ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಅಂದ ಹೆಚ್ಚಿಸಿದ ಉದ್ಯಾನ

Last Updated 7 ಫೆಬ್ರುವರಿ 2018, 9:24 IST
ಅಕ್ಷರ ಗಾತ್ರ

ಮುನಿರಾಬಾದ್‌: ಸಾಧಕರ ಮಾತುಗಳು ಕೆಲವರ ಬದುಕನ್ನು ಬದಲಿಸಿದರೆ, ಇನ್ನೂ ಕೆಲವರ ಸಾಧನೆಗೆ ಪ್ರೇರಣೆಯಾಗುತ್ತವೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಸಮೀಪದ ಅಗಳಕೇರಾ ಶಾಸ್ತ್ರಿ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರ ‘ನನಗೆ ಮಕ್ಕಳಿಲ್ಲ, ಗಿಡಮರಗಳೇ ನನ್ನ ಮಕ್ಕಳು’ ಎಂಬ ನುಡಿಗಳು ಶಾಲೆಯ ಶಿಕ್ಷಕರು, ಮಕ್ಕಳಿಗೆ ಪ್ರೇರಣೆಯಾಗಿವೆ. ಅದರ ಪರಿಣಾಮವಾಗಿ ಶಾಲೆಯ ಆವರಣದಲ್ಲಿ ಸುಂದರ ಉದ್ಯಾನ ಅರಳಿ ನಿಂತಿದೆ.

ಉದ್ಯಾನಕ್ಕೆ ತಿಮ್ಮಕ್ಕ ಅವರ ಹೆಸರು ಇಡಲಾಗಿದೆ. ಬಿಡುವಿನ ವೇಳೆಯಲ್ಲಿ ಎಲ್ಲರೂ ಸೇರಿ ಗಿಡ ಆರೈಕೆ ಮಾಡುತ್ತಾರೆ. ಅಲ್ಲದೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈ ಶಾಲೆಗೆ ‘ಹಳದಿ ಶಾಲೆ’ ಪ್ರಶಸ್ತಿ ಸಿಕ್ಕಿರುವುದು ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಶಾಲಾ ಆವರಣದಲ್ಲಿ ಖಾಲಿ ಜಾಗ ಇತ್ತು. ಅಲ್ಲಿ ಏನಾದರೂ ಮಾಡಬೇಕು ಎಂದು ಆಲೋಚಿಸುತ್ತಿದ್ದಾಗ ಪರಿಸರ ಜಾಗೃತಿಗಾಗಿ ಐದು ವರ್ಷದ ಹಿಂದೆ ಜಿಲ್ಲೆಗೆ ಬಂದಿದ್ದ ವೇಳೆ ಸಾಲುಮರದ ತಿಮ್ಮಕ್ಕ ಅವರು 50 ಶಾಲೆಗಳನ್ನು ಸುತ್ತಾಡಿ 500 ಸಸಿಗಳನ್ನು ನೆಟ್ಟುಹೋಗಿದ್ದರು. ಅಲ್ಲದೆ, ಅವರು ಹೇಳಿದ ಮಾತುಗಳು ನೆನಪಾದವು. ಅದರಂತೆ ಆವರಣದಲ್ಲಿ ಉದ್ಯಾನ ನಿರ್ಮಿಸಿದೆವು ಎನ್ನುತ್ತಾರೆ ಶಿಕ್ಷಕರು.

ಉದ್ಯಾನದಲ್ಲಿ ಅಶೋಕ, ಬದಾಮಿ, ಸಿಂಗಪುರ ಚೆರ್ರಿ, ಸೀತಾಫಲ, ಬೆಟ್ಟದನೆಲ್ಲಿ, ತೆಂಗು, ಮಾವು, ಸಿಲ್ವರ್‌ ಓಕ್‌ ಸೇರಿದಂತೆ 80 ಕ್ಕೂ ಹೆಚ್ಚು ತಳಿಯ ಗಿಡಗಳಿವೆ. ಇಲ್ಲಿ ಮಕ್ಕಳಿಗಿಂತ ಗಿಡಗಳೇ ಹೆಚ್ಚಿವೆ. ಅಲಂಕಾರಿಕ ಸಸ್ಯ, ಹೂವಿನ ಗಿಡಗಳು ಶಾಲೆಯ ಅಂದವನ್ನು ಹೆಚ್ಚಿಸಿವೆ. ಮಕ್ಕಳೇ ಇಲ್ಲಿ ತೋಟದ ಮಾಲಿಗಳು. ಬಿಡುವಿನ ವೇಳೆಯಲ್ಲಿ ಗಿಡಗಳಿಗೆ ನೀರುಣಿಸಿ, ಗೊಬ್ಬರ ಹಾಕುವುದನ್ನು ಸ್ವಯಂ ಪ್ರೇರಣೆಯಿಂದ ಅವರೇ ಮಾಡುತ್ತಾರೆ ಎನ್ನುತ್ತಾರೆ ಯುವ ಶಿಕ್ಷಕರಾದ ಶರಣಪ್ಪ ರಡ್ಡೇರ ಮತ್ತು ಮನೋಹರ ಪತ್ತಾರ.

ಸುಮಾರು 44 ಮಕ್ಕಳು ಓದುತ್ತಿರುವ ಇಲ್ಲಿನ ಶಾಲೆಗೆ ದಾನಿಗಳು ನೆರವಾಗಿದ್ದಾರೆ. ಇಲ್ಲಿನ ಕ್ರಿಯಾಶೀಲ ಶಿಕ್ಷಕರ ಕಾಳಜಿಯಿಂದಾಗಿ ಸಾರ್ವಜನಿಕರು ಕೂಡ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಶಾಲೆಯಲ್ಲಿ ಸುಸಜ್ಜಿತ ಕಂಪ್ಯೂಟರ, ದೂರದರ್ಶನ ಸೆಟ್‌, ರೇಡಿಯೊ ಇದೆ. ‘ರೇಡಿಯೊ ಪಾಠ’ ಕೇಳಿಸಲಾಗುತ್ತದೆ. ಜೊತೆಗೆ ಶಾಲೆಗೆ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ನೀರಿನ ನಳದ ಸಂಪರ್ಕ, ಊಟದತಟ್ಟೆ, ಲೋಟ ಸೇರಿ ಪಾಠ ಮತ್ತು ಪೀಠೋಪಕರಣಗಳನ್ನು ದಾನಿಗಳಿಂದ ಪಡೆಯುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಕುಂಬಾರ.

ಶಿಕ್ಷಕ ಮನಸ್ಸು ಮಾಡಿದರೆ ಶಿಲೆಯನ್ನು ಮೂರ್ತಿಯನ್ನಾಗಿ, ಬಂಜರು ಪ್ರದೇಶವನ್ನು ಉದ್ಯಾನವನ್ನಾಗಿ ಮಾಡಬಲ್ಲ ಎಂಬುದಕ್ಕೆ ಇಲ್ಲಿನ ಶಿಕ್ಷಕರು ಉತ್ತಮ ಉದಾಹರಣೆ ಎನ್ನುತ್ತಾರೆ ಶಿಕ್ಷಕರ ಸಂಘದ ಪ್ರತಿನಿಧಿ ಪರಸಪ್ಪ ಕಂಬಳಿ.

* * 

ಶಾಲೆಯ ಆವರಣದಲ್ಲಿ ಸುಂದರ ಪರಿಸರ ಇರಬೇಕು. ಇದರಿಂದ ಶಿಕ್ಷಕರಿಗೆ ಉತ್ತಮ ಬೋಧನೆ ಮಾಡಲು ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ
ಶರಣಪ್ಪ ರಡ್ಡೇರ
ಶಿಕ್ಷಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT