ಮಂಗಳವಾರ, ಜನವರಿ 28, 2020
21 °C
ಗದುಗಿನಲ್ಲಿ ರಾಮಕೃಷ್ಣ–ವಿವೇಕಾನಂದ ಭಾವಪ್ರಚಾರ ಪರಿಷತ್‌ನ ವಾರ್ಷಿಕ ಸಮ್ಮೇಳನ

ಸಕಾರಾತ್ಮಕ ಚಿಂತನೆಯೇ ಗೆಲುವಿನ ಮೊದಲ ಮೆಟ್ಟಿಲು: ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕಾರು, ಮನೆ, ಆಡಂಬರದ ವಸ್ತುಗಳನ್ನು ಕೊಳ್ಳಬಹುದು. ಆದರೆ, ವ್ಯಕ್ವಿತ್ವ, ವಿದ್ಯೆಯನ್ನು ಖರೀದಿಸಲು ಸಾಧ್ಯವಿಲ್ಲ. ಅದು ಪರಿಶ್ರಮದಿಂದ ಮಾತ್ರ ಬರುತ್ತದೆ. ಸಕಾರಾತ್ಮಕ ಚಿಂತನೆಯೇ ಗೆಲುವಿನ ಮೊದಲ ಹೆಜ್ಜೆ’ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಹೇಳಿದರು.

ಶನಿವಾರ ಇಲ್ಲಿ ರಾಮಕೃಷ್ಣ–ವಿವೇಕಾನಂದ ಭಾವಪ್ರಚಾರ ಪರಿಷತ್‌ನ ವಾರ್ಷಿಕ ಸಮ್ಮೇಳನದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಹಿಂದೆ ರಾಜಪ್ರಭುತ್ವ ಇದ್ದ ಕಾಲದಲ್ಲಿ ಪ್ರಜೆಗಳ ಕ್ಷೇಮಕ್ಕಾಗಿ ಯಾಗ, ಯಜ್ಞಗಳನ್ನು ಮಾಡುತ್ತಿದ್ದರು. ಈಗ ಗದುಗಿನಲ್ಲಿ ರಾಮಕೃಷ್ಣ–ವಿವೇಕಾನಂದ ಭಾವಪ್ರಚಾರ ಪರಿಷತ್‌, ವಾರ್ಷಿಕ ಸಮ್ಮೇಳನದ ರೂಪದಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಹಾ ಜ್ಞಾನಾರ್ಜನೆ ಯಜ್ಞ’ವನ್ನೇ ಹಮ್ಮಿಕೊಂಡಿದೆ. ತತ್ವಜ್ಞಾನಿಗಳು, ಮಹಾಸಾಧಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಲಭಿಸುತ್ತಿದೆ’ ಎಂದರು.

‘ಒಬ್ಬ ಯೋಗಿಯ ಜತೆಗೆ ನಡೆಸುವ ಮಾತುಕತೆ, ಚರ್ಚೆ, ಸಂವಾದವು 10 ಪುಸ್ತಕಗಳ ಓದಿಗೆ ಸಮ. ಸಾಧನೆಯ ಹಾದಿಯಲ್ಲಿ ನೂರಾರು ಸವಾಲುಗಳು ಎದುರಾಗುತ್ತವೆ. ಆದರೆ, ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಭಾವನೆ ಮನುಷ್ಯನಲ್ಲಿದ್ದರೆ ಎಂತಹ ಸಾಧನೆಯನ್ನೂ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೀಳರಿಮೆ ತೊಡೆದು, ಸ್ವಾಭಿಮಾನ, ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಬೇಕು. ಉತ್ತಮ ವ್ಯಕ್ತಿತ್ವದ ಒಡೆಯರಾಗಿ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕು’ ಎಂದು ರವಿ ಚನ್ನಣ್ಣವರ ಹೇಳಿದರು.

‘ಅಂಗವಿಕಲರು ಸಹ ಈ ದೇಶದ ಅಭಿವೃದ್ಧಿಗೆ ತೆರಿಗೆ ಕಟ್ಟುವಂತಾಗಬೇಕು, ಅಂತಹ  ಸ್ವಾವಲಂಬಿ ಬದುಕು ನಡೆಸುವಂತಾಗಬೇಕು’ ಎಂದು ಉಪನ್ಯಾಸ ನೀಡಿದ ಅಂತರರಾಷ್ಟ್ರೀಯ ಅಂಧರ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮಹಾಂತೇಶ ಕಿವುಡಸಣ್ಣವರ ಹೇಳಿದರು.

‘ಎಲ್ಲ ಪ್ರಯತ್ನಗಳಿಗೆ ಮೊದಲ ಯತ್ನದಲ್ಲೇ ಯಶಸ್ಸು ಲಭಿಸುವುದಿಲ್ಲ. ಹೆದರಿಕೆಯಿಂದ ಹೆಜ್ಜೆ ಹಿಂದೆ ಇಡದೇ, ಅದನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಛಲದಿಂದ ಮುನ್ನಡೆದಾಗ ಯಶಸ್ಸು ಸಾಧ್ಯ’ ಎಂದು ಕಿರ್ಲೋಸ್ಕರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಗುಮಾಸ್ತೆ ಅಭಿಪ್ರಾಯಪಟ್ಟರು.

ಕೋಲ್ಕತ್ತಾದ ರಾಮಕೃಷ್ಣ ಮಠ ಮತ್ತು ಮಿಷನ್‌ನ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್‌ ಸಾನ್ನಿಧ್ಯ ವಹಿಸಿದ್ದರು. ಗದಗ–ವಿಜಯಪುರ ರಾಮಕೃಷ್ಣ ವಿವೇಕಾನಂದಾಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಹೋಟೆಲ್ ಉದ್ಯಮಿ ಶಾಂತೇಶ ಕಳಸಗೊಂಡ, ಮನಗೂಳಿ ವಿವೇಕಾನಂದ ವಸತಿ ಶಾಲೆಯ ವೈದ್ಯಾಧಿಕಾರಿ ಡಾ. ಎಂ.ಎಚ್‌. ಮಾಯಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಅಧಿಕಾರಿ ಡಾ. ತೇಜಸ್ವಿನಿ ಬಿ.ವೈ. ಇದ್ದರು.

ಚಿತ್ರದುರ್ಗದ ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಮಹಾರಾಜ್‌ ಸ್ವಾಗತಿಸಿದರು. ಸ್ವಾಮಿ ವಿವೇಕಚೈತನ್ಯಾನಂದಜಿ ಮಹಾರಾಜ್‌ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು