಸಭೆ ಕರೆದು ಚರ್ಚಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆದರೆ, ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಇಲ್ಲವೆ, ಗದಗ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕು. ಇಲ್ಲವಾದರೆ ಸಭೆಯನ್ನು ಮಂಗಳವಾರವೇ ನಡೆಸಬೇಕು ಎಂದು ಪಟ್ಟುಹಿಡಿದ ಅವರು, ಸಭೆಯ ನೋಟಿಸ್ ಇಲ್ಲೇ, ಈಗಲೇ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಧರಣಿಯ ಬಗ್ಗೆ ಯಾವ ಕ್ರಮ ಕೈಗೊಂಡಿರುವಿರಿ ಎಂದು ಲಿಖಿತ ರೂಪದಲ್ಲಿ ನೀಡಬೇಕೆಂದು ಪಟ್ಟು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT