ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಿಸಿ ಸುಲಿಗೆ; ನಾಲ್ವರ ಬಂಧನ

ಡೆಬಿಟ್ ಕಾರ್ಡ್ ಕಿತ್ತುಕೊಂಡು ಆಭರಣ ಖರೀದಿಸಿದ್ದರು
Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಣಕ್ಕಾಗಿ ತನ್ನ ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಸೇರಿ ನಾಲ್ವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕೆಂಬತ್ತಹಳ್ಳಿಯ ಮಧುಕಿರಣ್ ಅಲಿಯಾಸ್ ಮಧು, ಜಂಬೂಸವಾರಿ ದಿಣ್ಣೆಯ ಮಂಜುನಾಥ್, ದೊಡ್ಡಕಲ್ಲಸಂದ್ರದ ಆನಂದ್ ಹಾಗೂ ಜಿಗಣಿಯ ನರೇಂದ್ರ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 2.3 ಲಕ್ಷ ನಗದು, ಕಾರು, ಬೈಕ್, ಡೆಬಿಟ್ ಕಾರ್ಡ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಚಾಲಕರಾದ ಪ್ರತಾಪ್, ವಿಡಿಯೊಗ್ರಾಫರ್ ಆಗಿಯೂ ಕೆಲಸ ಮಾಡುತ್ತಾರೆ. ಕುಟುಂಬಸದಸ್ಯರ ಜತೆ ಕೋಡಿಚಿಕ್ಕನಹಳ್ಳಿಯಲ್ಲಿ ನೆಲೆಸಿರುವ ಅವರಿಗೆ, ಸಂಬಂಧಿಯೊಬ್ಬನ ಮೂಲಕ ಎರಡು ತಿಂಗಳ ಹಿಂದೆ ಮಧುವಿನ ಪರಿಚಯವಾಗಿತ್ತು. ಈ ಗೆಳೆತನದಲ್ಲಿ ಪ್ರತಾಪ್ ಅವರ ವ್ಯವಹಾರಗಳನ್ನು ತಿಳಿದುಕೊಂಡ ಆತ, ಅವರನ್ನು ಅಪಹರಿಸಿ ಹಣ ದೋಚಲು ಸಂಚು ರೂಪಿಸಿದ್ದ. ಅದಕ್ಕೆ ಸ್ನೇಹಿತರೂ ನೆರವಾಗುವುದಾಗಿ ಭರವಸೆ ಕೊಟ್ಟಿದ್ದರು.

ಅದರಂತೆ 15 ದಿನಗಳಿಂದ ಪ್ರತಾಪ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಆರೋಪಿಗಳು, ಮಾರ್ಚ್ 10ರಂದು ಸಂಚನ್ನು ಕಾರ್ಯರೂಪಕ್ಕೆ ಇಳಿಸಿದ್ದರು. ಆ ದಿನ ಪ್ರತಾಪ್ ಕೊತ್ತನೂರು ದಿಣ್ಣೆಯ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ಘಟಕದ ಬಳಿ ನಿಂತಿದ್ದರು. ಮಾತನಾಡಿಸುವ ಸೋಗಿನಲ್ಲಿ ಹತ್ತಿರ ಹೋದ ಆರೋಪಿಗಳು, ಬಲವಂತವಾಗಿ ಕಾರಿ
ನಲ್ಲಿ ಹತ್ತಿಸಿಕೊಂಡು ಬೇಗೂರು ಕೊಪ್ಪ ರಸ್ತೆಯ ಮೈಲಸಂದ್ರ ದಿಣ್ಣೆಯಲ್ಲಿರುವ ‘ಐಪೆಲ್ ಗ್ರೀನ್ ರೆಸಾರ್ಟ್‌’ಗೆ ಕರೆದೊಯ್ದಿದ್ದರು. ಅಲ್ಲಿ ಕೊಠಡಿ ಬಾಡಿಗೆ ಪಡೆದು, ಇಡೀ ರಾತ್ರಿ ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಾಪ್ ಬಳಿ ಇದ್ದ ಮೊಬೈಲ್ ಹಾಗೂ ₹ 80 ಸಾವಿರ ನಗದನ್ನು ಕಿತ್ತುಕೊಂಡ ಆರೋಪಿಗಳು, ನಂತರ ಚಾಕು ತೋರಿಸಿ ಡೆಬಿಟ್ ಕಾರ್ಡ್ ಸಹ ಕಸಿದುಕೊಂಡಿದ್ದರು. ಅದರ ಪಾಸ್‌ವರ್ಡ್ ತಿಳಿದುಕೊಂಡು, ಎಟಿಎಂನಲ್ಲಿ ₹25 ಸಾವಿರ ಡ್ರಾ ಮಾಡಿದ್ದರು. ಅಲ್ಲದೆ, ಚುಂಚಘಟ್ಟ ಮುಖ್ಯರಸ್ತೆಯ ಮೇಘಾ ಚಿನ್ನಾಭರಣ ಮಳಿಗೆಗೆ ತೆರಳಿ ₹ 1.5 ಲಕ್ಷ ಮೌಲ್ಯದ ಒಡವೆ ಖರೀದಿಸಿದ್ದರು. ಕೊನೆಗೆ ಪೊಲೀಸರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ, ಪ್ರತಾಪ್ ಅವರನ್ನು ಅಲ್ಲೇ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು.

ಮರುದಿನ ಬೆಳಿಗ್ಗೆ ಪ್ರತಾಪ್ ಕೋಣನಕುಂಟೆ ಠಾಣೆಗೆ ದೂರು ಕೊಟ್ಟಿದ್ದರು. ಮಧುವಿನ ಮೊಬೈಲ್ ಸಂಖ್ಯೆ ಪಡೆದು ಟವರ್ ಡಂಪ್ ತನಿಖೆ ಪ್ರಾರಂಭಿಸಿದ ಪೊಲೀಸರು, ಹೊಸಕೋಟೆ ಬಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಸುಲಿಗೆ ಮಾಡಿದ್ದ ಹಣ ಹಾಗೂ ಒಡವೆಗಳನ್ನೂ ಜಪ್ತಿ ಮಾಡಿದ್ದಾರೆ.

‘ದೂರುದಾರ ಪ್ರತಾಪ್ ವಿರುದ್ಧವೂ ಹಿಂದೆ ಹಲ್ಲೆ ಹಾಗೂ ಎರಡು ವಂಚನೆ ಪ್ರಕರಣಗಳು ದಾಖಲಾಗಿವೆ. ‌ಆರೋಪಿಗಳು ಹಾಗೂ ಪ್ರತಾಪ್ ಮಧ್ಯೆ ಯಾವುದೇ ಹಣಕಾಸು ತಕರಾರು ಇರಲಿಲ್ಲ. ಪ್ರಕರಣ ದಾಖಲಾದ 24 ತಾಸುಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

ಆರೋಪಿಗಳ ಪೂರ್ವಾಪರ
ಮಧು ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಆನಂದ್ ಹಾಗೂ ನರೇಂದ್ರ ಶಾಲಾ ವಾಹನಗಳ ಚಾಲಕರಾಗಿದ್ದಾರೆ. ಮಂಜುನಾಥ್ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT