ಬೆಳೆ ರಕ್ಷಣೆಗೆ 'ರೈನ್ ಗನ್’ ಪ್ರಾತ್ಯಕ್ಷಿಕೆ

7
ಆಂಧ್ರ ಮಾದರಿ ತಂತ್ರಜ್ಞಾನ ಅಳವಡಿಕೆ

ಬೆಳೆ ರಕ್ಷಣೆಗೆ 'ರೈನ್ ಗನ್’ ಪ್ರಾತ್ಯಕ್ಷಿಕೆ

Published:
Updated:
Deccan Herald

ನರೇಗಲ್: ಸಮೀಪದ ಹಾಲಕೆರೆಯ ಚಂದ್ರಶೇಖರಯ್ಯ ಸೊಪ್ಪಿಹಿರೇಮಠ ಅವರ ಹೊಲದಲ್ಲಿ ಬುಧವಾರ ಮೆಣಸಿನಕಾಯಿ, ಗೋವಿನ ಜೋಳ ಬಿತ್ತನೆ ಮಾಡಿರುವ ಜಮೀನಿಗೆ ನೀರು ಹರಿಸುವ ಆಧುನಿಕ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಆಂಧ್ರದ ಹಲವು ಗ್ರಾಮಗಳಲ್ಲಿ ಬಳಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು, ತಂತ್ರಜ್ಞಾನದ ಸಾಧಕ, ಬಾಧಕಗಳ ಬಗ್ಗೆ ಹೋಬಳಿಯ ರೈತರಲ್ಲಿ ಅರಿವು ಮೂಡಿಸಿದರು. 'ಕೂಲಿ ಕಾರ್ಮಿಕರ ಸಹಾಯವಿಲ್ಲದೆ ಕಡಿಮೆ ಸಮಯದಲ್ಲಿ ನೀರು ಹರಿಯಿಸಬಹುದು. ಸ್ಪ್ರಿಂಕ್ಲರ್ ಬದಲಿಸಲು ಕಾರ್ಮಿಕರ ಸಹಾಯ ಪಡೆಯಬೇಕಾಗುತ್ತದೆ. ಆದರೆ, ರೈನ್ ಗನ್ ಯಂತ್ರ ಸ್ವಯಂಚಾಲಿತವಾಗಿ ಸುಮಾರು 250 ಮೀಟರ್ ದೂರದವರೆಗೆ ನೀರು ಹಾಯಿಸುತ್ತದೆ' ಎಂದು ಅಗ್ರಿ ರೈನ್ ವ್ಯವಸ್ಥಾಪಕ ಶಿವರಾಂ ಮೋಹನ ತಿಳಿಸಿದರು.

ರೋಣ ಕೃಷಿ ಉಪ ನಿರ್ದೇಶಕ ಶ್ರೀನಿವಾಸಾ ಚಿಂತಾಲ ಮಾತನಾಡಿ, 'ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆ ರಕ್ಷಿಸಲು ಪರ್ಯಾಯ ಮಾರ್ಗೋಪಾಯವಾಗಿ ರೈನ್ ಗನ್ ಬಳಕೆಯ ಸಾಧ್ಯತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಯಂತ್ರ ಜೋರು ಹಾಗೂ ಸಾಧಾರಣ ಮಳೆ ಬಂದಾಗ ಹೇಗೆ ಭೂಮಿ ಹಸಿಯಾಗುತ್ತದೆಯೋ ಅದೇ ಮಾದರಲ್ಲಿ ನೀರನ್ನು ಹೊಲಗಳಿಗೆ ಸಿಂಪಡಿಸುತ್ತದೆ. ಪ್ರಾತ್ಯಕ್ಷಿಕೆಯಲ್ಲಿ ಇಲ್ಲಿನ ರೈತರು ಧನಾತ್ಮಕ ಅಭಿಪ್ರಾಯಗಳನ್ನು ನೀಡಿದ್ದಾರೆ ' ಎಂದರು.

'ಆಂಧ್ರ, ತೆಲಂಗಾಣದಲ್ಲಿ ಈ ತಂತ್ರಜ್ಞಾನವನ್ನು ಈಗಾಗಲೇ ಬಳಸಲಾಗುತ್ತಿದೆ. ಆಂಧ್ರದಲ್ಲಿ ಎಕರೆಗೆ ₹750 ನಿಗದಿಮಾಡಲಾಗಿದೆ. 10 ಎಂ.ಎಂ. ಮಳೆ ಬಿದ್ದಾಗ ಸಿಗುವಷ್ಟು ತೇವಾಂಶ, ರೈನ್ ಗನ್ ಬಳಕೆಯಿಂದಲೂ ಬೆಳೆಗೆ ಸಿಗಲಿದೆ. 1 ಗಂಟೆಗೆ ಅರ್ಧ ಎಕರೆಗೆ ನೀರು ಹಾಯಿಸಬಹುದು' ಎಂದು ಮಾಹಿತಿ ನೀಡಿದರು.

ರೈತ ವೀರೇಶ ನೇಗಲಿ ಮಾತನಾಡಿ, 'ಮಳೆ ಇಲ್ಲದೆ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈನ್ ಗನ್ ತಂತ್ರಜ್ಞಾನದಿಂದ ಉಪಯೋಗವಾಗಬಹುದು. ಆದರೆ ಬಾಡಿಗೆ ವೆಚ್ಚ ಭರಿಸಲು ರೈತರಿಗೆ ಸಾಧ್ಯವಾಗುವುದಿಲ್ಲ. ಸರ್ಕಾರ ರಿಯಾಯಿತಿ ದರದಲ್ಲಿ ನೀರು ಹಾಯಿಸಲು ಮುಂದೆ ಬಂದಲ್ಲಿ ನಮ್ಮ ಭಾಗದ ರೈತರು ಆಸಕ್ತಿ ತೋರಿಸಬಹುದು' ಎಂದರು.

ಜಂಟಿ ಕೃಷಿ ನಿರ್ದೇಶಕ ಸಿ.ಬಿ.ಬಾಲರಡ್ಡಿ, ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಹುಲಕೋಟಿ ಕೆವಿಜಿಯ ಎಂ. ಕೊರವಣ್ಣವರ, ಶರಣಯ್ಯ ರುದ್ರಾಕ್ಷಮಠ, ಬಸವರಾಜ ಅಂಗಡಿ, ಹನಮಪ್ಪ ಪ್ರಭಣ್ಣವರ, ಬಸಪ್ಪ ಬಂಗಾಳಿಗಿಡದ, ಮುದಕಪ್ಪ ಮೂಲಿಮನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !