ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ಜನಜೀವನ ತಲ್ಲಣ

ಮಳೆಗೆ ಕೊಚ್ಚಿಕೊಂಡು ಹೋದ ರಸ್ತೆಗಳು; ಅಪಾರ ಪ್ರಮಾಣದ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
Last Updated 7 ಸೆಪ್ಟೆಂಬರ್ 2022, 3:46 IST
ಅಕ್ಷರ ಗಾತ್ರ

ಗದಗ: ಅವಳಿ ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ ಭಾರಿ ಅವಾಂತರ ಸೃಷ್ಟಿಸಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಗದಗ ಬೆಟಗೇರಿ ನಗರದಲ್ಲಿ ಸೋಮವಾರ ದಾಖಲೆಯ 12.5 ಸೆಂ. ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗದಗ ತಾಲ್ಲೂಕಿನ ಮದಗಾನೂರ ಗ್ರಾಮದ ಬಳಿಯಿರುವ ಸೌಳಹಳ್ಳ ಹಾಗೂ ಸಿಹಿಹಳ್ಳ ಉಕ್ಕಿ ಹರಿದು ಊರೊಳಗೆ ನೀರು ನುಗ್ಗಿದ ಪರಿಣಾಮ ಊರ ಜನರೆಲ್ಲರೂ ಇಡೀ ರಾತ್ರಿ ಪರದಾಡಿದರು. ಬೆಟಗೇರಿಯ ತರಕಾರಿ ಮಾರುಕಟ್ಟೆ, ಬಸ್‌ ನಿಲ್ದಾಣ, ಅಂಬೇಡ್ಕರ್‌ ನಗರ, ಮಂಜುನಾಥ ನಗರ, ಭಜಂತ್ರಿ ಓಣಿ, ಗಂಗಿಮಡಿ, ಖಾದಿ ನಗರ, ಎಸ್‌.ಎಂ.ಕೃಷ್ಣ ನಗರದ ಮೊದಲಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟ ಅನುಭವಿಸಿದರು.

ಸೋಮವಾರ ಸಂಜೆ ಹೋಂ ವರ್ಕ್‌ ಮಾಡುತ್ತಿದ್ದ ಮಂಜುನಾಥ ನಗರದ ವಿದ್ಯಾರ್ಥಿನಿ ಸುಮಯ್ಯಾ ಮಳೆಯ ಕಾರಣದಿಂದ ಮನೆಗೆ ಬೀಗ ಹಾಕಿಕೊಂಡು ತಾತನ ಮನೆಗೆ ತೆರಳಿದ್ದಾಳೆ. ಅತಿಯಾದ ಮಳೆಯಿಂದ ಮನೆಯೊಳಕ್ಕೆ ಸೊಂಟದೆತ್ತರದಲ್ಲಿ ನೀರು ನುಗ್ಗಿದೆ. ಇದರಿಂದಾಗಿ ಆಕೆಯ ಪಠ್ಯಪುಸ್ತಕಗಳೆಲ್ಲವೂ ಒದ್ದೆಯಾಗಿ ಹೋಗಿವೆ. ಈವರೆಗೆ ಶಿಕ್ಷಕರು ಬರೆಯಿಸಿದ್ದ ನೋಟ್ಸ್‌ ಹಾಳಾಯಿತು ಎಂದು ಕಣ್ಣೀರಿಟ್ಟ ಹುಡುಗಿ, ಒದ್ದೆಯಾದ ಪುಸ್ತಕಗಳನ್ನು ಮಂಗಳವಾರ ಮಧ್ಯಾಹ್ನದವರೆಗೆ ಒಣಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ಹರ್ತಿ ರಸ್ತೆ ಮಾರ್ಗದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ ಆಟೊ 500 ಮೀಟರ್‌ ದೂರದಷ್ಟು ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್‌ ಆಟೊ ಚಾಲಕ ಕರಿಯಪ್ಪ ಹಾಗೂ ಆತನ ಮಗ ಪ್ರವೀಣ ಹಾಗೂ ಪ್ರಯಾಣಿಕ ಗುರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದಾಗಿ ಗದಗ ಬೆಟಗೇರಿ ಅವಳಿ ನಗರ ಅವ್ಯವಸ್ಥೆಯ ಆಗರವಾಗಿತ್ತು. ಓಣಿಯಲ್ಲಿನ ರಸ್ತೆಗಳೆಲ್ಲವೂ ರಾಡಿಯಾಗಿದ್ದವು. ತಗ್ಗು ಗುಂಡಿಗಳಿಂದ ಕೂಡಿರುವ ಮುಖ್ಯರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದರು. ಮನೆಯೊಳಕ್ಕೆ ನುಗ್ಗಿದ ನೀರು ಹೊರಚೆಲ್ಲಲು ಸಾರ್ವಜನಿಕರು ಇಡೀ ರಾತ್ರಿ ಪರದಾಡಿದರು.

ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗದಗ ಬೆಟಗೇರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರದೇಶಕ್ಕೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಭೇಟಿ ನೀಡಿ, ಸಾಂತ್ವನ ಹೇಳಿದರು. ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸುವ ಭರವಸೆ ನೀಡಿದರು. ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ್‌ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT