ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯ ನೀಡಲು ಆಗ್ರಹ

ಒಕ್ಕಲೆಬ್ಬಿಸುವುದನ್ನು ಖಂಡಿಸಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದಿಂದ ಪ್ರತಿಭಟನೆ
Last Updated 31 ಆಗಸ್ಟ್ 2021, 4:53 IST
ಅಕ್ಷರ ಗಾತ್ರ

ಗದಗ: ‘ನಗರಸಭೆ ಪೌರಾಯುಕ್ತರು ಆಗಸ್ಟ್‌ 25ರಂದು ಸರಾಫ ಬಜಾರ್‌ ರಸ್ತೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಮಿರ್ಚಿ, ಭಜಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಸಕಾರಣವಿಲ್ಲದೇ ತೆರವುಗೊಳಿಸಿದ್ದಾರೆ. ಇದು ಸರ್ವೋಚ್ಛ ನ್ಯಾಯಾಲಯ ನೀಡಿರುವ ಬೀದಿ ವ್ಯಾಪಾರಿಗಳ ಕಾಯ್ದೆಯ ಸ್ಪಷ್ಟ ಉಲ್ಲಂಘನೆ’ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಭಾಷಾಸಾಬ ಮಲ್ಲಸಮುದ್ರ ಹೇಳಿದರು.

ಅವಳಿ ನಗರ ಗದಗ-ಬೆಗಟೇರಿಯಲ್ಲಿ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದನ್ನು ಖಂಡಿಸಿ ಬೀದಿ ವ್ಯಾಪಾರಿಗಳಿಗೆ ತಕ್ಷಣ ವ್ಯಾಪಾರಸ್ಥರ ಪ್ರದೇಶ ಪ್ರದೇಶ ಘೋಷಿಸಬೇಕು ಹಾಗೂ ಒಕ್ಕಲೆಬ್ಬಿಸಿರುವ ವ್ಯಾಪಾರಿಗೆ ನ್ಯಾಯ ಒದಗಿಸುವಂತೆ ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘವು ಸೋಮವಾರ ನಗರಸಭೆ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

‘ಕೆಲವು ದಿನಗಳಿಂದ ವ್ಯಾಪಾರವಿಲ್ಲದೇ ಪರದಾಡುತ್ತಿರುವ ಸಂತ್ರಸ್ತ ಬಿದಿಬದಿ ವ್ಯಾಪಾರಿ ಸಮದ್ ಢಾಲಾಯತ ಕುಟುಂಬ ನಿರ್ವಹಣೆಗೆ ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅನುಕೂಲ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದರು.

‘ದೂರುದಾರರ ಬೇಡಿಕೆ ಆಧರಿಸಿ, ಎಣ್ಣೆ ಪದಾರ್ಥಗಳ ವ್ಯಾಪಾರ ಬಿಟ್ಟು ಇದ್ದ ಸ್ಥಳದಲ್ಲೇ ಪರ್ಯಾಯ ವ್ಯಾಪಾರ ಮಾಡಲು ತಕ್ಷಣ ಅವಕಾಶ ಮಾಡಿಕೊಡಬೇಕು. ಪಟ್ಟಣ ಮಾರಾಟ ಸಮಿತಿಯಲ್ಲಿ ಬೀದಿ ವ್ಯಾಪಾರಿಗಳ ನಿಯಮಾವಳಿಗಳನ್ನು ಪಾಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಮನವಿ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಕ್ತುಮಸಾಬ ನಾಲಬಂದ, ಮಾರುತಿ ಸೋಳಂಕಿ, ಶಿವು ಮಧುರಕರ, ಎಂ.ಆರ್.ಅತ್ತಾರ್, ರಶೀದಾ ನದಾಫ, ರೇಣುಕಾ ಅತ್ತಿವಾಲೆ, ಯೂಸೂಫ್‌ ಶಿರಹಟ್ಟಿ, ರಾಜು ರೋಣದ, ಜಹಾಂಗೀರ ಮುಳಗುಂದ, ಅಬ್ಬು ರಾಟಿ, ತಬರೇಜ್ ಪಠಾಣ, ರಾಜಾಖಾನ ಪಠಾಣ, ಸಮ್ಮದ ಢಾಲಾಯತ, ಫಾರೂಕ ಹುಬ್ಬಳ್ಳಿ, ವಿನಾಯಕ ಬಳ್ಳಾರಿ, ಮಂಜು ಬ್ಯಾಡಗಿ, ಮಾಬುಲಿ ಧಾರವಾಡ, ಅನ್ವರ ಶಿರಹಟ್ಟಿ ಇದ್ದರು.

ನೋಟಿಸ್‌ ನೀಡದೇ ಎತ್ತಂಗಡಿ: ಕಿಡಿ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳಿದ್ದಾರೆ. 2014ರಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಬೀದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಗುರುತಿನ ಚೀಟಿ ವಿತರಿಸಲಾಗಿದೆ. ಯಾವುದೇ ಬೀದಿಬದಿ ವ್ಯಾಪಾರಿಯನ್ನು ಆತನ ಸ್ಥಳದಿಂದ ತೆರವುಗೊಳಿಸಬೇಕಾದಲ್ಲಿ ಪಟ್ಟಣ ಮಾರಾಟ ಸಮಿತಿಯ ಸಭೆಯಲ್ಲಿ ತೀರ್ಮಾನಿಸಬೇಕು. ಜೊತೆಗೆ ಈ ಬಗ್ಗೆ 30 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ, ಪೌರಾಯುಕ್ತರು ಈ ನಿಯಮ ಪಾಲಿಸದೇ ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT