ಸೋಮವಾರ, ಸೆಪ್ಟೆಂಬರ್ 20, 2021
23 °C
ರೋಣ, ಜಿಗಣಿ ಠಾಣೆಗಳಲ್ಲಿ ಪ್ರಕರಣ ದಾಖಲು

ಮದುವೆಯಾಗುವುದಾಗಿ ವಂಚಿಸಿ ಯುವಕ ನಾಪತ್ತೆ: ಗೃಹಿಣಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ರೋಣ ತಾಲ್ಲೂಕಿನ ಮೇಲ್ಮಠ ಗ್ರಾಮದ ಮಹಾಂತೇಶ ರಟ್ಟಿಹಳ್ಳಿ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ, ಸಲುಗೆ ಬೆಳೆಸಿ ಈಗ ನಾಪತ್ತೆಯಾಗಿದ್ದಾನೆ’ ಎಂದು ರೋಣದ ಗೃಹಿಣಿಯೊಬ್ಬರು ಆರೋಪ ಮಾಡಿದ್ದಾರೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಗುವಾದ ನಂತರ ಮೊದಲ ಪತಿ ಬಿಟ್ಟು ಹೋದರು. ಏಳು ವರ್ಷಗಳಿಂದ ಮಗಳು ಮತ್ತು ನನ್ನನ್ನು ನೋಡಲು ಬಂದಿಲ್ಲ. ಮಗುವನ್ನು ಸಾಕಿ ಬೆಳೆಸುವ ಸಲುವಾಗಿ ಉದ್ಯೋಗ ಹರಸಿ ಬೆಂಗಳೂರಿಗೆ ಹೋದೆ. ಅಲ್ಲಿ ಪರಿಚಯವಾದ ಮಹಾಂತೇಶ ನನ್ನೊಂದಿಗೆ ಸ್ನೇಹ ಬೆಳೆಸಿದ. ಸ್ನೇಹ ಸಲುಗೆಗೆ ತಿರುಗಿತು. ಈಗ ನಾನು ಆರು ತಿಂಗಳ ಗರ್ಭಿಣಿ. ನಂಬಿಕೆ ದ್ರೋಹ ಮಾಡಿ ಕಣ್ಮರೆ ಆಗಿರುವ ಮಹಾಂತೇಶ ನನ್ನ ಮದುವೆ ಆಗಬೇಕು’ ಎಂದು ಹೇಳಿದರು.

‘ಮದುವೆ ಸಂಬಂಧ ಸಾಕಷ್ಟು ಪಂಚಾಯ್ತಿಗಳು ನಡೆದ ನಂತರ ಮದುವೆ ಆಮಂತ್ರಣ ಪತ್ರಿಕೆ ಕೂಡ ಮುದ್ರಿಸಲಾಗಿತ್ತು. ನಾನು ಗರ್ಭಿಣಿ ಎಂಬ ವಿಚಾರ ತಿಳಿದ ನಂತರ ಆತ ನನ್ನನ್ನು ಮದುವೆ ಆಗಲು ಒಪ್ಪಲಿಲ್ಲ. ಇದರಿಂದಾಗಿ, ಮೇಲ್ಮಠದಲ್ಲೇ ಇದ್ದ ಮಹಾಂತೇಶನ ವಿರುದ್ಧ ರೋಣ ಠಾಣೆಯಲ್ಲಿ 2021ರ ಜೂ.18 ರಂದು ದೂರು ದಾಖಲಿಸಲಾಗಿದೆ. ಆದರೂ, ಈವರೆಗೆ ಮಹಾಂತೇಶನ ಬಂಧನ ಆಗಿಲ್ಲ’ ಎಂದು ಹೇಳಿದರು.

‘ಮದುವೆಯಾಗಿ ಬಾಳು ಕೊಡುವುದಾಗಿ ಹೇಳಿ ಮಹಾಂತೇಶ ನನ್ನಿಂದ ₹3 ಲಕ್ಷದಷ್ಟು ಹಣ ಸಹಾಯವನ್ನೂ ಪಡೆದಿದ್ದಾನೆ. ಅವನ ಮಾತು ನಂಬಿ ಚಿನ್ನಾಭರಣಗಳನ್ನೂ ಒತ್ತೆ ಇಟ್ಟಿದ್ದೇನೆ. ನಾನೀಗ ತವರು ಮನೆಗೂ ಹೋಗಲಾಗದೇ, ಇತ್ತ ಕೈಯಲ್ಲಿದ್ದ ಹಣ, ಕೆಲಸ ಕಳೆದುಕೊಂಡು ಅತಂತ್ರಳಾಗಿದ್ದೇನೆ. ಪೊಲೀಸರು ಮಹಾಂತೇಶನನ್ನು ಹುಡುಕಿ ತಂದು, ನನಗೆ ಮದುವೆ ಮಾಡಿಸಬೇಕು’ ಎಂದು ಹೇಳಿದರು.

ಕರ್ನಾಟಕ ಸಂಗ್ರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಂಜೀವ ಧುಮಕನಾಳ, ರೇಖಾ ಮೋರೆ, ಗುರು ಅಂಗಡಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು