ಭಾನುವಾರ, ಮೇ 16, 2021
22 °C
ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಸಚಿವ ಸಿ.ಸಿ.ಪಾಟೀಲ

ಗಣರಾಜ್ಯೋತ್ಸವ: 'ಐಕ್ಯತೆ, ಸಹಿಷ್ಣುತೆ ಬೆಸೆದ ಸಂವಿಧಾನ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ, ವಿಶ್ವಾಸ ಇರಿಸಿರುವ ದೇಶ ಭಾರತ. ಪ್ರಜಾಪ್ರಭುತ್ವದ ಉತ್ತಮ ಕಾರ್ಯನಿರ್ವಹಣೆಗಾಗಿ ಎಲ್ಲರೂ ರಾಷ್ಟ್ರಭಕ್ತಿ, ಐಕ್ಯತೆ, ಸಮಾನತೆಯ ಭಾವ ಬೆಳೆಸಿಕೊಳ್ಳುವುದು ಅವಶ್ಯಕ’ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಂವಿಧಾನವು ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.

‘ದೇಶದ ಜನರ ಧರ್ಮ, ಭಾಷೆ, ಸಂಸ್ಕೃತಿ, ಪಂಗಡ, ಸಂಪ್ರದಾಯ ಮತ್ತು ಪರಂಪರೆಗೆ ಧಕ್ಕೆ ಬಾರದಂತೆ ಸಮಸ್ತರನ್ನೂ ಐಕ್ಯತೆ ಮತ್ತು ಸಹಿಷ್ಣುತೆಯಲ್ಲಿ ಬೆಸೆಯುವಂತೆ ಸಂವಿಧಾನದ ಕರಡು ಸಿದ್ಧಪಡಿಸಿದ ಕೀರ್ತಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಹಾಗೂ ಸಂಗಡಿಗರಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ₹23 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ವಸತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 3,800 ಭೌತಿಕ ಗುರಿಯಲ್ಲಿ 1,745 ಫಲಾನುಭವಿಗಳ ಮನೆಗಳು ಪೂರ್ಣಗೊಂಡಿವೆ’ ಎಂದು ತಿಳಿಸಿದರು.

‘ಜಿಲ್ಲೆಗೆ 5,500 ಡೋಸ್ ಕೋವಿಡ್‌–19 ಲಸಿಕೆ ಹಂಚಿಕೆಯಾಗಿದ್ದು, ನಿಗದಿ ಪಡಿಸಿದ ಗುರಿಯಲ್ಲಿ ಶೇ 70ರಷ್ಟು ಸಾಧನೆಯಾಗಿದೆ. ಡಿಸೆಂಬರ್‌ ಅಂತ್ಯದವರೆಗೆ ಭಾಗ್ಯಲಕ್ಷ್ಮಿ ಯೋಜನೆಯಡಿ 73,831 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು 70,970 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ ವಿತರಿಸಲಾಗಿದೆ’ ಎಂದು ಹೇಳಿದರು.

ಜಲಜೀವನ್‌ ಯೋಜನೆಯಡಿ ಜಿಲ್ಲೆಯ 343 ಗ್ರಾಮಗಳಿಗೆ ₹277.28 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಮನೆ ಮನೆಗೆ ನಳದ ಸಂಪರ್ಕ, ಮೀಟರ್‌ ಅಳವಡಿಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ್‌, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ, ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಭಾಗವಹಿಸಿದ್ದರು.

ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ

‘ಪ್ರಸಕ್ತ ಸಾಲಿನ ಅತಿವೃಷ್ಟಿಯಿಂದ ಬೆಳೆಹಾನಿಯಾದ 1,80,595 ರೈತರ ಪೈಕಿ 66,700 ರೈತರಿಗೆ ₹57.10 ಕೋಟಿ ಪರಿಹಾರ ಒದಗಿಸಲಾಗಿದ್ದು, ಶೀಘ್ರವೇ ಇನ್ನುಳಿದ ರೈತರಿಗೆ ಪರಿಹಾರ ನೀಡಲಾಗುವುದು’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

‘ಗದಗ-ಯಲವಿಗಿ ನಡುವಿನ 66 ಕಿ.ಮೀ. ದೂರದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಮಂಜೂರಾತಿ ದೊರೆತಿದ್ದು, ರಾಜ್ಯ ಸರ್ಕಾರದಿಂದ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು