ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ: ಹತ್ತಿಗೆ ಬೆಳೆಗೆ ರೋಗ

ಕೆಂಪು ಬಣ್ಣಕ್ಕೆ ತಿರುಗಿದ ಬೆಳೆ: ಹಾಳಾಗುತ್ತಿವೆ ಕಾಯಿಗಳು
Last Updated 27 ಸೆಪ್ಟೆಂಬರ್ 2020, 2:53 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬಿಳಿ ಬಂಗಾರ ಎಂದೇ ಪ್ರಸಿದ್ಧವಾಗಿರುವ ಬಿಟಿ ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಖರ್ಚು ಮತ್ತು ರೋಗಬಾಧೆ ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನ ರೈತರು ಇದನ್ನು ಬೆಳೆಯುತ್ತಿದ್ದಾರೆ. ಆದರೆ ‘ಹತ್ತಿಗೆ ಹತ್ತು ಕುತ್ತು’ ಎಂಬ ಮಾತು ಈಗ ನಿಜವಾಗಿದ್ದು, ಅತಿವೃಷ್ಟಿಗೆ ಹತ್ತಾರು ರೋಗಗಳು ಬಾಧಿಸಿವೆ. ಹತ್ತಿ ಹಾಳಾಗುವ ಹಂತ ತಲುಪಿದೆ.

ಪ್ರಸ್ತುತ ವರ್ಷ ಮುಂಗಾರು ಮಳೆ ಹೆಚ್ಚಾಗಿ ಸುರಿದ ಕಾರಣ ಅತಿವೃಷ್ಟಿ ಉಂಟಾಗಿ ಬೆಳೆಗಳು ಕೊಳೆತು ರೈತರು ನಷ್ಟ ಅನುಭವಿಸುತ್ತಿದ್ದಾರೆ. ತೇವಾಂಶ ಅಧಿಕಗೊಂಡಿರುವುದರಿಂದ ಹತ್ತಿ ಬೆಳೆ ಕೆಂಪು ಬಣ್ಣಕ್ಕೆ ತಿರುಗಿದ್ದು ಇದ್ದ ಕಾಯಿಗಳು ಒಡೆದು ಹಾಳಾಗುತ್ತಿವೆ.

ಈ ಬಾರಿ ತಾಲ್ಲೂಕಿನಲ್ಲಿ ಅಂದಾಜು 9,500 ಹೆಕ್ಟೇರ್ ಭೂಮಿಯಲ್ಲಿ ಬಿಟಿ ಹತ್ತಿ ಬಿತ್ತನೆ ಆಗಿದೆ. ಆರಂಭದಲ್ಲಿ ಉತ್ತಮ ಮಳೆ ಆಗಿದ್ದರಿಂದ ಬೆಳೆ ಚೆನ್ನಾಗಿತ್ತು. ಆದರೆ ಕಳೆದ ಒಂದು ತಿಂಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಹತ್ತಿ ರೋಗಕ್ಕೆ ತುತ್ತಾಗಿದೆ. ಅತಿಯಾದ ತೇವಾಂಶ ಬೆಳೆಗೆ ಮಾರಕವಾಗಿದ್ದು ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿದರೆ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಕಾಂಡಗಳು ಕೊಳೆಯುತ್ತಿರುವುದರಿಂದ ಕಾಯಿಗಳು ಉದುರಿ ಬೀಳುತ್ತಿವೆ.

ಮಳೆ ಕಡಿಮೆ ಆಗಿ ಚೆನ್ನಾಗಿ ಬಿಸಿಲು ಬಿದ್ದರೆ ಮಾತ್ರ ಬೆಳೆ ಸುಧಾರಿಸುತ್ತದೆ. ಇಲ್ಲದಿದ್ದರೆ ಇಡೀ ಬೆಳೆಯೇ ನಾಶವಾಗುತ್ತದೆ ಎಂಬ ಭಯ ರೈತರನ್ನು ಕಾಡುತ್ತಿದೆ.

‘ತಂಪು ಹೆಚ್ಚಾಗಿದ್ದರಿಂದ ಹತ್ತಿ ಗಿಡದ ಎಲೆಗಳು ಕೆಂಪಾಗಿವೆ. ಇನ್ನು ಕಾಯಿಗಳು ಕೊಳೆತು ಬೀಳುತ್ತಿವೆ. ಸಾವಿರಾರು ಖರ್ಚು ಮಾಡಿ ಹತ್ತಿ ಬೆಳೆಯುತ್ತಿದ್ದೇವೆ. ಆದರೆ ಈ ರೀತಿ ಮಳೆ ಬಂದರೆ ರೈತರನ್ನು ಕಾಪಾಡುವವರು ಯಾರು’ ಎಂದು ಸಮೀಪದ ಯಳವತ್ತಿ ಗ್ರಾಮದ ರೈತ ಸುರೇಶ ಬೀರಣ್ಣವರ ಪ್ರಶ್ನಿಸುತ್ತಾರೆ.

ಪರಿಹಾರಕ್ಕೆ ಆಗ್ರಹ: ಹೆಚ್ಚಿನ ಮಳೆಗೆ ಕಂಠಿಶೇಂಗಾ, ಬಿಟಿ ಹತ್ತಿ, ಗೋವಿನಜೋಳದ ಬೆಳೆಗಳು ಸಂಪೂರ್ಣ ಹಾಳಾಗಿ ರೈತರಿಗೆ ನಷ್ಟ ಉಂಟಾಗಿದೆ. ಕಾರಣ ಸರ್ಕಾರ ಸೂಕ್ತ ಪರಿಹಾರ ನೀಡುವುದರ ಜೊತೆಗೆ ವಿಮಾ ಕಂಪನಿಯಿಂದ ವಿಮೆ ಪರಿಹಾರ ಬರುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್‍ನ ಮುಖಂಡ ಸಮೀಪದ ರಾಮಗಿರಿಯ ಸೋಮಣ್ಣ ಬೆಟಗೇರಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT