ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿಗೆ ಮಂಡ್ಯದ ಜನರೇ ಪಾಠ ಕಲಿಸುತ್ತಾರೆ: ಶ್ರೀರಾಮುಲು

ಶಿವಕುಮಾರ ಉದಾಸಿ ಪರ ಶ್ರೀರಾಮುಲು ರೋಡ್ ಶೋ; ಸಿಎಂ ವಿರುದ್ಧ ವಾಗ್ದಾಳಿ
Last Updated 17 ಏಪ್ರಿಲ್ 2019, 19:34 IST
ಅಕ್ಷರ ಗಾತ್ರ

ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪರ ಶಾಸಕ ಬಿ.ಶ್ರೀರಾಮುಲು ಅವರು ಬುಧವಾರ ನಗರದಲ್ಲಿ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದರು.

ಇಲ್ಲಿನ ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಮುಳಗುಂದ ನಾಕಾ, ಬಸವೇಶ್ವರ ವೃತ್ತ, ಮಹೇಂದ್ರಕರ ವೃತ್ತ, ಮಹಾತ್ಮ ಗಾಂಧಿ ವೃತ್ತ ಮೂಲಕ ಬೆಟಗೇರಿ ಟೆಂಗಿನಕಾಯಿ ಬಜಾರದಲ್ಲಿ ಸಮಾರೋಪಗೊಂಡಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀರಾಮುಲು ಮಾತನಾಡಿದರು. ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಚುನಾವಣೆಯಲ್ಲಿ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಮುಖ್ಯಮಂತ್ರಿ ನಾಡಿನ ಜನರಿಗೆ ತಿಳಿಸಬೇಕು. ಕೈಯಲ್ಲಿ ಅಧಿಕಾರ ಇದೆ ಎಂದು ಮನಸ್ಸಿಗೆ ಬಂದಂತೆ ಚಲಾಯಿಸಿದರೆ ಹೇಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಮಂಡ್ಯ ಜಿಲ್ಲೆಯ ಜನರು ಸ್ವಾಭಿಮಾನಿಗಳು. ಅವರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿರುವ ಕುಮಾರಸ್ವಾಮಿ ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ. ಎಷ್ಟೇ ಹಣ ಹಂಚಿದರೂ ಪ್ರಯೋಜನವಾಗುವುದಿಲ್ಲ. ಪಕ್ಷೇತರ ಅಭ್ಯರ್ಥಿ ಗೆಲುವು ನಿಶ್ಚಿತ’ ಎಂದರು.

ಮೆರವಣಿಗೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಮಹಿಳೆಯರು ಮೋದಿ, ಶ್ರೀರಾಮುಲು, ಶಿವಕುಮಾರ ಉದಾಸಿ, ಅನಿಲ ಮೆಣಸಿನಕಾಯಿ ಪರ ಘೋಷಣೆಗಳನ್ನು ಕೂಗಿದರು.

ಅಭ್ಯರ್ಥಿ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಯುವ ಮುಖಂಡ ಅನಿಲ ಮೆಣಸಿನಕಾಯಿ, ವಿಜಯಕುಮಾರ ಗಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಳಶೆಟ್ಟಿ, ರಾಜು ಕುರುಡಗಿ, ಮುಖಂಡ ಎಸ್.ಎಚ್. ಶಿವನಗೌಡರ, ರವಿ ದಂಡಿನ, ಸಂತೋಷ ಮೇಲಗಿರಿ, ರಾಘವೇಂದ್ರ ಯಳವತ್ತಿ, ಮಾಧವ ಗಣಾಚಾರಿ, ಜಗನ್ನಾಥಸಾ ಭಾಂಡಗೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಶ್ವಿನಿ ಜಗತಾಪ, ಶಾರದಾ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT